ETV Bharat / state

ಎಲ್ಲಿ ನಿಂತರೂ ಗೆಲ್ಲುತ್ತೇನೆ, ಆದರೆ ನನ್ನ ಆಯ್ಕೆ ಕೋಲಾರ : ಸಿದ್ದರಾಮಯ್ಯ

author img

By

Published : Feb 12, 2023, 3:41 PM IST

ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ - 2006ರಲ್ಲಿ ಯಡಿಯೂರಪ್ಪ ಅವರ ಜೊತೆಗೂಡಿ ಸರ್ಕಾರ ಮಾಡಿದ ಹೆಚ್​ಡಿಕೆ ಅವರದ್ದು ಬಿಜೆಪಿಯ ಬಿ ಟೀಮ್​ - 130 ರಿಂದ 150 ಖಚಿತ ಗೆಲುವು - ಸಿದ್ದರಾಮಯ್ಯ ಪ್ರತಿಕ್ರಿಯೆ

siddaramaiah press meet on raichur
ಸಿದ್ದರಾಮಯ್ಯ

ಎಲ್ಲಿ ನಿಂತರೂ ಗೆಲ್ಲುತ್ತೇನೆ, ಆದರೆ ನನ್ನ ಆಯ್ಕೆ ಕೋಲಾರ - ಸಿದ್ದರಾಮಯ್ಯ

ರಾಯಚೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಮಿಸ್ಟರ್ ಕುಮಾರಸ್ವಾಮಿ. 2006ರಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ಮಾಡಿದ್ದು ಯಾರು?. ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆಗೆ ಸೇರಿ ಸರ್ಕಾರ ಮಾಡಿದ್ದು ಯಾರು?, ಕಾಂಗ್ರೆಸ್ ಬಿಜೆಪಿ ಬಿ ಟೀಮ್ ಎಂದು ಪ್ರಚಾರ ಮಾಡುವುದು ಕುಮಾರಸ್ವಾಮಿಗೆ ನಾಚಿಕೆ ಆಗಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಮಾಜಿ ಶಾಸಕ ಹಂಪನಗೌಡ ಪುತ್ರನ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ರಾಯಚೂರು ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು ಸ್ಥಾನ ಸಹ ಬಿಜೆಪಿ ಗೆಲುವು ಸಾಧಿಸುವುದಿಲ್ಲ. ಕಾಂಗ್ರೆಸ್​ನ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರದಲ್ಲಿ ಗೆಲ್ಲುತ್ತಾರೆ. ಅದಕ್ಕೆ ಬಿಜೆಪಿಯವರು ಸುಳ್ಳು ಹೇಳಿಕೊಂಡು ಓಡಾಟ ಶುರು ಮಾಡಿದ್ದಾರೆ. ಈ ಬಾರಿ ಬಿಜೆಪಿ ರಾಜ್ಯದಲ್ಲಿ 50-60ಸ್ಥಾನ ಗೆದ್ದರೆ ಅದೇ ಹೆಚ್ಚು ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಟಿಕೆಟ್ ಗೊಂದಲ ವಿಚಾರಕ್ಕೆ ಸಮಬಂಧಿಸಿದಂತೆ ಪ್ರತಿಕ್ರಿಯಿಸಿ, ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ. 15 ದಿನಗಳಲ್ಲಿ ಎಲ್ಲಾ ಗೊಂದಲಕ್ಕೆ ತೆರೆ ಎಳೆಯುತ್ತೇವೆ. ಅರಸಿಕೇರೆಯ ಜೆಡಿಎಸ್​ ಶಾಸಕ ಶಿವಲಿಂಗೇಗೌಡರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ. ಶಿವಲಿಂಗೇಗೌಡರು 100ಕ್ಕೆ ನೂರರಷ್ಟು ಗೆದ್ದು ಬರುತ್ತಾರೆ. ನಿಮಗೆ ಅನುಮಾನ ಬೇಡ. ಈ ಅಧಿವೇಶನ ಮುಗಿದ ಬಳಿಕ ಯಾವಾಗದರೂ ಅವರು ಕಾಂಗ್ರೆಸ್​ಗೆ ಬರಬಹುದು ಎಂದು ಸಿದ್ದರಾಮಯ್ಯ ಹೇಳಿದರು.

ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ವಿಚಾರ ಕುರಿತು ಮಾತನಾಡಿ, ಕರ್ನಾಟಕದಲ್ಲಿ ಬಹಳ ಜನರು ಹೊಸ ಪಕ್ಷ ಕಟ್ಟಿದ್ದಾರೆ, ಅಭ್ಯರ್ಥಿಗಳನ್ನು ಹಾಕಿದ್ದಾರೆ, ಹೊಸ ಪಕ್ಷ ಕಟ್ಟಿದವರು ಯಾರೂ ಇಲ್ಲಿ ಉಳಿದಿಲ್ಲ, ಪಾಪ ಜನಾರ್ದನ ರೆಡ್ಡಿ ಅವರು ದುಡ್ಡು ಇದೆ ಅಂತ ಹೊಸ ಪಕ್ಷ ಕಟ್ಟಿದ್ದಾರೆ, ಅವರ ಪಕ್ಷಕ್ಕೆ ನನ್ನದೇನು ತಕರಾರು ಇಲ್ಲ ಎಂದರು.

ಹಾಗೇ ಈ ಹಿಂದೆ ಪಕ್ಷ ಕಟ್ಟಿದ್ದವರ ಬಗ್ಗೆ ಏಕ ವಚನದಲ್ಲಿ ಉಲ್ಲೇಖಿಸಿದರು. ಶ್ರೀರಾಮುಲುನೂ ಒಂದು ಪಕ್ಷ ಕಟ್ಟಿದ್ದರು, ಬಂಗಾರಪ್ಪನೂ ಒಂದು ಪಕ್ಷ ಕಟ್ಟಿದ್ದರು. ಯಡಿಯೂರಪ್ಪ, ದೇವರಾಜ್ ಅರಸು, ವಿಜಯ್ ಮಲ್ಯ ಮತ್ತು ವಿಜಯ ಸಂಕೇಶ್ವರ್​ ಕೂಡಾ ಪಕ್ಷ ಕಟ್ಟಿದ್ದರು. ಪಾಪ ಹಾಗೇ ಜನಾರ್ದನ ರೆಡ್ಡಿ ಪಕ್ಷವೂ ಆಗಬಹುದು ಎಂದು ಟೀಕಿಸಿದ ಸಿದ್ದರಾಮಯ್ಯ, ಕಾಂಗ್ರೆಸ್​ ಪಕ್ಷಕ್ಕೆ ಈ ಬಾರಿ ರಾಜ್ಯದಲ್ಲಿ ಕನಿಷ್ಠ 130ಸ್ಥಾನ, ಗರಿಷ್ಠ 150 ಸೀಟು ಬರಬಹುದು. 15 ದಿನಗಳಲ್ಲಿ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಚುನಾವಣೆ ಸ್ಪರ್ಧೆ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗಳ ಪ್ರಶ್ನೆಗೆ ಉತ್ತರಿಸಿ, ಬಿಜೆಪಿವರಿಗೆ ನನ್ನನ್ನು ಕಂಡರೆ ಭಯ, ನಾನು ಎಲ್ಲಿ ನಿಂತರೂ ಗೆಲ್ಲುತ್ತೇನೆ, ಬಾದಾಮಿಯಲ್ಲಿ ನಿಂತರೂ ಗೆಲ್ಲುತ್ತೇನೆ, ಕೋಲಾರದಲ್ಲಿ ನಿಂತರೂ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ವರುಣಾದಲ್ಲಿ ನಿಲ್ಲುವಂತೆ ಮಗ ಒತ್ತಾಯ ಮಾಡುತ್ತಿದ್ದಾನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕೋಲಾರದ ಡಿಸಿಸಿ ಬ್ಯಾಂಕ್​ನ ಹಗರಣದ ಬಗ್ಗೆ ವರ್ತೂರು ಪ್ರಕಾಶ್​ ಮಾಡಿರುವ ಆರೋಪದ ಕುರಿತು ಕೇಳಿದ್ದಕ್ಕೆ, ವರ್ತೂರು ಪ್ರಕಾಶ್​ಗೆ ನಾನು ಉತ್ತರ ನೀಡಲ್ಲ. ಅವರ ಆರೋಪಗಳಿಗೂ ಉತ್ತರಿಸಲ್ಲ ಎಂದು ಆರೋಪವನ್ನು ಮಾಜಿ ಸಿಎಂ ಸಿದ್ದರಾಮಯ್ಯ ತಳ್ಳಿಹಾಕಿದರು.

ಇದನ್ನೂ ಓದಿ: ಕೋಲಾರ ಡಿಸಿಸಿ ಬ್ಯಾಂಕ್​ನಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ: ವರ್ತೂರು ಪ್ರಕಾಶ್ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.