ETV Bharat / state

ಸರ್ಕಾರ ರಾಜ್ಯದ ರೈತರ ನೆರವಿಗೆ ಬರೋದು ಬಿಟ್ಟು ರಾಜಕಾರಣ ಮಾಡುತ್ತಿದೆ: ವಿಜಯೇಂದ್ರ ವಾಗ್ದಾಳಿ

author img

By ETV Bharat Karnataka Team

Published : Dec 7, 2023, 1:28 PM IST

Updated : Dec 7, 2023, 4:48 PM IST

ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಬಿ.ವೈ ವಿಜಯೇಂದ್ರ ವಾಗ್ದಾಳಿ
ರಾಜ್ಯ ಸರ್ಕಾರದ ವಿರುದ್ಧ ಬಿ.ವೈ ವಿಜಯೇಂದ್ರ ವಾಗ್ದಾಳಿ

ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ, ಬರ ಪರಿಹಾರಕ್ಕೆ ಯಡಿಯೂರಪ್ಪ ಆಗ್ರಹ

ಬೆಳಗಾವಿ: ಬರಗಾಲ ಹಿನ್ನೆಲೆ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಸ್ಪಂದಿಸುವುದು ಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದರು. ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ. ರೈತರಿಗೆ ಪರಿಹಾರ ಕೊಡುವ ಪ್ರಾಮಾಣಿಕ ಕಳಕಳಿ ಇವರಿಗಿಲ್ಲ. ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಬೇರೆ ಕಡೆ ವರ್ಗಾಯಿಸಿದ್ದಾರೆ. ಇಂದು ಸದನದಲ್ಲಿ ಬರಗಾಲ ವಿಷಯದ ಚರ್ಚೆಯಲ್ಲಿ ಈ ವಿಚಾರಗಳನ್ನು ಚರ್ಚಿಸುತ್ತೇವೆ ಎಂದರು.

ಅಧಿವೇಶನ ಸಂದರ್ಭದಲ್ಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ 50ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ನಮಗೆ 136 ಶಾಸಕರ ಬೆಂಬಲವಿದೆ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡರೂ ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ ಎಂಬ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಇದೆಲ್ಲವನ್ನು ಸದನದಲ್ಲಿ ನಾವು ಪ್ರಶ್ನಿಸುತ್ತೇವೆ ಎಂದು ವಿಜಯೇಂದ್ರ ಗುಡುಗಿದರು.

ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲಿನ ಹಲ್ಲೆ ಬಗ್ಗೆ ನಿನ್ನೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ. ಅಧಿವೇಶನ ನಡೆಯುವ ಸಂದರ್ಭದಲ್ಲೇ ಬಿಜೆಪಿಯ ದಲಿತ ಮುಖಂಡನ‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ಆಗಿದೆ. ಪೊಲೀಸ್ ಅಧಿಕಾರಿಗಳು ಜಸ್ಟ್ ಕೇಸ್ ಮಾತ್ರ ದಾಖಲು ಮಾಡಿದ್ದಾರೆ. ಕೊಲೆ ಯತ್ನ ಕೇಸ್ ಹಾಕೋದಿಲ್ಲ, 307 ಕೇಸ್​ನ್ನೂ ಹಾಕಿಲ್ಲ ಎಂದು ಆರೋಪಿಸಿದರು.

ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಗುಲಬರ್ಗಾದಲ್ಲಿ ಮಣಿಕಂಠ ರಾಠೋಡ್​ ವಿಚಾರದಲ್ಲಿ ಪೊಲೀಸರು ಏನೇ ವರದಿ ಕೊಟ್ಟಿರಬಹುದು. ಆದರೆ ಪೊಲೀಸರು ಹೇಳಿರುವುದು ಎಲ್ಲವೂ ಸತ್ಯ ಎಂದು ನಾನು ನಂಬುವುದಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಿ ನಮ್ಮ ಕಾರ್ಯಕರ್ತರ ರಕ್ಷಣೆ ನನ್ನ ಜವಾಬ್ದಾರಿ ಎಂದು ಎಚ್ಚರಿಸಿದರು.

ತಕ್ಷಣ ಪರಿಹಾರ ನೀಡಿ- ಯಡಿಯೂರಪ್ಪ ಆಗ್ರಹ: ಬರಗಾಲದ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಶಿವಮೊಗ್ಗ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಬರಗಾಲದ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಕೇಂದ್ರದಿಂದ ಪರಿಹಾರ ಕೊಡುವ ಬಗ್ಗೆ ನಾವು ಮನವಿ ಮಾಡುತ್ತೇವೆ. ರಾಜ್ಯ ಸರ್ಕಾರ ಕೊಡುವ ಪರಿಹಾರವನ್ನು ಬೇಗ ಕೊಡಬೇಕು. ಕೇಂದ್ರ ಸರ್ಕಾರ ಪರಿಹಾರ ಕೊಡುವವರೆಗೆ ಕಾಯಬಾರದು ಎಂದು ಹೇಳಿದರು.

ಬಳಿಕ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಮಾತನಾಡಿ, ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಯಬೇಕು. ಉತ್ತರ ‌ಕರ್ನಾಟಕದ ಸಮಸ್ಯೆಗೆ ಪರಿಹಾರ ಸಿಗಬೇಕು. ಅಧಿವೇಶನದಲ್ಲಿ ಇನ್ನು ಸಾಕಷ್ಟು ಸಮಯ ಇದೆ. ಈ ಬಗ್ಗೆ ಸಮಗ್ರ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಕೇಂದ್ರದ ನಫೇಡ್ ಮೂಲಕ ಎಂಎಸ್‌ಪಿ ಅಡಿ ಕೊಬ್ಬರಿ ಖರೀದಿಸಿದರೆ ರೈತರಿಗೆ ಒಳಿತು: ಸಚಿವ ಶಿವಾನಂದ ಪಾಟೀಲ

Last Updated : Dec 7, 2023, 4:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.