ETV Bharat / state

ಎರಡನೇ ಪೋಕ್ಸೋ ಪ್ರಕರಣ: ಮುರುಘಾ ಶ್ರೀಗಳ ಬಂಧನ ಆದೇಶ ರದ್ದುಪಡಿಸಿದ ಹೈಕೋರ್ಟ್

author img

By ETV Bharat Karnataka Team

Published : Nov 20, 2023, 3:42 PM IST

Updated : Nov 20, 2023, 7:47 PM IST

Murugha Swamiji Arrest Case: ಎರಡನೇ ಪೋಕ್ಸೊ ಪ್ರಕರಣ ಸಂಬಂಧ ಪೊಲೀಸರಿಂದ ಬಂಧಿತರಾಗಿದ್ದ ಮುರುಘಾ ಮಠದ ಡಾ ಶಿವಮೂರ್ತಿ ಶರಣರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

murugha-mutt-swamiji-arrested-by-police-in-pocso-case
ಪೋಕ್ಸೊ ಪ್ರಕರಣ: ಮತ್ತೆ ಮುರುಘಾ ಶರಣರನ್ನು ಬಂಧಿಸಿದ ಪೊಲೀಸರು

ದಾವಣಗೆರೆ/ಬೆಂಗಳೂರು: ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಚಿತ್ರದುರ್ಗದ ಎರಡನೇ ಹೆಚ್ಚುವರ ಸೆಷನ್ಸ್ ನ್ಯಾಯಾಲಯ ಜಾರಿ ಮಾಡಿದ್ದ ಜಾಮೀನು ರಹಿತ ವಾರಂಟ್‌ಗೆ ತಡೆ ನೀಡಿರುವ ಹೈಕೋರ್ಟ್, ಶರಣರನ್ನು ಬಿಡುಗಡೆ ಮಾಡುವಂತೆ ಚಿತ್ರದುರ್ಗ ಜಿಲ್ಲಾ ಪೊಲೀಸರಿಗೆ ಸೂಚನೆ ನೀಡಿದೆ.

ಚಿತ್ರದುರ್ಗ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಹೈಕೋರ್ಟ್ ಅವಕಾಶ ನೀಡಿದ್ದರೂ, ಬಂಧನಕ್ಕೊಳಪಡಿಸಿದ್ದ ಕ್ರಮವನ್ನು ಪ್ರಶ್ನಿಸಿ ಮುರುಘಾ ಶರಣರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ, ಅರ್ಜಿದಾರರನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.

ಆದೇಶ ಪಾಲಿಸಿ ಎಂದ ಹೈಕೋರ್ಟ್: ಅಲ್ಲದೆ, ಈ ಆದೇಶದ ಪ್ರತಿಯನ್ನು ಹೈಕೋರ್ಟ್ ರಿಜಿಸ್ಟ್ರಾರ್ ಅವರು ತಕ್ಷಣ ಇ-ಮೇಲ್ ಮೂಲಕ ಚಿತ್ರದುರ್ಗ ಜೈಲು ಅಧಿಕಾರಿಗಳಿಗೆ ರವಾನಿಸಿ ಆದಷ್ಟು ಶೀಘ್ರದಲ್ಲಿ ಬಿಡುಗಡೆ ಕ್ರಮ ವಹಿಸಬೇಕು. ಮೊದಲ ಪೋಕ್ಸೊ ಪ್ರಕರಣದಲ್ಲಿ ಹೈಕೋರ್ಟ್​ನ ಏಕಸದಸ್ಯ ಪೀಠವು ಆರೋಪಿಗೆ ಜಾಮೀನು ಮಂಜೂರು ಮಾಡುವಾಗ ಚಿತ್ರದುರ್ಗಕ್ಕೆ ಆರೋಪಿ ಪ್ರವೇಶಿಸಬಾರದು ಹಾಗೂ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿದೆ. ಈ ಆದೇಶವನ್ನು ಉಲ್ಲಂಘಿಸಿ ವಿಚಾರಣಾಧೀನ ನ್ಯಾಯಾಲಯಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರು ಮೆಮೊ ಸಲ್ಲಿಸಿದ್ದು, ಇದನ್ನು ವಿಶೇಷ ನ್ಯಾಯಾಲಯವು ಪರಿಗಣಿಸಿದೆ. ಜಾಮೀನು ಮಂಜೂರು ಮಾಡುವಾಗ ಹೈಕೋರ್ಟ್​​ ಏಕಸದಸ್ಯ ಪೀಠಗಳು ಪ್ರತ್ಯೇಕ ಪ್ರಕರಣಗಳಲ್ಲಿ ಮಾಡಿರುವ ಆದೇಶವನ್ನು ವಿಶೇಷ ನ್ಯಾಯಾಲಯ ಪಾಲಿಸಬೇಕು ಎಂದು ಪೀಠ ತಿಳಿಸಿದೆ.

ಹೈಕೋರ್ಟ್ ಒಮ್ಮೆ ಚಿತ್ರದುರ್ಗ ಪ್ರವೇಶಿಸಬಾರದು ಎಂದು ಆರೋಪಿಗೆ ನಿರ್ದೇಶಿಸಿದ ಮೇಲೆ ಚಿತ್ರದುರ್ಗದಲ್ಲಿ ನಡೆಯುವ ಎಲ್ಲಾ ಪ್ರಕ್ರಿಯೆಗಳಿಗೂ ಅದು ಅನ್ವಯಿಸುತ್ತದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಹೈಕೋರ್ಟ್ ನಿರ್ದೇಶಿಸಿದೆ. ವಿಶೇಷ ನ್ಯಾಯಾಲಯದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರು ತೆಗೆದುಕೊಂಡಿರುವ ಕ್ರಮ ಮತ್ತು ಆನಂತರ ಚಿತ್ರದುರ್ಗದ ವಿಶೇಷ ನ್ಯಾಯಾಲಯ ಮಾಡಿರುವ ಆದೇಶವು ಹೈಕೋರ್ಟ್ ಆದೇಶಕ್ಕೆ ತದ್ವಿರುದ್ಧವಾಗಿದೆ ಎಂದು ಪೀಠ ಹೇಳಿದೆ.

ಶರಣರ ಪರ ವಕೀಲರ ವಾದ: ವಿಚಾರಣೆ ವೇಳೆ ಶರಣರ ಪರ ವಕೀಲರು, 'ಅರ್ಜಿದಾರ ಶರಣರ ವಿರುದ್ಧದ ಎಫ್‌ಐಆರ್ ದಾಖಲಿಸುವಾಗ ಅನ್ವಯಿಸಿದ ಕಾಯಿದೆ ಮತ್ತು ಸೆಕ್ಷನ್​ಗಳನ್ನು ಹಾಕಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್​ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿದೆ. ಅಲ್ಲದೇ, ಆರೋಪ ನಿಗದಿಯ ನಂತರದ ಪ್ರಕ್ರಿಯೆಯನ್ನು ಮುಂದೂಡುವಂತೆ ಚಿತ್ರದುರ್ಗದ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿದೆ. ಅಲ್ಲದೇ, ಹೈಕೋರ್ಟ್​ನ ಇನ್ನೊಂದು ಪೀಠವು ಶರಣರಿಗೆ ಜಾಮೀನು ಮಂಜೂರು ಮಾಡುವಾಗ ಚಿತ್ರದುರ್ಗ ಪ್ರವೇಶಕ್ಕೆ ನಿರ್ಬಂಧ ವಿಧಿಸಿ, ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕು ಎಂದು ಆದೇಶಿಸಿದೆ. ಅದಾಗ್ಯೂ, ಪ್ರಾಸಿಕ್ಯೂಷನ್ ಎರಡನೇ ಪೋಕ್ಸೊ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿಲ್ಲ ಎಂದು ಮೆಮೊ ಸಲ್ಲಿಸಿದೆ. ಇದನ್ನು ವಿಶೇಷ ನ್ಯಾಯಾಲಯ ಪರಿಗಣಿಸಿ, ಶರಣರನ್ನು ಬಂಧಿಸುವಂತೆ ಆದೇಶ ಮಾಡಿದೆ. ಇದರ ಭಾಗವಾಗಿ ಅವರನ್ನು ಬಂಧಿಸಿ, ಚಿತ್ರದುರ್ಗದ ಜೈಲಿನಲ್ಲಿ ಇಡಲಾಗಿದೆ. ಇದು ಹೈಕೋರ್ಟ್ ಆದೇಶಕ್ಕೆ ತದ್ವಿರುದ್ಧದ ಕ್ರಮವಾಗಿದೆ' ಎಂದು ವಿವರಿಸಿದರು.

ಈ ವಿಚಾರವನ್ನು ಅರ್ಜಿದಾರರ ಪರ ವಕೀಲರು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅಲ್ಲದೇ, ಹೈಕೋರ್ಟ್​ ಏಕಸದಸ್ಯ ಪೀಠವು ವಿಚಾರಣೆ ಮೂಂದೂಡಿರುವ ವಿಚಾರ ಹಾಗೂ ಮಧ್ಯಂತರ ಆದೇಶವನ್ನು ಗಮನಕ್ಕೆ ತಂದಿದ್ದಾರೆ. ಅದಾಗ್ಯೂ, ಚಿತ್ರದುರ್ಗದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಶರಣರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ್ದಾರೆ. ಇದರ ಭಾಗವಾಗಿ ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ ಎಂದು ವಾದಿಸಿದರು.

ವಿಶೇಷ ಸರ್ಕಾರಿ ಅಭಿಯೋಜಕರ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ : ಶರಣರಿಗೆ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಹೈಕೋರ್ಟ್‌ನ ಮತ್ತೊಂದು ಪೀಠ, ಆರೋಪಿ ಚಿತ್ರದುರ್ಗಕ್ಕೆ ಪ್ರವೇಶಿಸಬಾರದು ಎಂದು ತಿಳಿಸಿದೆ. ಅದಾಗ್ಯೂ ವಿಶೇಷ ಸರ್ಕಾರಿ ಅಭಿಯೋಜಕರು ವಿಚಾರಣಾಧೀನ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿ, ಆರೋಪಿ ಶರಣರು ವಿಚಾರಣೆಗೆ ಹಾಜರಾಗಿಲ್ಲ ಎಂದು ಹೇಳಿದ್ದಾರೆ. ಇದು ಹೈಕೋರ್ಟ್​ ಆದೇಶಕ್ಕೆ ವಿರುದ್ಧವಲ್ಲವೇ ಎಂದು ಎಸ್‌ಪಿಪಿ ಅವರನ್ನು ನ್ಯಾಯಪೀಠ ಪ್ರಶ್ನಿಸಿತು. ಜೊತೆಗೆ, ವಿಶೇಷ ನ್ಯಾಯಾಧೀಶರಿಗೆ ಸಂಬಂಧಿಸಿದಂತೆ ನಾವು ಆಡಳಿತಾತ್ಮಕ ವಿಭಾಗದಲ್ಲಿ ಕ್ರಮ ಕೈಗೊಳ್ಳುತ್ತೇವೆ. ನಿಮ್ಮ ಸಹೋದ್ಯೋಗಿಯ ಬಗ್ಗೆ ಏನು ಕ್ರಮವಹಿಸುತ್ತೀರಿ? ನೀವು ಕ್ರಮಕೈಗೊಳ್ಳಬೇಕು. ನಿಮಗೆ ಒಳ್ಳೆಯ ಪ್ರಕರಣ ಇರಲಿ, ಕೆಟ್ಟ ಪ್ರಕರಣ ಇರಲಿ. ಕಾನೂನು ಪ್ರಕ್ರಿಯೆ ಪ್ರಕಾರ ನಡೆದುಕೊಳ್ಳಬೇಕು. ಇದು ಸೆನ್ಸೇಷನಲ್ ಪ್ರಕರಣ ಎಂದ ಮಾತ್ರಕ್ಕೆ ತೀರ್ಪನ್ನು ತಪ್ಪಾಗಿ ಅರ್ಥೈಸಲಾಗದು ಎಂದು ಪೀಠ ತಿಳಿಸಿತು.

ವಾರಂಟ್​ ಬೆನ್ನಲ್ಲೇ ಶರಣರ ಬಂಧಿಸಿದ್ದ ಪೊಲೀಸರು: ಪೋಕ್ಸೊ ಪ್ರಕರಣ ಸಂಬಂಧ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದ್ದ ಹಿನ್ನೆಲೆ ಮುರುಘಾ ಶರಣರನ್ನು ಸೋಮವಾರ ಪೊಲೀಸರು ಬಂಧಿಸಿದ್ದರು. ಮುರುಘಾ ಶ್ರೀಗಳ ವಿರುದ್ಧದ ಮೊದಲ ಪೋಕ್ಸೊ ಪ್ರಕರಣದಲ್ಲಿ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಕಳೆದ ಶನಿವಾರ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ, ಎರಡನೇ ಪ್ರಕರಣ ಸಂಬಂಧ ನ್ಯಾಯಾಧೀಶರಾದ ಬಿ ಕೆ ಕೋಮಲಾ ಅವರು ಇಂದು ಬಂಧನ ವಾರಂಟ್ ಆದೇಶ ಹೊರಡಿಸಿದ್ದರು. ಇದರ ಬೆನ್ನಲ್ಲೇ ದಾವಣಗೆರೆ ನಗರದ ದೊಡ್ಡಪೇಟೆಯಲ್ಲಿರುವ ವಿರಕ್ತ ಮಠದಲ್ಲಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿ ಚಿತ್ರದುರ್ಗಕ್ಕೆ ಕರೆದೊಯ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಇದನ್ನೂ ಓದಿ: ಚಿತ್ರದುರ್ಗ ಮುರುಘಾಶ್ರೀ ವಿರುದ್ಧ ಬಂಧನ ವಾರೆಂಟ್: ದಾವಣಗೆರೆ ವಿರಕ್ತ ಮಠದತ್ತ ಭಕ್ತರ ದಂಡು

Last Updated :Nov 20, 2023, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.