ETV Bharat / state

ಸಾರ್ವಜನಿಕ ಆಸ್ತಿ ಅತಿಕ್ರಮಿಸಿ ಮಂಜೂರು ಮಾಡುವಂತೆ ಕೇಳಲು ಅವಕಾಶವಿಲ್ಲ : ಅರ್ಜಿದಾರನಿಗೆ 6 ಲಕ್ಷ ದಂಡ

author img

By

Published : Nov 13, 2021, 8:05 PM IST

Rs 6 lakh fine for a person who illegally living in home in mysore
ಮುಡಾ ಮನೆ ಮಂಜೂರಾತಿ ಬಗ್ಗೆ ಹೈಕೋರ್ಟ್​ ಆದೇಶ

ತಾನು ವಾಸಿಸುತ್ತಿರುವ ಮನೆಯನ್ನು ತನ್ನ ಹೆಸರಿಗೆ ಮಂಜೂರು ಮಾಡಲು ನಿರಾಕರಿಸುತ್ತಿರುವ ಮುಡಾ ಕ್ರಮ ಪ್ರಶ್ನಿಸಿ ಮೈಸೂರಿನ ಜಿ.ಎಂ ಮಹದೇವ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಹೈಕೋರ್ಟ್​ ಪೀಠ(high court bench) ವಿಚಾರಣೆ ನಡೆಸಿ, 6 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಬೆಂಗಳೂರು: ಸಾರ್ವಜನಿಕ ಆಸ್ತಿಯನ್ನು ಅತಿಕ್ರಮಿಸಿಕೊಂಡು ನಂತರ ಅದನ್ನು ಮಂಜೂರು ಮಾಡುವಂತೆ ಕೋರಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದಿರುವ ಹೈಕೋರ್ಟ್ (high court), ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮನೆಯಲ್ಲಿ ಅಕ್ರಮವಾಗಿ ಸೇರಿಕೊಂಡಿದ್ದ ವ್ಯಕ್ತಿಗೆ 6 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ತಾನು ವಾಸಿಸುತ್ತಿರುವ ಮನೆಯನ್ನು ತನ್ನ ಹೆಸರಿಗೆ ಮಂಜೂರು ಮಾಡಲು ನಿರಾಕರಿಸುತ್ತಿರುವ ಮುಡಾ ಕ್ರಮ ಪ್ರಶ್ನಿಸಿ ಮೈಸೂರಿನ ಜಿ.ಎಂ ಮಹದೇವ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿ ಈ ಆದೇಶ ಮಾಡಿದೆ.

ಮಂಜೂರಾತಿಗೆ ಅವಕಾಶವಿಲ್ಲ:

ಪೀಠ ತನ್ನ ಆದೇಶದಲ್ಲಿ, ಅರ್ಜಿದಾರ ತಾನೊಬ್ಬ ದಮನಿತ ಸಮುದಾಯದ ವ್ಯಕ್ತಿ ಎಂದು ಹೇಳಿಕೊಂಡು 2000ದಿಂದ ಅತಿಕ್ರಿಮಿಸಿಕೊಂಡಿದ್ದಾರೆ. ಆದರೆ, ದಮನಿತ ವರ್ಗಕ್ಕೆ ಸೇರಿದ ವ್ಯಕ್ತಿ ಎಂಬ ಕಾರಣಕ್ಕೆ ಸಾರ್ವಜನಿಕ ಸ್ವತ್ತನ್ನು ಅತಿಕ್ರಮಿಸಿಕೊಳ್ಳಲಿಕ್ಕಾಗಲೀ, ಅಥವಾ ತಾನು ಹಲವು ವರ್ಷಗಳಿಂದ ಅತಿಕ್ರಮಿಸಿರುವ ಮನೆಯಲ್ಲಿ ವಾಸವಿದ್ದೇನೆ ಎಂಬ ಕಾರಣಕ್ಕಾಗಲೀ ಅದನ್ನು ತನ್ನ ಹೆಸರಿಗೆ ಮಂಜೂರು ಮಾಡುವಂತೆ ಕೋರಲು ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ಸ್ವತ್ತನ್ನು ದಶಕಗಳ ಕಾಲ ಅತಿಕ್ರಮಿಸಿದ್ದಕ್ಕೆ ಅರ್ಜಿದಾರನಿಗೆ ವಾರ್ಷಿಕ 30 ಸಾವಿರದಂತೆ 6 ವಾರಗಳಲ್ಲಿ ಮುಡಾಗೆ 6 ಲಕ್ಷ ರೂ. ದಂಡ ಪಾವತಿಸುವಂತೆ ಆದೇಶಿಸಿದೆ. ಹಾಗೆಯೇ, ಅರ್ಜಿದಾರನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮುಡಾಗೆ ಆದೇಶಿಸಿದೆ.

ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ:

ಅರ್ಜಿದಾರ ಮಹದೇವ ತಾನು ದಮನಿತ ವರ್ಗಕ್ಕೆ ಸೇರಿದ ವ್ಯಕ್ತಿ, ಮುಡಾ ಎಂಜಿನಿಯರ್ ಮನೆಯನ್ನು ನೀಡುವುದಾಗಿ ಮೌಖಿಕ ಭರವಸೆ ನೀಡಿದ್ದರಿಂದ ಮನೆಯಲ್ಲಿ ವಾಸವಿದ್ದೆ. ಆದರೆ, ಮುಡಾ (MUDA) 2021ರ ಜನವರಿ 25ರಂದು ದಾಖಲೆ ಪ್ರಕಾರ ಖಾಲಿ ಇರುವ ಮನೆಗಳನ್ನು ಹರಾಜು ಮಾಡುವುದಾಗಿ ಆದೇಶ ಹೊರಡಿಸಿದೆ. ಇದರಿಂದಾಗಿ ತನ್ನ ಹಕ್ಕುಗಳು ಉಲ್ಲಂಘನೆಯಾಗಿವೆ ಎಂದು ಹೈಕೋರ್ಟ್ (high court) ಮೆಟ್ಟಿಲೇರಿದ್ದರು.

ದಾಖಲೆಗಳನ್ನು ಪರಿಶೀಲಿಸಿದ ಪೀಠ, ಅರ್ಜಿದಾರ ಮೇಲಧಿಕಾರಿಗಳನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಕರ್ನಾಟಕ ಎಸ್ಸಿ-ಎಸ್ಟಿ ಆಯೋಗಕ್ಕೆ ಎಳೆಯುವ ಮೂಲಕ ಕಿರುಕುಳ ನೀಡಿರುವುದು ಕಂಡುಬರುತ್ತಿದೆ. ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಮನೆ ಎಂಬುದು ತಿಳಿದೂ ಆಯೋಗಗಳು ಸೌಮ್ಯವಾಗಿ ವರ್ತಿಸಿರುವುದು ವಿಚಿತ್ರವಾಗಿದೆ.

ಎಸ್ಸಿ-ಎಸ್ಟಿ ಆಯೋಗದ ಆದೇಶದ ವಿರುದ್ಧ ಮುಡಾ ಈ ಹಿಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ಪ್ರತಿವಾದಿ ಮಹದೇವ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವುದಾಗಿ ತಿಳಿಸಿದ್ದಾರೆ. ಹಾಗಿದ್ದರೂ, ಅತಿಕ್ರಮಿತ ಮನೆಯನ್ನು ಉಳಿಸಿಕೊಡುವಂತೆ ನ್ಯಾಯಾಲಯದಿಂದ ರಕ್ಷಣೆ ಕೋರುತ್ತಾರೆ. ಅರ್ಜಿದಾರ ಸಾರ್ವಜನಿಕ ಜೀವನ ಮತ್ತು ನೈತಿಕತೆಯಲ್ಲಿ ನಿಷ್ಕಪಟರಲ್ಲ, ಇಂತಹ ವ್ಯಕ್ತಿಗಳಿಂದ ನಿಜವಾಗಿ ತುಳಿತಕ್ಕೊಳಗಾದ ವರ್ಗಗಳ ಬಗ್ಗೆ ಇರುವ ಅನುಕಂಪವನ್ನು ಹಾಳು ಮಾಡುತ್ತಾರೆ. ಇಂತಹ ವಿಚಾರಗಳನ್ನು ಕಠಿಣವಾಗಿ ಹತ್ತಿಕ್ಕಬೇಕಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: Kurup Movie: ಕ್ರಿಮಿನಲ್​ಗಳಲ್ಲೇ ಕ್ರಿಮಿನಲ್​ನ ಸ್ಟೋರಿ ಇದು: ಚಿತ್ರದ ಕತೆಯ ಹಿಂದಿನ ಕತೆಯೇ ರೋಚಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.