ETV Bharat / bharat

ತೆಲುಗು ರಾಜ್ಯಗಳಲ್ಲಿ ಸಂಚಲನ ಮೂಡಿಸಿದ ಬೆಂಗಳೂರು ರೇವ್​ ಪಾರ್ಟಿ!; ನಮ್ಮ ರಾಜಧಾನಿಯೇ ಕೇಂದ್ರವಾಗಿದ್ದೇಕೆ? - Bengaluru Rave Party Case

author img

By ETV Bharat Karnataka Team

Published : May 25, 2024, 4:46 PM IST

Updated : May 25, 2024, 5:01 PM IST

ಬೆಂಗಳೂರಿನಲ್ಲಿ ನಡೆದ ರೇವ್​ ಪಾರ್ಟಿಯಲ್ಲಿ ತೆಲುಗು ಸಿನಿಮಾ ತಾರೆಯರು, ಉದ್ಯಮಿಗಳು, ರಾಜಕಾರಣಿಗಳು ಪಾಲ್ಗೊಂಡಿರುವುದು ಖಚಿತವಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ 86 ಜನರ ಡ್ರಗ್ಸ್ ಸೇವನೆ ಸಹ ದೃಢಪಟ್ಟಿದೆ. ಆದ್ದರಿಂದ ಇದೀಗ ಇಂತಹ ಚಟುವಟಿಕೆಗಳಿಗೆ ಬೆಂಗಳೂರು ವೇದಿಕೆಯಾಗಿದ್ದೇಕೆ ಎಂಬ ಸಂಶಯ ಮೂಡಿಸಿದೆ.

Representative image
ಸಾಂದರ್ಭಿಕ ಚಿತ್ರ (ETV Bharat)

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರೇವ್​ ಪಾರ್ಟಿ ಕರ್ನಾಟಕಕ್ಕಿಂತ ನೆರೆಯ ತೆಲಂಗಾಣ, ಆಂಧ್ರಪ್ರದೇಶದಲ್ಲಿ ಹೆಚ್ಚು ಸಂಚಲನ ಮೂಡಿಸಿದೆ. ಯಾಕೆಂದರೆ, ತೆಲುಗು ಸಿನಿಮಾ, ಉದ್ಯಮ, ರಾಜಕೀಯ ಕ್ಷೇತ್ರದ ಅನೇಕರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆದ್ದರಿಂದ ಬೆಂಗಳೂರು ರೇವ್​ ಪಾರ್ಟಿ ತೆಲುಗು ರಾಜ್ಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೈದರಾಬಾದ್​ನಲ್ಲಿ ತೀವ್ರ ಪೊಲೀಸ್ ನಿಗಾ: ಎರಡು ತೆಲುಗು ರಾಜ್ಯಗಳಿಗೆ ಹೈದರಾಬಾದ್​ ಇಂದಿಗೂ ಪ್ರಮುಖ ನಗರವಾಗಿದೆ. ಈ ಹಿಂದೆ ರೇವ್ ಪಾರ್ಟಿ, ಪಬ್​ಗಳಲ್ಲಿ ಡ್ರಗ್ಸ್ ಸೇವನೆಯಂತಹ ಪ್ರಕರಣಗಳಿಗೆ ಹೈದರಾಬಾದ್​​ ವೇದಿಕೆಯಾಗಿತ್ತು. ರೆಸಾರ್ಟ್‌ಗಳು ಮತ್ತು ಫಾರ್ಮ್‌ಹೌಸ್‌ಗಳಲ್ಲಿ ಅತಿ ಹೆಚ್ಚಾಗಿ ಇಂತಹ ಪಾರ್ಟಿಗಳು ನಡೆಯುತ್ತಿದ್ದವು. ಆದರೆ, ಇದೀಗ ಹೈದರಾಬಾದ್​ನಲ್ಲಿ ಪೊಲೀಸರ ಕಣ್ಗಾವಲು ಅಧಿಕವಾಗಿದೆ. ಡ್ರಗ್ಸ್ ವಿರುದ್ಧ ಕಠಿಣ ಕ್ರಮಗಳಿಂದಾಗಿ ಡ್ರಗ್ಸ್ ಪೂರೈಕೆ ನಿಯಂತ್ರಣಕ್ಕೆ ಬರುತ್ತಿದೆ.

ತೆಲಂಗಾಣ ಪೊಲೀಸರು ದೇಶ ಹಾಗೂ ವಿದೇಶದ ಪ್ರಮುಖ ಅಪರಾಧಿಗಳನ್ನು ಪತ್ತೆ ಹಚ್ಚಿ ಸೆರೆಹಿಡಿದಿದ್ದಾರೆ. ಇದರಿಂದ ಹೈದರಾಬಾದ್‌ನಲ್ಲಿ ರೇವ್ ಪಾರ್ಟಿಗಳು ಮಾಡಲು ಯುವಕರು ಭಯಪಡಲಾರಂಭಿಸಿದ್ದಾರೆ. ಇದರ ನಡುವೆ ಬೆಂಗಳೂರಿನ ರೇವ್​ ಪಾರ್ಟಿ ಬಯಲಾಗಿದೆ. ಸಿನಿಮಾ ತಾರೆಯರು, ಉದ್ಯಮಿಗಳು, ರಾಜಕಾರಣಿಗಳು ಪಾಲ್ಗೊಂಡಿರುವುದು ಸಹ ಖಚಿತವಾಗಿದೆ. ಇಷ್ಟೇ ಅಲ್ಲ, ವೈದ್ಯಕೀಯ ಪರೀಕ್ಷೆಯಲ್ಲೂ ದುಬಾರಿ ಡ್ರಗ್ಸ್ ಸಹ ಸೇವಿಸಿರುವುದು ಪತ್ತೆಯಾಗಿದೆ. ಆದ್ದರಿಂದ ಇದೀಗ ಇಂತಹ ಚಟುವಟಿಕೆಗಳಿಗೆ ಬೆಂಗಳೂರು ವೇದಿಕೆಯಾಗುತ್ತಿದೆಯೇ ಅನುಮಾನ ಮೂಡಿಸಿದೆ.

ಇಂತಹ ಪಾರ್ಟಿ ಸಂಸ್ಕೃತಿ ಎಲ್ಲ ವಯೋಮಾನದವರನ್ನೂ ಡ್ರಗ್ಸ್ ನಶೆಯ ಬಲೆಗೆ ಬೀಳುವಂತೆ ಮಾಡುತ್ತಿದೆ. ಇದನ್ನೇ ಕೆಲ ಕಾರ್ಯಕ್ರಮಗಳ ಆಯೋಜಕರು, ಡಿಜೆ ಆಯೋಜಕರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಅಲ್ಪಾವಧಿಯಲ್ಲಿಯೇ ಸಾಕಷ್ಟು ಹಣ ಸಂಪಾದಿಸಬಹದು ಎಂದು ಇಂತಹ ಪಾರ್ಟಿಗಳ ಆಯೋಜನೆಯಲ್ಲಿ ತೊಡಗಿಸಿಕೊಂಡಿವೆ. ಈ ಪಾರ್ಟಿಗಳಿಗೆ ಡ್ರಗ್ಸ್ ದಂಧೆಯೂ ವ್ಯಾಪಿಸುತ್ತಿದೆ. ಇದನ್ನು ಅರಿತ ಹೈದರಾಬಾದ್​ ಪೊಲೀಸರು ಮತ್ತು ತೆಲಂಗಾಣ ಆಂಟಿ ನಾರ್ಕೋಟಿಕ್ಸ್ ಬ್ಯೂರೋ ಅಧಿಕಾರಿಗಳು ಹೈದರಾಬಾದ್​ ಮಾತ್ರವಲ್ಲದೇ ಗೋವಾ ಮೇಲೂ ಹೆಚ್ಚಿನ ನಿಗಾ ವಹಿಸಿದ್ದಾರೆ. ಹೀಗಾಗಿ ಡ್ರಗ್ ಪೂರೈಕೆದಾರರು ತಮ್ಮ ಮಾರ್ಗವನ್ನೂ ಬದಲಿಸಿಕೊಂಡಿದ್ದಾರೆ.

ಅಲ್ಲದೇ, ಇತ್ತೀಚಿನ ಪ್ರಕರಣದ ಬಳಿಕ ಹೈದರಾಬಾದ್ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಪಾರ್ಟಿ ನೆಪದಲ್ಲಿ ಮಾದಕ ವಸ್ತು ದಂಧೆಯಲ್ಲಿ ತೊಡಗಿರುವ ಕಾರ್ಯಕ್ರಮಗಳ ಆಯೋಜಕರ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇವರು ನೀಡಿದ ಮಾಹಿತಿಯಿಂದ ಮತ್ತೊಬ್ಬ ಡ್ರಗ್ಸ್ ಡಾನ್​ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ ಎಂದು ವರದಿಯಾಗಿದೆ.

ಇದೇ ಕಾರಣಕ್ಕೆ ಬೆಂಗಳೂರಿಗೆ ಶಿಫ್ಟ್​?: ಡ್ರಗ್ಸ್​ನಂತಹ ಚಟುವಟಿಕೆಗಳಿಗೆ ಕೇರಾಫ್ ವಿಳಾಸ ಎಂದರೆ, ಪಬ್‌ಗಳು, ರೆಸಾರ್ಟ್‌ಗಳು, ಫಾರ್ಮ್‌ಹೌಸ್‌ಗಳು. ರೇವ್ ಪಾರ್ಟಿಗಳಲ್ಲಿ ಅಬ್ಬರದ ಮ್ಯೂಸಿಕ್​, ಡ್ಯಾನ್ಸ್​ನೊಂದಿಗೆ ದಣಿಯದಿರಲು ಡ್ರಗ್ಸ್ ಬಳಸಲಾಗುತ್ತಿದೆ. ಅಲ್ಲದೇ, ಪಾರ್ಟಿಗಳಲ್ಲಿ ವಿಶೇಷ ಆಕರ್ಷಣೆಯಾಗಿ ಮುಂಬೈ, ಹೈದರಾಬಾದ್, ಬೆಂಗಳೂರು, ಪುಣೆ, ಕೋಲ್ಕತ್ತಾ, ಬಾಂಗ್ಲಾದೇಶ, ಉಕ್ರೇನ್ ಮತ್ತು ಇತರ ಸ್ಥಳಗಳಿಂದ ಸುಂದರ ಯುವತಿಯರಿಗೆ ಆಹ್ವಾನಿಸಲಾಗುತ್ತದೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತೃತೀಯಲಿಂಗಿಗಳನ್ನೂ ಕರೆತಂದು ಪಾರ್ಟಿಗಳನ್ನು ಆಯೋಜಿಸುತ್ತಾರೆ.

ಹೈದರಾಬಾದ್​ನಲ್ಲಿ ಪೊಲೀಸರ ಕಣ್ಗಾವಲು ಹೆಚ್ಚಾಗಿರುವುದರಿಂದ ತೆಲುಗು ರಾಜ್ಯಗಳಿಗೆ ಸಮೀಪವಿರುವ ಬೆಂಗಳೂರಿಗೆ ಇದನ್ನು ಸ್ಥಳಾಂತರಿಸಲಾಗುತ್ತಿದೆ. ಇಲ್ಲಿ ನೈಜೀರಿಯಾ ಪ್ರಜೆಗಳಿಂದ ಸುಲಭವಾಗಿ ಡ್ರಗ್ಸ್ ಸಿಗುತ್ತದೆ ಎಂಬ ಕಾರಣಕ್ಕೆ ಕಾರ್ಯಕ್ರಮದ ಆಯೋಜಕರು ಅದನ್ನೇ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಹೈದರಾಬಾದ್​ ನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿಶ್ಲೇಷಿಸಿದ್ದಾರೆ.

ಇದೇ ವೇಳೆ, ಹುಟ್ಟುಹಬ್ಬ, ಮದುವೆ, ಬ್ಯಾಚುಲರ್​ ಪಾರ್ಟಿಗಳ ನೆಪದಲ್ಲಿ ಇಂತಹ ಚಟುವಟಿಕೆಗಳು ಅಧಿಕವಾಗಿ ನಡೆಯುತ್ತಿದೆ. ಇದರಿಂದ ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಇಂತಹ ಹೆಸರಿನಲ್ಲೇ ಕಳೆದ ಆರು ತಿಂಗಳಿಂದ ಡ್ರಗ್ಸ್​ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿದೆ. ಪಾರ್ಟಿಗಳ ಗ್ಲಾಮರ್‌ಗಾಗಿ ಸಿನಿಮಾ ಮತ್ತು ಕಿರುತೆರೆ ತಾರೆಗಳಿಗೆ ಮುಂಗಡವಾಗಿ ಲಕ್ಷಾಂತರ ರೂಪಾಯಿ ನೀಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

ಹೆಚ್ಚಿನ ಓದಿಗಾಗಿ..

Last Updated : May 25, 2024, 5:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.