ETV Bharat / state

ಅಧಿವೇಶನದಲ್ಲಿ ಕಳಸಾ ಬಂಡೂರಿ ಮಹದಾಯಿ ಬಗ್ಗೆ ಬಿಜೆಪಿ ಸರಕಾರ ಶ್ವೇತಪತ್ರ ಹೊರಡಿಸಲಿ: ಎಚ್​ ಕೆ ಪಾಟೀಲ್​​ ಆಗ್ರಹ

author img

By

Published : Feb 15, 2023, 4:23 PM IST

Former Minister HK Patil addressed the press conference
ಮಾಜಿ ಸಚಿವ ಎಚ್ ಕೆ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತರಾತುರಿ ಕಳಸಾ ಬಂಡೂರಿ ಕುರಿತಾಗಿ ಕೇಂದ್ರದ ಅನುಮೋದನೆ ಪತ್ರ ಬಿಡುಗಡೆ ಮಾಡಿದರು. ಕಾಂಗ್ರೆಸ್​ ಅಪಹಾಸ್ಯ ಮಾಡಿ ಬಿಜೆಪಿ ವಿಜಯೋತ್ಸವ ಆಚರಣೆ ಮಾಡಿತು. ಆದರೆ, ಈ ವರೆಗೆ ಕಳಸಾ ಬಂಡೂರಿ ಯೋಜನೆ ಕಾಮಗಾರಿಗಳಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ -ಮಾಜಿ ಸಚಿವ ಎಚ್ ಕೆ ಪಾಟೀಲ್ ಆರೋಪ.

ಹುಬ್ಬಳ್ಳಿ: ಬಿಜೆಪಿಯವರು ಕಳಸಾ-ಬಂಡೂರಿ, ಮಹದಾಯಿ ವಿಚಾರದಲ್ಲಿ ಸುಳ್ಳಿನ ಮೇಲೆ ಸವಾರಿ ಮಾಡುತ್ತ, ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಈ ಕೊನೆಯ ಅಧಿವೇಶನದಲ್ಲಿ ಕಳಸಾ-ಬಂಡೂರಿ, ಮಹದಾಯಿ ಯೋಜನೆ ಕುರಿತಾಗಿ ಶ್ವೇತಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ‌.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಬಿಜೆಪಿ ಸುಳ್ಳು ಹೇಳಲು ಆರಂಭಿಸುತ್ತಿದ್ದಂತೆ, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವೂ ಎಚ್ಚರಿಕೆ ಕೊಡುತ್ತಾ ಬಂದಿದೆ. ಅಷ್ಟೇ ಏಕೆ ಮಾರ್ಗದರ್ಶನ, ಟೀಕೆ ಟಿಪ್ಪಣಿ ಸೇರಿದಂತೆ, ಬೃಹತ್ ರ‍್ಯಾಲಿ ಮಾಡಿ ಜನಮನದಲ್ಲಿರುವ ಅಭಿಪ್ರಾಯವನ್ನು ಜನರ ಒಳಿತಿಗಾಗಿ ತಿಳಿಸಿಕೊಟ್ಟಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಡಬೇಕಾದ ಕೆಲಸವನ್ನು ಮಾಡಿದ್ದೇವೆ. ಆದರೆ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಸುಳ್ಳಿನ ಸರಮಾಲೆ ಕಟ್ಟಿ ಬಿಜೆಪಿ ಜನರಿಗೆ ಮೋಸ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತರಾತುರಿಯಲ್ಲಿ ಕಳಸಾ-ಬಂಡೂರಿ ಕುರಿತು ಅನುಮೋದನೆ ಪತ್ರವನ್ನು ಅದರಲ್ಲಿ ಸಂಖ್ಯೆ, ದಿನಾಂಕ ನೋಡದೇ ಬಿಡುಗಡೆ ಮಾಡಿದ್ದಾರೆ. ಆನಂತರ ನಾವು ವಿರೋಧ ಮಾಡಿದ್ದಕ್ಕೆ ಕಣ್ಣಿಲ್ಲ, ಕಿವಿಯಿಲ್ಲ ಎಂದು ಅಪಹಾಸ್ಯ ಮಾಡಿ ವಿಜಯೋತ್ಸವ ಆಚರಣೆ ಮಾಡಿದರು. ಆದರೆ ಈ ವರೆಗೆ ಕಾಮಗಾರಿ ಕುರಿತು ಯಾವುದೇ ಬೆಳವಣಿಗೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಜನರಿಗೆ ಸುಳ್ಳಿನ ಸರಮಾಲೆ ಕಟ್ಟಿ ಜನರಿಗೆ ಮೋಸ ಮಾಡುತ್ತಿರುವ ಜೋಶಿ ಅವರು ರಾಜ್ಯದ ಜನರಲ್ಲಿ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.

ಜನರ ಬಳಿ ಹೋಗಲು ಬಿಜೆಪಿಗೆ ನೈತಿಕತೆ ಇಲ್ಲ:ಈಗಾಗಲೇ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ವಿಜಯೋತ್ಸವ ಆಚರಣೆ ಮಾಡಿ ಪಟಾಕಿ ಸಿಡಿಸಿದವರೂ, ಒಂದು ವೇಳೆ ಯೋಜನೆ ಕುರಿತಾಗಿ ಸ್ಪಷ್ಟತೆ ತೋರದಿದ್ದಲ್ಲಿ ಅವರಿಗೆ ಜನರ ಬಳಿ ಹೋಗಲು ಯಾವುದೇ ನೈತಿಕತೆ ಇರುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಜನರನ್ನು ದಾರಿ ತಪ್ಪಿಸುವುದನ್ನು ಬಿಟ್ಟು ರೈತರಿಗೆ ನೀರು ಒದಗಿಸುವ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೇ ನಾವು ಹೋರಾಟ ಮುಂದುವರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಳಸಾ ಬಂಡೂರಿ,ಮಹದಾಯಿ ಯೋಜನೆ:ಉತ್ತರ ಕರ್ನಾಟಕದ ಸಹ್ಯಾದ್ರಿ ಬೆಟ್ಟಗಳಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಮಹದಾಯಿ ನದಿಯೂ ಒಂದು. ಖಾನಾಪುರ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಈ ನದಿಯು ಕರ್ನಾಟಕದಲ್ಲಿ 29 ಕಿ ಮೀ. ಹಾಗೂ ಗೋವಾದಲ್ಲಿ 51.5 ಕಿ.ಮೀ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಜಲಾಯೋಗದ ಸಮೀಕ್ಷೆಯಂತೆ ಈ ನದಿಯಲ್ಲಿ ಸುಮಾರು 200 ಟಿಎಂಸಿ ಅಡಿ ನೀರು ಲಭ್ಯವಿದೆ.

ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗಳ ಪರಿಷ್ಕೃತ ಪೂರ್ವ ಕಾರ್ಯಸಾಧ್ಯತಾ ವರದಿಗಳನ್ನು ಸಿದ್ದಪಡಿಸಿ ರಾಜ್ಯ ಸರಕಾರ 2022 ಜೂನ್ 16 ರಂದು ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯೂಸಿ) ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಕೇಂದ್ರ ಜಲ ಆಯೋಗವು 2022ನವೆಂಬರ್ 18 ರಂದು ತನ್ನ ಪತ್ರದಲ್ಲಿ ಡಿಪಿಆರ್ ಸಲ್ಲಿಸಲು ಸೂಚಿಸಿತ್ತು.

ನವೆಂಬರ್ 24 ರಂದು ಕಳಸಾ ನಾಲಾ ತಿರುವು ಯೋಜನೆಯ 995.30 ಕೋಟಿ ರೂ. ಮೊತ್ತದ ಡಿಪಿಆರ್ ಹಾಗೂ ನವೆಂಬರ್ 25 ರಂದು ಬಂಡೂರಿ ನಾಲಾ ತಿರುವು ಯೋಜನೆಯ 764 ಕೋಟಿ ರೂ. ಮೊತ್ತದ ಡಿಪಿಆರ್ ಅನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿತ್ತು. ಕೇಂದ್ರ ಜಲ ಆಯೋಗವು ಡಿಸೆಂಬರ್ 29 ರಂದು ಈ ಯೋಜನೆಗೆ ಅನುಮತಿ ನೀಡಿದೆ.

ಇದನ್ನೂಓದಿ:ಜನರ ಮುಂದೆ ರಿಪೋರ್ಟ್ ಕಾರ್ಡ್ ಇಟ್ಟು ಗೆಲುವು ಪಡೆಯುತ್ತೇವೆ: ಸಿಎಂ ಬೊಮ್ಮಾಯಿ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.