ETV Bharat / state

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಬಿ ಖಾತ ನೀಡುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆ: ಸಚಿವ ಭೈರತಿ ಸುರೇಶ್

author img

By

Published : Jul 14, 2023, 3:33 PM IST

ರಾಜ್ಯದ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ ಖಾತೆಗೆ ಅವಕಾಶ ಕಲ್ಪಿಸಿದರೆ ಸರ್ಕಾರಕ್ಕೂ ಎರಡು ಸಾವಿರ ಆದಾಯ ಬರಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್​ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಸಚಿವ ಭೈರತಿ ಸುರೇಶ್
ಸಚಿವ ಭೈರತಿ ಸುರೇಶ್

ಸಚಿವ ಭೈರತಿ ಸುರೇಶ್

ಬೆಂಗಳೂರು: ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಬಿ ಖಾತ ನೀಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿಧಾನಸಭೆಯಲ್ಲಿ ತಿಳಿಸಿದರು. ಇಂದು ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಜಿ. ಡಿ ಹರೀಶ್‍ಗೌಡ ಅವರ ಪ್ರಶ್ನೆಗೆ ಪೌರಾಡಳಿತ ಸಚಿವ ರಹಿಂಖಾನ್ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಸುರೇಶ್, ಬೆಂಗಳೂರಿನಲ್ಲಿ ಭೂ ಪರಿವರ್ತನೆಯಾದ ನಿವೇಶನ ಮತ್ತು ಕಟ್ಟಡಗಳಿಗೆ ಎ ಖಾತೆ, ಭೂ ಪರಿವರ್ತನೆಯಾಗದ ಸ್ವತ್ತುಗಳಿಗೆ ಬಿ ಖಾತೆ ನೀಡಲಾಗುತ್ತಿದೆ. ಅದೇ ರೀತಿ ರಾಜ್ಯದ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ ಖಾತೆಗೆ ಅವಕಾಶ ಕಲ್ಪಿಸಿದರೆ ಸರ್ಕಾರಕ್ಕೂ ಎರಡು ಸಾವಿರ ಕೋಟಿ ಆದಾಯ ಬರಲಿದೆ ಎಂದರು.

ಈ ಸಂಬಂಧ ಪೌರಾಡಳಿತ ಸಚಿವರ ಜತೆ ಚರ್ಚಿಸಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಖಾತೆ ಬಿಕ್ಕಟ್ಟು ಬಹಳಷ್ಟು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವುದರಿಂದ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿದರೂ ಆದಾಯ ಬರುತ್ತಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಉತ್ತರ ನೀಡಿದ ಪೌರಾಡಳಿತ ಸಚಿವ ರಹಿಂಖಾನ್ ಅವರು, ಹುಣಸೂರು ನಗರಸಭೆ ವ್ಯಾಪ್ತಿಯಲ್ಲಿ 81 ಅನಧಿಕೃತ ಬಡಾವಣೆಗಳು ನಿರ್ಮಾಣಗೊಂಡಿವೆ. ಗ್ರಾಮಾಂತರ, ನಗರ ಯೋಜನಾ ಕಚೇರಿಯಿಂದ ಅನುಮೋದನೆಗೊಂಡ ಬಡಾವಣೆ ಗ್ರಾಮಠಾಣಾ ನಿವೇಶನಗಳಿಗೆ ನಮೂನೆ -3 ಅನ್ನು ನೀಡಲಾಗುತ್ತಿದೆ. ಯೋಜನಾ ಇಲಾಖೆಯಿಂದ ಅನುಮೋದನೆಯಾಗದ ಬಡಾವಣೆಗಳಿಗೆ 2018ರ ಜನವರಿ 5 ರಿಂದ ನಮೂನೆ-3 ಅನ್ನು ನೀಡಲು ಅವಕಾಶವಿಲ್ಲ ಎಂದು ಮಾಹಿತಿ ನೀಡಿದರು.

ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳಿಗೆ ಎರಡು ಪಟ್ಟು ತೆರಿಗೆ ಶುಲ್ಕ ಪಾವತಿಸಿಕೊಂಡು ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಇತರ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ನಮೂನೆ -3 ನೀಡುವ ವಿಚಾರ ಲೋಕಾಯುಕ್ತದಲ್ಲಿ ಕೇಸು ದಾಖಲಾಗಿದ್ದು, ಹೊಸದಾಗಿ ಕೊಡಬಾರದು ಹಾಗೂ ಈಗಾಗಲೇ ಕೊಟ್ಟಿರುವುದನ್ನು ರದ್ದುಪಡಿಸಬೇಕು ಎಂಬ ನಿರ್ದೇಶನವಿದೆ. ಅಕ್ರಮ - ಸಕ್ರಮ ಯೋಜನೆಗೂ ನ್ಯಾಯಾಲಯದ ತಡೆಯಾಜ್ಞೆ ಇದೆ. ಇದು ಒಂದು ಕ್ಷೇತ್ರಕ್ಕೆ ಸೀಮಿತವಿಲ್ಲ. ನನ್ನ ಕ್ಷೇತ್ರವೂ ಸೇರಿದಂತೆ ಎಲ್ಲ ಕಡೆ ಸಮಸ್ಯೆ ಇದೆ. ಸಂಪುಟ ಉಪಸಮಿತಿ ರಚಿಸಿ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗುವುದು ಎಂದರು.

ಒಂದು ಹಂತದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು ಟಿ ಖಾದರ್, ರಿಯಲ್ ಎಸ್ಟೇಟ್ ಏಜೆಂಟರಿಂದಾಗಿ ಇಂತಹ ಸಮಸ್ಯೆಗಳು ಸೃಷ್ಟಿಯಾಗಿವೆ. ಬಹಳ ವರ್ಷದಿಂದ ಪರಿಹಾರವಾಗದೇ ಉಳಿದಿವೆ ಎಂದು ಹೇಳಿದರು. ನಂತರ ಹರೀಶ್‍ ಗೌಡ ಮಾತನಾಡಿ, ನಮೂನೆ - 3 ಅನ್ನು ಹಳೆಖಾತೆದಾರರಿಗೆ ನೀಡಬೇಕು. ಅಲ್ಲದೇ ಹುಣಸೂರು ಪಟ್ಟಣದಲ್ಲಿ ಮಳೆ ನೀರಿಗೆ ರಸ್ತೆಯೆಲ್ಲ ಕೊಚ್ಚಿ ಹೋಗಿವೆ. ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯ ಶಾಸಕ ಸುನೀಲ್‍ಕುಮಾರ್, ಇದೊಂದು ಗಂಭೀರ ವಿಚಾರವಾಗಿದ್ದು, ರಾಜ್ಯಾದ್ಯಂತ ಸಮಸ್ಯೆ ಇದೆ. ಅರ್ಧ ಗಂಟೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದರು. ಕಾಂಗ್ರೆಸ್‍ನ ಎನ್. ಎಚ್. ಕೋನರೆಡ್ಡಿ, ತನ್ವೀರ್ ಸೇಠ್ , ಷಡಕ್ಷರಿ ಸೇರಿದಂತೆ ಹಲವು ಸದಸ್ಯರು ಸಮಸ್ಯೆಗಳ ಕುರಿತು ಮಾತನಾಡಿದರು.

ತೂಕದ ಯಂತ್ರ ಹಾಕುವ ಚಿಂತನೆ : ಸಕ್ಕರೆ ಕಾರ್ಖಾನೆಗಳಿಂದ ರೈತರ ಕಬ್ಬಿನ ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತಮ್ಮ ಇಲಾಖೆಯಿಂದ ತೂಕದ ಯಂತ್ರ ಹಾಕುವ ಚಿಂತನೆ ಇದೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ್ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಭರಮಗೌಡ ಅಲಗೌಡ ಕಾಗೆ ಅವರ ಪ್ರಶ್ನೆಗೆ ಉತ್ತರಿಸಿದರು.

ರೈತರಿಗೆ ವಂಚನೆಯಾಗದಂತೆ ಕ್ರಮ: ರೈತರ ಕಬ್ಬನ್ನು ತೂಕ ಮಾಡುವಾಗ ವ್ಯತ್ಯಾಸ ಮಾಡಲಾಗುತ್ತಿದೆ ಎಂಬ ಸಾಕಷ್ಟು ದೂರುಗಳು ಇವೆ. ಆದರೆ ನಿರ್ದಿಷ್ಟವಾಗಿ ಯಾರೂ ದೂರು ಕೊಟ್ಟಿಲ್ಲ. ಆದರೂ ನಮ್ಮ ಇಲಾಖೆಯಿಂದ ತೂಕದ ಯಂತ್ರ ಅಳವಡಿಸಿ ರೈತರಿಗೆ ವಂಚನೆಯಾಗದಂತೆ ಕ್ರಮ ಕೈಗೊಳ್ಳುವ ಉದ್ದೇಶವಿದೆ ಎಂದರು.

ಅಥಣಿ ಸಕ್ಕರೆ ಕಾರ್ಖಾನೆಗೆ ನೋಟಿಸ್: ಕಾಗವಾಡ ತಾಲ್ಲೂಕಿನಲ್ಲಿ ಶಿರಗುಪ್ಪಿ, ಉಗಾರ್ ಹಾಗೂ ಅಥಣಿ ಶುಗರ್ ಕಾರ್ಖಾನೆಗಳಿವೆ. ಉಗಾರ್ ಸಕ್ಕರೆ ಕಾರ್ಖಾನೆ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಕೇಸು ದಾಖಲಿಸಿದೆ. ಆ ಕಾರ್ಖಾನೆ ಮಾಲಿನ್ಯ ಉಂಟು ಮಾಡಿರುವುದು ದೃಢಪಟ್ಟರೆ ಕಾನೂನು ಪ್ರಕಾರ ಶಿಕ್ಷೆ ಹಾಗೂ ದಂಡವೂ ವಿಧಿಸಲಾಗುತ್ತಿದೆ. ಈಗಾಗಲೇ ಅಥಣಿ ಸಕ್ಕರೆ ಕಾರ್ಖಾನೆಗೆ ನೋಟಿಸ್ ನೀಡಲಾಗಿದೆ. ಕಾರ್ಖಾನೆ ಮಾಲೀಕರ ಬಗ್ಗೆ ಸಾಕಷ್ಟು ದೂರುಗಳಿವೆ.

ಕ್ರಿಮಿನಲ್ ಕೇಸು ದಾಖಲಿಸಲಾಗುವುದು: ಸಕ್ಕರೆ ಕಾರ್ಖಾನೆಗಳಿಂದ ಜಲಮಾಲಿನ್ಯವಾಗುತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜತೆ ಚರ್ಚಿಸಲಾಗಿದ್ದು, ನಾಳೆಯೇ ಸ್ಥಳ ಪರಿಶೀಲನೆ ಮಾಡಿ ಕ್ರಿಮಿನಲ್ ಕೇಸು ದಾಖಲಿಸಲಾಗುವುದು. ಮಂಡಳಿಯಲ್ಲಿ ವಿಚಕ್ಷಣಾ ದಳ ಇಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಜತೆಗೂಡಿ ಪ್ರತ್ಯೇಕ ದಳವೊಂದನ್ನು ಸ್ಥಾಪಿಸಬೇಕಾಗುತ್ತದೆ. ಈಗಾಗಲೇ ರಾಜ್ಯದಲ್ಲಿ 72 ಸಕ್ಕರೆ ಕಾರ್ಖಾನೆಗಳಿವೆ. ಹೊಸದಾಗಿ 10 ರಿಂದ 15 ಕಾರ್ಖಾನೆಗಳು ಪ್ರಾರಂಭವಾಗಲಿವೆ ಎಂದು ಹೇಳಿದರು.

ಮಧ್ಯ ಪ್ರವೇಶಿಸಿದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಕ್ಕರೆ ಕಾರ್ಖಾನೆಗಳಲ್ಲಿ ಇಲಾಖೆಯಿಂದ ತೂಕದ ಯಂತ್ರ ಅಳವಡಿಸುವ ಚಿಂತನೆಗೆ ಸ್ವಾಗತಾರ್ಹ. ಸಾಕಷ್ಟು ಸಮಸ್ಯೆಗಳಿದ್ದು, ಚರ್ಚಿಸಲು ಅರ್ಧಗಂಟೆ ಕಾಲಾವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ಕುಡಿಯುವ ನೀರು ಕಲುಷಿತವಾಗಿದೆ: ಇದಕ್ಕೂ ಮುನ್ನ ಮಾತನಾಡಿದ ಭರಮಗೌಡ ಕಾಗೇ ಅವರು, ಸಕ್ಕರೆ ಕಾರ್ಖಾನೆಗಳಿಂದ ಕಲುಷಿತ ನೀರನ್ನು ಹಳ್ಳ, ನದಿ, ಬಾವಿಗಳಿಗೆ ಬಿಡುವುದರಿಂದ ಕುಡಿಯುವ ನೀರು ಕಲುಷಿತವಾಗಿದೆ. ಸಂಸ್ಕರಿಸಿ ಸಕ್ಕರೆ ಕಾರ್ಖಾನೆಗಳೇ ಮರುಬಳಕೆ ಮಾಡಬೇಕು. ಖಾಸಗಿ ಕಾರ್ಖಾನೆಗಳು ಕಬ್ಬು ತೂಕ ಮಾಡುವುದರಲ್ಲಿ ವಂಚನೆ ಮಾಡುತ್ತಿವೆ ಎಂದು ಆರೋಪಿಸಿದರು.

ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಅನಧಿಕೃತ ಹೋಂ ಸ್ಟೇ ನಡೆಸಲು ಅವಕಾಶವಿಲ್ಲ: ರೆಡ್ಡಿ ಪ್ರಶ್ನೆಗೆ ಸಚಿವ ಭೈರತಿ ಸುರೇಶ್ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.