ETV Bharat / state

ರೈತರ ಜೊತೆ ಕಾರ್ಮಿಕರ ಬಗ್ಗೆಯೂ ನಾವು ಧ್ವನಿಯೆತ್ತಬೇಕು: ಮಲ್ಲಿಕಾರ್ಜುನ ಖರ್ಗೆ

author img

By

Published : Sep 27, 2020, 6:36 PM IST

Updated : Sep 27, 2020, 11:14 PM IST

ಕಾಂಗ್ರೆಸ್​ ನಾಯಕರ ಸಭೆ
ಕಾಂಗ್ರೆಸ್​ ನಾಯಕರ ಸಭೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್​ ನಾಯಕರ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕರ ಕಾಯ್ದೆ ಕಾರ್ಮಿಕರನ್ನ ಕಡೆಗಣನೆ ಮಾಡಿ ಕಂಪನಿ ಪರವಾಗಿದೆ. ಇದರ ಬಗ್ಗೆ ಹೋರಾಟ ಅನಿವಾರ್ಯವಾಗಬೇಕಿದೆ. ರೈತರ ಜೊತೆ ಲೇಬರ್ ಬಗ್ಗೆಯೂ ನಾವು ಧ್ವನಿಯೆತ್ತಬೇಕು ಎಂದಿದ್ದಾರೆ.

ಬೆಂಗಳೂರು: ನಾವೆಲ್ಲರೂ ಒಗ್ಗೂಡಿ ಪಕ್ಷ ಮುನ್ನಡೆಸಬೇಕಿದೆ. ಆಗ ಮಾತ್ರ ಪಕ್ಷದ ಬೆಳವಣಿಗೆ ಸಾಧ್ಯ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್​ ಸಭೆಯಲ್ಲಿ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿ, ಪ್ರಸ್ತುತ ಸರ್ಕಾರ ಎಪಿಎಂಸಿ, ಕಾರ್ಮಿಕ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಂತಹ ಅಸಮರ್ಪಕ ಕಾಯ್ದೆಗಳನ್ನ ತಂದಿದೆ. ಕಾರ್ಮಿಕರ ಕಾಯ್ದೆ ಕಾರ್ಮಿಕರನ್ನ ಕಡೆಗಣನೆ ಮಾಡಿ ಕಂಪನಿ ಪರವಾಗಿದೆ. ಇದರ ಬಗ್ಗೆ ಹೋರಾಟ ಅನಿವಾರ್ಯವಾಗಬೇಕಿದೆ. ರೈತರ ಜೊತೆ ಲೇಬರ್ ಬಗ್ಗೆಯೂ ನಾವು ಧ್ವನಿಯೆತ್ತಬೇಕು. ಶೇ.82 ರಷ್ಟು ಇರುವ ಸಣ್ಣ ರೈತರ ಪರವಾಗಿಯೂ ನಾವಿರಬೇಕು. ಇವರ ವಿರುದ್ಧವಾಗಿಯೇ ಸರ್ಕಾರ ಕಾಯ್ದೆಗಳನ್ನ ತಂದಿದೆ ಎಂದರು.

ಮೊದಲು ಕಾರ್ಮಿಕರು 8 ಗಂಟೆ ಕೆಲಸ ಮಾಡಬೇಕಿತ್ತು. ಆದರೆ ಈಗ 12 ಗಂಟೆ ಕೆಲಸದ ಅವಧಿ ತಂದಿದೆ. ಮಾಲೀಕರ ಪರವಾಗಿ ಕಾಯ್ದೆಗಳನ್ನ ತಂದಿದೆ. ಭೂ ಸುಧಾರಣಾ ಕಾಯ್ದೆ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು, ರೈತರ ಮೇಲೆ ವಿಶ್ವಾಸವಿದೆ ಅಂತ ಬಿಜೆಪಿಯವರು ಹೇಳ್ತಾರೆ. ಆದರೆ ಈಗ ರೈತ ವಿರೋಧಿ ಕಾಯ್ದೆಯನ್ನ ತಂದಿದ್ದಾರೆ. ಹೀಗೆ ಆದ್ರೆ ಶಿವಮೊಗ್ಗದ ಹೋರಾಟ ಮರುಕಳಿಸುತ್ತದೆ ಎಂದು ಕಾಗೋಡು ಸತ್ಯಾಗ್ರಹವನ್ನ‌ ನೆನಪಿಸಿಕೊಂಡರು.

ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಭೆ

ಕಾಂಗ್ರೆಸ್ ಬಲಗೊಳ್ಳಬೇಕಿದೆ:

ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಮಾತನಾಡಿ, ಕೋವಿಡ್ ಮನುಷ್ಯನಿಗೆ ಆರು ತಿಂಗಳ ಹಿಂದೆ ಬಂದಿದೆ. ಆದ್ರೆ ದೇಶಕ್ಕೆ ಆರು ವರ್ಷಗಳ ಹಿಂದೆ ಕೋವಿಡ್ ಬಂದಿದೆ. ಡಿ.ಕೆ. ಶಿವಕುಮಾರ್ ಅವರನ್ನು ಅಂಭಿನಂದಿಸುತ್ತೇನೆ. ಕೊರೊನಾ ಸಂದರ್ಭದಲ್ಲಿ ತುಂಬಾ ಓಡಾಡಿ ಕೆಲಸ ಮಾಡುತ್ತಿದ್ದಾರೆ. ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಬಲ ಪಡಿಸಿದ್ರೆ,ನಾವು ಅಧಿಕಾರಕ್ಕೆ ಬರುತ್ತೇವೆ. ಡಿಸೆಂಬರ್​​ನಲ್ಲಿ ರಾಜಕೀಯದಲ್ಲಿ ಬದಲಾವಣೆ ಆಗುತ್ತೆ ಎಂದರು.

ಜನವಿರೋಧಿ ನೀತಿ:

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ರಾಜ್ಯ, ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನ ತಂದಿದೆ. ಎಪಿಎಂಸಿ, ಭೂ ಸುಧಾರಣೆ ಕಾಯ್ದೆ ತಂದಿದೆ. ಬೆಂಗಳೂರು ಸುತ್ತಮುತ್ತ ಭೂಮಿ ಕೊಳ್ಳೆಗೆ ಮುಂದಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅವಕಾಶಮಾಡಿಕೊಟ್ಟಿದೆ. ಕಾರ್ಮಿಕ ಕಾಯ್ದೆಯನ್ನ ಕಾರ್ಮಿಕರ ಕತ್ತು ಹಿಸುಕಿದೆ. ಉದ್ಯಮಿಗಳ ಪರವಾಗಿ ನಿಂತಿದೆ. ಈ ಜನವಿರೋಧಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಧ್ವನಿಯೆತ್ತಿದೆ. ರೈತರು, ಜನಸಾಮಾನ್ಯರ ಪರ ಪಕ್ಷ ನಿಲ್ಲಲಿದೆ. ಬರುವ ದಿನಗಳಲ್ಲಿ ಸೋನಿಯಾ, ರಾಹುಲ್ ಕೈಬಲಪಡಿಸುತ್ತೇವೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತೇವೆ ಎಂದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಬಿಜೆಪಿ ಅವರು ಹೇಳಿದ್ರು, ಕಾಂಗ್ರೆಸ್​ನಲ್ಲಿ ಅತಿರಥ ಮಹಾರಥರು ಇದ್ದಾರೆ ಅಂತ. ಹೌದು, ನಿಜ ನಮ್ಮ ಕಾಂಗ್ರೆಸ್​​ನಲ್ಲಿ ಅತಿರಥ ಮಹಾರಥರು ಇದ್ದಾರೆ. ಇವರಿಗೆ ಕಣ್ಣು , ಕಿವಿ , ಹೃದಯ ಇದೆ, ಆದರೆ ಬಿಜೆಪಿ ಅವರಿಗೆ ಇವುಗಳು ಏನೂ ಇಲ್ಲ ಎಂದರು.

ಸಭೆಯಲ್ಲಿ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಎಸ್​​. ಆರ್ ಪಾಟೀಲ್, ಶಾಸಕರಾದ ಅಂಜಲಿ ನಿಂಬಾಳ್ಕರ್, ಸೌಮ್ಯ ರೆಡ್ಡಿ ಮತ್ತಿತರರು ಮಾತನಾಡಿದರು. ಸಭೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ಖಂಡಿಸುವ ಹಾಗೂ ನಿಕಟಪೂರ್ವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಅಭಿನಂದಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ಸಮಾರಂಭವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಉದ್ಘಾಟಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಭೆ ಅಧ್ಯಕ್ಷತೆ ವಹಿಸಿದ್ದರು.

Last Updated :Sep 27, 2020, 11:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.