ETV Bharat / state

ನಾಳೆಯಿಂದಲೇ ಗೋಮಾಂಸ ತಿನ್ನುತ್ತೇವೆ, ಏನ್ ಮಾಡ್ತೀರೋ ಮಾಡ್ಕೊಳ್ಳಿ: ಜಮೀರ್​ ಅಹ್ಮದ್​ ಸವಾಲು

author img

By

Published : Jul 26, 2022, 3:50 PM IST

we-will-eat-beef-from-tomorrow-says-congress-leader-zameer-ahmed-khan
ಗೋಮಾಂಸ ನಾಳೆಯಿಂದ ತಿನ್ನುತ್ತೇವೆ, ಏನ್ ಮಾಡ್ತೀರೋ ಮಾಡಿಕೊಳ್ಳಿ: ಜಮೀರ್​ ಅಹ್ಮದ್​ ಸವಾಲು

ಸಿದ್ದರಾಮಯ್ಯ ಏಕ್ ಶೇರ್ ಹೈ- ನಮಾಜ್ ಬಳಿಕ ಸಿದ್ದರಾಮಯ್ಯನವರಿಗೆ ಅಧಿಕಾರ ಸಿಗಲಿ ಎಂದು ದುವಾ ಮಾಡಿ- ಮುಸ್ಲಿಮರು ತಲೆ ತಗ್ಗಿಸಿ ನಡೆಯಬಾರದು, ತಲೆ ಎತ್ತಿ ನಡೆಯಬೇಕು- ಮಾಜಿ ಸಚಿವ ಜಮೀರ್​ ಅಹ್ಮದ್​ ಖಾನ್​ ಕರೆ

ದಾವಣಗೆರೆ: ರಾಜ್ಯ ಬಿಜೆಪಿ ಸರ್ಕಾರ ಗೋಹತ್ಯೆಯನ್ನು ನಿಷೇಧ ಮಾಡಿದೆ. ಮೀರ್ ಸಾದಿಕ್​ಗಳು ಹೆಚ್ಚಾಗುತ್ತಿದ್ದಾರೆ. ಗೋಮಾಂಸವನ್ನು ನಾವು ಇಂದು ತಿನ್ನಲ್ಲ. ನಾಳೆಯಿಂದ ತಿನ್ನುತ್ತೇವೆ, ಏನ್ ಮಾಡ್ತೀರೋ ಮಾಡಿಕೊಳ್ಳಿ ಎಂದು ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್ ಅವರು​ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ನಗರದಲ್ಲಿಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಮೃತ ಮಹೋತ್ಸವದ ಅಲ್ಪಸಂಖ್ಯಾತ ವಿಭಾಗದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಟಿಪ್ಪು ಜಯಂತಿ ಬ್ಯಾನ್ ಮಾಡಿ‌ ಎಂದಾಗ ಬಿಜೆಪಿಯವರ ವಿರುದ್ಧ ನಿಂತವರು ಸಿದ್ದರಾಮಯ್ಯ. ನೀವು ಏನ್ ಮಾಡ್ತೀರಾ ಮಾಡಿಕೊಳ್ಳಿ ನಾನು ಟಿಪ್ಪು ಜಯಂತಿ ಮಾಡ್ತೀನಿ ಎಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಮ್ಮ ಸಿದ್ದರಾಮಯ್ಯ ಆಚರಿಸಿದರು. ಸಿದ್ದರಾಮಯ್ಯ ಏಕ್ ಶೇರ್ ಹೈ. (ಸಿದ್ದರಾಮಯ್ಯ ಒಂದು ಸಿಂಹ ಇದ್ದಂತೆ). ಹೀಗಾಗಿ ನಮಾಜ್ ಬಳಿಕ ಸಿದ್ದರಾಮಯ್ಯನವರಿಗೆ ಅಧಿಕಾರ ಸಿಗಲಿ ಎಂದು ದುವಾ ಮಾಡಿ, ಮುಸ್ಲಿಮರು ತಲೆ ತಗ್ಗಿಸಿ ನಡೆಯಬಾರದು. ತಲೆ ಎತ್ತಿ ನಡೆಯಬೇಕೆಂದು ಕರೆ ನೀಡಿದರು.

ಗೋಮಾಂಸ ನಾಳೆಯಿಂದ ತಿನ್ನುತ್ತೇವೆ, ಏನ್ ಮಾಡ್ತೀರೋ ಮಾಡಿಕೊಳ್ಳಿ: ಜಮೀರ್​ ಅಹ್ಮದ್​ ಸವಾಲು

ಸಚಿವ ಸ್ಥಾನ ನೀಡಿದ್ದೇ ಆಶ್ಚರ್ಯ: 2008ರಲ್ಲಿ ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್​ಗೆ ಬಂದಿದ್ದೆ. ಆಗ ನನಗೆ ಕಾಂಗ್ರೆಸ್​ನಲ್ಲಿ ಸಚಿವ ಸ್ಥಾನ ನೀಡಿದ್ದು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿತು. ಕಾಂಗ್ರೆಸ್​ನಲ್ಲಿ ನನಗಿಂತ ಹಿರಿಯರಾದ ತನ್ವೀರ್ ಸೇಠ್, ಹ್ಯಾರಿಸ್​ನಂತಹವರು ಇದ್ದರೂ ನನ್ನನ್ನು ಮಂತ್ರಿ ಮಾಡಿದರು. ಆಗ ರಣದೀಪ್ ಸುರ್ಜೇವಾಲಾ ಕರೆ ಮಾಡಿ ಮಾತನಾಡಿದ್ದರು. ಅವರಿಗೆ ಕರೆ ಮಾಡಿದ್ದು, ನನ್ನ ಬಳಿ ಹಣ ಇದೆ ಅಂತಲ್ಲ. ನನ್ನ ಹಿಂದೆ ಮುಸ್ಲಿಂ ಸಮಾಜ ಇದೆ ಎಂದು ಕರೆ ಮಾಡಿದ್ದರು ಅಂತಾ ಶಾಸಕ ಜಮೀರ್​ ಅಹ್ಮದ್​ ಖಾನ್​ ಹೇಳಿದ್ರು.

ಅಲ್ಲದೇ, ಅಂದು ರಾಜ್ಯ ಉಸ್ತುವಾರಿ ಆಗಿದ್ದ ಕೆ ಸಿ ವೇಣುಗೋಪಾಲ್​, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸಹ ಕರೆ ಮಾಡಿ ಯಾವ ಖಾತೆ ನೀಡಬೇಕೆಂದು ಕೇಳಿದ್ದರು. ಅದಕ್ಕೆ ನಾನು ಮುಸ್ಲಿಮರ ಸೇವೆ ಮಾಡಲು ವಕ್ಫ್​ ಖಾತೆ ಕೊಡಿ ಎಂದು ಕೇಳಿಕೊಂಡಿದ್ದೆ. ಅಂತೆಯೇ ಆ ಖಾತೆಯೇ ನನಗೆ ಸಿಕ್ಕಿತ್ತು. ಪರಿಣಾಮ ಒತ್ತುವರಿಯಾಗಿದ್ದ ವಕ್ಫ್ ಆಸ್ತಿ ಮತ್ತು ಜಮೀನು ಗುರುತಿಸಿ ಖಾತೆ ಮಾಡಿಸಿ ಉಳಿಸಿದೆ. ಆದರೆ, ನಮ್ಮ ಹಣೆಬರಹ ಸರಿ ಇರಲಿಲ್ಲ. ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು ಎಂದರು.

105 ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯ: ಇಡೀ ಕರ್ನಾಟಕದಲ್ಲಿ 105 ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದ್ದು, ಪ್ರತಿ ಕ್ಷೇತ್ರಗಳಲ್ಲಿ ಕನಿಷ್ಠ ಅಂದರೂ ಒಂದು ಲಕ್ಷದಷ್ಟು ಮುಸ್ಲಿಮರಿದ್ದಾರೆ‌. ನೀವೆಲ್ಲ ಸಿದ್ದರಾಮಯ್ಯನವರ ಪರ ನಿಲ್ಲಬೇಕು ಎಂದು ಜಮೀರ್​ ಅಹ್ಮದ್​ ಮನವಿ ಮಾಡಿದರು.

ಒತ್ತುವರಿಯಾದ ವಕ್ಫ್ ಆಸ್ತಿಯಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡೋಣ ಅಂತ ಅಂದಿನ ಮುಖ್ಯಮಂತ್ರಿ ಹೆಚ್​.ಡಿ .ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದೆ. ಆದರೆ, ಕುಮಾರಸ್ವಾಮಿ ರೈತರ ಸಾಲ‌ ಮನ್ನಾ ಮಾಡಬೇಕು. ಇದಕ್ಕೆ ಹಣ ಕಡಿಮೆ ಆಗುತ್ತೆ ಎಂದು‌ ಸಬೂಬು ಹೇಳಿದರು. ಈ ವಿಚಾರವಾಗಿ ನಾನು ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದೆ. ಆಗ ಅವರು ನಾನು ಸಿಎಂ ಇದ್ದಾಗ ತಂದು ಕೊಟ್ಟಿದ್ದರೆ, ಐದು ಸಾವಿರ ಕೋಟಿ ಕೊಡುತ್ತಿದ್ದೆ ಎಂದಿದ್ದರು. ಸಿದ್ದರಾಮಯ್ಯ ಕೊಟ್ಟಷ್ಟು ಭಾಗ್ಯಗಳನ್ನು ಯಾರೂ ಕೊಟ್ಟಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಆಯ್ಕೆ ಪಕ್ಷದ ದೊಡ್ಡವರ ವಿಚಾರ, ಯುವ ಕಾಂಗ್ರೆಸ್​ ತಲೆ ಹಾಕಲ್ಲ: ನಲಪಾಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.