ETV Bharat / state

ಸ್ಥಳಾಂತರಗೊಂಡ ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳ ಜೀವನ ಅಯೋಮಯ: ಮೂಲಸೌಕರ್ಯ ನೀಡುವಂತೆ ಒತ್ತಾಯ - Lack of basic facilities

author img

By ETV Bharat Karnataka Team

Published : May 18, 2024, 6:56 PM IST

ರಿಂಗ್ ರಸ್ತೆ ವಿಸ್ತರಣೆ ಹಿನ್ನೆಲೆ ಸ್ಥಳಾಂತ ಮಾಡಲಾಗಿರುವ ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳ ಜೀವನ ಮಳೆಯಿಂದ ಆಯೋಮಯವಾಗಿದ್ದು, ಮೂಲಸೌಕರ್ಯ ನೀಡುವಂತೆ ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅವರ ನೋವಿಗೆ ಸ್ಪಂದಿಸಿರುವ ಪಾಲಿಕೆ, ಅವಶ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವುದಾಗಿ ತಿಳಿಸಿದೆ.

LACK OF BASIC FACILITIES
ಮಳೆ ಗಾಳಿಗೆ ನೆಲಕ್ಕುರುಳಿದ ತಾತ್ಕಾಲಿಕ ಶೆಡ್ಡ್ (ETV Bharat)

ಮೂಲಸೌಕರ್ಯ ನೀಡುವಂತೆ ನಿವಾಸಿಗರ ಒತ್ತಾಯ (ETV Bharat)

ದಾವಣಗೆರೆ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳ ಜೀವನ ಅಯೋಮಯವಾಗಿದೆ. ಎಲ್ಲ ಸೌಲಭ್ಯಗಳನ್ನು ಕೊಡುವುದಾಗಿ ಈ ಮೊದಲು ಭರವಸೆ ನೀಡಿ ನಿವಾಸಿಗಳನ್ನು ದೊಡ್ಡಬಾತಿ ಗ್ರಾಮದ ಸರ್ವೇ ನಂಬರ್ 54ಕ್ಕೆ ಸ್ಥಳಾಂತರ ಮಾಡಿದ ಜಿಲ್ಲಾಡಳಿತ ಆ ಬಳಿಕ, ಸೌಲಭ್ಯಗಳನ್ನು ನೀಡುವಲ್ಲಿ ಯಡವಿದೆ. ಪರಿಣಾಮ ಮಳೆಯಿಂದ ನಮ್ಮ ಜೀವನ ಅಯೋಮಯವಾಗಿದೆ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮಳೆಯಿಂದ ನಿವಾಸಿಗಳ ಬಾಳು ಸರ್ವನಾಶವಾಗಿದೆ. ಪಾಲಿಕೆ ವತಿಯಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ಶೆಡ್ಡ್, ಶೀಟ್ ಭಾರೀ ಗಾಳಿ-ಮಳೆಯಿಂದ​ ಹಾರಿ ಹೋಗಿವೆ. ಮನೆಗಳು ನೆಲಕ್ಕುರುಳಿವೆ. ಜನರ ಬದುಕು ಬೀದಿಪಾಲಾಗಿದೆ. ತಾಲೂಕಿನ ದೊಡ್ಡಬಾತಿ ಗ್ರಾ.ಪಂ ಸರ್ವೇ ನಂ. 54ರ ಯರಗುಂಟೆ ಬಳಿ ಒಟ್ಟು 450 ಮನೆಗಳನ್ನು ಪಾಲಿಕೆ ಈ ಹಿಂದೆಯೇ ಮಂಜೂರು ಮಾಡಿತ್ತು. ಜಿಲ್ಲಾಡಳಿತ ಹೇಳಿದಂತೆ ನಿವಾಸಿಗಳನ್ನು ರಾಮಕೃಷ್ಣ ಹೆಗಡೆ ನಗರದಿಂದ ಸರ್ವೇ ನಂ. 54 ಜಮೀನಿಗೆ ಸ್ಥಳಾಂತರ ಮಾಡಲಾಗಿತ್ತು.

ಕಳೆದ ಆರು ತಿಂಗಳ ಹಿಂದೆ ರಿಂಗ್ ರಸ್ತೆ ಅಗಲೀಕರಣ ನಿಮಿತ್ತ ಇಡೀ ರಾಮಕೃಷ್ಣ ಹೆಗಡೆ ನಿವಾಸಿಗಳನ್ನು ಮೂಲಸೌಕರ್ಯಗಳನ್ನು ಕೊಡಲಾಗುತ್ತದೆ ಎಂದು ನಿವೇಶನ ಮಂಜೂರು ಮಾಡಿ ಸ್ಥಳಾಂತರ ಮಾಡಲಾಗಿತ್ತು. ಆದರೆ, ಸ್ಥಳಾಂತರ ಮಾಡಿ ಆರು ತಿಂಗಳು ಉರುಳಿದರು ಕೂಡ ಚರಂಡಿ, ನೀರು, ಶೌಚಾಲಯ, ಮನೆ ನಿರ್ಮಾಣ ಮಾಡುವಲ್ಲಿ ಪಾಲಿಕೆಯ ಅಧಿಕಾರಿಗಳು ಯಡವಿದ್ದಾರೆ. ಇದರಿಂದ ನಿವಾಸಿಗಳಿಗೂ ಜಿಲ್ಲಾಡಳಿತಕ್ಕೂ ಸಂಬಂಧವೇ ಇಲ್ಲ ಎಂಬಂತೆ ಬದುಕಲಾಗುತ್ತದೆ. ಮೂಲಸೌಕರ್ಯಕ್ಕಾಗಿ ಅಂಗಲಾಚಿ ಬೇಡುತ್ತಿದ್ದರೂ ಯಾವೊಬ್ಬ ಅಧಿಕಾರಿಗಳು ಇತ್ತ ಬಂದಿರುವ ಉದಾಹರಣೆ ಇಲ್ಲ‌ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

'ಮನೆಗಳು ಬಿದ್ದು ನಾಲ್ಕು ದಿನಗಳ ಕಳೆದಿವೆ. ಎಲ್ಲರೂ ಮಳೆಯಲ್ಲೇ ಕೂತಿದ್ದೇವೆ. ರಸ್ತೆ ಮಾಡುತ್ತೇವೆಂದು ನಮ್ಮನ್ನಿಲ್ಲಿ ತಂದು ಕೂಡಿಸಿದರು. ಒಂದು ವಾರ ಊಟ ನೀಡಿದ್ದು ಬಿಟ್ಟರೆ ಬೇರೆ ಯಾವುದೇ ಮೂಲಸೌಕರ್ಯ ನೀಡಿಲ್ಲ. ಚರಂಡಿ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಾಗಿದೆ. ಆದರೆ, ಯಾವುದೇ ಅಧಿಕಾರಿಗಳು ಇತ್ತ ಗಮನ ನೀಡುತ್ತಿಲ್ಲ' ಎಂದು ಹೆಗಡೆ ನಗರ ನಿವಾಸಿ ಬಾಳಮ್ಮ ಎಂಬುವರು ಆರೋಪದ ಜೊತೆಗೆ ತಮ್ಮ ನೋವು ತೋಡಿಕೊಂಡಿದ್ದಾರೆ.

ಈಟಿವಿ ಭಾರತದ ಜೊತೆಗೆ ಪಾಲಿಕೆ ಕಮಿಷನರ್ ರೇಣುಕಾ ಪ್ರತಿಕ್ರಿಯಿಸಿ "ಮಳೆ - ಗಾಳಿಯಿಂದಾಗಿ ಕೆಲ ಶೀಟ್, ಮನೆ ಉರುಳಿವೆ. ಸರಿಪಡಿಸಲು ಮತ್ತು ಸಮಸ್ಯೆ ಆಲಿಸಲು ನಮ್ಮ ಸಿಬ್ಬಂದಿ ತೆರಳಿದ್ದಾರೆ. ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ನಡೆದಿದೆ. ಈಗಾಗಲೇ ಬೋರ್​ವೆಲ್​ ಕೊರೆಸಿ ನೀರು ಪೂರೈಸಲಾಗಿದೆ. ತಾತ್ಕಾಲಿಕ ರಸ್ತೆ ನಿರ್ಮಾಣ ಕೂಡ ಮಾಡಿಕೊಟ್ಟಿದ್ದೇವೆ. ಶೌಚಾಲಯ ನಿರ್ಮಾಣ ಕಾರ್ಯ ನಡೆದಿದೆ. ಅಲ್ಲದೆ 23 ಕೋಟಿ ವೆಚ್ಚದಲ್ಲಿ ಸ್ಲಂ ಬೋರ್ಡ್ ಅಡಿ ಮನೆ ನಿರ್ಮಾಣ ಮಾಡಿಕೊಡಲು ಸರ್ಕಾರಕ್ಕೆ ವರದಿ ಕೂಡ ಕಳಿಸಿದ್ದೇವೆ. ಆದರೆ, ಚುನಾವಣೆಯ ನೀತಿ ಸಂಹಿತೆ ಅಡ್ಡಿಯಾಗಿದ್ದರಿಂದ ತಡವಾಗಿದೆ. ಇನ್ನು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ಸಿದ್ಧತೆ ಮಾಡುತ್ತಿದ್ದೇವೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಳೆ ಅಬ್ಬರಕ್ಕೆ 12 ಮಂದಿ ಸಾವು; ಮುಂದಿನ 7ರಿಂದ 15 ದಿನಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ - RAIN FORECAST

ETV Bharat Logo

Copyright © 2024 Ushodaya Enterprises Pvt. Ltd., All Rights Reserved.