ETV Bharat / state

ಹುಣಸೋಡು ಸ್ಫೋಟ ಪ್ರಕರಣ: ಸಿಇಎನ್​ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿ ರದ್ದುಪಡಿಸಿದ ಹೈಕೋರ್ಟ್​

author img

By ETV Bharat Karnataka Team

Published : Nov 14, 2023, 5:33 PM IST

High Court
ಹೈಕೋರ್ಟ್​

Shivamogga Hunasodu blast case: ಶಿವಮೊಗ್ಗದ ಹುಣಸೋಡು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಎನ್​ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಹೈಕೋರ್ಟ್​ ರದ್ದುಪಡಿಸಿದೆ.

ಬೆಂಗಳೂರು: ಶಿವಮೊಗ್ಗದ ಹುಣಸೋಡು ವ್ಯಾಪ್ತಿಯ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ನಡೆದಿದ್ದ ಸ್ಫೋಟ ಪ್ರಕರಣ ಸಂಬಂಧ ಪೂರ್ವ ವಲಯ ಐಜಿಪಿ ಸೂಚನೆ ಮೇರೆಗೆ ಮೂವರು ಆರೋಪಿಗಳ ವಿರುದ್ಧ ಶಿವಮೊಗ್ಗ ಸಿಇಎನ್ (ಸೈಬರ್ ಕ್ರೈಂ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳು) ಠಾಣಾ ಪೊಲೀಸರು ತನಿಖೆ ನಡೆಸಿ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಅಲ್ಲದೇ, ಪ್ರಕರಣ ಸಂಬಂಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಮುಂದಿನ ತನಿಖೆ ನಡೆಸಿ, ಕಾನೂನು ಪ್ರಕಾರ ಆರೋಪ ಪಟ್ಟಿಯನ್ನು ಸಲ್ಲಿಸಬಹುದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ತಮ್ಮ ವಿರುದ್ಧ ಪ್ರಕರಣ ಹಾಗೂ ಈ ಸಂಬಂಧ ಸಿಇಎನ್ ಪೊಲೀಸರು ಸಲ್ಲಿಸಿದ್ದ, ಸಲ್ಲಿಕೆಯಾಗಿರುವ ಆರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಸುಪ್ರೀಂ ಟ್ರೇಡರ್ಸ್ ಮಾಲೀಕ ಆಂಧ್ರಪ್ರದೇಶದ ಅನಂತಪುರದ ಮಂಜುನಾಥ ಸಾಯಿ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೇ, ಸ್ಫೋಟಕ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ದಾಖಲಾದ ಪ್ರಕರಣಗಳ ತನಿಖೆಯನ್ನು ಸಿಇಎನ್ ಪೊಲೀಸರಿಗೆ ವರ್ಗಾವಣೆ ಮಾಡುವ ಅಧಿಕಾರವು ಡಿಜಿ, ಐಜಿಪಿ, ರಾಜ್ಯ ಸರ್ಕಾರ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳನ್ನು ಹೊರತುಪಡಿಸಿ ಇತರರಿಗೆ ಇರುವುದಿಲ್ಲ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಪೂರ್ವವಲಯದ ಐಜಿಪಿ ಪ್ರಕರಣವನ್ನು ಸಿಇಎನ್ ಪೊಲೀಸರಿಗೆ ವರ್ಗಾವಣೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ದೋಷಾರೋಪ ಪಟ್ಟಿ ರದ್ದುಪಡಿಸುತ್ತಿರುವುದಾಗಿ ಪೀಠ ತಿಳಿಸಿದೆ.

ಜೊತೆಗೆ, ಸಿಇಎನ್ ಪೊಲೀಸ್ ಠಾಣೆಗೆ ಭಾರತೀಯ ದಂಡ ಸಂಹಿತೆ 420, 409, 468, 467, 471, 498 (ಎ - ಇ)ವರೆಗಿನ ಅಪರಾಧಗಳು ಹಾಗೂ 25 ಲಕ್ಷಗಳವರೆಗಿನ ಮೊತ್ತಕ್ಕೆ ಸಂಬಂಧಿಸಿದಂತೆ ಮಾತ್ರ ತನಿಖೆ ಮಾಡುವುದಕ್ಕೆ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ, ಪ್ರಸ್ತುತ ಪ್ರಕರಣ ಐಪಿಸಿ 266, 304, 201, ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಸಿಇಎನ್ ಪೊಲೀಸರು ತನಿಖೆ ಮಾಡಿ ಆರೋಪ ಪಟ್ಟಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ಇದನ್ನೂ ಓದಿ: ನಿಗದಿತ ಉದ್ಯೋಗಕ್ಕೆ ಅರ್ಹ ವ್ಯಕ್ತಿಯನ್ನು ನಿರಾಕರಿಸುವುದು ಕಲ್ಯಾಣ ರಾಜ್ಯದ ಲಕ್ಷಣವಲ್ಲ: ಹೈಕೋರ್ಟ್

ಪ್ರಕರಣದ ಹಿನ್ನೆಲೆ?: ಶಿವಮೊಗ್ಗ ನಗರ ಹೊರವಲಯದ ಹುಣಸೋಡು ಬಳಿ 2021ರ ಜನವರಿ 21ರಂದು ರಾತ್ರಿ ಭಾರಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಏಳು ಜನ ಮೃತಪಟ್ಟಿದ್ದರು. 'ಕಲ್ಲು ಕ್ವಾರಿಗಳಿಗೆ ಉಪಯೋಗಿಸಲು ಜಿಲೆಟಿನ್ ಕಡ್ಡಿಗಳು ಮತ್ತು ಸಿಡಿಮದ್ದುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ಕ್ರಷರ್ ಪ್ರದೇಶದಲ್ಲಿ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ' ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿಗಳು ಭಾರತೀಯ ದಂಡ ಸಂಹಿತೆ 1860ರ (ಐಪಿಸಿ) ಕಲಂ 286 (ಸ್ಫೋಟಕ ವಸ್ತುಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ) 304 (ಸಾವನ್ನು ಉಂಟು ಮಾಡುವ ಉದ್ದೇಶವಿಲ್ಲದೇ ಎಸಗುವ ಕೃತ್ಯ) ಮತ್ತು 201 (ಪುರಾವೆ ನಾಶ), ಸ್ಫೋಟಕ ಕಾಯ್ದೆ 1884ರ ಕಲಂ 3 (ಎ) (ಬಿ) ಮತ್ತು 5ರ ಅನುಸಾರ ಒಟ್ಟು 15 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತನಿಖೆಯನ್ನು ಶಿವಮೊಗ್ಗ ಸಿಇಎನ್ ಠಾಣೆಗೆ ವರ್ಗಾಯಿಸಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಶಿವಮೊಗ್ಗ ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದಲ್ಲಿ ಮಂಜನಾರ್ಥ ಸಾಯಿ (36), 'ಪೃಥ್ವಿ ಎಂಟರ್‌ಪ್ರೈಸಸ್' ಮಾಲೀಕ ಪಿ.ಪೃಥ್ವಿನಾಥ ಸಾಯಿ (34) ಮತ್ತು ಶಿವಮೊಗ್ಗದ ಬಿ.ವಿ.ಸುಧಾಕರ (57) (ಕ್ವಾರಿ ಗುತ್ತಿಗೆ ಪಡೆದಿದ್ದವರು) ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರವಾಗಿ ವಕೀಲರಾದ ಆರ್.ರಂಗನಾಥ ರೆಡ್ಡಿ ಮತ್ತು ಸಿ.ಎಚ್.ಹನುಮಂತರಾಯ ವಾದ ಮಂಡಿಸಿದ್ದರು.

ಇದನ್ನೂ ಓದಿ: ನಿಗದಿತ ಉದ್ಯೋಗಕ್ಕೆ ಅರ್ಹ ವ್ಯಕ್ತಿಯನ್ನು ನಿರಾಕರಿಸುವುದು ಕಲ್ಯಾಣ ರಾಜ್ಯದ ಲಕ್ಷಣವಲ್ಲ: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.