ETV Bharat / state

ತಳಸಮುದಾಯಗಳ ಮೀಸಲಾತಿ ವಿಳಂಬ: ಕೇಂದ್ರ ಸರ್ಕಾರದ ವಿರುದ್ಧ ದೇವನೂರು ಆಕ್ರೋಶ

author img

By ETV Bharat Karnataka Team

Published : Nov 26, 2023, 8:23 AM IST

ದೇವನೂರು ಮಹಾದೇವ
ದೇವನೂರು ಮಹಾದೇವ

ಕೇಂದ್ರ ಸರ್ಕಾರದ ವಿರುದ್ಧ ಸಾಹಿತಿ ದೇವನೂರು ಮಹಾದೇವ ಆಕ್ರೋಶ. ಹಿಂದಿನ ಬಿಜೆಪಿ ಸರ್ಕಾರದ ಕೃಷಿ ಕಾಯ್ದೆ ಸೇರಿದಂತೆ ಹಲವು ನಿರ್ಧಾರಗಳನ್ನು ರದ್ದುಪಡಿಸುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ.

ಬೆಂಗಳೂರು: ಕಳೆದ 30 ವರ್ಷಗಳಿಂದ ಹೋರಾಟ ನಡೆಸುತ್ತಿರುವ ತಳಸಮುದಾಯಗಳ ಮೀಸಲಾತಿಗಾಗಿ ವರದಿ ಸಿದ್ಧಪಡಿಸುವಂತೆ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ (ಇಡಬ್ಲ್ಯೂಎಸ್) 3 ದಿನಗಳಲ್ಲೇ ಮೀಸಲಾತಿ ನೀಡಿದ್ದರು ಎಂದು ಸಾಹಿತಿ ದೇವನೂರು ಮಹಾದೇವ ಬೇಸರ ವ್ಯಕ್ತಪಡಿಸಿದರು.

ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿ) ಕರೆ ನೀಡಿರುವ 'ರಾಜಭವನ್ ಚಲೋ-ಜನವಿರೋಧಿ ಮತ್ತು ಕಾರ್ಪೊರೇಟ್ ನೀತಿಗಳ ವಿರುದ್ಧ ದುಡಿಯುವ ಜನರ ಮಹಾಧರಣಿ' ಕುರಿತಂತೆ ಸಂಯುಕ್ತ ಹೋರಾಟ ಕರ್ನಾಟಕ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿಯವರು ಹೈದರಾಬಾದ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾದಿಗ ದಂಡೋರ ನಾಯಕ ಕೃಷ್ಣ ಮಾದಿಗ ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಳೆದ 30 ವರ್ಷಗಳಿಂದ ಹೋರಾಡುತ್ತಿರುವ ತಳಸಮುದಾಯಗಳ ಒಳಮೀಸಲಾತಿಗಾಗಿ ವರದಿ ಸಿದ್ಧಪಡಿಸಲು ಸೂಚಿಸಿದ್ದರು. ಆದರೆ, ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಇಡಬ್ಲ್ಯೂಎಸ್ ಮೀಸಲಾತಿ ನೀಡಲು ಯಾವುದೇ ವರದಿ ಕೇಳದೆ ಮೂರೇ ದಿನದಲ್ಲಿ ನೀಡಿದ್ದರು ಎಂದು ದೂರಿದರು.

ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರವು ಧರ್ಮ-ಧರ್ಮಗಳ ನಡುವೆ, ಬಡವ-ಬಲ್ಲಿದರ ನಡುವೆ, ಜಾತಿ-ಜಾತಿಗಳ ನಡುವೆ ಕಂದಕ ತೋಡುತ್ತಿದೆ. ಇದು ಭಾರತವನ್ನು ಎಲ್ಲಿಗೆ ಕರೆದೊಯ್ಯುತ್ತದೆ? ಎಂಬುದೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂದು ಚಾತುರ್ವರ್ಣ ಹಿಂದುತ್ವವು ವಿಶಾಲ ಹಿಂದೂ ಸಮುದಾಯ, ಇತರ ಧರ್ಮಗಳು, ಪಂಥಗಳು ನಂಬಿಕೆಗಳ ಮೇಲೆ ಯುದ್ಧ ಸಾರಿದೆ. ಶೇ.10 ಇರುವ ಮೇಲ್ವರ್ಗ ರಕ್ಷಿಸುತ್ತ ಉಳಿದ ಶೇ.90 ಜನಸ್ತೋಮವನ್ನು ತುಳಿಯುತ್ತಿದೆ. ಬಡವರ ಹೊಟ್ಟೆಗೆ ಹೊಡೆದು ಉಳ್ಳವರ ಬಾಯಿಗೆ ಹಾಕುತ್ತಿದೆ. ಸಾರ್ವಜನಿಕ ಸಂಪತ್ತನ್ನು ಕಾರ್ಪೋರೇಟ್ ಬಾಯಿಗೆ ಹಾಕುತ್ತಿದೆ. ಸ್ವಾಯತ್ತ ಸಂಸ್ಥೆಗಳನ್ನು ಅರೆಜೀವವನ್ನಾಗಿ ಮಾಡಲಾಗುತ್ತಿದೆ. ಈ ರೀತಿ ರಾಜ್ಯಭಾರ ನಡೆಯುತ್ತಿರುವುದರಿಂದಲೇ, ಕೃಷಿ, ಕಾರ್ಮಿಕ, ಅರಣ್ಯ, ಶಿಕ್ಷಣ ಕಾಯ್ದೆಗಳನ್ನು ವಿಕಾರವಾಗಿ ತಿರುಚುತ್ತಿದ್ದಾರೆ. ಇದರ ಪರಿಣಾಮ ಕೃಷಿಕರು ತಮ್ಮಲ್ಲಿದ್ದ ಭೂಮಿಯನ್ನು ಕಳೆದುಕೊಂಡು ಹೊಟ್ಟೆಪಾಡಿಗಾಗಿ ಬೀದಿಗೆ ಬೀಳುವಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾನವ ಸಂಪತ್ತಾಗಬೇಕಿದ್ದ ಯುವ ಜನತೆಯು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಕಾರ್ಮಿಕರ ರಕ್ಷಣೆಗಿದ್ದ ಕಾನೂನುಗಳೂ ಕಣ್ಮರೆಯಾಗುತ್ತಿವೆ. ದಲಿತರು, ಆದಿವಾಸಿಗಳು, ಮಹಿಳೆಯರು ಹೊಸ ಹೊಸ ಶೋಷಣೆಯ ಸವಾಲುಗಳನ್ನು ಎದುರಿಸುವಂತಾಗುತ್ತಿದೆ. ಅದಾನಿ, ಅಂಬಾನಿ ಮುಂತಾದ ಶತಕೋಟಿ ಮೇಲೆ ಕುಳಿತಿರುವ ಕುಟುಂಬಗಳಿಗೆ ಮನ್ ಕಿ ಬಾತ್‌ನ ಪ್ರಧಾನಿಗಳು ಎಷ್ಟೆಷ್ಟು ಲಕ್ಷ ಲಕ್ಷ ಕೋಟಿ ದೊಡ್ಡ ಪ್ರಮಾಣದ ತೆರಿಗೆ ವಿನಾಯ್ತಿ ನೀಡಿದ್ದಾರೆ?. 2024ರ ಚುನಾವಣೆ ನಮ್ಮ ಮುಂದಿದೆ. ಈಗಿನಿಂದಲೇ ಜನಾಂದೋಲನ ಮಾಡಬೇಕಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಜನವಿರೋಧಿ ಕೃಷಿ ಕಾಯ್ದೆ ಮುಂತಾದವುಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಸರ್ಕಾರ ಇತ್ತ ಗಮನ ಹರಿಸಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಹೇಳುತ್ತಿರುವ ಮಾತನ್ನೇ ಕಾಂಗ್ರೆಸ್‌ಗೂ ಹೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಾಹಿತಿ ಪ್ರೊ.ರಹಮತ್ ತರಿಕೆರೆ ಮಾತನಾಡಿ, ರೈತರು ಘನತೆಯಿಂದ ಬದುಕಲಾರದ ಆರ್ಥಿಕ ನೀತಿಗಳಿಂದಾಗಿ ಆತ್ಮಹತ್ಯೆಗೆ ತುತ್ತಾಗುವಂತಾಗಿದೆ. ರೈತ ವಿರೋಧಿ ಕಾಯಿದೆಗಳನ್ನು ಪ್ರಶ್ನಿಸಿ ಪ್ರತಿಭಟನೆಗೆ ನಿರತರಾಗಿದ್ದ ರೈತರನ್ನು ತಾಯಿಯಂತೆ ಸಂತೈಸಬೇಕಾದ ಸರ್ಕಾರ ಅವರ ಮೇಲೆ ಜಲ ಫಿರಂಗಿ ಹಾರಿಸಿ ಅತ್ಯಂತ ಹೀನಾಯವಾಗಿ ನೋಡಿಕೊಂಡಿತು. ದೇಶದ್ರೋಹಿಗಳು ಎಂದು ಕರೆದರು ಎಂದು ಬೇಸರ ವ್ಯಕ್ತಪಡಿಸಿದರು. ಸಾಹಿತಿ ಕೆ.ನೀಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬಿಆರ್​ಎಸ್, ಕಾಂಗ್ರೆಸ್​ನಿಂದ ಜನತೆ ಮುಕ್ತಿ ಬಯಸಿದ್ದಾರೆ, ತೆಲಂಗಾಣದಲ್ಲಿ ಬಿಜೆಪಿ ಗೆಲ್ಲಲಿದೆ: ಪಿಎಂ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.