ETV Bharat / state

ಬೆಂಗಳೂರಲ್ಲಿ ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ: ಮೈಮೇಲಿದ್ದ ಚಿನ್ನ, ಫೋನ್ ಪೇಯಿಂದ ಹಣ ಎಗರಿಸಿ ಎಸ್ಕೇಪ್

author img

By

Published : Jul 14, 2023, 10:38 AM IST

ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿದ ದರೋಡೆ
ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿದ ದರೋಡೆ

ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿದ ದರೋಡೆಕೋರರು, ಚೂರಿ ತೋರಿಸಿ ಹಣ, ಚಿನ್ನದ ಉಂಗುರ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಪ್ರಕರಣದ ಬಗ್ಗೆ ಡಿಸಿಪಿ ಹೇಳಿಕೆ

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಯುವಕರ ಮನೆಗೆ ನುಗ್ಗಿದ ದರೋಡೆಕೋರರು, ಫೋನ್ ಪೇ ಮೂಲಕ 13 ಸಾವಿರ ರೂ. ಹಾಕಿಸಿಕೊಂಡು ಪರಾರಿಯಾಗಿರುವ ಘಟನೆ ವಿದ್ಯಾರಣ್ಯಪುರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡ್ರಗ್ಸ್ ಸೇವಿಸುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿ ಪರಿಶೀಲನೆ ನೆಪದಲ್ಲಿ ಮನೆಯೊಳಗೆ ಬಂದು, ಬಳಿಕ ಹಣ ಮತ್ತು ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ.

ವಿದ್ಯಾರಣ್ಯಪುರದ ರಾಮಚಂದ್ರಾಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ನಾಲ್ವರು ಯುವಕರು ವಾಸಿಸುತ್ತಿದ್ದರು. ಈ ಪೈಕಿ ಮೂವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಓರ್ವ ಯುವಕ ವ್ಯಾಸಂಗ ಮಾಡುತ್ತಿದ್ದ. ಬುಧವಾರ ಬೆಳಗ್ಗೆ ನಾಲ್ವರು ಅಪರಿಚಿತರು ಇವರ ಮನೆಯ ಬಾಗಿಲು ತಟ್ಟಿದ್ದರು. ಬಾಗಿಲು ತೆರೆಯುತ್ತಿದ್ದಂತೆ ಒಳಗೆ ನುಗ್ಗಿದ ಆರೋಪಿಗಳು ತಮ್ಮನ್ನು ಪೊಲೀಸರೆಂದು ಪರಿಚಯಿಸಿಕೊಂಡಿದ್ದರು. ನಿಮ್ಮ ರೂಂನಲ್ಲಿ ನೀವು ಡ್ರಗ್ಸ್ ಸೇವಿಸುವ ಬಗ್ಗೆ ನಮಗೆ ಮಾಹಿತಿ ಬಂದಿದೆ ಎಂದು ಹೇಳಿ ಮನೆಯೆಲ್ಲಾ ಪರಿಶೀಲಿಸಿದ್ದರು. ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಸಿಗದಿದ್ದಾಗ ಯುವಕರಿಗೆ ಚೂರಿ ತೋರಿಸಿದ ಅಪರಿಚಿತರು, ಅವರ ಕೈಯಲ್ಲಿದ್ದ ಉಂಗುರ, ಕಿವಿಯಲಿದ್ದ ಇಯರ್‌ರಿಂಗ್ ಕಸಿದುಕೊಂಡಿದ್ದರು.

ನಂತರ ಫೋನ್ ಪೇನಲ್ಲಿ 13 ಸಾವಿರ ರೂ. ಅನ್ನು ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ಪರಾರಿಯಾಗಿದ್ದಾರೆ. ಇದೀಗ ದರೋಡೆಗೊಳಗಾದ ಯುವಕರು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ ಆರೋಪಿಗಳಿಗೆ ಶೋಧ ನಡೆಸುತ್ತಿರುವುದಾಗಿ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ಮಂಡ್ಯದಲ್ಲೂ ಇಂತಹದ್ದೇ ಘಟನೆ: ಕೆಲದಿನಗಳ ಹಿಂದೆ ಮಂಡ್ಯದ ಜಿಲ್ಲೆಯ ಮದ್ದೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣವೊಂದು ಜರುಗಿತ್ತು. ಮಡಿಕೇರಿ ಮೂಲದ ಮುತ್ತಪ್ಪ ಎಂಬ ಯುವಕ ಬೆಂಗಳೂರಿನಿಂದ ಮಡಿಕೇರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಮದ್ದೂರಿನ ಐಶ್ವರ್ಯ ಕಾನ್ವೆಂಟ್ ಬಳಿ ಕೆಲಹೊತ್ತು ವಿಶ್ರಾಂತಿ ಪಡೆಯಲು ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದರು. ಈ ವೇಳೆ ಅಲ್ಲಿಗೆ ಬಂದಂತಹ ಮೂವರು ದರೋಡರಕೋರರು ಕುತ್ತಿಗೆ ಬಳಿ ಮಾರಕಾಸ್ತ್ರಗಳನ್ನು ಇಟ್ಟು ಅಂದಾಜು 3.50 ಲಕ್ಷ ರೂ ಮೌಲ್ಯದ 65 ಗ್ರಾಂ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದರು. ಮುತ್ತಪ್ಪ ಅವರು ತಮ್ಮ ಅನಾರೋಗ್ಯದ ಕಾರಣದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡು ತಮ್ಮ ಇನೋವಾ ಕ್ರಿಸ್ಟಾ ಕಾರಿನಲ್ಲಿ ರಾತ್ರಿ 11.30 ರ ವೇಳೆಗೆ ಬೆಂಗಳೂರಿನಿಂದ ಹೊರಟಿದ್ದರು.

ಮದ್ದೂರಿನ ಐಶ್ವರ್ಯ ಕಾನ್ವೆಂಟ್ ಬಳಿಗೆ ಬರುತ್ತಿದ್ದಂತೆ ತಲೆಸುತ್ತುವಿಕೆ ಆದಂತಾಗಿತ್ತ. ತಕ್ಷಣವೇ ಕಾರನ್ನು ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿ ಕೆಲ ಕಾಲ ವಿಶ್ರಾಂತಿ ಪಡೆಯಲು ಮುಂದಾಗಿದ್ದರು. ಸ್ಥಳಕ್ಕೆ ಬಂದ ಮೂವರು ದುಷ್ಕರ್ಮಿಗಳು ನಾವು ಪೋಲೀಸ್ ಸಿಬ್ಬಂದಿಗಳು ನೀವು ಕುಡಿದು ಮಲಗಿದ್ದೀರಾ ತಪಾಸಣೆ ಮಾಡಬೇಕೆಂದು ಬಲವಂತವಾಗಿ ಕಾರಿನ ಬಾಗಿಲನ್ನು ತೆಗೆಸಿ ದರೋಡೆ ನಡೆಸಿ ಪರಾರಿಯಾಗಿದ್ದರು.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಚ್ಚು ಬೀಸಿದ ಪ್ರಕರಣ: ಆರೋಪಿಗಳು ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.