ETV Bharat / state

ಕಾಂಗ್ರೆಸ್ ತೆಕ್ಕೆಗೆ ಬಿಜೆಪಿ ಬಂಡಾಯ ಅಭ್ಯರ್ಥಿ: ಜಾರಕಿಹೊಳಿ ಸಮ್ಮುಖದಲ್ಲಿ ಕೈ ಸೇರ್ಪಡೆ

author img

By

Published : Apr 23, 2023, 2:13 PM IST

ಮಾಜಿ ಮುಖ್ಯಮಂತ್ರಿ ಜಗದಿಶ್ ಶೆಟ್ಟರ್​ ಬೆನ್ನಲ್ಲೇ ಧಾರವಾಡ ಜಿಲ್ಲೆಯಲ್ಲಿ ಮತ್ತೋರ್ವ ಬಿಜೆಪಿ ನಾಯಕನನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

tavanappa astagi Joins Congress
ತವನಪ್ಪ ಅಷ್ಟಗಿ ಕಾಂಗ್ರೆಸ್ ಸೇರ್ಪಡೆ

ತವನಪ್ಪ ಅಷ್ಟಗಿ ಕಾಂಗ್ರೆಸ್ ಸೇರ್ಪಡೆ..

ಧಾರವಾಡ: ಬಿಜೆಪಿಯಿಂದ ಬಂಡಾಯವೆದ್ದು ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ತವನಪ್ಪ ಅಷ್ಟಗಿ ಇದೀಗ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದಾರೆ. ಅಷ್ಟಗಿ ನಿವಾಸಕ್ಕೆ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೋಳಿ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಈ ವೇಳೆ‌, ಮಾಜಿ ಸಚಿವ ವಿನಯ್​ ಕುಲಕರ್ಣಿ ಸಹೋದರ ವಿಜಯ್​ ಕುಲಕರ್ಣಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರಿಂದ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿಗೆ ಶಾಕ್ ಕೊಟ್ಟಿದ್ದಾರೆ.

ನಾಮಪತ್ರ ವಾಪಸ್: ಈ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್​ ಜಾರಕಿಹೊಳಿ "ವರಿಷ್ಠರ ಸೂಚನೆ ಮೇರೆಗೆ ನಾನು ತವನಪ್ಪ ಅಷ್ಟಗಿ ಮನೆಗೆ ಬಂದಿದ್ದೆ. ಇಂದು ಅವರು ನಮ್ಮ ಪಕ್ಷಕ್ಕೆ ಸೇರಿದ್ದಾರೆ. ಇನ್ನು ಮುಂದೆ ಅವರು ನಮ್ಮ ಪಕ್ಷದ ಪರ ಕೆಲಸ ಮಾಡಲಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಪಕ್ಷೇತರವಾಗಿ ನಾಮ ಪತ್ರ ಸಲ್ಲಿಸಿದ್ದರು. ಈಗ ನಾಮಪತ್ರ ವಾಪಸ್ ಪಡೆಯುತ್ತಾರೆ ಎಂದರು.

ನಮ್ಮ ಅಭ್ಯರ್ಥಿ ವಿನಯ್​ ಕುಲಕರ್ಣಿಗೆ ಬೆಂಬಲ ನೀಡುತ್ತಾರೆ. ನಾವೇ ಅಷ್ಟಗಿಯವರನ್ನೇ ಸಂಪರ್ಕ ಮಾಡಿದ್ದೆವು. ನಾವು ಬಂದು ವಿನಂತಿ ಮಾಡಿದ್ದಕ್ಕೆ ಒಪ್ಪಿಕೊಂಡಿದ್ದಾರೆ. ಅವರ ಶಕ್ತಿಗನುಗುಣವಾಗಿ ಸ್ಥಾನಮಾನ ನೀಡುತ್ತೇವೆ. ಅಷ್ಟಗಿ ಕಾಂಗ್ರೆಸ್ ಸೇರ್ಪಡೆ ಎಫೆಕ್ಟ್ ಕ್ಷೇತ್ರದ ಜತೆಗೆ ಬೇರೆ ಕಡೆಯೂ ಆಗಲಿದೆ ಎಂದರು. ತವನಪ್ಪ ಸಣ್ಣ ಸಮುದಾದಯವರು ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ ದೊಡ್ಡ ಸಮಾಜದವರೇ ದೊಡ್ಡ ಲೀಡರ್ ಎನ್ನಲಾಗದು. ಸಣ್ಣ ಸಮಾಜದವರೂ ಲೀಡರ್ ಆಗಿದ್ದು ಇತಿಹಾಸದಲ್ಲಿದೆ. ಹಾಗೆಯೇ ಇವರು ಬೆಳೆಯುತ್ತಾರೆ ಎಂದರು.

ಗೌರವ ಬಯಸಿ ಪಕ್ಷ ಸೇರ್ಪಡೆ: ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಅಷ್ಟಗಿ, "ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಸಿಗಲಿಲ್ಲ. ಶಾಸಕ ಅಮೃತ ದೇಸಾಯಿ ಗೌರವಕ್ಕೆ ಧಕ್ಕೆ ಬರುವ ಕೆಲಸ ಮಾಡಿದ್ದಾರೆ. ಆರು ಸಲ ಸೋತವರನ್ನು ನಾವು ಶಾಸಕರನ್ನಾಗಿ ಮಾಡಿದ್ದೆವು. ತನು, ಮನ, ಧನದಿಂದ ಕಾರ್ಯಕರ್ತರೆಲ್ಲ ಸೇರಿ ಆಯ್ಕೆ ಮಾಡಿದ್ದೆವು. ಆದರೆ ಅವರು ಕಾರ್ಯಕರ್ತರನ್ನೂ ಕಡೆಗಣಿಸಿದ್ದರು. ಹೀಗಾಗಿ ಈಗ ನಮಗೆ ಮತ್ತು ಕಾರ್ಯಕರ್ತರಿಗೆ ಜಾರಕಿಹೊಳಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅವರು ಹೇಳಿದ್ದರಿಂದ ಕಾಂಗ್ರೆಸ್ ಸೇರಿದ್ದೇವೆ. ನಾಳೆ ನಮ್ಮ ನಾಮಪತ್ರ ವಾಪಸ್ ಪಡೆಯುವೆ. ಬಿಜೆಪಿಯಲ್ಲಿ ಒಂದು ವಿಶ್ವಾಸದ ಮೇಲೆ ಇದ್ದೆವು. ಆದರೆ ಸಿಗಬೇಕಾದ ಗೌರವ ಅಲ್ಲಿ ಸಿಗಲಿಲ್ಲ ಸಾಮಾಜಿಕ ನ್ಯಾಯದ ವಿಶ್ವಾಸದಿಂದ ಕಾಂಗ್ರೆಸ್ ಸೇರಿದ್ದೇನೆ. ಯಾವುದೇ ಷರತ್ತು ವಿಧಿಸಿಲ್ಲ, ಗೌರವ ಬಯಸಿ ಸೇರಿದ್ದೇವೆ. ಮೊದಲು ನಾನು ಕಾಂಗ್ರೆಸ್‌ನಲ್ಲೇ ಇದ್ದೆ. ಆ ಬಳಿಕ ಕೆಜೆಪಿ, ಬಿಜೆಪಿಯಲ್ಲಿ ಇದ್ದೆ. ಈಗ ಮರಳಿ ಕಾಂಗ್ರೆಸ್ ಸೇರಿದ್ದೇನೆ ಎಂದರು.

ಕಮಲ ತೊರೆದು 'ಕೈ' ಹಿಡಿದಿದ್ದ ಸೋಲಿಲ್ಲದ ಸರದಾರ: ಸತತವಾಗಿ ಆರು ಬಾರಿ ಗೆದ್ದು ಮೂರು ದಶಕದ ಕಾಲ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದ ಪಕ್ಷದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಜಗದಿಶ್ ಶೆಟ್ಟರ್​ ಇತ್ತೀಚೆಗೆ ಬಿಜೆಪಿ ತೊರೆದಿದ್ದರು. ಪಕ್ಷ ನಿಷ್ಠೆಗೆ ಹೆಸರಾಗಿದ್ದ ಶೆಟ್ಟರ್, ಹೈಕಮಾಂಡ್ ರಾಜಕೀಯ ದಾಳದ ವಿರುದ್ಧ ಬಂಡೆದ್ದು ಪಕ್ಷದಿಂದ ಹೊರನಡೆದು ಕಾಂಗ್ರೆಸ್​ ಸೇರಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ.

ಇದನ್ನೂ ಓದಿ: ಕಮಲ ತೊರೆದು 'ಕೈ' ಹಿಡಿದ​ ಸೋಲಿಲ್ಲದ ಸರದಾರ: ಜಗದೀಶ್ ಶೆಟ್ಟರ್ ರಾಜಕೀಯ ಹಾದಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.