ETV Bharat / state

ರೇವ್ ಪಾರ್ಟಿ ನಡೆಯುತ್ತಿದ್ದ ಫಾರ್ಮ್​​​ ಹೌಸ್ ಮೇಲೆ ಸಿಸಿಬಿ ದಾಳಿ: ತೆಲುಗು ಕಿರುತೆರೆ ನಟ, ನಟಿಯರು ಸೇರಿ 78 ಜನ ವಶಕ್ಕೆ - BENGALURU RAVE PARTY

author img

By ETV Bharat Karnataka Team

Published : May 20, 2024, 9:34 AM IST

Updated : May 20, 2024, 12:46 PM IST

ಬೆಂಗಳೂರು ಹೊರವಲಯದಲ್ಲಿ ಫಾರ್ಮ್​ ಹೌಸ್​ವೊಂದರಲ್ಲಿ ನಡೆಯುತ್ತಿದ್ದ ರೇವ್​ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

BENGALURU RAVE PARTY
ರೇವ್ ಪಾರ್ಟಿ (ETV Bharat)

ರೇವ್ ಪಾರ್ಟಿ ನಡೆಯುತ್ತಿದ್ದ ಫಾರ್ಮ್​​​ ಹೌಸ್ ಮೇಲೆ ಸಿಸಿಬಿ ದಾಳಿ (ETV Bharat)

ಬೆಂಗಳೂರು: ನಗರದ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಫಾರ್ಮ್​​​ ಹೌಸ್​​ನಲ್ಲಿ ನಡೆಯುತ್ತಿದ್ದ ರೇವ್​​​ ಪಾರ್ಟಿ ಮೇಲೆ ತಡರಾತ್ರಿ ಸಿಸಿಬಿ ಪೊಲೀಸರ ತಂಡ ದಾಳಿ ನಡೆಸಿದೆ. ಭಾನುವಾರ ಸಂಜೆಯಿಂದ ನಡೆಯುತ್ತಿದ್ದ ಪಾರ್ಟಿಯ ಕುರಿತು ಮಾಹಿತಿ ತಿಳಿದ ಸಿಸಿಬಿ ಪೊಲೀಸರು, ನಸುಕಿನಜಾವ 3 ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಪಾರ್ಟಿಯಲ್ಲಿ ಮಾದಕ ಪದಾರ್ಥ ಪತ್ತೆಯಾಗಿದ್ದು, ತೆಲುಗು ನಟ ನಟಿಯರು ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಉದ್ಯಮಿಯೊಬ್ಬರ ಒಡೆತನದ ಫಾರ್ಮ್ ​​​ಹೌಸ್​​ನಲ್ಲಿ ಹೈದರಾಬಾದ್ ಮೂಲದ ವಾಸು ಎಂಬಾತ ತನ್ನ ಬರ್ತಡೇ ಪಾರ್ಟಿ ಆಯೋಜಿಸಿದ್ದ. ಅವಧಿ ಮುಗಿದ ಬಳಿಕವೂ ಪಾರ್ಟಿ ಮುಂದುವರೆಯುತ್ತಿದ್ದ ಹಿನ್ನೆಲೆಯಲ್ಲಿ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸುಮಾರು 17 ಗ್ರಾಂನಷ್ಟು ಎಂಡಿಎಂಎ ಮಾತ್ರೆ, ಕೊಕೇನ್ ಪತ್ತೆಯಾಗಿದೆ. ಪಾರ್ಟಿಯಲ್ಲಿ ಆಂಧ್ರ, ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು ಎಂಬುದು ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ.

ಮತ್ತೊಂದೆಡೆ ಪಾರ್ಟಿಗೆ‌ ಬಂದಿದ್ದವರೊಬ್ಬರ ಕಾರಿನಲ್ಲಿ ಆಂಧ್ರದ ಶಾಸಕರೊಬ್ಬರ ಕಾರಿನಲ್ಲಿ ಪಾಸ್ ಅಂಟಿಸಿರುವುದು ಪತ್ತೆಯಾಗಿದೆ. ಪಾರ್ಟಿಯಲ್ಲಿದ್ದವರ ಮರ್ಸಿಡಿಸ್-ಬೆನ್ಜ್, ಜಾಗ್ವಾರ್, ಆಡಿ ಕಾರ್ ಸೇರಿದಂತೆ 15ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಈಗಾಗಲೇ 78 ಜನರನ್ನು ವಶಕ್ಕೆ ಪಡೆಯಲಾಗಿದೆ.

ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಪೈಕಿ ತೆಲುಗು ಚಿತ್ರರಂಗದ ನಟಿಯೊಬ್ಬರ ಸಹಿತ, ಕಿರುತೆರೆ ನಟ-ನಟಿಯರು, ಮಾಡೆಲ್​​ಗಳು ಹಾಗೂ ಟೆಕ್ಕಿಗಳನ್ನು ವಶಕ್ಕೆ ಪಡೆಯಲಾಗಿದೆ. ಎಲೆಕ್ಟ್ರಾನಿಕ್​​ಸಿಟಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು:ಎಂಡಿಎಂಎ ಮಾದಕ ವಸ್ತು ಸಾಗಿಸುತ್ತಿದ್ದ ನಾಲ್ವರ ಬಂಧನ; ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆ - MDMA Drug

Last Updated : May 20, 2024, 12:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.