ETV Bharat / state

ನಿರುದ್ಯೋಗ, ಕಡಿಮೆ ಸಂಪಾದನೆ ಜೀವನಾಂಶ ನೀಡದಿರಲು ಕಾರಣವಲ್ಲ: ಹೈಕೋರ್ಟ್ ಮಹತ್ವದ ತೀರ್ಪು

author img

By

Published : Dec 24, 2020, 8:05 PM IST

Updated : Dec 24, 2020, 8:30 PM IST

ಮಗನಿಗೆ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಮಂಗಳೂರಿನ ಸುನಿಲ್ ಎಂಬುವವರು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನಿರುದ್ಯೋಗಿಯಾಗಿದ್ದೇನೆ ಅಥವಾ ಸಂಪಾದನೆ ಕಡಿಮೆಯಾಗಿದೆ ಎಂಬ ವಿಚಾರಗಳು ಪತ್ನಿ ಹಾಗೂ ಮಕ್ಕಳಿಗೆ ನೀಡಬೇಕಾದ ಜೀವನಾಂಶ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಕಾರಣಗಳಾಗಲಾರವು ಎಂದು ಆದೇಶ ನೀಡಿದೆ.

unemployment-low-earning-not-cause-for-alimony-high-court-ruling
ನಿರುದ್ಯೋಗ, ಕಡಿಮೆ ಸಂಪಾದನೆ ಜೀವನಾಂಶ ನೀಡದಿರಲು ಕಾರಣವಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ನಿರುದ್ಯೋಗಿಯಾಗಿದ್ದೇನೆ ಅಥವಾ ಸಂಪಾದನೆ ಕಡಿಮೆಯಾಗಿದೆ ಎಂಬ ವಿಚಾರಗಳು ಪತ್ನಿ ಹಾಗೂ ಮಕ್ಕಳಿಗೆ ನೀಡಬೇಕಾದ ಜೀವನಾಂಶ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಕಾರಣಗಳಾಗಲಾರವು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮಗನಿಗೆ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಮಂಗಳೂರಿನ ಸುನಿಲ್ ಎಂಬುವರು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಪೀಠ ಈ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ: ಮಂಗಳೂರಿನ ಸುನಿಲ್ ಹಾಗೂ ಆತನ ಪತ್ನಿ ಪರಸ್ಪರ ಒಪ್ಪಿಗೆ ಮೇರೆಗೆ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(ಬಿ) ಅಡಿ 2011ರ ಮಾರ್ಚ್ 7ರಂದು ವಿಚ್ಛೇದನ ಪಡೆದುಕೊಂಡಿದ್ದರು. ಅದರಂತೆ ದಂಪತಿಯ ಅಪ್ರಾಪ್ತ ಪುತ್ರನ ಪೋಷಣೆ ಮಾಡುವ ಜವಾಬ್ದಾರಿ ತಾಯಿಗೆ ಲಭ್ಯವಾಗಿತ್ತು. ಆದರೆ ಸುನಿಲ್ ತನ್ನ ಅಪ್ರಾಪ್ತ ಪುತ್ರನ ಪೋಷಣೆ ಹಾಗೂ ವಿದ್ಯಾಭ್ಯಾಸಕ್ಕೆ ಯಾವುದೇ ನೆರವು ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಲಕ ತನ್ನ ತಂದೆಯಿಂದ ಜೀವನಾಂಶ ಕೊಡಿಸುವಂತೆ ಕೋರಿ ಮಂಗಳೂರು ಕೌಟುಂಬಿಕ ನ್ಯಾಯಾಲಯಕ್ಕೆ ಸಿಆರ್ಪಿಸಿ ಸೆಕ್ಷನ್ 125ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ.

ಅರ್ಜಿ ವಿಚಾರಣೆ ವೇಳೆ ಬಾಲಕನ ತಾಯಿ, ವಿಚ್ಛೇದಿತ ಪತಿ ಸುನಿಲ್ ಕಂಪನಿಯೊಂದರಲ್ಲಿ ಗುಮಾಸ್ತನಾಗಿದ್ದು, ಪ್ರತಿ ತಿಂಗಳೂ 25 ಸಾವಿರ ರೂ. ಸಂಬಳ ಪಡೆಯುತ್ತಿರುವ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸಿದ್ದರು. ಹಾಗೆಯೇ ಮಗನ ಪೋಷಣೆ ಹಾಗೂ ವಿದ್ಯಾಭ್ಯಾಸಕ್ಕೆ ನೆರವು ನೀಡದಿರುವುದನ್ನು ಸಾಬೀತು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ಬಾಲಕ ಪ್ರೌಢಾವಸ್ಥೆಗೆ ತಲುಪುವವರೆಗೆ ಆತನ ವಿದ್ಯಾಭ್ಯಾಸ ಹಾಗೂ ಪೋಷಣೆಗೆ ಪ್ರತಿ ತಿಂಗಳು 3,500 ರೂಪಾಯಿ ನೀಡುವಂತೆ 2014ರ ಅಕ್ಟೋಬರ್ 1ರಂದು ಆದೇಶಿಸಿತ್ತು.

ಕೂಲಿ ಕಾರ್ಮಿಕನೆಂದು ಹೇಳಿಕೊಂಡಿದ್ದ ತಂದೆ: ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ತನ್ನ ಮಗನಿಗೆ ಜೀವನಾಂಶ ನೀಡಲು ನಿರಾಕರಿಸಿದ್ದ ತಂದೆ ಸುನಿಲ್, ಆದೇಶ ರದ್ದು ಕೋರಿ ಹೈಕೋರ್ಟ್​ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದ. ತಾನು ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಆರ್ಥಿಕವಾಗಿ ಚೆನ್ನಾಗಿಲ್ಲ. ಹಾಗೆಯೇ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಕೊಂಡಿದ್ದ ವೇಳೆಯೂ ಪತ್ನಿ ಯಾವುದೇ ಜೀವನಾಂಶ ಕೇಳಿರಲಿಲ್ಲ. ಹೀಗಾಗಿ ಪುತ್ರನಿಗೆ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದ್ದ.

ಪೋಷಕರಾಗುವುದು ದೊಡ್ಡ ಜವಾಬ್ದಾರಿ: ವಾದ ಒಪ್ಪಲು ನಿರಾಕರಿಸಿರುವ ಹೈಕೋರ್ಟ್, ಜವಾಬ್ದಾರಿಯುತ ಪೋಷಕರಾಗಿ ತಮ್ಮ ಮಕ್ಕಳನ್ನು ಎಲ್ಲಾ ರೀತಿಯಲ್ಲೂ ಉತ್ತಮವಾಗಿ ಬೆಳೆಸುವುದು ಹಾಗೂ ಪೋಷಿಸುವುದು ಜಗತ್ತಿನ ಅತ್ಯಂತ ದೊಡ್ಡ ಮತ್ತು ಸವಾಲಿನ ಕೆಲಸ. ಪೋಷಕರು ಮತ್ತು ಮಗುವಿನ ನಡುವಿನ ಸಂಬಂಧ ಅನನ್ಯವಾದದ್ದು. ಈ ಸಂಬಂಧವನ್ನು ಅತ್ಯುತ್ತಮವಾಗಿ ನಿಭಾಯಿಸಿದಾಗ ಮಾತ್ರ ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ ಹಾಗೂ ಕೊನೆವರೆಗೂ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಓದಿ: ವಾಹನ ಚಾಲಕ, ಮಾಲೀಕರ ಗಮನಕ್ಕೆ! ಹೊಸ ವರ್ಷದಿಂದ ಫಾಸ್ಟ್​ಟ್ಯಾಗ್​ ಕಡ್ಡಾಯ: ತಪ್ಪಿದ್ರೆ ದುಪ್ಪಟ್ಟು ಟೋಲ್

ಜೀವನಾಂಶ ನೀಡುವ ಜವಾಬ್ದಾರಿ: ಯಾವುದೇ ಓರ್ವ ಹಿಂದು ವ್ಯಕ್ತಿ ತನ್ನ ಪತ್ನಿ, ಅಪ್ರಾಪ್ತ ಮಕ್ಕಳು, ವಿವಾಹವಾಗದಿರುವ ಪುತ್ರಿಯರು, ವೃದ್ಧ ಪೋಷಕರನ್ನು ಪೋಷಿಸುವ ಜವಾಬ್ದಾರಿ ಹೊತ್ತಿರುತ್ತಾನೆ. ಈ ಕಾನೂನಾತ್ಮಕ ಜವಾಬ್ಜಾರಿಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ವ್ಯಕ್ತಿಗೆ ಹಣ-ಆಸ್ತಿ ಇದೆ ಅಥವಾ ಇಲ್ಲ ಎಂಬ ವಿಚಾರಗಳು ಕೂಡ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಕಾರಣವಾಗುವುದಿಲ್ಲ. ಆದರಂತೆ ಅರ್ಜಿದಾರ ಸುನಿಲ್ ತಾನು ಕೂಲಿ ಕಾರ್ಮಿಕ, ಉತ್ತಮ ಸಂಪಾದನೆಯಿಲ್ಲ ಎಂಬ ಕಾರಣಗಳನ್ನು ನೀಡಿ ತನ್ನ ಮಗನಿಗೆ ಜೀವನಾಂಶ ನೀಡುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೌಂಟುಬಿಕ ನ್ಯಾಯಾಲಯ ನೀಡಿರುವ ಆದೇಶದಂತೆ ಸುನಿಲ್ ತನ್ನ ಅಪ್ರಾಪ್ತ ಪುತ್ರ ವಯಸ್ಕನಾಗುವವರೆಗೆ ಜೀವನಾಂಶ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

Last Updated :Dec 24, 2020, 8:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.