ETV Bharat / state

ಶಿಕ್ಷಕರ ನೇಮಕ ಅಕ್ರಮ ನಮ್ಮ ಅವಧಿಯಲ್ಲಿ ನಡೆದಿಲ್ಲ, ತಪ್ಪು ಮಾಹಿತಿ ನೀಡಲಾಗುತ್ತಿದೆ: ಸಿದ್ದರಾಮಯ್ಯ

author img

By

Published : Sep 28, 2022, 5:49 PM IST

Siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಶಿಕ್ಷಕರ ನೇಮಕಾತಿ ಹಗರಣ ನಮ್ಮ ಅವಧಿಯಲ್ಲಿ ನಡೆದಿದೆ ಎಂದು ತಪ್ಪು ಮಾಹಿತಿ ನೀಡುವ ಕಾರ್ಯ ಆಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರು: ಶಿಕ್ಷಕರ ನೇಮಕಾತಿ ಹಗರಣ ನಮ್ಮ ಅವಧಿಯಲ್ಲಿ ನಡೆದಿದೆ ಎಂದು ತಪ್ಪು ಮಾಹಿತಿ ನೀಡುವ ಕಾರ್ಯ ಆಗುತ್ತಿದೆ. ಈಗಾಗಾಲೇ ಈ ಬಗ್ಗೆ ಸ್ಪಷ್ಟತೆ ನೀಡಿದ್ದರೂ ಕಾಂಗ್ರೆಸ್ ಸರ್ಕಾರದ ಅವಧಿಯ ಶಿಕ್ಷಕರ ನೇಮಕ ಹಗರಣ ಎಂದು ಸುಳ್ಳು ಬರೆಯಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಶಿಕ್ಷಕರ ನೇಮಕಾತಿ ಹಗರಣ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಸಪ್ಟೆಂಬರ್​ 23 ರಂದು ಮಾಧ್ಯಮಗೋಷ್ಠಿ ನಡೆಸಿ ಯಾವ್ಯಾವ ಕಾಲದಲ್ಲಿ ನೇಮಕಗೊಂಡಿದ್ದಾರೆ ಎಂಬ ಹೆಸರು, ಅಕ್ರಮವಾಗಿ ಆದೇಶ ಪಡೆದ ದಿನಾಂಕ ಇತ್ಯಾದಿ ವಿವರಗಳನ್ನು ದಾಖಲೆ ಸಮೇತ ವಿವರಿಸಿದರೂ ಸಹ ಕೆಲವು ಮಾಧ್ಯಮಗಳು ಮತ್ತೆ ಮತ್ತೆ ಕಾಂಗ್ರೆಸ್ ಸರ್ಕಾರದ ಕಾಲದ, ಸಿದ್ದರಾಮಯ್ಯ ಅವಧಿಯ ನೇಮಕಾತಿ ಹಗರಣ ಎಂದೆಲ್ಲ ಬರೆಯುತ್ತಿದ್ದಾರೆ.

ನನಗೆ ಲಭಿಸಿರುವ ದಾಖಲೆಗಳಂತೆ ಈ ಶಿಕ್ಷಕರುಗಳು ಯಾವ್ಯಾವ ಅವಧಿಯಲ್ಲಿ ನೇಮಕಗೊಂಡಿದ್ದಾರೆ ಎಂಬ ಮಾಹಿತಿಯನ್ನು ಮಾಧ್ಯಮಗಳಿಗೆ ಮತ್ತೊಮ್ಮೆ ತಿಳಿಸ ಬಯಸುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್​ ಆಡಳಿತದಲ್ಲಿ ನೇಮಕ ಆಗಿಲ್ಲ : ದಸ್ತಗಿರಿಯಾಗಿರುವ 12 ಜನ ಶಿಕ್ಷಕರಲ್ಲಿ 7 ಜನರು 2019ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಸುರೇಶ್ ಕುಮಾರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿದ್ದಾಗ ನೇಮಕಗೊಂಡಿದ್ದಾರೆ.

ಉಳಿದ 5 ಜನರಲ್ಲಿ ಇಬ್ಬರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದಾರೆ. ಉಳಿದವರಲ್ಲಿ ಒಬ್ಬನಿಗೆ 2018 ರಲ್ಲಿ ಒಬ್ಬ 2015 ರಲ್ಲಿ, ಮತ್ತೊಬ್ಬ 2017 ರಲ್ಲಿ, ಇನ್ನೊಬ್ಬ 2018 ರಲ್ಲಿ ನೇಮಕಾತಿ ಆದೇಶ ಪಡೆದಿದ್ದಾನೆಂದು ದಾಖಲೆಗಳು ಹೇಳುತ್ತವೆ. 2012-13 ರಲ್ಲಿ ಕರೆದಿದ್ದ ಶಿಕ್ಷಕರ ಹುದ್ದೆಗಳ ಬ್ಯಾಚಿನಲ್ಲೂ ಒಬ್ಬಾತ ಸೇರಿಕೊಂಡಿದ್ದಾನೆಂಬ ಮಾಹಿತಿ ಇದೆ. ಅದರ ನಂತರ 2015 ರಲ್ಲಿ ಮತ್ತೊಮ್ಮೆ ಹುದ್ದೆಗಳನ್ನು ತುಂಬಿಕೊಳ್ಳಲು ಪ್ರಕ್ರಿಯೆ ನಡೆದಿತ್ತು ಎಂದು ವಿವರಿಸಿದ್ದಾರೆ.

ನೇಮಕಾತಿ ಪ್ರಕ್ರಿಯೆ ಬಗ್ಗೆ ಶಾಸಕರಿಂದ ವಿವರಣೆ : ಈ ಅವಧಿಗಳಲ್ಲಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿಯವರು ಮತ್ತು ಕಿಮ್ಮನೆ ರತ್ನಾಕರ ಅವರು ಶಿಕ್ಷಣ ಸಚಿವರುಗಳಾಗಿ ಕೆಲಸ ಮಾಡಿದ್ದರು. ಈಗಾಗಲೆ ಶಿಕ್ಷಣ ಸಚಿವರು ಮಾಧ್ಯಮಗಳಿಗೆ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆಂದು ವಿವರಿಸಿದ್ದಾರೆ.

ಒಮ್ಮೆ ಆರ್ಥಿಕ ಇಲಾಖೆಯಿಂದ ಅನುಮೋದನೆ ನೀಡಿದ ನಂತರ ನೇಮಕಾತಿ ಪ್ರಕ್ರಿಯೆಯು ನೇಮಕಾತಿ ಪ್ರಾಧಿಕಾರದಿಂದ ನಡೆಯುತ್ತದೆ. ನೇಮಕಾತಿ ಪಟ್ಟಿಯು ಡಿಡಿಪಿಐ ಮತ್ತು ಜಂಟಿ ನಿರ್ದೇಶಕರುಗಳಿಂದ ಅನುಮೋದನೆಗೊಳ್ಳುತ್ತದೆ. ನೇರ ನೇಮಕಾತಿಗಳಾದ್ದರಿಂದ ಬೇರಿನ್ನಾರದೇ ಹಸ್ತಕ್ಷೇಪಗಳು ಇರುವುದಿಲ್ಲವೆಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ಯಾರ ಅವಧಿಯಲ್ಲಿ ಆದರೂ ಕ್ರಮ ಅಗತ್ಯ : ಏನೇ ಆದರೂ, ಯಾರದೇ ಅವಧಿಯಲ್ಲಿ ನಡೆದಿದ್ದರೂ ಸಹ ಈ ರೀತಿಯ ದ್ರೋಹ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಜರುಗಿಸಲೇಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.

ಉಲ್ಭಣಗೊಳ್ಳುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸುವ ಕಡೆಗೆ ಸರ್ಕಾರ ಗಂಭೀರ ಪ್ರಯತ್ನಗಳನ್ನು ಮಾಡಬೇಕು. ಜೊತೆಗೆ ಮಾಧ್ಯಮಗಳಿಗೆ ಸರ್ಕಾರವೇ ಅಥವಾ ಸಚಿವರುಗಳ ಕಚೇರಿಗಳು ತಪ್ಪು ಮಾಹಿತಿ ಕೊಡುವುದನ್ನು ನಿಲ್ಲಿಸಬೇಕು. ತನಿಖೆ ನಡೆಸುತ್ತಿರುವ ಸಂಸ್ಥೆಯಾದರೂ ಈ ಕುರಿತು ಕಾಲ ಕಾಲಕ್ಕೆ ಮಾಧ್ಯಮಗಳಿಗೆ ವಿವರಿಸಬೇಕು ಎಂದಿದ್ದಾರೆ.

ಒಟ್ಟಾರೆಯಾಗಿ ಪಾರದರ್ಶಕವಾಗಿ ನಡೆದುಕೊಳ್ಳಬೇಕು ಹಾಗೂ ನ್ಯಾಯನಿಷ್ಠರಾಗಿರಬೇಕೆಂದು ಆಗ್ರಹಿಸುತ್ತೇನೆ. ಇದೆಲ್ಲದರ ಜೊತೆಯಲ್ಲಿ ನಿರುದ್ಯೋಗವು ರಾಜ್ಯದಲ್ಲಿ ಅಸಹನೀಯ ಮಟ್ಟಕ್ಕೆ ಮುಟ್ಟಿದೆ. ರಾಜ್ಯದಲ್ಲಿ ಪದವೀಧರ ಹೆಣ್ಣುಮಕ್ಕಳ ನಿರುದ್ಯೋಗದ ಪ್ರಮಾಣ ಶೇ.39-40 ರಷ್ಟಿದೆ.

ಪದವೀಧರ ಯುವಕರ ನಿರುದ್ಯೋಗವು ಶೇ.35 ರವರೆಗೆ ಇದೆ. ಇರುವ ಒಂದೊಂದು ಹುದ್ದೆಗೆ 2-3 ಸಾವಿರ ಜನರು ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಕುರಿತು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯೂ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ : ಪಿಎಫ್​ಐ ಬ್ಯಾನ್​ ಸ್ವಾಗತಿಸಿದ ಕಾಂಗ್ರೆಸ್​ ನಾಯಕರು: ಆರ್​ಎಸ್​ಎಸ್ ವಿರುದ್ಧವೂ ಕ್ರಮಕ್ಕೆ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.