ETV Bharat / state

Monsoon: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ: ಸುಬ್ರಹ್ಮಣ್ಯ ಸ್ನಾನಘಟ್ಟ, ಬಪ್ಪನಾಡು‌ ದೇವಸ್ಥಾನ ಜಲಾವೃತ

author img

By

Published : Jul 6, 2023, 8:12 PM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಸ್ನಾನಘಟ್ಟ ಹಾಗೂ ಬಪ್ಪನಾಡು‌ ದೇವಸ್ಥಾನ ಜಲಾವೃತವಾಗಿವೆ.

Monsoon Rain
Monsoon Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ: ಸುಬ್ರಹ್ಮಣ್ಯ ಸ್ನಾನಘಟ್ಟ, ಬಪ್ಪನಾಡು‌ ದೇವಸ್ಥಾನ ಜಲಾವೃತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಸೋಮವಾರದಿಂದ ಹೆಚ್ಚಾಗಿದ್ದು, ಇಂದು ಕೂಡಾ ಜಿಲ್ಲಾದ್ಯಂತ ಭಾರಿ ಮಳೆಯಾಗಿದೆ. ಮಳೆಯಿಂದ ಒಂದೆಡೆ ಸಾಕಷ್ಟು ಅವಾಂತರ ಸೃಷ್ಟಿಯಾದರೆ ಮತ್ತೊಂದೆಡೆ ಜಿಲ್ಲೆಯ ಎಲ್ಲ ಜೀವನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಇದರೊಂದಿಗೆ ಮುಲ್ಕಿಯಲ್ಲಿರುವ ಇತಿಹಾಸ ಪ್ರಸಿದ್ದ ಬಪ್ಪನಾಡು‌ ದೇವಸ್ಥಾನಕ್ಕೆ ನದಿ ನೀರು ನುಗ್ಗಿದ್ದು, ದೇವಿಗೆ ಜಲ ದಿಗ್ಬಂಧನವಾಗಿದೆ.

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಸುರಿಯುತ್ತಿರುವ ಮಳೆ ಇನ್ನೂ‌ ಕಡಿಮೆಯಾಗಿಲ್ಲ. ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಇದ್ದೂ ಭಾರಿ ಗಾಳಿ ಮಳೆಯಾಗಿದೆ‌. ಮಂಗಳೂರಿನ‌ ಹೊರ ವಲಯದ ಮುಲ್ಕಿ‌ ಸಮೀಪದ ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನದಿಯ ನೀರು ನುಗ್ಗಿದೆ. ಶಾಂಭವಿ ನದಿಯ‌ ನೀರು ದೇವಸ್ಥಾನ ಅಂಗಳ ಸೇರಿದಂತೆ ಗರ್ಭಗುಡಿಯ ಮೆಟ್ಟಿಲಿನವರೆಗೂ ಬಂದಿದೆ.

ಶಾಂಭವಿ ನದಿಯ ತಡದಲ್ಲಿ ಉದ್ಭವ ಲಿಂಗಸ್ವರೂಪದಲ್ಲಿ ಇರೋ ದೇವಿ ಜಲ ಪ್ರಿಯೆ ಆಗಿರೋದರಿಂದ ಜಲದುರ್ಗೆ ಎಂದೇ ಪ್ರಸಿದ್ದಿ. ಹೀಗಾಗಿ ದೇವಸ್ಥಾನದೊಳಗೆ ನೀರು ಬಂದಿರೋದು ದೇವಿಗೆ ಪ್ರೀತಿ‌ ಅನ್ನೋ ನಂಬಿಕೆ ಇದೆ. ಅತಿವೃಷ್ಟಿಯಾದಾಗ ದೇವಸ್ಥಾನಕ್ಕೆ ನದಿ ನೀರು ಬರುತ್ತದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕ ಪ್ರಸಾದ್ ಬಪ್ಪನಾಡು.

ಇನ್ನೂ ಭಾರಿ ಮಳೆಗೆ ಮುಲ್ಕಿ ತಾಲೂಕಿನ ಅತಿಕಾರಿಬೆಟ್ಟು ಗ್ರಾಮದ ಮಟ್ಟು ಎಂಬಲ್ಲಿ ಶಾಂಭವಿ ನದಿಯ ನೀರು ತೆಂಗು ತೋಟಕ್ಕೆ ನುಗ್ಗಿದ್ದು ನೂರಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಇನ್ನೂರಕ್ಕೂ ಅಧಿಕ ಮನೆಯವರು ಹೊರ ಬರಲಾಗದ ಪರಿಸ್ಥಿತಿ‌ ನಿರ್ಮಾಣವಾಗಿದೆ. ಜನರ ಸ್ಥಳಾಂತರಕ್ಕೂ ಗ್ರಾಮ ಪಂಚಾಯಿತಿ ತಯಾರಿ ನಡೆಸಿದೆ. ಇನ್ನೊಂದೆಡೆ ನದಿ‌ ನೀರು ರಭಸವಾಗಿ ಹರಿದು ಸಮುದ್ರ ಸೇರುತ್ತಿರುವುದರಿಂದ ಹಾಗೂ ನಿರಂತರವಾಗಿ ಗಾಳಿ ಸಹಿತಿ ಮಳೆಯಾಗುತ್ತಿರುವುದರಿಂದ ಕಡಲಿನ‌ ಅಬ್ಬರವೂ ಹೆಚ್ಚಾಗಿದೆ.

ಉಕ್ಕಿ ಹರಿಯುತ್ತಿರುವ ಕುಮಾರಧಾರ ನದಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಿರುವ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ. ನದಿಯಲ್ಲಿ ರಭಸದಿಂದ ನೀರು ಹರಿಯುತ್ತಿರುವುರಿಂದ ಪವಿತ್ರ ಸ್ನಾನ ಘಟ್ಟ ಮುಳುಗಡೆಯಾಗಿದೆ. ಹೀಗಾಗಿ ಭಕ್ತಾದಿಗಳಿಗೆ ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ. ಕಳೆದೆರಡು ದಿನಗಳಿಂದ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಕೂಡ ಘೋಷಣೆ ಮಾಡಲಾಗಿತ್ತು. ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಎಚ್ಚರವಾಗಿರುವಂತೆಯೂ ಜಿಲ್ಲಾಡಳಿತ ಸೂಚನೆ ನೀಡಿದೆ.

ಗುಡ್ಡದಿಂದ ರಸ್ತೆ ಮೇಲೆ ಕುಸಿದ ಮಣ್ಣು: ನೆರೆಯ ಕೇರಳದ ಗಡಿಗೆ ಸಮೀಪವಿರುವ ಪಾನತ್ತೂರು ಸಂಪರ್ಕಿಸುವ ಕಲ್ಲಪಳ್ಳಿಯಲ್ಲಿ ಗುಡ್ಡದಿಂದ ಮಣ್ಣು ರಸ್ತೆಗೆ ಕುಸಿದಿದೆ. ಇದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಬೆಳಿಗ್ಗೆ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಬಳಿಕ ಸ್ಥಳೀಯರು ಸೇರಿ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಮಳೆ ಮುಂದುವರಿದರೆ ಗುಡ್ಡ ಇನ್ನಷ್ಟು ಕುಸಿಯುವ ಅಪಾಯ ಎದುರಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಎಚ್ಚರಿಕೆಯಿಂದ ಪ್ರಯಾಣಿಸಬೇಕಿದೆ.

ಸಂಪೂರ್ಣ ರಸ್ತೆ ಬಂದ್: ಕುಂಟುಕಾಡು ಮುತ್ತುಕೋಡಿ ಮಾವಿನಕಟ್ಟೆ ರಸ್ತೆಯಲ್ಲಿ ಮಣ್ಣು ಕುಸಿದು ರಸ್ತೆಗೆ ಬಿದ್ದಿದೆ. ಇದರಿಂದ ಸಂಪೂರ್ಣ ರಸ್ತೆ ಬಂದ್ ಆಗಿದ್ದು, ಮಾವಿನಕಟ್ಟೆ– ಮಂಡೆಕೋಲು ಸಂಪರ್ಕ ಕಡಿತಗೊಂಡಿದೆ ಎಂದು ವರದಿಯಾಗಿದೆ. ಸಂಪಾಜೆ ಮಾರ್ಗವಾಗಿ ಮಡಿಕೇರಿಗೆ ಸಾಗುವ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲೂ ಭಾರಿ ಪ್ರಮಾಣ ಬಿರುಕು ಕಾಣಿಸಿಕೊಂಡಿದೆ. ಯಾವುದೇ ಕ್ಷಣದಲ್ಲಿ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಸದ್ಯ ಮುಖ್ಯ ರಸ್ತೆಯ ಬಳಿ ಪರ್ಯಾಯ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ತಾತ್ಕಾಲಿಕ ಅವಕಾಶವನ್ನು ಒದಗಿಸಲಾಗಿದೆ. ಸದ್ಯ ಮಡಿಕೇರಿ ಹಾಗೂ ಸಂಪಾಜೆ ಘಾಟಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮಣ್ಣು ಕುಸಿತದ ಭೀತಿ ಮತ್ತಷ್ಟು ಹೆಚ್ಚಿಸಿದೆ.

ಅಪಾಯಕಾರಿ ಹೋರ್ಡಿಂಗ್, ಫ್ಲೆಕ್ಸ್ ತಕ್ಷಣ ತೆರವಿಗೆ ಡಿಸಿ ಸೂಚನೆ: ದ.ಕ. ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದ್ದು, ಅಲ್ಲಲ್ಲಿ ವಿಕೋಪಗಳು ಸಂಭವಿಸುತ್ತಿದೆ. ಅಪಾಯಕಾರಿ ಹೋರ್ಡಿಂಗ್, ಫ್ಲೆಕ್ಸ್​ಗಳನ್ನು ತಕ್ಷಣ ತೆರವುಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚನೆ ನೀಡಿದ್ದಾರೆ. ಮಂಗಳೂರಿನಲ್ಲಿ ನಿನ್ನೆ ಸುರಿದ ಗಾಳಿ ಮಳೆಗೆ ಬಿಕರ್ನಕಟ್ಟೆ‌ ಎಂಬಲ್ಲಿ ಹೋರ್ಡಿಂಗ್ ಬಿದ್ದು ಹಲವಾರು ದ್ವಿಚಕ್ರ ವಾಹನಗಳು ಜಖಂಗೊಂಡಿತ್ತು.

ಗುರುವಾರ ತಲಪಾಡಿಯ ಶಾರದಾ ವಿದ್ಯಾಲಯದ ಮೇಲ್ಛಾವಣಿಯು ಆರು ಅಂತಸ್ತಿನ ಮೇಲ್ಗಡೆಯಿಂದ ಕೆಳಗೆ ಹಾರಿಬಿದ್ದಿದೆ. ಇದೇ ರೀತಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ದೃಷ್ಟಿಯಿಂದ ಜಿಲ್ಲೆಯ ರಸ್ತೆ ಬದಿಗಳಲ್ಲಿ ಅಳವಡಿಸಿರುವ ಅಪಾಯಕಾರಿ ಫ್ಲೆಕ್ಸ್, ಹೋರ್ಡಿಂಗ್​ಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತೆರವು ಮಾಡಬೇಕು ಎಂದು ಮನಪಾ ಆಯುಕ್ತರು ಹಾಗೂ ‌ಜಿಲ್ಲಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Monsoon Rain: ಕರಾವಳಿಯಲ್ಲಿ ಭಾರಿ ಮಳೆ.. ಜನಜೀವನ ಅಸ್ತವ್ಯಸ್ತ, ನಾಳೆ ಕೊಡಗಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.