ETV Bharat / state

Dakshina Kannada Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಓರ್ವ ಬಲಿ: ರೆಡ್ ಅಲರ್ಟ್, ಶಾಲೆಗಳಿಗೆ ರಜೆ ಘೋಷಣೆ

author img

By

Published : Jul 5, 2023, 11:21 AM IST

heavy-rain-in-dakshina-kannada-red-alert-and-one-died-in-someshwara
Rain Update: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್... ಶಾಲೆಗಳಿಗೆ ರಜೆ ಘೋಷಣೆ: ಓರ್ವ ಸಾವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ರೆಡ್​ ಅಲರ್ಟ್​ ಘೋಷಿಸಲಾಗಿದೆ. ಮೋರಿ ದಾಟುವ ವೇಳೆ ವ್ಯಕ್ತಿಯೋರ್ವ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಭಾರಿ ಮಳೆಯಾಗುತ್ತಿದ್ದು, ಇಂದು ಕೂಡ ಮುಂದುವರೆದಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಇಂದು ರೆಡ್ ಅಲರ್ಟ್ ಘೋಷಿಸಿದೆ. ಜಿಲ್ಲೆಯ ಶಾಲೆ, ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮೋರಿ ದಾಟುವಾಗ ನೀರಿಗೆ ಬಿದ್ದು ಓರ್ವ ಸಾವು: ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪಿಲಾರಿನಲ್ಲಿ ಮನೆ ಸಂಪರ್ಕಿಸುವ ಮೋರಿ ದಾಟುವ ವೇಳೆ ಜಾರಿ ಬಿದ್ದು ಓರ್ವ ಸಾವನ್ನಪ್ಪಿದ್ದಾರೆ. ಮಂಗಳವಾರ ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ನಿವಾಸಿ ಸುರೇಶ್ ಗಟ್ಟಿ (52) ಎಂಬವರು ನೀರಿಗೆ ಬಿದ್ದು ಮೃತಪಟ್ಟರು. ಸುರೇಶ್ ಗಟ್ಟಿ ಅವರು ವೃತ್ತಿಯಲ್ಲಿ ಪೈಂಟ‌ರ್ ಆಗಿದ್ದು, ಕೆಲಸ ಮುಗಿಸಿ ಸಂಜೆ ಮನೆಗೆ ಹೋಗಲು ಮೋರಿ ದಾಟುತ್ತಿದ್ದ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಮೋರಿಯಲ್ಲಿ ಬಿದ್ದಿದ್ದ ಸುರೇಶ್ ಅವರನ್ನು ಪಕ್ಕದ ಮನೆಯ ಸೋಮೇಶ್ವರ ಗ್ರಾ.ಪಂ ಮಾಜಿ ಸದಸ್ಯ ಪ್ರೇಮಾನಂದ ಮತ್ತು ಅವರ ಸಂಬಂಧಿ ಧನರಾಜ್ ಮೇಲಕ್ಕೆತ್ತಿ ಆಸ್ಪತ್ರೆ ಸಾಗಿಸುವಾಗಲೇ ಸುರೇಶ್ ಮೃತಪಟ್ಟಿದ್ದಾರೆ.

ನದಿ ನೀರಿನ ಮಟ್ಟ ಏರಿಕೆ: ಉತ್ತಮ ಮಳೆ ಆಗುತ್ತಿರುವುದರಿಂದ ಜಿಲ್ಲೆಯ ಜೀವನದಿ ನೇತ್ರಾವತಿಯ ನೀರಿನ ಮಟ್ಟ ತುಸು ಏರಿಕೆಯಾಗಿದೆ. ಬಂಟ್ವಾಳದಲ್ಲಿ 8.5 ಮೀ. ಅಪಾಯದ ಮಟ್ಟ ಇರುವ ನೇತ್ರಾವತಿಯಲ್ಲಿ ಇಂದು ಬೆಳಗ್ಗೆ 3.6 ಮೀ. ನೀರು ಇದೆ. ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟದ 31.5 ಮೀ. ಇರುವಲ್ಲಿ 23.4 ಮೀ ಎತ್ತರಕ್ಕೆ ನೀರು ಹರಿಯುತ್ತಿದೆ. ಫಲ್ಗುಣಿಯಲ್ಲೂ ನೀರಿನ ಹರಿವಿನ ಮಟ್ಟ ಏರಿಕೆಯಾಗಿದೆ.

ತುಂಬೆ ಡ್ಯಾಂ ಗೇಟ್ ಓಪನ್: ನಗರಕ್ಕೆ ನೀರುಣಿಸುವ ತುಂಬೆ ಡ್ಯಾಂ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಅಣೆಕಟ್ಟಿನ 4 ಗೇಟ್‌ಗಳನ್ನು ತೆರೆಯಲಾಗಿದೆ. ಕಳೆದ ವರ್ಷ ಮಳೆ ಬೇಗ ಆರಂಭವಾಗಿದ್ದರಿಂದ ಜೂನ್ ಮೊದಲ ವಾರದೊಳಗೆ ಅಣೆಕಟ್ಟಿನ ಎಲ್ಲ 30ಕ್ಕೂ ಅಧಿಕ ಗೇಟ್‌ಗಳನ್ನು ತೆರೆಯಲಾಗಿತ್ತು. ಈ ಬಾರಿ ಮಳೆ ವಿಳಂಬದಿಂದಾಗಿ ಜುಲೈ ಆರಂಭವಾದರೂ ಎಲ್ಲ ಗೇಟ್‌ಗಳನ್ನು ತೆರೆಯಲಾಗಿಲ್ಲ.

ಮರ ಬಿದ್ದು ವಾಹನಗಳಿಗೆ ಹಾನಿ: ಮಂಗಳೂರು ಹೊರವಲಯದ ಬಜಾಲ್ ಶಾಂತಿನಗರ ಎಂಬಲ್ಲಿ ಸೆಲ್ವಿ ಬಾಯಿ ಎಂಬವರ ಮನೆ ಮೇಲೆ ಮರ ಬಿದ್ದು ಆಕಾಶ್ ಎಂಬುವರಿಗೆ ಸೇರಿದ ಸ್ಕೂಟರ್ ಜಖಂಗೊಂಡಿದೆ. ಬಜಾಲ್ ಜಲ್ಲಿಗುಡ್ಡೆಯ ಜಯನಗರ ಎಂಬಲ್ಲಿ ಮರ ಬಿದ್ದು ತಾರಾನಾಥ್ ಎಂಬುವರಿಗೆ ಸೇರಿದ ಆಟೋ ರಿಕ್ಷಾ ಜಖಂ ಆಗಿದೆ. ಉರ್ವದ ಮೂಡ ಕಚೇರಿ ಹಿಂಭಾಗದಲ್ಲಿರುವ ದೊಡ್ಡಮರವೊಂದು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು.

ಬೆಳ್ತಂಗಡಿ ಮರೋಡಿಯಲ್ಲಿ ದಾಖಲೆ ಮಳೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 3ರ ಬೆಳಗ್ಗಿನಿಂದ 5ರ ಬೆಳಗ್ಗೆವರೆಗೆ ಸುರಿದ ಮಳೆಯ ಲೆಕ್ಕಾಚಾರದಲ್ಲಿ ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ 202.5 ಮಿ.ಮೀ ದಾಖಲೆ ಮಳೆಯಾಗಿದೆ. ಬೆಳ್ತಂಗಡಿಯ ಬಳಂಜದಲ್ಲಿ 196 ಮಿ.ಮೀ, ಬಂಟ್ವಾಳ ತಾಲೂಕಿನ ಪಜೀರ್‌ನಲ್ಲಿ 188 ಮಿ.ಮೀ. ಮಳೆ ಸುರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.