ETV Bharat / state

ಬಗೆದಷ್ಟು ಬಯಲಾಗುತ್ತಿದೆ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಬೆಳಗಾವಿಯಲ್ಲಿ ಮತ್ತೆ ಮೂವರ ಬಂಧನ

author img

By

Published : Aug 25, 2022, 12:26 PM IST

Car seized from accused
ಆರೋಪಿಗಳಿಂದ ವಶಪಡಿಸಿಕೊಂಡ ಕಾರು

ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ ಪಟ್ಟಣದಲ್ಲಿ ಅಭ್ಯರ್ಥಿಯೊಬ್ಬ ಸ್ಮಾರ್ಟ್​ವಾಚ್ ಬಳಸಿ ಪರೀಕ್ಷೆ ಬರೆದು ಸಿಕ್ಕಿಹಾಕಿಕೊಂಡಿದ್ದರು.

ಬೆಳಗಾವಿ : ಆಗಸ್ಟ್ 7ರಂದು ನಡೆದಿದ್ದ ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಬಗೆದಷ್ಟು ಅಕ್ರಮಗಳು ಬಯಲಾಗುತ್ತಿದ್ದು, ಬೆಳಗಾವಿಯಲ್ಲಿ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 7ರಂದು ರಾಜ್ಯಾದ್ಯಂತ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ ಪಟ್ಟಣದಲ್ಲಿ ಅಭ್ಯರ್ಥಿಯೊಬ್ಬ ಸ್ಮಾರ್ಟ್​ವಾಚ್ ಬಳಸಿ ಪರೀಕ್ಷೆ ಬರೆದು ಸಿಕ್ಕಿಹಾಕಿಕೊಂಡಿದ್ದರು.

ಪ್ರಕರಣ ಸಂಬಂಧ ಈಗಾಗಲೇ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಎಸ್ಪಿ ಡಾ ಸಂಜೀವ್ ಪಾಟೀಲ್ ನೇತೃತ್ವದ ತಂಡದಿಂದ ಮತ್ತೆ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಹುಕ್ಕೇರಿಯ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ ಪರೀಕ್ಷಾರ್ಥಿಗಳ ಇಬ್ಬರು ಸಂಬಂಧಿಕರನ್ನು ಬಂಧಿಸಲಾಗಿದೆ. ಬಂಧಿತರು ಗದಗದಿಂದ ಬಂದಿದ್ದ ಪ್ರಶ್ನೆಪತ್ರಿಕೆಗೆ ಸರ್ಕಾರಿ ಕಾಲೇಜು ಅತಿಥಿ ಉಪನ್ಯಾಸಕ ಆದೇಶ ನಾಗನೂರಿ ಉತ್ತರವನ್ನು ಬಿಡಿಸಿದ್ದರು ಎಂದು ತಿಳಿದುಬಂದಿದೆ.

ಪರೀಕ್ಷಾರ್ಥಿಗಳ ಸಂಬಂಧಿಕರಾದ ಬೈಲಹೊಂಗಲ ತಾಲೂಕಿನ ನಾವಲಗಟ್ಟಿಯ ಮಡಿವಾಳಪ್ಪ ತೋರಣಗಟ್ಟಿ ಹಾಗೂ ಹೊಸಕೋಟಿ ಗ್ರಾಮದ ಶಂಕರ ಉಣಕಲ್ ಎಂಬುವವರು ಅತಿಥಿ ಉಪನ್ಯಾಸಕನ ಬಳಿ ತಲಾ ಒಂದು ಬ್ಲ್ಯೂಟೂಥ್ ಡಿವೈಸ್ ಪಡೆದಿದ್ದರು. ಆದ್ರೆ ಡಿವೈಸ್‌ಗಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ಸಾಧ್ಯವಾಗಿರಲಿಲ್ಲ. ಬಂಧಿತರಿಂದ ಒಂದು ಕಾರು, ಎರಡು ಡಿವೈಸ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಕಿಂಗ್‌ಪಿನ್ ಸಂಜು ಭಂಡಾರಿ ಬಳಿ ಡಿವೈಸ್ ಪಡೆದು ಪರೀಕ್ಷಾರ್ಥಿಗಳ ಸಂಬಂಧಿಕರಿಗೆ ಅತಿಥಿ ಉಪನ್ಯಾಸಕ ನೀಡಿದ್ದರು. ಆರು ಲಕ್ಷ ರೂಪಾಯಿಗೆ ಡೀಲ್ ಫೈನಲ್ ಮಾಡಿ ಬ್ಲ್ಯೂಟೂಥ್ ಡಿವೈಸ್ ಅನ್ನು ಪರೀಕ್ಷಾರ್ಥಿಗಳ ಸಂಬಂಧಿಕರು ಪಡೆದುಕೊಂಡಿದ್ದರು ಎನ್ನಲಾಗ್ತಿದೆ. ಸದ್ಯ ಎಸ್‌ಪಿ ಡಾ‌ ಸಂಜೀವ ಪಾಟೀಲ್ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳಿಂದ ತನಿಖೆ ಮುಂದುವರೆದಿದೆ. KPTCL ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ : ಸ್ಮಾರ್ಟ್ ವಾಚ್ ಬಳಸಿ ಕೆಪಿಟಿಸಿಎಲ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಿಸಿಟಿವಿಯಿಂದ ಕೃತ್ಯ ಬಯಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.