ETV Bharat / state

ಮಂಗಳೂರು: ಅಸ್ವಸ್ಥಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿನಿ ಸಾವು

author img

By

Published : Aug 14, 2023, 10:34 AM IST

mangalore
ನರ್ಸಿಂಗ್ ವಿದ್ಯಾರ್ಥಿನಿ ಸುಮಾ

ಮಂಗಳೂರಿನಲ್ಲಿ ನರ್ಸಿಂಗ್ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು 19 ವರ್ಷದ ಸುಮಾ ಎಂದು ಗುರುತಿಸಲಾಗಿದೆ.

ಮಂಗಳೂರು: ಅಸ್ವಸ್ಥಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ‌ನಡೆದಿದೆ. ತಾಲೂಕಿನ ನೆರಿಯ ಗ್ರಾಮದ ಗಂಡಿ ಬಾಗಿಲು ಜಾತಿಮಾರು ನಿವಾಸಿ ರಾಜು ದೇವಾಡಿಗ ಎಂಬವರ ಪುತ್ರಿ ಸುಮಾ (19) ಮೃತ ವಿದ್ಯಾರ್ಥಿನಿ.

ಮಂಗಳೂರಿನಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತಿದ್ದ ಸುಮಾ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆದು ಮನೆಯಲ್ಲಿದ್ದರು. ಆ.9 ರಂದು ಅನಾರೋಗ್ಯದ ಕಾರಣ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ಅವರು ಬಳಿಕ ಆ.11 ರಂದು ಅನಾರೋಗ್ಯ ಸಮಸ್ಯೆ ಜಾಸ್ತಿಯಾದ ಕಾರಣ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಬಳಿಕ ಆ.13 ರಂದು ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ದಾವಣಗೆರೆ: ಕಾಂಪೌಂಡ್​ನಿಂದ ಜಾರಿ ಬಿದ್ದು ಕಾಲೇಜು ವಿದ್ಯಾರ್ಥಿನಿ ಸಾವು

ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವು: ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿದ್ಯುತ್‌ ತಂತಿ ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಕಲಂಜ ಗ್ರಾಮದ ಮೂಲಾರು ಅಂಬಟೆ ಮನೆ ಎಂಬಲ್ಲಿ ಕೃಷಿಕ ಶಶಿಧರನ್ ನಾಯರ್ (68) ಎಂಬವರು ಶನಿವಾರ ಸೀಯಾಳ ಕೀಳಲೆಂದು ಅಲ್ಯುಮಿನಿಯಂ ದೋಟಿ ಹಿಡಿದು ಸಾಗುತ್ತಿದ್ದಾಗ ದೋಟಿ ವಿದ್ಯುತ್ ತಂತಿಗೆ ತಗುಲಿ ಮೃತಪಟ್ಟಿದ್ದಾರೆ.

ಮನೆ ಸಮೀಪವಿರುವ ತಮ್ಮ ತೋಟದ ತೆಂಗಿನ ಮರದಿಂದ ಸೀಯಾಳ ತೆಗೆಯಲೆಂದು ಅಲ್ಯುಮಿನಿಯಂ ದೋಟಿ ತೆಗೆದುಕೊಂಡು ಹೋಗಿದ್ದರು. ಸ್ವಲ್ಪ ಹೊತ್ತಿನಲ್ಲಿ ಜೋರಾಗಿ ಬೊಬ್ಬೆ ಹಾಕಿದ ಶಬ್ದ ಕೇಳಿದ್ದು, ಪತ್ನಿ ಹಾಗೂ ಸ್ಥಳೀಯರು ಸ್ಥಳಕ್ಕೆ ತೆರಳಿ ನೋಡಿದಾಗ ಶಶಿಧರನ್ ನಾಯರ್ ಹಿಡಿದುಕೊಂಡಿದ್ದ ಅಲ್ಯೂಮಿನಿಯಂ ದೋಟಿ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಪ್ರಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ವೈದ್ಯರು ಪರೀಕ್ಷಿಸಿ ಅವರು ಮೃತ ಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.

ಹೈಟೆನ್ಷನ್‌ ಲೈನ್‌ಗೆ ಏಣಿ ಸ್ಪರ್ಶಿಸಿ ವ್ಯಕ್ತಿ ಸಾವು: ಬೆಳಾಲು ಗ್ರಾಮದ ಸುರುಳಿ ಎಂಬಲ್ಲಿ ಅಂಗಾರ (58) ಎಂಬವರು ವಿದ್ಯುತ್‌ ಅವಘಡದಲ್ಲಿ ಮೃತಪಟ್ಟಿದ್ದಾರೆ. ಕೃಷಿ ಕೂಲಿ ಕಾರ್ಮಿಕರಾಗಿರುವ ಅಂಗಾರ ಅವರು ತೋಟದಲ್ಲಿ ಅಲ್ಯುಮಿನಿಯಂ ಏಣಿ ಹಿಡಿದುಕೊಂಡು ಹೋಗುತ್ತಿದ್ದಾಗ ಹೈಟೆನ್ಷನ್‌ ಲೈನ್‌ಗೆ ಏಣಿ ಸ್ಪರ್ಶಿಸಿ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವರಿಗೆ ಪತ್ನಿ ಹಾಗೂ ನಾಲ್ವರು ಪುತ್ರಿಯರಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ವಾಕಿಂಗ್​ಗೆ ತೆರಳಿದ್ದ SSLC ವಿದ್ಯಾರ್ಥಿನಿ ಕುಸಿದುಬಿದ್ದು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.