ETV Bharat / state

ಹು - ಧಾ ಸೆಂಟ್ರಲ್: ಗುರು - ಶಿಷ್ಯರ ಕಾದಾಟಕ್ಕೆ ಸಾಕ್ಷಿಯಾದ ಕ್ಷೇತ್ರದಲ್ಲಿ ಅಚ್ಚರಿ ಫಲಿತಾಂಶ!-    ಟೆಂಗಿನಕಾಯಿಗೆ 35,570 ಮತಗಳ ಗೆಲುವು

author img

By

Published : May 13, 2023, 1:20 PM IST

Updated : May 13, 2023, 1:33 PM IST

Mahesh Tenginakai wins against Jagadish Shettar in Hubli-Dharwad Central Assembly Constituency
ಹು - ಧಾ ಸೆಂಟ್ರಲ್: ಗುರು - ಶಿಷ್ಯರ ಕಾದಾಟಕ್ಕೆ ಸಾಕ್ಷಿಯಾದ ಕ್ಷೇತ್ರದಲ್ಲಿ ಅಚ್ಚರಿ ಫಲಿತಾಂಶ!, ಟೆಂಗಿನಕಾಯಿಗೆ 35,570 ಮತಗಳ ಗೆಲುವು

ಕಾಂಗ್ರೆಸ್​ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದ, ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಗುರುವಿಗೆ ಶಿಷ್ಯ ಟಕ್ಕರ್​ ಕೊಟ್ಟಿದ್ದಾರೆ. ಬರೋಬ್ಬರಿ 35,570 ಮತಗಳಿಂದ ಮಹೇಶ ಟೆಂಗಿನಕಾಯಿ ಅವರು ಜಗದೀಶ್​ ಶೆಟ್ಟರ್ ಅವರನ್ನು ಮಣಿಸಿದ್ದಾರೆ.

ಗುರು - ಶಿಷ್ಯರ ಕಾದಾಟಕ್ಕೆ ಸಾಕ್ಷಿಯಾದ ಕ್ಷೇತ್ರದಲ್ಲಿ ಅಚ್ಚರಿ ಫಲಿತಾಂಶ!

ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಹೇಶ ಟೆಂಗಿನಕಾಯಿ 35,570 ಮತಗಳ ಅಂತರದಿಂದ ಜಗದೀಶ್​ ಶೆಟ್ಟರ್​ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧೆಯೊಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ 29,340 ಮತಗಳನ್ನು ಗಳಿಸಿದ್ದಾರೆ. ಗುರು - ಶಿಷ್ಯರ ಕದಾಟಕ್ಕೆ ಸಾಕ್ಷಿಯಾದ ಕ್ಷೇತ್ರದಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ.

ಹೈಕಮಾಂಡ್​ ಟಿಕೆಟ್​ ನಿರಾಕರಣೆ ಮಾಡಿದ್ದರಿಂದ ಸಿಡಿದೆದ್ದ ಶೆಟ್ಟರ್ ಯಾರೂ ನಿರೀಕ್ಷೆ ಮಾಡದ ನಿರ್ಧಾರ ತೆಗೆದುಕೊಂಡು ಬಿಜೆಪಿ ಹೈಕಮಾಂಡ್​ಗೆ ಶಾಕ್ ನೀಡಿದ್ದರು. ಬಿಜೆಪಿ ಮಹೇಶ್ ಟೆಂಗಿನಕಾಯಿಗೆ ಟಿಕೆಟ್​ ನೀಡುವ ಮೂಲಕ ಶೆಟ್ಟರ್​ಗೆ ಟಕ್ಕರ್​ ಕೊಟ್ಟಿತ್ತು. ಶೆಟರ್​ ಮಣಿಸಲು ಬಿಜೆಪಿ ಅತಿರಥ ಮಹಾರಥ ನಾಯಕರು ಪ್ರಚಾರ ಮಾಡಿದ್ದು, ಫಲಿಸದೇ. ಮೋದಿ ಹವಾ ಹುಬ್ಬಳಿಯಲ್ಲಿ ಟೆಂಗಿನಕಾಯಿಗೆ ಬಲ ನೀಡಿದೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಹೇಶ ಟೆಂಗಿನಕಾಯಿ, ಈ ಚುನಾವಣೆಯಲ್ಲಿ ಅತಿ ಹೆಚ್ಚು ಗಮನ ಸೆಳೆದ ಜನ ನಾಯಕರಲ್ಲಿ ಒಬ್ಬರು. ಅದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​. ಟಿಕೆಟ್​ ಕೈ ತಪ್ಪಿದ ಹಿನ್ನೆಲೆ ​ಸುಮಾರು ನಾಲ್ಕು ದಶಕಗಳ ಕಾಲ ಜನಸಂಘ ಹಾಗೂ ಬಿಜೆಪಿಯ ಸಂಗಡ ತೊರೆದು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದಲ್ಲದೇ, ಶಿಷ್ಯ ಮಹೇಶ ಟೆಂಗಿನಕಾಯಿ ವಿರುದ್ಧ ಅಭ್ಯರ್ಥಿಯಾಗಿಯೂ ಕಣಕ್ಕಿಳಿದಿದ್ದರು. ಹಾಗಾಗಿ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಹೈವೋಲ್ಟೆಜ್​ ಕದನವಾಗಿ ಮಾರ್ಪಟ್ಟಿತ್ತು. ಇಂದು ಫಲಿತಾಂಶ ಪ್ರಕಟವಾಗುತ್ತಿದ್ದು, ಮಹೇಶ ಟೆಂಗಿನಕಾಯಿ 64,910 ಮತಗಳನ್ನು ಗಳಿಸಿ ಗೆಲುವು ಬರೆದಿದ್ದಾರೆ.

ರೆಬಲ್​ ಆಗಿ ಪಕ್ಷ ಬಿಟ್ಟು ಕಾಂಗ್ರೆಸ್​ ಸೇರಿದ ಜಗದೀಶ್​ ಶೆಟರ್​ 29,340 ಮತಗಳನ್ನು ಮಾತ್ರ ಪಡೆದಿದ್ದಾರೆ. ಆರು ಬಾರಿ ಗೆದ್ದು ಶಕ್ತಿಕೇಂದ್ರ ಪ್ರವೇಶಿಸಿದ್ದ ಶೆಟರ್​ಗೆ ಅವರ ಶಿಷ್ಯನೇ ಮಣಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತನಾಗಿ ಶೆಟರ್​ ಜೊತೆಗೆ ಇದ್ದ ಟೆಂಗಿನಕಾಯಿ ಗುರುವನ್ನೇ ಮಣಿಸಿದ್ದಾರೆ.

ಮಹೇಶ ಟೆಂಗಿನಕಾಯಿ ಸಾಕಷ್ಟು ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿರುವ ಜನ ನಾಯಕ. ಪಕ್ಷ ಸಂಘಟನೆಯೊಂದಿಗೆ ಸ್ಟ್ರಾಟೆಜಿಕ್ ಪ್ಲಾನಿಂಗ್, ಟೀಮ್ ಬಿಲ್ಡಿಂಗ್, ವರ್ಕ್‌ಮ್ಯಾನ್‌ಶಿಪ್ ಡೆವಲಪ್‌ಮೆಂಟ್ ಸೇರಿದಂತೆ ಪಕ್ಷದ ವಿವಿಧ ಚಟುವಟಿಕೆಗಳ ಮೇಲ್ವಿಚಾರಣೆಯಲ್ಲಿ ತೊಡಗಿಸಿಕೊಂಡಿದ್ದು, ಅವರ ರಾಜಕೀಯ ಬೆಳವಣೆಗೆ ಸಾಕ್ಷಿ. ಕಳೆದ 33 ವರ್ಷಗಳಿಂದ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಅವರು, ತಮ್ಮ ಈ ಸುದೀರ್ಘ ಕಾಲಾವಧಿಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದಾರೆ.

ಮಹೇಶ ಟೆಂಗಿನಕಾಯಿ ಅಲಂಕರಿಸಿದ ವಿವಿಧ ಹುದ್ದೆಗಳು: 1989ರಿಂದ 1992ರ ವರೆಗೆ ಬೂತ್ ಕಾರ್ಯಕರ್ತರಾಗಿ ಬಿಜೆಪಿಗೆ ಸೇರ್ಪಡೆಯಾದ ಮಹೇಶ ಟೆಂಗಿನಕಾಯಿ, 1998ರಲ್ಲಿ ವಾರ್ಡ್ 42ರ ಅಧ್ಯಕ್ಷ ಸ್ಥಾನ ಅಲಂಕರಿಸಿದರು. ಬಳಿಕ ಹುಬ್ಬಳ್ಳಿ ನಗರ ಯುವ ಮೋರ್ಚಾದ ಉಪಾಧ್ಯಕ್ಷರಾಗಿ, ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ, ಧಾರವಾಡ ಮತ್ತು ಬೆಳಗಾವಿ ವಿಭಾಗದ ಸಹ ಪ್ರಭಾರಿಯಾಗಿ, ಮಹಾರಾಷ್ಟ್ರ ಮತ್ತು ಗೋವಾ ಚುನಾವಣೆಗಳಿಗೆ ಚುನಾವಣಾ ಉಸ್ತುವಾರಿ ಸೇರಿದಂತೆ ಅನೇಕ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದರು.

ವೈಯಕ್ತಿಕ ಜೀವನ: ಸರಳ, ಸಜ್ಜನ ರಾಜಕಾರಣಿಯಾದ ಮಹೇಶ ಅವರು, ಮೂಲತಃ ಮಧ್ಯದ ಕುಟುಂಬಕ್ಕೆ ಸೇರಿದವರು. ವ್ಯಾಪಾರಸ್ಥರಾದರೂ ಸಾಮಾನ್ಯ ಜನನಾಯಕ. ಕಾಲ ಬದಲಾದಂತೆ ಮಹೇಶ ಅವರ ಜೀವನದಲ್ಲೂ ತಿರುವು ಬಂದಿತು. ಅವರ ಸಮರ್ಪಣಾ ಮನೋಭಾವ, ಪಕ್ಷಕ್ಕೆ ತೋರಿದ ನಿಷ್ಠೆ, ಹೆಚ್ಚಾಗಿ ಇಡೀ ರಾಜ್ಯಾದ್ಯಂತ ತಳಮಟ್ಟದ ಕಾರ್ಯಕರ್ತರೊಂದಿಗೆ ಅವರಿಗಿರುವ ಒಡನಾಟ, ಇಂದು ಅವರಿಗೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ.

ಸುಮಾರು 30 ವರ್ಷಗಳ ಹಿಂದೆ ಭಾರತೀಯ ಜನತಾ ಪಕ್ಷದ ಹೆಸರನ್ನು ಬಹಳಷ್ಟು ಜನರು ಕೇಳಿಯೇ ಇರಲಿಲ್ಲ. ಲೋಕಸಭೆ, ರಾಜ್ಯ ವಿಧಾಸಭೆ, ಅಲ್ಲದೇ ಹು-ಧಾ ಮಹಾನಗರ ಪಾಲಿಕೆಯಲ್ಲೂ ಕೇವಲ ಬೆರಳಿಕೆಯಷ್ಟು ಸದಸ್ಯರಿದ್ದರು. ಇದು ಅಂದಿನ ಪಕ್ಷದ ಸ್ಥಿತಿ. ಈ ಕಾಲದಲ್ಲಿ ಪಕ್ಷದ ಸಂಘಟನೆ ಭಾರೀ ಸವಾಲಾಗಿತ್ತು. ಅಂಥ ದಿನಗಳಲ್ಲಿ ಒಬ್ಬ ಬೂತ್ ಮಟ್ಟದ ಕಾರ್ಯಕರ್ತನಾಗಿ ಬಿಜೆಪಿ ಸೇರಿಕೊಂಡವರು ಮಹೇಶ್ ಟೆಂಗಿನಕಾಯಿ.

ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ಕಾಲದಿಂದಲೂ ಮಹೇಶ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿನ ಸಿಪಾಯಿ, ಮನೆ ಬಳಿಯೇ ನಡೆಯುತ್ತಿದ್ದ ಶಾಖೆಗೆ ಹೋಗುತ್ತಿದ್ದರು. ಸದಾ ವತ್ಸಲೆ ಗೀತೆ ಹಾಡುವುದು, ದೈಹಿಕ ಕಸರತ್ತು, ಆಟಗಳು ಬಾಲಕ ಮಹೇಶರ ಮನಸ್ಸು ಸೆಳೆದವು. ಜೊತೆಗೇ ಚುನಾವಣೆಗಳಲ್ಲಿ ಮನೆ ಮನೆಗೆ ಹೋಗಿ ಕರಪತ್ರ ವಿತರಿಸುವುದು, ಗೋಡೆ ಬರಹ ಬರೆಯುವುದು, ಇವು ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಯಾಗಿದ್ದ ಮಹೇಶ ಟೆಂಗಿನಕಾಯಿ ಅವರ ಪಕ್ಷದ ಮೊದಲ ಚಟುವಟಿಕೆಗಳಾಗಿದ್ದವು.

90ರ ದಶಕದ ಆರಂಭದಲ್ಲಿ ನಾಯಕ ಎಲ್.ಕೆ. ಅದ್ವಾನಿ ಹಮ್ಮಿಕೊಂಡ ರಾಷ್ಟ್ರಧ್ವಜ ಆರೋಹಿಸುವ ಕಾರ್ಯಕ್ರಮದ ಅಂಗವಾಗಿ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ಮೈದಾನದಲ್ಲಿ ನಡೆದ ಹೋರಾಟದಲ್ಲಿ ಮಹೇಶ್ ಟೆಂಗಿನಕಾಯಿ ಮಹತ್ವದ ಪಾತ್ರ ವಹಿಸಿದರು. ವ್ಯಕ್ತಿಗಿಂತ ಪಕ್ಷ ಮೊದಲು, ಪಕ್ಷಕ್ಕಿಂತ ದೇಶ ಮೊದಲು ಎಂಬ ಸಿದ್ಧಾಂತಕ್ಕೆ ಮನಸ್ಸು ಒಲಿಯಿತು. ದೇಶಸೇವೆಗೆ ತುಡಿಯುತ್ತಿದ್ದ ಮಹೇಶರ ಮನಸ್ಸು ಸಹಜವಾಗಿಯೇ ಅವರನ್ನು ಬಿಜೆಪಿಗೆ ಕರೆದು ತಂದಿತು.

ಅಷ್ಟೊತ್ತಿಗೆ ಆಟೊಮೊಬೈಲ್ ಇಂಜಿನಿಯರಿಂಗ್ ಡಿಪ್ಲೋಮಾ ಶಿಕ್ಷಣ ಪೂರೈಸಿದ್ದ ಮಹೇಶ, ಮನೆತನದ ವೃತ್ತಿ ವ್ಯಾಪಾರದ ಜೊತೆಗೆ ಪಕ್ಷ ಸಂಘಟನೆಯಲ್ಲೂ ಗುರುತಿಸಿಕೊಂಡರು. ಪಕ್ಷ ಸಂಘಟನೆ, ಕಾರ್ಯಕರ್ತ ಪಡೆ ಕಟ್ಟುವುದು, ಸಭೆ ಮಾಡುವುದು ಇವೆಲ್ಲವುಗಳ ಕಡೆಗೇ ಅವರ ಗಮನ. ಆಗ ಹುಬ್ಬಳ್ಳಿ ಧಾರವಾಡದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆದ್ದು ಶಾಸಕರಾದರು. ಹು-ಧಾ ಅವಳಿನಗರ ಬಿಜೆಪಿಯ ಭದ್ರಕೋಟೆ ಆಯಿತು. ಮಹಾನಗರ ಪಾಲಿಕೆ ಚುನಾವಣೆಗಳಲ್ಲೂ ಬಿಜೆಪಿ ಕಾರ್ಪೋರೇಟರುಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಆದರೆ, ಮಹೇಶ ಅವರು ಯಾವ ಚುನಾವಣೆಗೂ ಸ್ಪರ್ಧಿಸುವ ಮನಸ್ಸು ಮಾಡಲಿಲ್ಲ.

ಪಕ್ಷ ಅವರನ್ನು ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಅವರೆಂದೂ ಅಧಿಕಾರ, ಪದವಿಗೆ ಆಸೆ ಮಾಡಲಿಲ್ಲ. ಅವೇ ಅವರನ್ನು ಹುಡುಕಿಕೊಂಡು ಬಂದವು. ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದಾಗ ಮಹೇಶರನ್ನು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಅದೇ ಆಗ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದ ಅಕಾಡೆಮಿಗೆ ಒಂದು ನಿಶ್ಚಿತ ರೂಪುರೇಷೆ ತಯಾರಿಸಿ, ಅದು ಸರಿಯಾಗಿ ಹಳಿಯ ಮೇಲೆ ಚಲಿಸುವಂತೆ ಮಾಡಿದ ಕೀರ್ತಿ ಮಹೇಶರಿಗೆ ಸಲ್ಲಬೇಕು.

ಮಹೇಶರಿಗೆ ಪಕ್ಷವು 2018 ರಲ್ಲಿ ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿತ್ತು. ಅವರು ನಾಮಪತ್ರ ಸಲ್ಲಿಸಿ143 ಹಳ್ಳಿ ಸುತ್ತಾಡಿ ಪ್ರಚಾರ ಕೂಡ ಮಾಡಿದ್ದರು. ಪಕ್ಷ ಪ್ರಚಾರ ಕಚೇರಿ ಉದ್ಘಾಟನೆ ವೇಳೆ ಪಕ್ಷದ ವರಿಷ್ಠರು ಫೋನ್ ಮಾಡಿ, ನೀವು ಹಿಂದೆ ಸರಿಯಿರಿ, ಪಕ್ಷವು ಬೇರೊಬ್ಬರಿಗೆ ಟಿಕೆಟ್ ಕೊಟ್ಟಿದೆ ಎಂದಾಗ, ಆಘಾತವಾದರೂ ಸಮಾಧಾನದಿಂದ ಬಿ ಫಾರಂ ಬೇರೆಯವರಿಗೆ ಕೊಟ್ಟು ಅವರನ್ನು ಕಾಂಗ್ರೆಸ್ ಎದುರು ಜಯಿಸಿಕೊಂಡು ಬಂದವರು ಮಹೇಶ ಟೆಂಗಿನಕಾಯಿ. ಇದು ಅವರ ಪಕ್ಷಕ್ಕೆ ತೋರಿದ ನಿಷ್ಠೆ ತೋರಿಸುತ್ತದೆ. ಪಕ್ಷದ ಅಧಿಕೃತ ಅಭ್ಯರ್ಥಿ ಗೆಲುವಿಗೆ ಅವರು ತಮ್ಮ ಜಾಣ್ಮೆಯನ್ನು ಧಾರೆ ಎರೆದರು.

ಹಾಗಾಗಿ ಪಕ್ಷವು ಅವರನ್ನು ಎರಡು ವರ್ಷದ ಹಿಂದೆ ಕರ್ನಾಟಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಜವಾಬ್ದಾರಿ ಕೊಟ್ಟಿತು. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಮಹೇಶರ ಸಂಘಟನಾ ಚಾತುರ್ಯ ಕೆಲಸ ಮಾಡಿತು. ಈಗ ಹು-ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯ ಗುರುವಾದ ಜಗದೀಶ್ ಶೆಟ್ಟರ್ ವಿರುದ್ಧ ಕಣಕ್ಕೆ ಇಳಿದಿದ್ದರು. ಆ ಫಲಿತಾಂಶ ಈಗ ನಮ್ಮ-ನಿಮ್ಮ ಮುಂದಿದೆ.

ಇದನ್ನೂ ಓದಿ: ಮಹೇಶ್ ಕುಮಟಳ್ಳಿ ವಿರುದ್ಧ ಲಕ್ಷ್ಮಣ ಸವದಿ ಜಯಭೇರಿ.. ಜಾರಕಿಹೊಳಿಗೆ ಮುಖಭಂಗ

Last Updated :May 13, 2023, 1:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.