ETV Bharat / state

ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ವಿಕ್ರಮ ಮತ್ತು ಬೇತಾಳ ಕಥೆಯಂತಾಗಿದೆ: ಸಚಿವ ಶ್ರೀರಾಮುಲು

author img

By

Published : Feb 12, 2023, 5:40 PM IST

Updated : Feb 12, 2023, 6:38 PM IST

sri ramulu reaction on congress
ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ವಿಕ್ರಮ ಮತ್ತು ಬೇತಾಳ ಕಥೆಯಂತಾಗಿದೆ:ಶ್ರೀ ರಾಮುಲು

ಕಾಂಗ್ರೆಸ್​ ಕುರಿತು ಸಚಿವ ಶ್ರೀರಾಮುಲು ಟೀಕೆ- ನಮ್ಮ ಪಕ್ಷಕ್ಕೆ ಪ್ರಾದೇಶಿಕ ಪಕ್ಷದಿಂದ ರಾಗಿ ಕಾಳಿನಷ್ಟು ತೊಂದರೆಯಾಗುವುದಿಲ್ಲ - ಜನಾರ್ದನ್​ ರೆಡ್ಡಿ ಅವರ ಪಕ್ಷದ ಕುರಿತೂ ಹೇಳಿಕೆ

ಸಚಿವ ಶ್ರೀರಾಮುಲು

ಬಳ್ಳಾರಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ವಿಕ್ರಮ ಮತ್ತು ಬೇತಾಳ ಕಥೆಯಂತಾಗಿದೆ. ವಿಕ್ರಮನನ್ನು ಬೇತಾಳ ಕಾಡಿದಂತೆ ಕಾಂಗ್ರೆಸ್ ಕಾಡುತ್ತಿದೆ. ಇಲ್ಲಿ ವಿಕ್ರಮ ಯಾರು, ಬೇತಾಳ ಯಾರು ಎಂದು ನಾನು ಹೇಳಲ್ಲ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು ಹೇಳಿದರು. ಬಳ್ಳಾರಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರದ ಆಸೆಯ ಕನಸನ್ನು ಕಾಂಗ್ರೆಸ್ ಕಾಣುತ್ತಿದೆ. ಜೆಡಿಎಸ್ ಅಧಿಕಾರಕ್ಕೆ ಬರಲು ಜೋಶಿ ಅವರನ್ನು ರಾಜ್ಯದ ಬ್ರಾಹ್ಮಣರಲ್ಲ‌ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಮತ್ತು ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಾವು ಅಧಿಕಾರಕ್ಕೆ ಬಂದರೆ ಹಾಗೇ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಏನು ಕಡಿದು ಕಟ್ಟೆ ಹಾಕಿದ್ದಾರೆ ಗೊತ್ತಿಲ್ಲ ಎಂದು ಟೀಕಿಸಿದರು.

ನಮ್ಮ ಸರ್ಕಾರ, ನಮ್ಮ ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ಜಿಲ್ಲೆಯ ಬಡವರಿಗೆ, ರೈತರಿಗೆ, ಕಾರ್ಮಿಕರಿಗೆ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ಸಂಕಲ್ಪದಿಂದ ದೆಹಲಿಯಿಂದ ನಮ್ಮ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ, ಮುಖ್ಯಮಂತ್ರಿಗಳು, ಸಚಿವರು ಮತ್ತು ಯಡಿಯೂರಪ್ಪ ಅವರು ಸೇರಿದಂತೆ ಎಲ್ಲರೂ ರಾಜ್ಯ ಪ್ರವಾಸವನ್ನು ಮಾಡುತ್ತಿದ್ದೇವೆ. ಈ ಬಾರಿ ನೂರಕ್ಕೆ ನೂರರಷ್ಟು ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ಇದೆ ಎಂದರು.

ಶಿಥಿಲಗೊಂಡ ಶ್ರೀರಾಂಪುರ ಕಾಲೋನಿ ಶಾಲೆಗೆ ನಮ್ಮ ಸರ್ಕಾರ ಡಿಎಂಎಫ್ ನಿಂದ 3.60 ಕೋಟಿ ಅನುದಾನ ಮಂಜೂರು ಮಾಡಿದೆ. ಎಸ್​ಸಿ, ಎಸ್​ಟಿ ಜನಾಂಗದವರಿಗೆ ಮಾದರಿ ಶಾಲೆ ಸಿಗಬೇಕೆಂಬ ಉದ್ದೇಶದಿಂದ ಈ ಕೆಲಸ ಕೈಗೊಳ್ಳಲಾಗಿದೆ. ಶಾಲೆಗೆ ಭೂಮಿ ಪೂಜೆ ಮಾಡಿದ್ದೇವೆ. ಮೈದಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಮಾಜಿ ಸಚಿವರು ಕೆಲಸ ನಿಲ್ಲಿಸಿ ರಾಜಕಾರಣ ಮಾಡುವುದು ಸರಿಯಲ್ಲ. ಶಾಲೆಯು ಎಲೆಕ್ಷನ್ ಬೂತ್ ಆಗಿರುವುದರಿಂದ ಚುನಾವಣೆ ನಂತರ ಹಳೆ ಕಟ್ಟಡ ತೆರವುಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಮಾಜಿ ಸಚಿವ ದಿವಾಕರಬಾಬು ನಡೆಯಿಂದ ಮಕ್ಕಳಿಗೆ ತೊಂದರೆ ಆಗುತ್ತದೆ. ಶಾಲೆ ಕೆಲಸ ನಿಲ್ಲಿಸಬೇಡಿ, ಶಾಲೆಯ ಕಾಮಗಾರಿ‌ ಆರಂಭಕ್ಕೆ ಅವಕಾಶ ನೀಡಲು ಮನವಿ ಮಾಡುತ್ತೇನೆ. ಕಾಮಗಾರಿ ಆರಂಭಿಸದಿದ್ದರೆ ಹಣ ಹಿಂದಕ್ಕೆ ಹೋಗುತ್ತದೆ. ಮಾಜಿ ಸಚಿವರೊಂದಿಗೆ ಜಗಳ ಮಾಡಲು ಹೋಗುವುದಿಲ್ಲ. ಮನವಿ ಮಾಡುತ್ತೇನೆ. ಧರ್ಮ ಮತ್ತು ಸತ್ಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಬಳ್ಳಾರಿ ಜಿಲ್ಲೆಯಲ್ಲಿಯೇ ಸ್ಪರ್ಧೆ: ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಗಂಗಾವತಿಯಲ್ಲಿ ಸ್ಫರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಲೇ ಪ್ರತಿಕ್ರಿಯೆ ನೀಡಲಾಗದು. ಇನ್ನೂ ಬಹಳ ಸಮಯ ಇದೆ. ಪಕ್ಷ ತೀರ್ಮಾನ ಮಾಡಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ. ನಾನು ಬಳ್ಳಾರಿ ಜಿಲ್ಲೆಯಲ್ಲಿಯೇ ಸ್ಪರ್ಧೆ ಮಾಡಲು ಬಯಸಿದ್ದೀನಿ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿಗೆ ಪ್ರಧಾನಮಂತ್ರಿ ಬಂದಾಗ ಶಿಷ್ಟಾಚಾರ ಇರುತ್ತೆ, ಅಲ್ಲಿ ಸಿಎಂ, ರಾಜ್ಯಪಾಲರು ಇರುತ್ತಾರೆ. ನಾವು ಹೋಗೋಕೆ ಆಗಲ್ಲ. ಜಿಲ್ಲೆಯ ಮೈನಿಂಗ್ ಸ್ಕೂಲ್ ಭೂಮಿ ಪೂಜೆಗೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ಮಾಡುತ್ತೇವೆ ಎಂದರು. ಇನ್ನು ಜನಾರ್ದನ್​ ರೆಡ್ಡಿ ಪಕ್ಷದಿಂದ ಬಿಜೆಪಿಗೆ ತೊಂದರೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷಕ್ಕೆ ಪ್ರಾದೇಶಿಕ ಪಕ್ಷದಿಂದ ರಾಗಿ ಕಾಳಿನಷ್ಟು ತೊಂದರೆಯಾಗುವುದಿಲ್ಲ ಎಂದು ರೆಡ್ಡಿಗೆ ಟಾಂಗ್​ ನೀಡಿದರು. ಈ ವೇಳೆ ಮಾಜಿ ಸಂಸದೆ ಜೆ. ಶಾಂತಾ, ಬಿಜೆಪಿ ಮುಖಂಡ ಗುರುಲಿಂಗನಗೌಡ, ಸೋಮಶೇಖರ್​ ರೆಡ್ಡಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಎಲ್ಲಿ ನಿಂತರೂ ಗೆಲ್ಲುತ್ತೇನೆ, ಆದರೆ ನನ್ನ ಆಯ್ಕೆ ಕೋಲಾರ : ಸಿದ್ದರಾಮಯ್ಯ

Last Updated :Feb 12, 2023, 6:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.