ETV Bharat / state

ನವರಾತ್ರಿಗೆ ವೇಷಗಳ ವಿಶೇಷ.. ಸಹಾಯ ಮಾಡಲು ಪ್ರೇತ ವೇಷಧಾರಿಯಾದ ಯುವಕ

author img

By

Published : Oct 4, 2022, 5:47 PM IST

Pretha Vesha special for Navarathri in DK
ನವರಾತ್ರಿಗೆ ವೇಷಗಳ ವಿಶೇಷ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನವರಾತ್ರಿಗೆ ದೇವಿ ಆರಾಧನೆ ಅದ್ಧೂರಿ ಜೊತೆಗೆ ಹುಲಿನೃತ್ಯ ವಿವಿಧ ವೇಷಗಳೂ ವಿಶೇಷ ಆಕರ್ಷಣೆಯಾಗಿರುತ್ತದೆ. ಅದರಲ್ಲೂ ಇಲ್ಲಿ ಒಬ್ಬರು ಪ್ರೇತ ವೇಷ ಹಾಕಿ ಎರಡು ಕುಟುಂಬಗಳಿಗೆ ಸಹಾಯ ಹಸ್ತ ನೀಡಲು ಹೊರಟಿರುವುದು ಮಾದರಿಯಾಗಿದೆ.

ಪುತ್ತೂರು: ನವರಾತ್ರಿ ಬಂತು ಎಂದರೆ ಸಾಕು ಎಲ್ಲ ದೇವಿ ದೇವಸ್ಥಾನಗಳಲ್ಲಿ ವಿಶೇಷ ದೇವಿ ಆರಾಧನೆಗಳು ನಡೆದರೆ, ಇನ್ನೊಂದೆಡೆ ವಿವಿಧ ವೇಷಧಾರಿಗಳು ಮನೆ ಮನೆಗೆ ಆಗಮಿಸುವ ಮೂಲಕ ಜನರ ಮನತಣಿಸುತ್ತಾರೆ. ಹುಲಿವೇಷ, ಪುರುಷವೇಷ, ಸ್ತ್ರೀವೇಷ ಹೀಗೆ ಹಲವು ತರಹದ ವೇಷಗಳನ್ನು ನವರಾತ್ರಿಯ ಒಂಬತ್ತು ದಿನಗಳಲ್ಲಿ ನೋಡಬಹುದು. ಇಂಥಹುದೇ ಒಂದು ವೇಷದ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ವ್ಯಕ್ತಿಯೊಬ್ಬರು ಕಳೆದ ಹತ್ತು ವರ್ಷಗಳಿಂದ ಗಮನಸೆಳೆಯುತ್ತಿದ್ದಾರೆ. ವಿಶೇಷವಾದ ಪ್ರೇತದ ವೇಷ ಹಾಕುವ ಮೂಲಕ ತನ್ನ ಹರಕೆ ತೀರಿಸುತ್ತಿರುವ ಈ ವ್ಯಕ್ತಿ ಜನ ನೀಡಿದಷ್ಟು ಹಣವನ್ನು ಪಡೆದು ಮನೋರಂಜನೆಯನ್ನೂ ನೀಡುತ್ತಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಾಯಿ ನಿವಾಸಿ ದಿವಾಕರ್ ದೇವಾಡಿಗ ಪ್ರತೀ ದಸರಾ ಸಂದರ್ಭದ ವೇಷ ಹಾಕುತ್ತಾರೆ. ಪುತ್ತೂರಿನಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿರುವ ದಿವಾಕರ್ ನವರಾತ್ರಿ ಬಂತು ಎಂದರೆ ಪ್ರೇತವಾಗಿ ಬಿಡುತ್ತಾರೆ. ನವರಾತ್ರಿಯ ಕೊನೆಯ ಮೂರು ದಿನ ಮಾತ್ರ ಪ್ರೇತದ ವೇಷಧಾರಿಯಾಗುವ ದಿವಾಕರ್, ಪ್ರೇತದಂತೆ ಅರಚಾಡುತ್ತಾ ಮನೆ ಮನೆಗೆ, ಅಂಗಡಿ, ಅಂಗಡಿಗೆ ತೆರಳುತ್ತಾರೆ.

ಕೆಮ್ಮಾಯಿ ನಿವಾಸಿ ದಿವಾಕರ್ ದೇವಾಡಿಗ ಪ್ರೇತ ವೇಷದಲ್ಲಿ

ನವರಾತ್ರಿಯಲ್ಲಿ ಹುಲಿವೇಷ, ಪುರುಷವೇಷ, ಸ್ತ್ರೀವೇಷ ಹೀಗೆ ಹಲವು ವೇಷಗಳು ಸಾಮಾನ್ಯವಾಗಿದ್ದರೆ, ಪುತ್ತೂರಿನಲ್ಲಿ ದಿವಾಕರ್ ಹಾಕುವ ಪ್ರೇತದ ವೇಷ ತುಂಬಾನೆ ವಿಶೇಷವಾದುದು. ಹಲವು ವರ್ಷಗಳಿಂದ ನವರಾತ್ರಿಯಲ್ಲಿ ವೇಷ ಹಾಕುವುದನ್ನು ಕರಗತ ಮಾಡಿಕೊಂಡಿರುವ ದಿವಾಕರ್ ಹಿಂದೆ ರಾಘವೇಂದ್ರ ಸ್ವಾಮಿ ವೇಷ, ಈಶ್ವರನ ವೇಷ, ಕೃಷ್ಣನ ವೇಷ ಹೀಗೆ ದೇವರ ವೇಷಗಳನ್ನು ಹಾಕುತ್ತಿದ್ದರು.

ಆದರೆ, ಧಾರ್ಮಿಕ ವೇಷಗಳನ್ನು ಹಾಕಲು ನಿಷೇಧ ಹೇರಿದ ಹಿನ್ನೆಲೆಯಲ್ಲಿ ವೇಷ ಹಾಕುವುದನ್ನೇ ಬಿಟ್ಟಿದ್ದ ದಿವಾಕರ್ ಅವರಿಗೆ ಕೈಕಾಲುಗಳು ಅಲುಗಾಡದಂತಹ ಸ್ಥಿತಿ ನಿರ್ಮಾಣವಾಗಿತ್ತು. ಆ ಬಳಿಕ ನವರಾತ್ರಿಗೆ ಯಾವುದಾದರೂ ವೇಷ ಹಾಕಬೇಕು ಎಂದು ತೀರ್ಮಾನಿಸಿದ ಅವರು ಪ್ರೇತದ ವೇಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಪ್ರೇತದ ವೇಷ ಹಾಕಿಕೊಂಡು ಜನರನ್ನು ಮನರಂಜಿಸುತ್ತಿರುವ ದಿವಾಕರ್​ಗೆ ಇದರಿಂದ ಹಣ ಮಾಡುವ ಉದ್ದೇಶವಿಲ್ಲ. ಹರಕೆಗಾಗಿ ಈ ವೇಷ ಹಾಕುತ್ತಿದ್ದು, ಜೀವನಕ್ಕಾಗಿ ಸ್ವಂತ ಆಟೋವನ್ನು ಅವಲಂಬಿಸಿದ್ದಾರೆ. ಪ್ರೇತದ ವೇಷಕ್ಕಾಗಿ ಪೊಲೀಸರ ಅನುಮತಿಯನ್ನೂ ಪಡೆದಿರುವ ಇವರು ಸಾಯಂಕಾಲ 6 ರ ಬಳಿಕ ತನ್ನ ವೇಷ ಕಳಚುತ್ತಾರೆ.

ಇದನ್ನೂ ಓದಿ: ಮಂಗಳೂರು ದಸರಾ ವೈಭವ: ಹುಲಿ ವೇಷ ಕುಣಿತವೇ ವಿಶೇಷ ಆಕರ್ಷಣೆ

ರಾತ್ರಿಯ ಸಮಯದಲ್ಲಿ ಈ ವೇಷವನ್ನು ಹಾಕಿಕೊಂಡು ತಿರುಗಿದಲ್ಲಿ ಜನ ಬೆಚ್ಚಿಬೀಳುವ ಸಾಧ್ಯತೆಯೂ ಇರುವ ಕಾರಣಕ್ಕಾಗಿ ಈ ರೀತಿಯ ವೇಳಾಪಟ್ಟಿಯನ್ನೂ ಅವರು ತಮ್ಮ ವೇಷದಲ್ಲಿ ಸೇರಿಸಿಕೊಂಡಿದ್ದಾರೆ. ಮೂರು ದಿನವೂ ಬಣ್ಣ ಬದಲಾಯಿಸುವ ಇವರು ಪುತ್ತೂರಿನ ಕಲಾವಿದರೊಬ್ಬರ ಬಳಿ ಪ್ರೇತದ ವೇಷ ಹಾಕಿಸಿಕೊಳ್ಳುತ್ತಾರೆ.

ಒಂದು ದಿನದ ವೇಷದ ಖರ್ಚು ಸುಮಾರು ಎರಡು ಸಾವಿರ ರೂಪಾಯಿಗಳ ಆಸು ಪಾಸು ಆಗುತ್ತಿದ್ದು, ಮೂರು ದಿನವೂ ಇದೇ ರೀತಿ ಬಣ್ಣ ಹಾಕಿಸಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ಕೊರೊನಾ ಇದ್ದ ಹಿನ್ನೆಲೆಯಲ್ಲಿ ಮೂರು ದಿನಗಳಲ್ಲಿ ಹದಿನೈದು ಸಾವಿರ ರೂಪಾಯಿ ಸಂಗ್ರಹಿಸಿದ್ದರು.

ಸಹಾಯಹಸ್ತ ನೀಡಲು ನವರಾತ್ರಿಗೆ ವೇಷ ಹಾಕಿದ ಯುವಕ: ಬಂಟ್ವಾಳದಲ್ಲೊಬ್ಬರು ಅನಾರೋಗ್ಯ ಪೀಡಿತ ಮಕ್ಕಳಿಗೆ ನೆರವಾಗಬೇಕು, ಬಡ ಯುವತಿಯ ಮದುವೆಗೆ ಕೈಲಾದ ಸಹಾಯ ನೀಡಬೇಕು ಎನ್ನುವ ಉದ್ದೇಶದಿಂದ ಯುವಕನೋರ್ವ ವೇಷ ಹಾಕಿ ಹಣ ಸಂಗ್ರಹಕ್ಕೆ ಮುಂದಾಗಿದ್ದು, ನವರಾತ್ರಿಯ ಈ ಸಂದರ್ಭದಲ್ಲಿ ಪ್ರೇತದ ವೇಷದ ಮೂಲಕ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.

ಸಹಾಯ ಮಾಡಲು ಪ್ರೇತ ವೇಷಧಾರಿಯಾದ ಯುವಕ

ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್ ನಾಯ್ಕ್ ನೆರವಾಗಲು ಹೊರಟಿರುವ ಯುವಕ. ಇವರ ಹೃದಯ ವೈಶಾಲ್ಯತೆಗೆ ವ್ಯಾಪಕ ಪ್ರಶಂಸೆಯೂ ಲಭಿಸಿದೆ. ವೇಷ ಹಾಕಿ ಮನೆ ಮನೆ ಸುತ್ತಾಟದ ವೇಳೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ. ದೇವದಾಸ್ ಅವರು ಈ ಹಿಂದೆಯೂ 2 ಬಾರಿ ವೇಷ ಹಾಕಿ ಸಂಗ್ರಹಗೊಂಡ ಹಣದಿಂದ ಅಶಕ್ತರಿಗೆ ನೆರವಾಗಿದೆ.

ಆದರೆ, ಕೊರೊನಾ ಕಾರಣಕ್ಕೆ ಎರಡು ವರ್ಷಗಳ ಕಾಲ ವೇಷ ಹಾಕುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಹಿಂದೆ ಒಂದೆರಡು ದಿನ ಕಾಲ ಮಾತ್ರ ವೇಷ ಹಾಕಿದ್ದ ಅವರು ಈ ಬಾರಿ ಹೆಚ್ಚಿನ ಹಣ ಸಂಗ್ರಹದ ಉದ್ದೇಶದಿಂದ ಬರೋಬ್ಬರಿ ಏಳು ದಿನಗಳ ಕಾಲ ವೇಷ ಹಾಕಿ ಸುತ್ತಾಟ ನಡೆಸಿದ್ದಾರೆ.

ಸೆ. 29ರಂದು ವೇಷ ಹಾಕಿ ಸುತ್ತಾಟ ಆರಂಭಿಸಿರುವ ಅವರು ಅ. 5ರ ವರೆಗೆ ವೇಷ ಧರಿಸುತ್ತಾರೆ. ಸುಮಾರು 20 ಸಾವಿರ ರೂಪಾಯಿ ಸಂಗ್ರಹದ ಗುರಿ ಹೊಂದಿರುವ ಅವರು ಅದನ್ನು ಸಮಾನವಾಗಿ ಎರಡು ಭಾಗಗಲಾಗಿ ವಿಂಗಡಿಸಿ ಎರಡು ಕುಟುಂಬಕ್ಕೆ ನೆರವು ನೀಡುವ ಗುರಿ ಹೊಂದಿದ್ದಾರೆ. ತಮ್ಮ ಮನೆಯ ಪಕ್ಕದಲ್ಲಿರುವ ಬಡ ಕುಟುಂಬದ ಒಂದೇ ಮನೆಯ ಇಬ್ಬರು ಮಕ್ಕಳ ಕಿಡ್ನಿ ಸಂಬಂಧಿ ಖಾಯಿಲೆ ಚಿಕಿತ್ಸೆಗೆ ನೆರವಿನ ಜತೆಗೆ ಪಕ್ಕದ ಗ್ರಾಮದ ಬಡ ಕುಟುಂಬದ ಯುವತಿಯ ಮದುವೆಗೆ ಸಹಾಯ ನೀಡುವ ಯೋಜನೆ ಹಾಕಿಕೊಂಡಿದ್ದಾರೆ.

ಪ್ರೇತದ ವೇಷ ಹಾಕಿ ಸುತ್ತಾಟ ನಡೆಸುವ ಅವರು ತಮ್ಮ ಓಡಾಟಕ್ಕೆ ಪ್ರೇತಕ್ಕೆ ಒಪ್ಪುವ ರೀತಿಯಲ್ಲಿ ತಮ್ಮನ್ನು ವಿಕಾರಗೊಳಿಸಿದ್ದಾರೆ. ಊರಿನಲ್ಲಿ ಸುತ್ತಾಟದ ಸಂದರ್ಭದಲ್ಲಿ ನಾಗರಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಾಮಾಜಿಕ ಜಾಲತಾಣದಲ್ಲೂ ವೈರಲ್ ಮಾಡಿ ಹೆಚ್ಚಿನ ಹಣ ಸಂಗ್ರಹಕ್ಕೆ ಸಹಕರಿಸಿದ್ದಾರೆ ಎಂದು ದೇವದಾಸ್ ನೀರೊಲ್ಬೆ ವಿವರಿಸುತ್ತಾರೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಅದ್ದೂರಿ ಛಪ್ಪನ್​ ಭೋಜ್​​ ಆಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.