ETV Bharat / state

ಧರಣಿ ಹಿಂಪಡೆದ ಕಾಂಗ್ರೆಸ್; ಪರಿಷತ್​ನಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಚರ್ಚೆ

author img

By

Published : Dec 28, 2022, 8:14 AM IST

Opposition Leader B.K. Hariprasad
ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದಿಂದ ಈ ಭಾಗದ ಜನರಿಗೆ ಆತಂಕ- ಬೇಸರ ವ್ಯಕ್ತಪಡಿಸಿದ ಬಿ.ಕೆ. ಹರಿಪ್ರಸಾದ್- ಮಹಾಜನ್​ ವರದಿ ಕುರಿತು ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟನೆ

ಬೆಳಗಾವಿ : ರಾಜ್ಯದಲ್ಲಿ ಹಿಂದೆಂದೂ ಕಾಣದ ಮಾದರಿಯ ಘಟನೆಗಳು ಇತ್ತೀಚೆಗೆ ಹೆಚ್ಚಿದ್ದು, ರಾಜ್ಯ- ಮಹಾರಾಷ್ಟ್ರ ಗಡಿ ಭಾಗದ ಕನ್ನಡಿಗರು ಹಾಗೂ ಮರಾಠಿಗರಲ್ಲಿ ಆತಂಕ ಮೂಡಿಸುವ ಕಾರ್ಯ ಆಗಿರುವುದು ಬೇಸರದ ಸಂಗತಿ ಎಂದು ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯ ಪಟ್ಟರು.

ವಿಧಾನ ಪರಿಷತ್​ನಲ್ಲಿ ಭೋಜನ ವಿರಾಮದ ಬಳಿಕ ನಿಯಮ 68ರ ಅಡಿ ಕರ್ನಾಟಕ-ಮಹಾರಾಷ್ಟ್ರ ವಿವಾದವನ್ನು ಶಾಶ್ವತವಾಗಿ ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿರುವ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಬಿ.ಕೆ. ಹರಿಪ್ರಸಾದ್ ಮಾತನಾಡಿದರು. ಯಾವುದೋ ಒಂದು ಗುಪ್ತ ಕಾರ್ಯಸೂಚಿ ಇರಿಸಿಕೊಂಡು ಈ ಗಲಾಟೆ ನಡೆಯುತ್ತಿದ್ದು, ಮಹಾರಾಷ್ಟ್ರ ಅನಗತ್ಯವಾಗಿ ಪ್ರತಿ ಸಾರಿ ಕ್ಯಾತೆ ತೆಗೆಯುತ್ತಿದೆ. ಗಡಿ ಭಾಗದಲ್ಲಿ ಪುಂಡಾಟಿಕೆ ಹೆಚ್ಚಾಗಿದ್ದು ಇದನ್ನು ಕನ್ನಡಿಗರು, ಮರಾಠಿಗರು ಮಾಡುತ್ತಿದ್ದಾರೆ ಎನ್ನುತ್ತಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಈ ಕಾರ್ಯ ಮಾಡುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರ ಹುಡುಕಿಕೊಳ್ಳದಿದ್ದರೆ ಸಮಸ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಎಚ್ಚರಿಸಿದರು.

ನಾವು ಮಹಾಜನ್ ವರದಿಯಂತೆ ನಡೆದುಕೊಂಡಿದ್ದೇವೆ. ಆದರೆ ಮಹಾರಾಷ್ಟ್ರದ ಎಂಇಎಸ್​ ಸಂಘಟನೆಗಳು ಗಡಿ ಭಾಗದ ಕನ್ನಡಿಗರಿಗೆ ಹಾಗೂ ಮರಾಠಿಗರಿಗೆ ಭಯ ಮೂಡಿಸುವ ರೀತಿ ಅಧಿವೇಶನ ಆರಂಭಕ್ಕೆ 15 ದಿನ ಮುನ್ನ ಹೋರಾಟ ಆರಂಭಿಸುತ್ತಾರೆ. ಇನ್ನು ಮಹಾರಾಷ್ಟ್ರ ಸರ್ಕಾರದ ಕೆಲ ಸಚಿವರು ರಾಜ್ಯದವರು ಕೈಲಾಗದವರು ಅನ್ನುವ ಭಾವನೆ ಮೂಡುವ ರೀತಿ ಮಾತನಾಡುತ್ತಾರೆ. ಎಸ್.ಎಂ.ಕೃಷ್ಣ ಈ ಗಡಿ ವಿವಾದ ಬಗೆಹರಿಸಲು ಪ್ರಯತ್ನ ಮಾಡಿದ್ದರು.

ನಂತರ ಒಂದು ಆಯೋಗ ಸಹ ರಚನೆಯಾಗಿ ಇದೀಗ ಸುಪ್ರೀಂ ಕೋರ್ಟ್​ನಲ್ಲಿ ಈ ವಿಚಾರದ ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ನಾವು ಹೆಚ್ಚು ಮಾತನಾಡಲು ಆಗಲ್ಲ. ರಾಜ್ಯದ ಬಸ್​ಗೆ ಅವರು ಮಸಿ ಬಳಿಯುತ್ತಾರೆ. ಮಹಾರಾಷ್ಟ್ರದಿಂದ ಬರುವ ಅಲ್ಲಿನ ಲಾರಿಗಳು ಮಾರ್ಗದಲ್ಲೇ ನಿಂತಿವೆ. ಆದರೆ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸರ್ಕಾರ ಸರ್ವಪಕ್ಷ ಸದಸ್ಯರ ಕರೆಸಿ ಚರ್ಚಿಸುವ ಕಾರ್ಯ ಮಾಡಬೇಕಿತ್ತು ಎಂದು ಹೇಳಿದರು.

ಕೇಂದ್ರಕ್ಕೆ ನಿಯೋಗ ತೆರಳುವ ಕಾರ್ಯ ಮಾಡಬೇಕಿತ್ತು. ಕೇವಲ ಮಹಾರಾಷ್ಟ್ರ, ಕರ್ನಾಟಕ ಸಿಎಂಗಳು ತೆರಳಿ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಬಂದರೆ ಸಮಸ್ಯೆ ಪರಿಹಾರವಾಗಲ್ಲ. ನಾವು ಸಹ ರಾಜ್ಯದವರು, ನಮಗೂ ಮಾತನಾಡಲು ಅವಕಾಶ ಕೊಡಬೇಕು. ಗಡಿ ಭಾಗದ ಕೆಲ ಭಾಗಗಳು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂದು ಮಹಾರಾಷ್ಟ್ರ ಜತೆ ಕೈಜೋಡಿಸಿ ಮಾತನಾಡುತ್ತಿದ್ದಾರೆ. ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶವಾಗಿ ಯಾವ ರೀತಿಯ ಸಮಸ್ಯೆ ಎದುರಿಸುತ್ತಿದೆ ಎನ್ನುವುದು ಅರ್ಥವಾಗುತ್ತದೆ. ಇಂತಹ ರಾಷ್ಟ್ರದಲ್ಲಿ ಸಂಕುಚಿತ ಭಾವನೆ ಇಟ್ಟು ಕೇಂದ್ರಾಡಳಿತ ಪ್ರದೇಶ ಆಗಬೇಕೆಂಬ ಮಾತು ಕೇಳಿಬಂದರೆ ನಾವು ಕೈಕಟ್ಟಿ ಕೂರಲ್ಲ ಎಂದು ಎಚ್ಚರಿಸಿದರು.

ಮುಂಬಯಿಯನ್ನು ಕೇಂದ್ರಾಡಳಿತ ಪ್ರದೇಶವನ್ನು ಮಾಡಿ ಎಂದು ನಾವು ಒತ್ತಾಯಿಸುತ್ತೇವೆ. ಅವರು ನಮ್ಮ ರಾಜ್ಯದ ಕೆಲ ಭಾಗವನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಹೊರಟಿದ್ದಾರೆ. ಮುಂಬಯಿಯಿಂದ ಸಾಕಷ್ಟು ಕನ್ನಡಿಗರನ್ನು ರಾಜ್ಯಕ್ಕೆ ವಾಪಸ್ ಕಳಿಸಲಾಯಿತು. ನಾವು ಯಾರನ್ನೂ ಅಲ್ಲಿಗೆ ಕಳಿಸಿಲ್ಲ. ಜವಾಬ್ದಾರಿ ಇರುವ ಮೇಲ್ಮನೆ ಸದಸ್ಯರು ಎಲ್ಲಾ ಸೇರಿ ಒಂದು ರೆಸಲ್ಯೂಷನ್ ತರಬೇಕು. ರಾಜ್ಯದ ಯಾವುದೇ ಭಾಗವನ್ನು ಬೇರೆಯವರು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿನ ಎಲ್ಲಾ ಭಾಗ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಸಂಕಲ್ಪ ತೊಟ್ಟು ನಮಗೆ ಶಾಂತಿಯಿಂದ ಈ ಸಮಸ್ಯೆ ಬಗೆಹರಿಯಬೇಕು ಎಂದು ಹೇಳಿದರು.

ಇಲ್ಲಿನ ಒಂದು ಭಾಗವೂ ಬೇರೆ ರಾಜ್ಯಕ್ಕೆ ಹೋಗಬಾರದು ಎಂಬ ಆಸೆ ನಮ್ಮದು. ಇವರದ್ದು ಇಷ್ಟೊಂದು ಕ್ಯಾತೆ ಇರುವಾಗ ನಾವು ಸಹ ನಮ್ಮ ನಿಲುವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ರಾಜಕೀಯ ಹಾಗೂ ಕಾನೂನಾತ್ಮಕ ಹೋರಾಟ ಮಾಡಬೇಕು. ಈ ಸಂಬಂಧ ಸರ್ಕಾರ ಯಾವುದಾದರೂ ರೆಸಲ್ಯೂಷನ್ ತಂದರೆ ಅದನ್ನು ಪಾಸ್ ಮಾಡಿಕೊಡುತ್ತೇವೆ ಎಂಬ ಭರವಸೆ ಇತ್ತರು.

ಈ ವಿಷಯ ಕುರಿತು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿಕ್ರಿಯಿಸಿ ಭಾಷಾವಾರು ಪ್ರಾಂತ್ಯ ವಿಂಗಡಣೆ ಸುಲಭವಾಗಿ ಆಗಿಲ್ಲ. ಸಾಕಷ್ಟು ರಾಜ್ಯದ ಭಾಗಗಳು 1956 ರಲ್ಲಿ ಕಳೆದುಕೊಂಡು ಹೊಸ ರಾಜ್ಯ ರಚಿಸಿದೆವು. ಇದಾದ ಬಳಿಕ ಮಹಾರಾಷ್ಟ್ರ ಕ್ಯಾತೆ ತೆಗೆಯಿತು. ನಂತರ ಮಹಾಜನ್ ಸಮಿತಿ ರಚನೆಯಾಯಿತು. ಇದಕ್ಕೆ ನಮ್ಮ ಸಹಮತಿ ಇರಲಿಲ್ಲ. ಆದರೆ ಇದರ ವರದಿ ಸಲ್ಲಿಕೆ ಮಾತ್ರ ಆಗಿದ್ದು, ನಂತರ ಬೆಳವಣಿಗೆ ಆಗಿಲ್ಲ ಎಂದು ಹೇಳಿದರು.

ರಾಜ್ಯದಿಂದ ಇಂದು ನ್ಯಾ. ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಉತ್ತಮ ವಕೀಲರನ್ನು ಇರಿಸಿ ವಾದ ಮಾಡುತ್ತಿದ್ದೇವೆ. ಗೃಹ ಸಚಿವ ಅಮಿತ್ ಶಾ ಸಹ ಶಾಂತಿಯುತ ಮಾತುಕತೆ ನಡೆಸಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದಷ್ಟೇ ಹೇಳಿ ಕಳಿಸಿದ್ದಾರೆ. ಇವರ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ಸರಿಯಲ್ಲ. ಮಹಾರಾಷ್ಟ್ರ ನಾಯಕರು ಅನಗತ್ಯವಾಗಿ ನಮ್ಮನ್ನು ಕೆಣಕುವ ಮಾತನ್ನಾಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯನ್ನು ಬೇರೆ ರಾಜ್ಯದ ನಾಯಕ ಸದನದಲ್ಲಿ ನಿಂದಿಸುತ್ತಾನೆ ಎನ್ನುವುದು ಎಷ್ಟು ಸರಿ? ಎಂದು ಪ್ರಶ್ನೆಸಿದರು.

ಮಹಾರಾಷ್ಟ್ರದವರಿಗೆ ನಿಜವಾದ ಕಾಳಜಿ ಇದ್ದರೆ ಮುಂಬಯಿಯನ್ನು ಕೇಂದ್ರಾಡಳಿತ ಮಾಡಿ ಎಂಬ ಸಲಹೆ ನೀಡಲಿ ಅಲ್ಲಿನ ಸರ್ಕಾರ. ಇಂದು ಶೇ.20 ರಷ್ಟು ಕನ್ನಡ ಹಾಗೂ ಕೊಂಕಣಿ ಭಾಷೆ ಮಾತನಾಡುವವರು ಹಾಗೂ ಬೇರೆ ರಾಜ್ಯದವರು ಬೇಕಷ್ಟು ಇದ್ದಾರೆ. ಇಂದು ಬೆಳಗಾವಿಯನ್ನು ಮಹಾರಾಷ್ಟ್ರದ ಭಾಗ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರಾಜಿ ಆಗುವ ಯಾವುದೇ ಪ್ರಶ್ನೆ ಇಲ್ಲ.

ಈ ಗಡಿ ಭಾಗದಲ್ಲಿ ಪರಸ್ಪರ ಎರಡೂ ಭಾಷಿಕರು ಒಂದಾಗಿಯೇ ಇದ್ದಾರೆ. ಚುನಾವಣೆ ಸಂದರ್ಭ ಈ ರೀತಿಯ ಸಮಸ್ಯೆ ಏಳುವುದರಿಂದ ಜನ ಜಾಗೃತರಾದರೆ ಎಲ್ಲಾ ಸರಿಯಾಗುತ್ತದೆ. ಸರ್ಕಾರ ಜನರ ಪರವಾಗಿರಬೇಕು ಎಂದಿದೆ. ನಾವು ಯಥೇಚ್ಛವಾಗಿ ಬೆಳಗಾವಿ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ. ಜನರ ವಿಶ್ವಾಸ ಗಳಿಸಿದ್ದೇವೆ. ಇದೇ ಕಾರಣಕ್ಕೆ ಮಹಾರಾಷ್ಟ್ರದಲ್ಲಿರುವವರು ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಹೇಳುವ ಕಾರ್ಯ ಮಾಡುತ್ತಿದ್ದಾರೆ ಎಂದರೆ ರಾಜ್ಯಕ್ಕೆ ಸಮಾನವಾಗಿ ಅವರು ಯಾವುದೇ ಅಭಿವೃದ್ಧಿ ಮಾಡಿಲ್ಲ ಎನ್ನುವುದು ಅರಿವಾಗುತ್ತದೆ ಎಂದರು.

ಇದನ್ನೂ ಓದಿ : ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಚರ್ಚೆಗೆ ನಿಯಮ 68 ರ ಅಡಿ ಅವಕಾಶ: ಸಭಾಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.