ETV Bharat / state

ಕರ್ನಾಟಕ ಮತ್ತು ಆಂಧ್ರ ಗಡಿಯ 2 ಕಿ.ಮೀ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಲು ಹೋರಾಟ

author img

By

Published : Sep 4, 2022, 3:24 PM IST

ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಭಾಗದ 2 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಬೇಕೆಂದು ಸುಪ್ರೀಂಕೋರ್ಟ್​ ನಲ್ಲಿ ಹೋರಾಟ ಮಾಡಲಾಗುವುದು ಎಂದು ಸಾಮಾಜಿಕ ಹೋರಾಟಗಾರರಾದ ಎಸ್​ ಆರ್ ಹೀರೆಮಠ್ ಹೇಳಿದ್ದಾರೆ.

sr-hiremath-urges-to-ban-mining-around-2-km-of-karnataka-andhra-border
ಕರ್ನಾಟಕ ಮತ್ತು ಆಂಧ್ರ ಗಡಿಯ 2 ಕಿಮಿ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಲು ಹೋರಾಟ

ಬೆಂಗಳೂರು : ಹೇರಳವಾದ ಗಣಿಸಂಪತ್ತು ಹೊಂದಿರುವ ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಭಾಗದ ಎರಡು ಕಿಲೋಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಿ " ನೋ ಮೈನಿಂಗ್ ಜೋನ್ " ಎಂದು ಘೋಷಣೆ ಮಾಡುವ ಅವಶ್ಯಕತೆಯಿದೆ ಎಂದು ಸಾಮಾಜಿಕ ಹೋರಾಟಗಾರ, ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ್ ತಿಳಿಸಿದ್ದಾರೆ.

ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳನ್ನು ತಡೆಯಲು, ಎರಡೂ ರಾಜ್ಯಗಳ ಗಡಿಭಾಗದಿಂದ 2 ಕಿಲೋಮೀಟರ್ ಸುತ್ತಳತೆಯ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಆದೇಶಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಎಸ್ ಆರ್ ಹಿರೇಮಠ್ ತಿಳಿಸಿದ್ದಾರೆ.

ಆಂಧ್ರ ಸರ್ಕಾರದಿಂದ ಗಣಿಗಾರಿಕೆಗೆ ಅಸ್ತು : ಆಂಧ್ರಪ್ರದೇಶ ಸರ್ಕಾರವು ತನಗೆ ಸೇರಿದ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ನ್ನು ನೀಡಿದೆ. ಇದರಿಂದ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ಮತ್ತೆ ಆರಂಭಗೊಳ್ಳುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರು ತಮ್ಮ ರಾಜ್ಯದಲ್ಲಿ ಗಣಿಗಾರಿಕೆ ನಡೆಸಲು ಗಣಿದೊರೆ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಹಲವರಿಗೆ ನಿರಪೇಕ್ಷಣಾ ಪತ್ರ ನೀಡಿರುವುದರಿಂದ ಮತ್ತೆ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ತಲೆಯೆತ್ತಲಿವೆ. ಇದಕ್ಕೆ ಕಡಿವಾಣ ಹಾಕಲು ಎರಡೂ ರಾಜ್ಯಗಳ ಗಡಿ ಭಾಗದ ನಿರ್ದಿಷ್ಟ ಪ್ರದೇಶವನ್ನು ಗಣಿಗಾರಿಕೆ ಮುಕ್ತ ಪ್ರದೇಶವೆಂದು ಘೋಷಿಸಲು ಆದೇಶ ಮಾಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಮಾಡಲಾಗುತ್ತದೆ ಎಂದು ಹಿರೇಮಠ್ ಅವರು ತಿಳಿಸಿದ್ದಾರೆ.

ಮುಂದಿನ ಪೀಳಿಗೆಗೆ ಸಂಪನ್ಮೂಲವನ್ನು ಸಂರಕ್ಷಿಸಿಡುವ ಉದ್ದೇಶದಿಂದಲೂ ಎರಡೂ ರಾಜ್ಯಗಳ ಗಡಿ ಪ್ರದೇಶದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವ ಅವಶ್ಯಕತೆ ಇದೆ ಎಂದು ಎಸ್ ಆರ್ ಹಿರೇಮಠ್ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ಹೋರಾಟ : ಆಂಧ್ರ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತೆ ಅವಕಾಶ ನೀಡಿದ್ದು, ಇದರ ವಿರುದ್ಧ ಸಮಾಜ ಪರಿವರ್ತನ ಸಮುದಾಯ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದೆ. ಅಕ್ರಮ ಗಣಿಗಾರಿಕೆಯ ಪ್ರಮುಖ ರೂವಾರಿ ಗಾಲಿ ಜನಾರ್ದನ ರೆಡ್ಡಿ ಈಗ ಮತ್ತೊಂದು ಷಡ್ಯಂತ್ರಕ್ಕೆ ಮುಂದಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡದೆ ಸುಪ್ರೀಂ ಕೋರ್ಟ್ ಸೂಕ್ತ ನಿರ್ಧಾರದ ಮೂಲಕ ಮೈನಿಂಗ್ ಮಾಫಿಯಾಕ್ಕೆ ಬ್ರೇಕ್ ಹಾಕುವ ಕಾರ್ಯವನ್ನು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮತ್ತೆ ಗಣಿಗಾರಿಕೆ ಆರಂಭಿಸುವ ಸಾಧ್ಯತೆ ಇದೆ. ಇದಕ್ಕೆ ಅಲ್ಲಿಯ ಮುಖ್ಯಮಂತ್ರಿ ಜಗನ್ ಮೋಹನ್​ ರೆಡ್ಡಿ ಸಹ ಒಪ್ಪಿಗೆ ನೀಡಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ. ಆಂಧ್ರದಲ್ಲಿ ಯಾವುದೇ ಕಾರಣಕ್ಕೂ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಬಾರದು. ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಯಾವೆಲ್ಲ ಕಾನೂನು ಕ್ರಮ ಕೈಗೊಳ್ಳಲಾಗಿದೆಯೋ, ಅವುಗಳನ್ನು ಆಂಧ್ರಪ್ರದೇಶದಲ್ಲೂ ಕೈಗೊಳ್ಳಬೇಕು. ಈ ಕುರಿತು ಸುಪ್ರೀಂ ಕೋರ್ಟ್'ನಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಹಿರೇಮಠ ಅವರು ತಿಳಿಸಿದರು.

ಗಣಿಗಾರಿಕೆ ನಿಯಂತ್ರಣ ಸ್ವಾಗತಾರ್ಹ : ಕರ್ನಾಟಕದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಮಿತಿಯನ್ನು ಸಂಪೂರ್ಣ ಸಡಿಲಿಸಬೇಕು ಎಂದು ಕೇಂದ್ರ ಉನ್ನತಾಧಿಕಾರ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವುದು ಸ್ವಾಗತಾರ್ಹವಾದುದಾಗಿದೆ. ಬಳ್ಳಾರಿ, ಚಿತ್ರದುರ್ಗದಲ್ಲಿ ಗಣಿಗಾರಿಕೆ ಮಿತಿ ಹೆಚ್ಚಳಕ್ಕೆ ಅನುಮತಿ ಕೋರಿ ಕೇಂದ್ರ ಉನ್ನತಾಧಿಕಾರ ಸಮಿತಿ ಅರ್ಜಿ ಸಲ್ಲಿಸಿತ್ತು. ಪರಿಸರ ಸಂರಕ್ಷಣೆ ಬಗ್ಗೆ ಸಮಾಜ ಪರಿವರ್ತನಾ ಸಮುದಾಯದ ಪರವಾಗಿ ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ ವಾದ ಮಂಡಿಸಿದ್ದರು. ವಾದ ಆಲಿಸಿದ ಸುಪ್ರ್ರೀಂ ಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿ ನಮ್ಮ ನಿಲುವು ಎತ್ತಿ ಹಿಡಿದಿದೆ' ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ.. ಸಿಎಜಿ ಅರ್ಜಿ ತಿರಸ್ಕಾರ ಸ್ವಾಗತಾರ್ಹ, ಮೈನಿಂಗ್ ಮಾಫಿಯಾಕ್ಕೆ ರೆಡ್ಡಿ ಮತ್ತೊಂದು ಷಡ್ಯಂತ್ರ: ಹಿರೇಮಠ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.