ETV Bharat / state

ಜ.2ರಿಂದ ಬೂತ್ ವಿಜಯ ಅಭಿಯಾನ, 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಗುರಿ

author img

By

Published : Dec 27, 2022, 7:55 PM IST

ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಕಸರತ್ತು ಆರಂಭಿಸಿದೆ. ಇದರ ಭಾಗವಾಗಿ ಹೊಸ ಬೂತ್ ವಿಜಯ ಅಭಿಯಾನ ಆರಂಭಿಸಿದೆ. ಈ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.

Press conference today at BJP Legislature Party office in Belgaum Suvarna Soudha
ಬೆಳಗಾವಿ ಸುವರ್ಣ ಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿ

ಬೆಳಗಾವಿ : ರಾಜ್ಯ ಬಿಜೆಪಿ ವತಿಯಿಂದ ಜನವರಿ 2 ರಿಂದ ಜನವರಿ 12ರ ವರೆಗೆ ಬೂತ್ ವಿಜಯ ಅಭಿಯಾನ ಆಯೋಜಿಸಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಬೆಳಗಾವಿ ಸುವರ್ಣಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

58,156 ಬೂತ್‍ಗಳು, 11,642 ಶಕ್ತಿ ಕೇಂದ್ರಗಳು, 1,445 ಮಹಾ ಶಕ್ತಿ ಕೇಂದ್ರಗಳು, 312 ಮಂಡಲಗಳು, 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಯಲಿದೆ. ರಾಜ್ಯ, ಜಿಲ್ಲಾ, ತಾಲ್ಲೂಕು ಮಾತ್ರವಲ್ಲದೇ ಎಲ್ಲ ಘಟಕಗಳು, ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ರಾಜ್ಯದಲ್ಲಿರುವ ಪಕ್ಷದ ಕಾರ್ಯಕರ್ತರ ಹಾಗೂ ಮತದಾರರ 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಅಭಿಯಾನವಿದೆ. ಯುವ ಅರ್ಹ ಮತದಾರರನ್ನು ಮತಪಟ್ಟಿಯಲ್ಲಿ ಸೇರಿಸಲಾಗುವುದು, ಪ್ರತಿ ಬೂತ್‍ಗಳಲ್ಲಿ ಶೇ 100 ಮತದಾನ ಆಗುವ ರೀತಿಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. 20 ಲಕ್ಷ ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಪ್ರಧಾನಿಯವರ 'ಮನ್ ಕೀ ಬಾತ್' ವೆಬ್ ಲಿಂಕನ್ನು 60 ಸಾವಿರ ಗುಂಪುಗಳು ಡೌನ್‍ಲೋಡ್ ಮಾಡಿಸುವಂತೆ ಪ್ರೇರೇಪಿಸಿ ಕಾರ್ಯಾನುಷ್ಠಾನ ಮಾಡಲಾಗುವುದು. ಪ್ರತಿ ಬೂತ್‍ನಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಸಭೆಯನ್ನು ಮಾಡಲಿದ್ದೇವೆ ಎಂದು ಸಚಿವರು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಎಲ್ಲ ಸಚಿವರು, ಬಿಜೆಪಿಯ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ರಾಜ್ಯ, ಜಿಲ್ಲೆ, ಮಂಡಲ ಪದಾಧಿಕಾರಿಗಳು ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಅಭಿಯಾನದ ಯಶಸ್ಸಿಗಾಗಿ ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದೆ.

ಸಂಚಾಲಕರಾಗಿ ಕೋಟ ಶ್ರೀನಿವಾಸ ಪೂಜಾರಿ, ಸಹ ಸಂಚಾಲಕರಾಗಿ ಮಹೇಶ್ ಟೆಂಗಿನಕಾಯಿ, ಸದಸ್ಯರಾಗಿ ಹೇಮಲತಾ ನಾಯಕ್, ಅರುಣ್ ಶಹಾಪುರ, ರಾಜೇಂದ್ರ ಮೈಸೂರು, ಕೇಶವ ಪ್ರಸಾದ್ ಅವರನ್ನು ನೇಮಿಸಿದ್ದಾರೆ. ಅಭಿಯಾನದ ಮೂಲಕ ರಾಜ್ಯದಲ್ಲಿ ಸಂಘಟನೆ ಬಲಪಡಿಸಲಿದ್ದೇವೆ. ಇದು ಬಿಜೆಪಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿ, ಬಿಜೆಪಿ ಕೇವಲ ಚುನಾವಣೆ ಬಂದಾಗ ಸಕ್ರಿಯವಾಗುವ ಪಕ್ಷವಲ್ಲ, ಅದು ನಿರಂತರ ಚಟುವಟಿಕೆಯಿಂದ ಕೂಡಿರುವ ಪಕ್ಷ. ಕಳೆದ 2 ಚುನಾವಣೆಗಳಿಂದ ಪೇಜ್ ಪ್ರಮುಖ್ ನಿಯೋಜಿಸಿ ಕಾರ್ಯ ಮಾಡಿದ್ದು, ಈ ಬಾರಿ ಅದಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ. ಬಹುದೊಡ್ಡ ಅಭಿಯಾನ ಇದಾಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ್, ರಾಜ್ಯ ವಕ್ತಾರ ಮತ್ತು ಶಾಸಕ ಪಿ.ರಾಜೀವ್, ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಇದನ್ನೂ ಓದಿ: ಬೊಮ್ಮಾಯಿಗೆ ಪಂಚಮಸಾಲಿಗರ ಮೀಸಲಾತಿ ತಲೆಬಿಸಿ; ಬಿಜೆಪಿ ಸರ್ಕಾರದ ಮುಂದಿರುವ ಲೆಕ್ಕಾಚಾರಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.