ETV Bharat / state

ಮಾನವ- ಕಾಡು ಪ್ರಾಣಿಗಳ ಸಂಘರ್ಷ ತಡೆಗೆ ಅಗತ್ಯ ಕ್ರಮ: ಅರಣ್ಯ ಸಚಿವ ಖಂಡ್ರೆ

author img

By ETV Bharat Karnataka Team

Published : Dec 7, 2023, 2:23 PM IST

Forest Minister Ishwara Khandre
ಅರಣ್ಯ ಸಚಿವ ಈಶ್ವರ ಖಂಡ್ರೆ

''ಮಾನವ- ಕಾಡು ಪ್ರಾಣಿಗಳ ಸಂಘರ್ಷ ತಡೆಗೆ ಅಗತ್ಯ ಕ್ರಮವಹಿಸಲಾಗುವುದು'' ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿದರು

ಬೆಳಗಾವಿ/ ಬೆಂಗಳೂರು: ''ಬೆಂಗಳೂರಿನಲ್ಲಿ 2500 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, 403 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ. ಉಳಿದ ಒತ್ತುವರಿ ತೆರವುಗೊಳಿಸುವುದಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ'' ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ವಿಧಾನಸಭೆಯಲ್ಲಿ ತಿಳಿಸಿದರು.

ಪ್ರಶ್ನೋತ್ತೋರ ಅವಧಿಯಲ್ಲಿ ಇಂದು ಬಿಜೆಪಿ ಸದಸ್ಯ ಎಂ. ಸತೀಶರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ''ಒತ್ತುವರಿ ತೆರವು ಕಾರ್ಯಕ್ಕೆ ಬೆಂಗಳೂರಿನ ಶಾಸಕರು ಸಹ ಕೈಜೋಡಿಸಬೇಕು. ಈಗಾಗಲೇ ಬೆಂಗಳೂರಿನಲ್ಲಿ 500 ಹೆಕ್ಟೇರ್ ಅರಣ್ಯ ಪ್ರದೇಶ ಕಡಿಮೆಯಾಗಿದ್ದು, ಮಾನವ - ವನ್ಯಜೀವಿ ಸಂಘರ್ಷ ಬೆಂಗಳೂರು ಮಹಾನಗರದಲ್ಲಿಯೂ ಕಂಡು ಬರುತ್ತಿದೆ'' ಎಂದು ಹೇಳಿದರು.

''ಕಾಡಾನೆ ಹಾವಳಿ ತಡೆಗಟ್ಟಲು ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನ ಬೆಂಗಳೂರು ಕೇಂದ್ರ ಸ್ಥಾನದಲ್ಲಿ ಜಿಲ್ಲಾ ಆನೆ ಕಾರ್ಯಪಡೆ ರಚಿಸಲಾಗಿದೆ. ಬೆಂಗಳೂರು ಜಿಲ್ಲೆಯ ಕಗ್ಗಲೀಪುರ, ಆನೇಕಲ್, ಯಲಹಂಕ, ಹೊಸಕೋಟೆ, ಕೆ.ಆರ್. ಪುರ ವಲಯಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಯ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಚಿರತೆ ಕಾರ್ಯಪಡೆ ರಚಿಸಲಾಗಿದೆ. ಬೆಂಗಳೂರು ನಗರ ವಿಭಾಗದಲ್ಲಿ ಮಾನವ, ವನ್ಯಜೀವಿ ಸಂಘರ್ಷ ತಡೆಗಟ್ಟಲು ಕಗ್ಗಲೀಪುರ ವಲಯದಲ್ಲಿ ಮೂರು ಮತ್ತು ಆನೇಕಲ್ ವಲಯದಲ್ಲಿ ಮೂರು ವನ್ಯಪ್ರಾಣಿ ಹಿಮ್ಮೆಟ್ಟಿಸುವ ತಂಡಗಳನ್ನು ನಿರ್ವಹಿಸಲಾಗುತ್ತಿದೆ. ಅಲ್ಲದೇ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ, ಅರಣ್ಯ ರಕ್ಷಣೆ ಬಗ್ಗೆ ಸಾರ್ವಜನಿಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ'' ಎಂದು ತಿಳಿಸಿದರು.

''ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಡ್ಲೂನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಕಾರ್ಯಾಚರಣೆಯಲ್ಲಿ ಚಿರತೆ ಪ್ರಾಣ ತೆಗೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆ'' ಎಂದ ಅವರು, ''ಮಾನವ- ವನ್ಯಜೀವಿಗಳ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಶಾಸಕರುಗಳು ನೀಡಿರುವ ಸಲಹೆಗಳನ್ನು ಅನುಷ್ಠಾನಕ್ಕೆ ತರಲು ಕ್ರಮ ವಹಿಸಲಾಗುವುದು'' ಎಂದು ಹೇಳಿದರು.

ಮೈಸೂರು, ಹಾಸನ ಜಿಲ್ಲೆಯಲ್ಲಿ ಅರ್ಜುನ ಆನೆ ಸ್ಮಾರಕ ನಿರ್ಮಾಣ: ''ಮೈಸೂರಿನ ಜಗದ್ವಿಖ್ಯಾತ ದಸರಾ ಜಂಬೂಸವಾರಿಯಲ್ಲಿ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಸ್ಮಾರಕವನ್ನು ಹಾಸನ ಹಾಗೂ ಮೈಸೂರು ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗುವುದು'' ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಇತ್ತೀಚೆಗೆ ಹೇಳಿದ್ದರು. ಹಾಸನ ಜಿಲ್ಲೆಯ ಯಸಳೂರು ವಲಯದಲ್ಲಿ ಆನೆ ಕಾರ್ಯಾಚರಣೆ ನಡೆದ ಸಮಯದಲ್ಲಿ ಪುಂಡಾನೆಯ ಜೊತೆಗೆ ಕಾದಾಡಿ ಕ್ಯಾಪ್ಟನ್, ಬಲಭೀಮ, ಸೀನಿಯರ್ ಎಂದೇ ಖ್ಯಾತವಾಗಿದ್ದ ಅರ್ಜುನ ಮೃತಪಟ್ಟಿತ್ತು.

ಇದನ್ನೂ ಓದಿ: ಸರ್ಕಾರ ರಾಜ್ಯದ ರೈತರ ನೆರವಿಗೆ ಬರೋದು ಬಿಟ್ಟು ರಾಜಕಾರಣ ಮಾಡುತ್ತಿದೆ: ವಿಜಯೇಂದ್ರ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.