ETV Bharat / state

ಮತ್ತೊಂದು ವೈರಸ್ ಭೀತಿ: ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿದ್ಧತೆ

author img

By ETV Bharat Karnataka Team

Published : Dec 9, 2023, 9:48 AM IST

ಕೋವಿಡ್​ ವೈರಸ್ ಬಳಿಕ ಚೀನಾದಲ್ಲಿ ನ್ಯುಮೋನಿಯಾ ವೈರಸ್ ಹಾವಳಿ ಹೆಚ್ಚಾಗುವ ಲಕ್ಷಣಗಳು ಕಂಡು ಬರುತ್ತಿದೆ. ಈ ಹಿನ್ನೆಲೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಹೆಲ್ತ್ ಎಮರ್ಜೆನ್ಸಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Dharwad district hospital
ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್​

ನ್ಯುಮೋನಿಯಾ ವೈರಸ್ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದ ಡಿಸಿ

ಧಾರವಾಡ : ಚೀನಾ ದೇಶದಲ್ಲಿ ನ್ಯುಮೋನಿಯಾ ರೀತಿಯ ಆರೋಗ್ಯ ಸಮಸ್ಯೆ ತೀವ್ರ ಸ್ವರೂಪದಲ್ಲಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಶ್ವಾಸಕೋಶ ಸೋಂಕು ಹಾಗೂ ನ್ಯುಮೋನಿಯಾ ಲಕ್ಷಣಗಳು ಕಂಡು ಬರುವ ರೋಗಿಗಳ ವಿಚಾರದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ನಿಗಾ ವಹಿಸಿವೆ. ಅದರಂತೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕೂಡ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಧಾರವಾಡ ಜಿಲ್ಲೆಯಲ್ಲಿ ಮುಂದೆ ಒದಗಿ ಬರಬಹುದಾದ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸಲು ಹುಬ್ಬಳ್ಳಿಯ ಕಿಮ್ಸ್ ಹಾಗೂ ಧಾರವಾಡದ ಜಿಲ್ಲಾ ಆಸ್ಪತ್ರೆ ಸೇರಿದಂತೆ ಎಲ್ಲ ತಾಲೂಕು ಆಸ್ಪತ್ರೆಗಳನ್ನು ಸಜ್ಜು ಮಾಡಿಟ್ಟುಕೊಳ್ಳಲಾಗಿದೆ.

ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ 125 ಬೆಡ್​ಗಳಿಗೆ ಕೇಂದ್ರೀಕೃತ ಆಮ್ಲಜನಕದ ವ್ಯವಸ್ಥೆ ಇದೆ. 6 ಕೆಎಲ್ ಸಾಮರ್ಥ್ಯದ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್, 1000 ಪಿಎಸ್​ಎ ಮತ್ತು 500 ಎಲ್​ ಪಿ ಎಂ ಸಾಮರ್ಥ್ಯದ ಆಕ್ಸಿಜನ್ ಜನರೇಷನ್ ಯುನಿಟ್​ಗಳಿವೆ. ಸದ್ಯಕ್ಕೆ ಜ್ವರ, ನೆಗಡಿ, ಕೆಮ್ಮು ಪ್ರಕರಣಗಳು ಬರುತ್ತಿದ್ದು, ತೀವ್ರ ಸ್ವರೂಪದಲ್ಲಿ ಕಂಡು ಬಂದಿಲ್ಲ.

ಇದನ್ನೂ ಓದಿ : ಚೀನಾದಲ್ಲಿ ನ್ಯುಮೋನಿಯಾ ಉಲ್ಬಣ : ಕರ್ನಾಟಕ ಸೇರಿ 6 ರಾಜ್ಯಗಳಿಗೆ ಕೇಂದ್ರದಿಂದ ಜಾಗೃತ ಮಾರ್ಗಸೂಚಿ

ಚೀನಾದಲ್ಲಿ ನ್ಯುಮೋನಿಯಾ ಮಾದರಿ ಜ್ವರದ ವೈರಸ್​ವೊಂದು ಕಾಣಿಸಿಕೊಂಡಿದೆ. ಚೀನಾದಲ್ಲಿ ಈ ಹಿಂದೆ ಹುಟ್ಟಿಕೊಂಡಿದ್ದ ಕೋವಿಡ್ 19 ವೈರಸ್​ ಇಡೀ ಜಗತ್ತಿನ ನಿದ್ದೆಗೆಡಿಸಿತ್ತು. ಹೀಗಾಗಿ, ಈ ಬಾರಿ ಹಿಂದಿನಂತೆ ಆಗಬಾರದು ಎಂಬ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಇತ್ತೀಚೆಗೆ ಜ್ವರ, ನೆಗಡಿ, ಕೆಮ್ಮು ಸಾಮಾನ್ಯವಾಗಿ ಹೋಗಿದೆ. ಧಾರವಾಡ ಜಿಲ್ಲೆಯಲ್ಲಂತೂ ನೂರಾರು ಮಂದಿ ಪ್ರತಿನಿತ್ಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ.

ಇದನ್ನೂ ಓದಿ : ದೆಹಲಿ ಏಮ್ಸ್‌ನಲ್ಲಿ ಪತ್ತೆಯಾದ​​ ನ್ಯುಮೋನಿಯಾ ಪ್ರಕರಣಕ್ಕೂ ಚೀನಾ ಸೋಂಕಿಗೂ ಸಂಬಂಧವಿಲ್ಲ : ಆರೋಗ್ಯ ಸಚಿವಾಲಯ

ಜಾಗೃತರಾಗಿರಲು ಈಗಾಗಲೇ ಸೂಚನೆ ನೀಡಿರುವ ಸರ್ಕಾರ; ಈ ಕುರಿತು ಕರ್ನಾಟಕ ಆರೋಗ್ಯ ಇಲಾಖೆ ನವೆಂಬರ್​ ಕೊನೆಯ ವಾರದಲ್ಲೇ ಜಾಗೃತಿ ವಹಿಸುವಂತೆ ಎಲ್ಲ ಜಿಲ್ಲೆಗಳ ಆಡಳಿತ ಹಾಗೂ ವೈದ್ಯರಿಗೆ ಸೂಚನೆ ನೀಡಿತ್ತು . ಕಾಲೋಚಿತ ಜ್ವರದ ಬಗ್ಗೆ ನಾಗರಿಕರಲ್ಲಿ ಜಾಗೃತರಾಗಿರುವಂತೆ ಕೇಳಿಕೊಂಡಿತ್ತು. ಜ್ವರದ ಲಕ್ಷಣಗಳು ಮತ್ತು ಅಪಾಯಕಾರಿ ಅಂಶಗಳ ಬಗ್ಗೆ ಪಟ್ಟಿಯನ್ನೂ ಕೂಡಾ ಮಾಡಿತ್ತು. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು, ಆಗಾಗ್ಗೆ ಕೈಗಳನ್ನು ತೊಳೆಯುವುದು, ಮುಖವನ್ನು ಸ್ಪರ್ಶಿಸುವುದನ್ನು ತಪ್ಪಿಸುವುದು ಮತ್ತು ಜನಸಂದಣಿ ಸ್ಥಳಗಳಲ್ಲಿ ಮಾಸ್ಕ್​​​​ ಬಳಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.