ETV Bharat / state

ಧಾರವಾಡ: ಅಂತ್ಯಸಂಸ್ಕಾರದ ವೇಳೆ ಉಸಿರಾಡಿದ್ದ ಮಗು ಸಾವು

author img

By

Published : Aug 18, 2023, 10:47 AM IST

Updated : Aug 18, 2023, 8:13 PM IST

hubli news
ಮೃತ ಬಾಲಕ ಸ್ಮಶಾನದಲ್ಲಿ ಜೀವಂತ

ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಭಾವಿಸಲಾದ ಮಗು ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಉಸಿರಾಡಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿತ್ತು. ಇದೀಗ ಈ ಮಗು ಮೃತಪಟ್ಟಿದೆ.

ಹುಬ್ಬಳ್ಳಿ ಕಿಮ್ಸ್​ ವೈದ್ಯರ ಹೇಳಿಕೆ

ಹುಬ್ಬಳ್ಳಿ/ಧಾರವಾಡ: ಮೃತಪಟ್ಟಿದೆ ಎಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಉಸಿರಾಡಿ ಅಚ್ಚರಿ ಮೂಡಿಸಿದ್ದ ಮಗು ಮೃತಪಟ್ಟಿದೆ.

ಘಟನೆಯ ಸಂಪೂರ್ಣ ವಿವರ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಸಾಪುರ ಗ್ರಾಮದ ಒಂದೂವರೆ ವರ್ಷದ ಆಕಾಶ ಬಸವರಾಜ ಪೂಜಾರ ಎಂಬ ಹೆಸರಿನ ಮಗು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿತ್ತು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಗುವಿಗೆ ಚಿಕಿತ್ಸೆ ನೀಡಿದ್ದರು. ಆದರೆ, ಪೋಷಕರು ಚಿಕಿತ್ಸೆಯ ನಡುವೆಯೇ ಮಗುವನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಹೋಗಿದ್ದರು. ಮನೆ ತಲುಪುತ್ತಿದ್ದಂತೆ ಮಗು ಮೃತಪಟ್ಟಿದೆ ಎಂದುಕೊಂಡು ಊರಿನಲ್ಲಿ ಅಂತ್ಯಕ್ರಿಯೆ ನಡೆಸಲು ಬಸಾಪುರ ಗ್ರಾಮಕ್ಕೆ ಬಂದಿದ್ದಾರೆ. ಇದಕ್ಕೆ ಬೇಕಿದ್ದ ತಯಾರಿಯನ್ನೂ ನಡೆಸಿದ್ದರು. ಅಂತ್ಯಸಂಸ್ಕಾರದ ವಿಧಿ ವಿಧಾನದ ಭಾಗವಾಗಿ ಮೃತಪಟ್ಟ ಮಗುವಿನ ಬಾಯಲ್ಲಿ ಎರಡು ಹನಿ ನೀರು ಹಾಕುತ್ತಿದ್ದಂತೆಯೇ ಮಗು ಉಸಿರಾಡಿದೆ. ಪೋಷಕರು ಮತ್ತೆ ಮಗುವನ್ನು ನವಲಗುಂದ ಆಸ್ಪತ್ರೆಗೆ ದಾಖಲಿಸಿ, ವೆಂಟಿಲೇಟರ್​ ಸಮಸ್ಯೆಯಿದ್ದ ಕಾರಣ ಅಲ್ಲಿಂದ ಮತ್ತೆ ಕಿಮ್ಸ್‌ಗೆ ಕರೆತಂದಿದ್ದರು.

ಇಂದು ಬೆಳಗ್ಗೆ ಪೋಷಕರು, ತಮ್ಮ ಮಗು ಬದುಕಲ್ಲ ಎನ್ನುವುದನ್ನು ಅರಿತು ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾರೆ. ಮಗು ಮನೆಯಲ್ಲಿ ಮೃತಪಟ್ಟಿದೆ. ಅಂತ್ಯಸಂಸ್ಥಾರ ನಡೆಸಲಾಗಿದೆ.

ವೈದ್ಯರ ಪ್ರತಿಕ್ರಿಯೆ: "ಮಗು ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ ಎಂದು ನಾವು ಯಾವುದೇ ಸರ್ಟಿಫಿಕೆಟ್ ಕೊಟ್ಟಿಲ್ಲ. ಜೀವಂತ ಇರುವಾಗಲೇ ಸಂಬಂಧಿಕರು ಡಿಸ್ಚಾರ್ಜ್​ ಮಾಡಿಸಿಕೊಂಡು ಹೋಗಿದ್ದರು" ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಥಾನಿ ಹೇಳಿದರು.

''ಕಳೆದ ಕೆಲ ದಿನಗಳ ಹಿಂದೆ ಮಗುವಿನ ಮೆದುಳಿನಲ್ಲಿ ನೀರು ತುಂಬಿಕೊಂಡಿದ್ದ ಕಾರಣ ಗದಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ನಮಲ್ಲಿಗೆ ಬಂದಿದ್ದರು.‌ ನಮ್ಮ ವೈದ್ಯರು ಮೆದುಳು ಜ್ವರ ಬಗ್ಗೆ ಚಿಕಿತ್ಸೆ ನೀಡಿದ್ದಾರೆ. ಆದರೆ, ಪೋಷಕರು ಮಗು ಜೀವಂತ ಇರುವಾಗಲೇ ಏಕಾಏಕಿ ಡಿಸ್ಚಾರ್ಜ್​ ಮಾಡಿಕೊಂಡು ತಮ್ಮ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಆ ಸಂದರ್ಭದಲ್ಲಿ ಗ್ರಾಮಸ್ಥರು‌ ಮಗು ಬದುಕಿದೆ, ಯಾಕೆ ಕರೆದುಕೊಂಡು ಬಂದಿದ್ದೀರಿ ಎಂದು ಪ್ರಶ್ನಿಸಿದಾಗ ಮತ್ತೆ ನವಲಗುಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಮತ್ತೆ ತಡರಾತ್ರಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು" ಎಂದರು.

ಇದನ್ನೂ ಓದಿ: ಕಲಬುರಗಿ: ಪೊಲೀಸ್ ಠಾಣೆಯಲ್ಲಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು; ಕುಟುಂಬಸ್ಥರ ಆಕ್ರೋಶ

Last Updated :Aug 18, 2023, 8:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.