ETV Bharat / state

ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಮಂಗಳೂರಿನಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ

author img

By ETV Bharat Karnataka Team

Published : Sep 6, 2023, 7:33 PM IST

shri-krishna-janmashtami-celebration-at-mangaluru
ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಮಂಗಳೂರಿನಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ

ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನಲೆ ಮಂಗಳೂರಿನ ಕದ್ರಿ ದೇವಾಲಯದಲ್ಲಿ ಕೃಷ್ಣವೇಷ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ನೂರಾರು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಮಂಗಳೂರಿನಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ

ಮಂಗಳೂರು : ಕರಾವಳಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರತಿ ವರ್ಷ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿಯನ್ನು ರಾಷ್ಟ್ರೀಯ ಮಕ್ಕಳ ಉತ್ಸವ ಎಂದು ಆಚರಿಸಲಾಗುತ್ತದೆ. ಈ ವೇಳೆ, ಶ್ರೀ ಕೃಷ್ಣವೇಷ ಸ್ಪರ್ಧೆ ನಡೆಯುತ್ತದೆ. ಈ ಬಾರಿ ಶ್ರೀಕೃಷ್ಣ ಸ್ಪರ್ಧೆಯಲ್ಲಿ ನೂರಾರು ಪುಟಾಣಿಗಳು ಭಾಗವಹಿಸಿದರು.

ಅಷ್ಟಮಿ ಪ್ರಯುಕ್ತ ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿಯಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ರಾಷ್ಟ್ರೀಯ ಮಕ್ಕಳ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಾರಿ 41ನೇ ವರ್ಷದ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು. ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಕಲ್ಕೂರ ಪ್ರತಿಷ್ಠಾನ ಈ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಆರಂಭವಾದ ಶ್ರೀ ಕೃಷ್ಣ ವೇಷ ಸ್ಪರ್ಧೆ ರಾತ್ರಿ 12 ಗಂಟೆಯವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಸಾವಿರಾರು ಪುಟಾಣಿಗಳು ಭಾಗವಹಿಸುತ್ತಾರೆ.

ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು 41 ವಿಭಾಗಗಳಲ್ಲಿ 9 ವೇದಿಕೆಯಲ್ಲಿ ಏಕಕಾಲದಲ್ಲಿ ಆಯೋಜಿಸಲಾಗಿದೆ. ಅದೇ ರೀತಿ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನಲೆ ವಿವಿಧ ಸ್ಪರ್ಧೆಗಳು :

1.ತೊಟ್ಟಿಲ ಕೃಷ್ಣ - 6 ತಿಂಗಳ ಕೆಳಗಿನ ಶಿಶುಗಳಿಗೆ
2. ಕಂದ ಕೃಷ್ಣ- 6 ತಿಂಗಳಿನಿಂದ 12 ತಿಂಗಳ ಒಳಗಿನ ಶಿಶುಗಳಿಗೆ
3. ಮುದ್ದು ಕೃಷ್ಣ ಸ್ಪರ್ಧೆ- 1 ವರ್ಷಕ್ಕಿಂತ ಮೇಲ್ಪಟ್ಟ 2 ವರ್ಷದ ಕೆಳಗಿನ ಮಕ್ಕಳಿಗೆ
4. ತುಂಟ ಕೃಷ್ಣ- 2 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 3 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ
5. ಬಾಲಕೃಷ್ಣ- ಬಾಲವಾಡಿ, ಅಂಗನವಾಡಿ ಮತ್ತು ಎಲ್ ಕೆ‌ಜಿ ಪುಟಾಣಿಗಳಿಗೆ
6. ಕಿಶೋರ ಕೃಷ್ಣ- ಯುಕೆಜಿ ಮತ್ತು 1 ನೇ ತರಗತಿ ಪುಟಾಣಿಗಳಿಗೆ
7. ಶ್ರೀಕೃಷ್ಣ - 2,3,4 ನೇ ತರಗತಿ ವಿದ್ಯಾರ್ಥಿಗಳಿಗೆ
8. ಗೀತಾ ಕೃಷ್ಣ- ವೇಷಭೂಷಣ ದೊಂದಿಗೆ ಗೀತೋಪದೇಶದ ಶ್ಲೋಕದ ಪಠಣದೊಂದಿಗೆ 7 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ
9. ಶಂಖನಾದ- ಸಾಂಪ್ರದಾಯಿಕ ಉಡುಗೆಯೊಂದಿಗೆ 7 ನೇ ತರಗತಿವರೆಗಿನ ಮಕ್ಕಳಿಗೆ
10. ಶಂಖ ಉದ್ಘೋಷ; ಸಾಂಪ್ರದಾಯಿಕ ಉಡುಗೆಯೊಂದಿಗೆ 7 ನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ
11. ರಾಧಾ ಕೃಷ್ಣ : 7 ನೇ ತರಗತಿ ವರೆಗಿನ ಜೋಡಿ ಮಕ್ಕಳಿಗೆ
12. ರಾಧಾ ಮಾಧವ : 7 ನೇ ತರಗತಿ ಮೇಲ್ಪಟ್ಟ ಜೋಡಿ ಮಕ್ಕಳಿಗೆ
13. ಯಶೋಧ ಕೃಷ್ಣ : ಯಾವುದೇ ವಯೋಮಾನದ ಮಹಿಳೆ ಯಶೋಧೆಯಾಗಿ ಯಾವುದೇ ಮಗು ಕೃಷ್ಣನಾಗಿ ಭಾಗವಹಿಸಬಹುದು
14. ದೇವಕಿ ಕೃಷ್ಣ: ಈ ಹಿಂದೆ ಕದ್ರಿ ಕ್ಷೇತ್ರದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಕೃಷ್ಣ ವೇಷ ಧರಿಸಿ ಸ್ಪರ್ಧಾಳುಗಳಾಗಿ ಭಾಗವಹಿಸಿದ ತಾಯಂದಿರು ದೇವಕಿಯಾಗಿ ಅಥವಾ ಯಶೋದೆಯಾಗಿ ಭಾಗವಹಿಸಬಹುದಾಗಿದೆ. ಈ ಸ್ಪರ್ದಾಳು ತಮ್ಮ ಮಗು ಅಥವಾ ಯಾವುದೇ ಕೃಷ್ಣ ವೇಷಧಾರಿ ಮಗುವಿನೊಂದಿಗೆ ಬರಬಹುದು
15. ವಸುದೇವ ಕೃಷ್ಣ: ಮುಕ್ತ ವಿಭಾಗ
16. ಯಕ್ಷ ಕೃಷ್ಣ: ಹತ್ತನೇ ತರಗತಿವರೆಗಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸುವ ಸ್ಪರ್ಧೆ
17. ನಂದಗೋಕುಲ: ಸಮೂಹ ವಿಭಾಗ
18. ಛಾಯಕೃಷ್ಣ-still photographyಯನ್ನು ಇಂದೇ kalkuraadvt@gmail.com ಗೆ ಕಳುಹಿಸಕೊಡಬೇಕು
19. ಶ್ರೀ ಕೃಷ್ಣ ವರ್ಣ ವೈಭವ -ಚಿತ್ರಕಲಾ ಸ್ಪರ್ಧೆ
20. ಅತ್ಯುತ್ತಮ ರಸಪ್ರಶ್ನೆ - ಲಿಖಿತ
21. ಮಾಧವ ರಸಪ್ರಶ್ನೆ -ಲಿಖಿತ
22. ಕೇಶವ ರಸಪ್ರಶ್ನೆ- ಲಿಖಿತ
23. ಕೃಷ್ಣ ಕವನ- ಬಹುಭಾಷಾ ಕವನ ಪ್ರೌಢಶಾಲೆ ಕಾಲೇಜು ಮತ್ತು ಮುಕ್ತ ವಿಭಾಗಕ್ಕೆ
24. ಕೃಷ್ಣ ಗೀತೆ- ಕನ್ನಡ ಅಥವಾ ತುಳು ಭಜನೆ ಮತ್ತು ಭಕ್ತಿಗೀತೆ 18 ವರ್ಷ ಕೆಳಗಿನ ಮತ್ತು ಮೇಲ್ಪಟ್ಟ ಎರಡು ವಿಭಾಗದಲ್ಲಿ.

ಸೆಪ್ಟೆಂಬರ್ 3 ರಂದು ನಡೆದ ಸ್ಪರ್ಧೆಗಳು :

26. ಶ್ರೀ ಕೃಷ್ಣ ಗಾನ ವೈಭವ
27. ರಂಗೋಲಿಯಲ್ಲಿ ಶ್ರೀಕೃಷ್ಣ ಸಾಂಪ್ರದಾಯಿಕ ಚುಕ್ಕಿ ರಂಗೋಲಿ
28. ರಂಗೋಲಿಯಲ್ಲಿ ಶ್ರೀಕೃಷ್ಣ ಸರಳ ಕೈ ಶೈಲಿ ರಂಗೋಲಿ
29. ಪಂಡರಾಪುರ ವಿಠಲ ಮುಕ್ತ ವಿಭಾಗ
30. ಆನ್ಲೈನ್ ವಿಭಾಗದಲ್ಲಿ ವೃಕ್ಷ ಕೃಷ್ಣ
31. ಆನ್ಲೈನ್ ವಿಭಾಗದಲ್ಲಿ ಗೋಪಾಲಕೃಷ್ಣ

ಈ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ಭಾಗವಹಿಸುವ ಸ್ಪರ್ಧಾಳುಗಳೆಲ್ಲರಿಗೂ ಬಹುಮಾನ ನೀಡಲಾಗುತ್ತದೆ. ಎಲ್ಲಾ ವಿಭಾಗದ ವಿಜೇತರಿಗೆ ಉಡುಗೊರೆಯ ಜೊತೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುತ್ತದೆ.

ಈ ಬಾರಿಯ ವಿಶೇಷತೆ : ಒಟ್ಟು 41 ವಿಭಾಗದಲ್ಲಿ ಏಕಕಾಲದಲ್ಲಿ ಕದ್ರಿ ದೇವಳದ ಒಟ್ಟು 9 ವೇದಿಕೆಗಳಲ್ಲಿ ಸ್ಪರ್ಧೆಗಳು ಜರಗಲಿವೆ. ಶ್ರೀ ಕೃಷ್ಣ ರಸಪ್ರಶ್ನೆ-ಬಾಲಕೃಷ್ಣ ರಸಪ್ರಶ್ನೆ ಸ್ಪರ್ಧಾಳುಗಳಿಗೆ ಬಹುಮಾನವಾಗಿ ನಿತ್ಯ ಪೂಜಾ ಮತ್ತು ಸಾಂಸ್ಕೃತಿಕ ಪರಿಕರಗಳನ್ನು (ಶಂಖ, ಜಾಗಟೆ, ಬೆಳ್ಳಿ ತುಳಸಿ ಮಣಿ ಸರ, ಬೆಳ್ಳಿಕಟ್ಟದ ಅಭಿಷೇಕ ಶಂಖ, ಮುದ್ರೆ, ತಾಳ, ಆರತಿ, ದೀಪ ಇತ್ಯಾದಿ) ನೀಡಲಾಗುವುದು.

ರಾತ್ರಿ 12 ಗಂಟೆಗೆ ಶ್ರೀ ಕೃಷ್ಣ ದೇವರಿಗೆ 12 ಬಗೆಯ ಉಂಡೆಗಳು, ಚಕ್ಕುಲಿ, ಕಡುಬು ಇನ್ನಿತರ ಖಾದ್ಯಗಳನ್ನು ನೈವೇದ್ಯ ಮಾಡಿ ನೆರೆದ ಮಕ್ಕಳಿಗೆ ಪ್ರಸಾದರೂಪವಾಗಿ ಉಂಡೆ ಚಕ್ಕುಲಿಗಳನ್ನು ವಿತರಿಸಲಾಗುವುದು. ಸಾರ್ವಜನಿಕರಿಗೂ ಅರ್ಘ್ಯ ಪ್ರದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಪಾಲಕರು ತಮ್ಮ ಮಕ್ಕಳಿಗೆ ಅವರವರ ಮನೆಗಳಲ್ಲೇ ಅಥವಾ ಇತರ ಕಡೆಗಳಲ್ಲಿ ವೇಷ ಭೂಷಣವನ್ನು ಹಾಕಿಸಿ ತರಬಹುದು ಅಥವಾ ಸ್ಥಳದಲ್ಲೇ ಅವರವರ ವೆಚ್ಚದಲ್ಲಿ ವೇಷವನ್ನು ಹಾಕಿಸಬಹುದಾಗಿದೆ. ವೇಷಭೂಷಣಗಳಲ್ಲಿ ಆಡಂಬರಕ್ಕೆ ಹೆಚ್ಚಿನ ಪ್ರಾಶಸ್ತ್ರ ನೀಡದೆ ಮಕ್ಕಳ ಮುಗ್ಧ ಸೌಂದರ್ಯದ ನೈಜತೆಯನ್ನು ಹೊರಸೂಸುವ ವೇಷಗಳನ್ನು ಧರಿಸಿಕೊಂಡಿರಲಿ ಎಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.

ಸ್ವರಚಿತ 'ಕೃಷ್ಣ ಕವನ' ಹಾಗೂ 'ಕೃಷ್ಣಗೀತೆ' ವಿಭಾಗದಲ್ಲಿ ಸ್ಪರ್ಧೆಗೆ ಬಂದಿರುವ ಆಯ್ದ ಕೃತಿಗಳನ್ನು ಸಂಗ್ರಹಿಸಿ, 'ಕೃಷ್ಣ ಕಾವ್ಯ ಮೃಷ್ಠಾನ್ನ' ಎನ್ನುವ ಹೊಸ ಕವನಗಳ 'ಹೊತ್ತಗೆ'ಯೊಂದನ್ನು ಮುದ್ರಿಸಲಾಗುತ್ತದೆ. ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ವಿಶೇಷವಾಗಿ ಆಚರಿಸುವ ಮಂಗಳೂರಿನಲ್ಲಿ ಮಕ್ಕಳಿಗೆ ಶ್ರೀಕೃಷ್ಣನ ವೇಷ ಹಾಕಿ ಹೆತ್ತವರು ಖುಷಿ ಪಡುತ್ತಾರೆ. ಮಗುವಿನಲ್ಲಿ ಭಗವಂತನನ್ನು ಕಾಣುವ ಮೂಲಕ ಖುಷಿ ಪಡುತ್ತಾರೆ. ಈ ಕಾರಣದಿಂದಲೇ ತಮ್ಮ ಮಗುವಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮ ಪಡುತ್ತಾರೆ.

ಕಾರ್ಯಕ್ರಮದ ಆಯೋಜಕರಾದ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಅವರು ಮಾತನಾಡಿ, ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಯನ್ನು ಮೂಡಿಸುವ ದೃಷ್ಟಿಯಿಂದ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಇದೀಗ ಮಕ್ಕಳನ್ನು ಸಿನೆಮಾ ಗೀತೆಯ ನೃತ್ಯವನ್ನು ಮಾಡಿಸಲಾಗುತ್ತಿದೆ. ಇದರ ಬದಲಿಗೆ ಮಕ್ಕಳಲ್ಲಿ ಸಕರಾತ್ಮಕ ಚಿಂತನೆಯನ್ನು ಮೂಡಿಸಲು ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು.

ಇನ್ನೂ ತಮ್ಮ ಮಕ್ಕಳನ್ನು ಸ್ಪರ್ಧೆಗೆ ಕರೆದುಕೊಂಡು ಬಂದಿದ್ದ ಪುಟ್ಟ ಮಕ್ಕಳ ತಾಯಿಗಳಾದ ಪುತ್ತೂರಿನ ಶಾಲಿನಿ ಮತ್ತು ಮಂಗಳೂರಿನ ಅಶ್ವಿನಿ ಮಾತನಾಡಿ ಇಂದು ಶ್ರೀಕೃಷ್ಣನನ್ನು ಪೂಜಿಸುವ ದಿನ. ನಮ್ಮ ಮಕ್ಕಳಲ್ಲಿ ಭಗವಂತ ಶ್ರೀ ಕೃಷ್ಣನನ್ನು ಕಾಣುತ್ತೇವೆ. ಇದಕ್ಕಾಗಿ ಶ್ರೀಕೃಷ್ಣ ವೇಷ ಹಾಕಿ ಖುಷಿಪಡುತ್ತಿದ್ದೇವೆ ಎನ್ನುತ್ತಾರೆ.

ಇದನ್ನೂ ಓದಿ : ಪುತ್ತೂರಿನಲ್ಲಿ ಕೃಷ್ಣಲೋಕ ಬೆಳ್ಳಿ ಹಬ್ಬದ ಸಂಭ್ರಮ - ಶ್ರೀಕೃಷ್ಣ, ರಾಧೆಯರ ವಿಜೃಂಭಣೆಯ ಶೋಭಾಯಾತ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.