ETV Bharat / state

Yoga: ಯೋಗದಲ್ಲಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್' ಸಾಧನೆ​ ಮಾಡಿದ ಮಂಗಳೂರಿನ ಗುರು-ಶಿಷ್ಯೆ!

author img

By

Published : Jun 16, 2023, 4:49 PM IST

Achievement in Yoga
ಯೋಗದಲ್ಲಿ ಸಾಧನೆ: ಇಂಡಿಯಾ ಬುಕ್ ಆಫ್ ರೆಕಾರ್ಡ್​ ಮಾಡಿದ ಗುರು-ಶಿಷ್ಯೆ

ಮಂಗಳೂರಿನ ಯೋಗ ಶಿಕ್ಷಕಿ ಕವಿತಾ ಅಶೋಕ್ ಮತ್ತು ಅವರ ಶಿಷ್ಯೆ 6ನೇ ತರಗತಿಯಲ್ಲಿ ಕಲಿಯುತ್ತಿರುವ ಮಧುಲಶ್ರೀ ಯೋಗದಲ್ಲಿ ಇಂಡಿಯಾ ಬುಕ್‌ ಆಪ್ ರೆಕಾರ್ಡ್ ಮಾಡಿದ್ದಾರೆ.

ಯೋಗ ಸಾಧಕರು

ಮಂಗಳೂರು: ಭಾರತ ದೇಶವಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಯೋಗಕ್ಕೆ ವಿಶೇಷ ಗೌರವವಿದೆ. ಇದೀಗ ಯೋಗ ಕ್ಷೇತ್ರದಲ್ಲಿ ಮಂಗಳೂರಿನ ಗುರು- ಶಿಷ್ಯೆ ಇಬ್ಬರೂ ಇಂಡಿಯಾ ಬುಕ್‌ ಆಪ್ ರೆಕಾರ್ಡ್ ಮಾಡಿ ಹೊಸ ದಾಖಲೆ ಬರೆದಿದ್ದಾರೆ. ಯೋಗ ಶಿಕ್ಷಕಿ ಕವಿತಾ ಅಶೋಕ್ ಮತ್ತು ಅವರ ಶಿಷ್ಯೆ 6ನೇ ತರಗತಿ ಕಲಿಯುತ್ತಿರುವ ಮಧುಲಶ್ರೀ ಯೋಗ ಸಾಧಕರು.

ಕವಿತಾ ಅಶೋಕ್‌ ಅವರು ಎ.ಸಿ. ಬೆಥನಿ ನಜ್‌ರಾತ್ ವಿದ್ಯಾಸಂಸ್ಥೆಗಳಲ್ಲಿ ಯೋಗ ಶಿಕ್ಷಕಿ ಆಗಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದ ಈಜುಗಾರ್ತಿಯೂ ಹೌದು. 2004ರಲ್ಲಿ ರಾಜ್ಯ ಮಟ್ಟದ ಯೋಗ ಚಾಂಪಿಯನ್‌ ಆಗಿದ್ದಾರೆ. 2007ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ. ಇವರ ಶಿಷ್ಯೆ ಕೂಡಾ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಪದ್ಮಶೀರ್ಷಾಸನದಲ್ಲಿ ವಿಶೇಷ ಸಾಧನೆ: ಕವಿತಾ ಅಶೋಕ್‌ ಅವರು ಪದ್ಮ ಶಿರ್ಷಾಸನದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಪದ್ಮ ಶಿರ್ಷಾಸನದಲ್ಲಿ ಕೇರಳದ ಕಿರಣ್ ಸುರೇಂದ್ರನ್ ಅವರ ಹೆಸರಿನಲ್ಲಿ ಇಂಡಿಯಾ ಬುಕ್ ಅಫ್ ರೆಕಾರ್ಡ್ ಇತ್ತು. ಕಿರಣ್ ಸುರೇಂದ್ರನ್ ಅವರು 25 ನಿಮಿಷ 8 ಸೆಕೆಂಡ್ ಪದ್ಮ ಶೀರ್ಷಾಸನದಲ್ಲಿ ರೆಕಾರ್ಡ್ ಮಾಡಿದ್ದರು. ಈ ರೆಕಾರ್ಡ್ ಮುರಿದ ಕವಿತಾ ಅಶೋಕ್ ಪದ್ಮ ಶೀರ್ಷಾಸನದಲ್ಲಿ 29 ನಿಮಿಷ 6 ಸೆಕೆಂಡ್ ನಿಂತು ಹೊಸ ರೆಕಾರ್ಡ್ ಮಾಡಿದ್ದಾರೆ. ಈ ಸಾಧನೆ‌ ಮಾಡಿದ ಕವಿತಾ ಅಶೋಕ್ ಅವರ ಹೆಸರು ಇಂಡಿಯಾ ಬುಕ್ ಅಫ್ ರೆಕಾರ್ಡ್​ನಲ್ಲಿ ದಾಖಲಾಗಿದೆ. ಇವರು ಅಂತಾರಾಷ್ಟ್ರೀಯ ಯೋಗ ಗುರು ವಿ.ಎಲ್. ರೇಗೋ ಅವರ ಶಿಷ್ಯೆ ಆಗಿದ್ದಾರೆ. ಕವಿತಾ ಅವರ ಈ ಸಾಧನೆಗೆ ಮಂಗಳೂರು ಮಹಾನಗರ ಪಾಲಿಕೆ ಈಜುಕೊಳದ ವ್ಯವಸ್ಥಾಪಕ ರಮೇಶ್ ಅಕ್ಕಿ ಹಾಗೂ ಸಿಬ್ಬಂದಿ ಕೆ. ಚಂದ್ರಶೇಖರ್ ರೈ ಸೂರಿಕುಮೇರು ಪ್ರೇರಣೆಯಾಗಿದ್ದಾರೆ.

ಗಂಡಬೇರುಂಡಾಸನದಲ್ಲಿ ಉತ್ತಮ ಸಾಧನೆ: ಕವಿತಾ ಅವರ ಶಿಷ್ಯೆ ಎಸ್.ಮಧುಲಶ್ರೀ ಕೂಡ ಯೋಗದಲ್ಲಿ ದಾಖಲೆ‌ ಬರೆದಿದ್ದಾರೆ. ಎಂ. ಶರವಣನ್ ಹಾಗೂ ತಮಿಳ್ ಸೇಲ್ವಿ ದಂಪತಿಯ ಮಗಳಾದ ಎಸ್. ಮಧುಲಶ್ರೀ ಲೇಡಿಹಿಲ್ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್‌ನಲ್ಲಿ 6ನೇ ತರಗತಿ ವಿದ್ಯಾರ್ಥಿನಿ. ಬಾಲ್ಯದಲ್ಲಿಯೇ ಯೋಗದ ಬಗ್ಗೆ ಆಸಕ್ತಿ ಹೊಂದಿರುವ ಈ ಬಾಲಕಿ ಗಂಡಬೇರುಂಡಾಸನದಲ್ಲಿ 15 ನಿಮಿಷ 36 ಸೆಕೆಂಡು ನಿಂತು ದಾಖಲೆ ನಿರ್ಮಿಸಿದ್ದಾರೆ. 21 ಮಾರ್ಚ್ 2023ರಂದು ಇಂಡಿಯಾ ಬುಕ್ ಅಫ್ ರೆಕಾರ್ಡ್​ನಲ್ಲಿ ಇವರು ಹೆಸರು ಸೇರ್ಪಡೆಯಾಗಿದೆ.

ತಮ್ಮ ಯೋಗ ಸಾಧನೆ ಬಗ್ಗೆ ಮಾತನಾಡಿದ ಕವಿತಾ ಅಶೋಕ್, ಪದ್ಮ ಶೀರ್ಷಾಸನವನ್ನು ಸಣ್ಣ ವಯಸ್ಸಿನಲ್ಲೇ ತಂದೆಯ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದೆ. ಆಸನ ಮಾಡುವಾಗ ನೆತ್ತಿಯ ಭಾಗ ಗಟ್ಟಿಯಾಗಿರಬೇಕು. ನಿರಂತರ ಪ್ರಯತ್ನದಿಂದ ಮಾತ್ರ ಈ ಸಾಧನೆ ಮಾಡಲು ಸಾಧ್ಯ. ನನಗೆ ಮುಂದೆ ವಿಶ್ವದಾಖಲೆ ಮಾಡುವ ಗುರಿಯಿದೆ ಎಂದರು.

ಯೋಗ ಸಾಧಕರಿಗೆ ಮೆಚ್ಚುಗೆ: ತಮ್ಮ‌ ಶಿಷ್ಯೆ ಮಧುಲಶ್ರೀ ಸಾಧನೆ ಬಗ್ಗೆ ಮಾತನಾಡಿದ ಅವರು, ಗಂಡಬೇರುಂಡ ಆಸನದಲ್ಲಿ ಇಂಡಿಯಾ ಬುಕ್ ಅಫ್ ರೆಕಾರ್ಡ್‌ ಸಾಧನೆ ಮಾಡಿರುವುದು ಖುಷಿ ಆಗಿದೆ. ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ನೀಡಿದ್ದೆ. ಆದರೆ, ಮಕ್ಕಳು ಈ ರೀತಿಯ ಸಾಧನೆ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎನ್ನುತ್ತಾರೆ. ತನ್ನ ಸಾಧನೆಯ ಬಗ್ಗೆ ಮಾತನಾಡಿದ ಮಧುಲಶ್ರೀ, ತನ್ನ ಈ ಸಾಧನೆಗೆ ತಂದೆ-ತಾಯಿ ಹಾಗೂ ಯೋಗ ಶಿಕ್ಷಕಿ ನೀಡಿದ ಪ್ರೇರಣೆ ಪ್ರಮುಖವಾಗಿದೆ. ಗಂಡಬೇರುಂಡ ಆಸನದಲ್ಲಿ ಇಂಡಿಯಾ ಬುಕ್ ಅಪ್ ರೆಕಾರ್ಡ್ ದಾಖಲೆ ಬರೆದಿದ್ದೇನೆ.‌ ಎಲ್​ಕೆಜಿಯಿಂದಲೇ ಇದನ್ನು ಅಭ್ಯಾಸ ಮಾಡುತ್ತಿದ್ದೇನೆ. ಜೊತೆಗೆ ಗಿನ್ನಿಸ್ ದಾಖಲೆ ಬರೆಯುವ ಗುರಿ ಇದೆ ಎಂದರು.

ಇದನ್ನೂ ಓದಿ: ಅಂಧತ್ವ ಮೆಟ್ಟಿ ನಿಂತ ಪಾಕ ಪ್ರವೀಣೆ: ಅಡುಗೆ ಯೂಟ್ಯೂಬ್ ಚಾನೆಲ್ ಆರಂಭಿಸಿದ ದೇಶದ ಮೊದಲ ಅಂಧ ಮಹಿಳೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.