ETV Bharat / state

ಮಹಾರಾಷ್ಟ್ರ ಸಚಿವರನ್ನು ಬೆಳಗಾವಿಗೆ ಪ್ರವೇಶಿಸದಂತೆ ತಡೆಯಬೇಕು: ಕರವೇ ಆಗ್ರಹ

author img

By

Published : Nov 29, 2022, 1:26 PM IST

Karave Belgaum District President Deepaka Gudaganatti
ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ

ಮಹಾರಾಷ್ಟ್ರದ ಸಚಿವ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜೆ ಅವರು ಬೆಳಗಾವಿಯಲ್ಲಿ ಡಿಸೆಂಬರ್ 3 ರಂದು ಸಭೆ ನಡೆಸುವುದಾಗಿ ಟ್ವೀಟ್ ಮಾಡಿದ್ದಾರೆ. ಮರಾಠಿ ಕನ್ನಡಿಗರ ನಡುವೆ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ, ಶಾಂತಿ ಕದಡಲು ಆಗಮಿಸುತ್ತಿರುವ ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿ ಪ್ರವೇಶಿಸದಂತೆ ರಾಜ್ಯ ಸರ್ಕಾರ ತಡೆಯಬೇಕು ಎಂದು ಕರವೇ ಒತ್ತಾಯಿಸಿದೆ.

ಬೆಳಗಾವಿ: ಜಿಲ್ಲೆಯ ಮರಾಠಿ ಭಾಷಿಕರು ಮತ್ತು ಕನ್ನಡಿಗರು ಸೌಹಾರ್ದತೆಯಿಂದ ಬದುಕು ಸಾಗಿಸುತ್ತಿರುವರು. ಇಲ್ಲಿನ ಮುಗ್ದ ಮರಾಠಿ ಭಾಷಿಕರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟಿ, ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ, ಶಾಂತಿ ಕದಡಲು ಆಗಮಿಸುತ್ತಿರುವ ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿ ಪ್ರವೇಶಿಸದಂತೆ ಕಡಿವಾಣ ಹಾಕಬೇಕು. ಇಲ್ಲವಾದ್ರೆ ಕರವೇ ಕಾರ್ಯಕರ್ತರು ಮಹಾರಾಷ್ಟ್ರದ ಸಚಿವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್​ ಗುಡಗನಟ್ಟಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.

ಈ ಕುರಿತಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರ ಸರ್ಕಾರ ಭಾರತದ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ. ಪ್ರಧಾನಿ ಬಳಿ ನಿಯೋಗ ಕೊಂಡೊಯ್ದು ಕೇಂದ್ರ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಲಗಾಮು ಹಾಕುವಂತೆ ಒತ್ತಾಯಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಡಿಸೆಂಬರ್ 3 ರಂದು ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜೆ ಅವರು ಬೆಳಗಾವಿಯಲ್ಲಿ ಸಭೆ ನಡೆಸುವುದಾಗಿ ಟ್ವೀಟ್ ಮಾಡಿದ್ದಾರೆ. ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಗಣಿಸದಿದ್ದರೆ ಮಹಾರಾಷ್ಟ್ರದ ಆ ಇಬ್ಬರು ಸಚಿವರು ಬೆಳಗಾವಿಯಲ್ಲಿ ನಡೆಸಲಿರುವ ಸಭೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮುತ್ತಿಗೆ ಹಾಕಿ ತಡೆಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಸುಪ್ರೀಂ ತೀರ್ಪು: ಬೆಳಗಾವಿ ಗಡಿವಿವಾದದ ಕುರಿತು ಮಹಾರಾಷ್ಡ್ರ ಸರ್ಕಾರವೇ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ. ಸುಪ್ರೀಂ ತೀರ್ಪು ಬರುವವರೆಗೂ ಕಾಯಬೇಕಾದ ತಾಳ್ಮೆಯಿಲ್ಲದ ಮಹಾರಾಷ್ಟ್ರ ಸರ್ಕಾರ ಸುಖಾಸುಮ್ಮನೆ ಬೆಳಗಾವಿಯಲ್ಲಿ ಉದ್ಧಟತನ ನಡೆಸುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಅದಕ್ಕೆ ಮೊದಲು ಎಂಇಎಸ್ ನಾಯಕರು ಮಹಾರಾಷ್ಟ್ರದ ಇಬ್ಬರು ಸಚಿವರನ್ನು ಬೆಳಗಾವಿಗೆ ಕರೆಯಿಸಿ ಶಾಂತಿಗೆ ಭಂಗ ತರುವ ಹುನ್ನಾರ ನಡೆಸಿದ್ದಾರೆ. ಮಹಾರಾಷ್ಟ್ರದ ಸಚಿವರಿಗೆ ಬೆಳಗಾವಿಗೆ ಬರುವಂತೆ ಪತ್ರ ಬರೆದಿರುವ ಎಂಇಎಸ್ ನಾಯಕರನ್ನು ಕೂಡಲೇ ಬಂಧಿಸಬೇಕೆಂದು ಕರವೇ ಜಿಲ್ಲಾಧ್ಯಕ್ಷ ದೀಪಕ್​ ಗುಡಗನಟ್ಟಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ನಿಪ್ಪಾಣಿಯಲ್ಲಿ ಉಭಯ ರಾಜ್ಯಗಳ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.