ETV Bharat / state

15 ದಿನಗಳೊಳಗಾಗಿ 100 ತಾಲೂಕುಗಳಲ್ಲಿ ಬಗರ್ ಹುಕುಂ ಸಮಿತಿ ರಚನೆ: ಸಚಿವ ಕೃಷ್ಣ ಬೈರೇಗೌಡ

author img

By ETV Bharat Karnataka Team

Published : Nov 10, 2023, 7:10 PM IST

Etv Bharatminister-krishna-byregowda-reaction-on-revenue-department-issues
15 ದಿನಗಳೊಳಗಾಗಿ 100 ತಾಲೂಕುಗಳಲ್ಲಿ ಬಗರ್ ಹುಕುಂ ಸಮಿತಿ ರಚನೆ: ಸಚಿವ ಕೃಷ್ಣ ಬೈರೇಗೌಡ

ಜನವರಿಯ ಒಳಗೆ 90 ದಿನಕ್ಕೂ ಹಳೆಯ ಯಾವ ತಕರಾರು ಅರ್ಜಿಗಳು ಉಳಿಯಬಾರದು. ಈ ಸೂಚನೆಯನ್ನು ಮೀರಿದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: "ತಹಶೀಲ್ದಾರ್ ನ್ಯಾಯಾಲಯದಲ್ಲಿರುವ ತಕರಾರು ಅರ್ಜಿಗಳನ್ನು ಜನವರಿ ಒಳಗಾಗಿ ಸಂಪೂರ್ಣವಾಗಿ ನ್ಯಾಯಯುತ ವಿಲೇವಾರಿ ಮಾಡಬೇಕು. ಅಧಿಕಾರಿಗಳು ಈ ಸೂಚನೆಯನ್ನು ಪಾಲಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಇಂದು ಕಂದಾಯ ಇಲಾಖೆಯ ನಾಲ್ಕೂ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದಲೂ ಹಲವು ಸೂಚನೆಗಳನ್ನು ನೀಡಿದ್ದಾಗ್ಯೂ ಉತ್ತಮ ನಿರ್ವಹಣೆ ತೋರದ ತಹಶೀಲ್ದಾರ್​ಗಳಿಗೆ ಎಚ್ಚರಿಕೆ ನೀಡಿದ ಸಚಿವರು, "ಜನಸಾಮಾನ್ಯರು ಅವರ ದೈನಂದಿನ ಕೆಲಸ ಬಿಟ್ಟು ದಿನಂಪ್ರತಿ ನಿಮ್ಮ ಕಚೇರಿಗಳಿಗೆ ಅಲೆಯುತ್ತಿರಬೇಕಾ?" ಎಂದು ಪ್ರಶ್ನಿಸಿದರು.

"ಯಾವುದೇ ಪ್ರಕರಣ 90 ದಿನಗಳಲ್ಲಿ ಇತ್ಯರ್ಥಗೊಳ್ಳಬೇಕು ಎಂದು ಕಾನೂನು ಇದ್ದರೂ, ಐದು ವರ್ಷದಷ್ಟು ಹಳೆಯ ಪ್ರಕರಣಗಳೂ ಸಹ ಈವರೆಗೆ ವಿಲೇವಾರಿ ಆಗಿದೆ ಉಳಿಯಲು ಏನು ಕಾರಣ?” ಎಂದು ಪ್ರಶ್ನಿಸಿದರು. "ಜನವರಿಯ ಒಳಗೆ 90 ದಿನಕ್ಕೂ ಹಳೆಯ ಯಾವ ಪ್ರಕರಣಗಳೂ ಉಳಿಯಬಾರದು. ಒಂದು ವೇಳೆ ಅಧಿಕಾರಿಗಳು ಈ ಸೂಚನೆಯನ್ನು ಮೀರಿದಲ್ಲಿ ನೋಟಿಸ್ ಜಾರಿಗೊಳಿಸಲಾಗುವುದು ಹಾಗೂ ಕಠಿಣ ಕ್ರಮ ಜರುಗಿಸಲಾಗುವುದು" ಎಂದು ಎಚ್ಚರಿಸಿದರು.

ಕಳೆದ ನಾಲ್ಕು ತಿಂಗಳಲ್ಲಿ 30 ಸಾವಿರ ಪ್ರಕರಣ ವಿಲೇವಾರಿ: ಸಭೆಯಲ್ಲಿ ಸಮರ್ಥ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, “ನಮ್ಮ ಸರ್ಕಾರ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಎಸಿ (ಉಪ ವಿಭಾಗಾಧಿಕಾರಿ) ನ್ಯಾಯಾಲಯದಲ್ಲೇ ಒಟ್ಟು 59,339 ಪ್ರಕರಣಗಳು ಬಾಕಿ ಇದ್ದವು. ಆದರೆ, ಕಳೆದ ನಾಲ್ಕು ತಿಂಗಳ ಅವಧಿಯಲ್ಲೇ ಈ ಪ್ರಕರಣಗಳ ಸಂಖ್ಯೆಯನ್ನು 30 ಸಾವಿರಕ್ಕೆ ಇಳಿಸಲಾಗಿದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಈ ಎಲ್ಲಾ ಪ್ರಕರಣಗಳನ್ನೂ ಇತ್ಯರ್ಥಗೊಳಿಸಿ ಶೇ.100 ರಷ್ಟು ಸಾಧನೆ ಮಾಡಬೇಕಿದೆ ಎಂದು ಕಾಲಮಿತಿ" ನೀಡಿದರು.

ಪಾರದರ್ಶಕ ಬರ ಪರಿಹಾರಕ್ಕೆ ಒತ್ತು: "ಬರ ಪರಿಹಾರದ ಹಣವನ್ನು ಸರಿಯಾದ ಸಮಯಕ್ಕೆ ಪಾರದರ್ಶಕವಾಗಿ ರೈತರಿಗೆ ತಲುಪಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು. ಬರ ಪರಿಹಾರದ ಹಣ ನೀಡಲು ರಾಜ್ಯದ ಶೇ.95ರಷ್ಟು ರೈತರ ಹೆಸರಲ್ಲಿ ಐಡಿ ಸೃಷ್ಟಿಸಲಾಗಿದೆ. ಆದರೆ, ಅವರ ಜಮೀನಿನ ವಿಸ್ತೀರ್ಣದ ಸಂಪೂರ್ಣ ಮಾಹಿತಿಯನ್ನು ನಮೂದಿಸಲಾಗಿಲ್ಲ. ಇದರಿಂದ ಅರ್ಹ ರೈತರಿಗೆ ಸಂಪೂರ್ಣ ಪರಿಹಾರ ಸಿಗುವುದಿಲ್ಲ.
ಹೀಗಾಗಿ ಅಧಿಕಾರಿಗಳು ಅಭಿಯಾನ ಕೈಗೊಳ್ಳಬೇಕು, ಎಲ್ಲ ರೈತರ ಭೂಮಿಯ ವಿಸ್ತೀರ್ಣವನ್ನು ಸಂಪೂರ್ಣವಾಗಿ “ಫ್ರೂಟ್ಸ್” (fruits) ತಂತ್ರಾಂಶದಲ್ಲಿ ನಮೂದಿಸಬೇಕು. ಈ ಮೂಲಕ ಎಲ್ಲ ರೈತರಿಗೂ ಪಾರದರ್ಶಕವಾಗಿ ಬರ ಪರಿಹಾರ ಹಣ ತಲುಪಲು ಸಹಕರಿಸಬೇಕು" ಎಂದು ತಿಳಿಸಿದರು.

ಬಗರ್ ಹುಕುಂ ರೈತರಿಗೆ ಸಿಹಿ ಸುದ್ದಿ: "ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ - ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಮುಂದಿನ 15 ದಿನಗಳೊಳಗಾಗಿ 100 ತಾಲೂಕುಗಳಲ್ಲಿ ಬಗರ್ ಹುಕುಂ ಸಮಿತಿ ರಚನೆ ಮಾಡಲಾಗುವುದು. ಅಧಿಕಾರಿಗಳು ಮುಂದಿನ 6 ತಿಂಗಳಲ್ಲಿ ಯಾವ ಅರ್ಜಿಯೂ ಬಾಕಿ ಉಳಿಸದಂತೆ ಸಂಪೂರ್ಣ ವಿಲೇವಾರಿ ಮಾಡಬೇಕು. ಅಲ್ಲದೇ, ಅರ್ಹ ಫಲಾನುಭವಿಗಳಿಗೆ ಶೀಘ್ರ ಸಾಗುವಳಿ ಚೀಟಿ ನೀಡಬೇಕು" ಎಂದು ಸೂಚಿಸಿದರು.

"ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಪ್ರಭಾವಿಗಳ ಮಾತಿಗೆ ಮಣಿಯದೇ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು. ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ಬಗರ್ ಹುಕುಂ ಆ್ಯಪ್ ಮೂಲಕ ಸ್ಯಾಟಲೈಟ್ ಇಮೇಜ್ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡಬೇಕು" ಎಂದು ತಾಕೀತು ಮಾಡಿದರು.

ಕಂದಾಯ ಗ್ರಾಮಗಳ ಘೋಷಣೆಗೂ ಕಾಲಮಿತಿ: "ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಗ್ರಾಮಗಳ ಘೋಷಣೆಗೂ ಕಾಲಮಿತಿ ನಿಗದಿಪಡಿಸಲಾಯಿತು. ಊರಿನಿಂದ ಹೊರಗಡೆ ಇರುವಂತ ತಾಂಡಾ - ಗೊಲ್ಲರಹಟ್ಟಿ ಸೇರಿದಂತೆ ಸುಮಾರು 3292 ವಸತಿ ಪ್ರದೇಶಗಳಿವೆ. ಆದರೆ, ಈ ಯಾವ ಗ್ರಾಮಗಳೂ ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ತಾಂಡಾ-ಗೊಲ್ಲರಹಟ್ಟಿ ಸೇರಿದಂತೆ ಹಲವು ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು" ಎಂದರು.

"ಸಾರ್ವಜನಿಕರ 30 ವರ್ಷಗಳ ಬೇಡಿಕೆಗೆ ಅನುಗುಣವಾಗಿ 2013ರ ಕಾಂಗ್ರೆಸ್ ಸರ್ಕಾರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ನಿರ್ಧಾರ ತೆಗದುಕೊಂಡಿದ್ದರು. ಆದರೂ, ಕಳೆದ ಐದು ವರ್ಷಗಳ ಅವಧಿಯಲ್ಲಿ 1300 ಕಡೆಗಳಲ್ಲಿ ಮಾತ್ರ ಕಂದಾಯ ಗ್ರಾಮ ಘೋಷಿಸಲಾಗಿದೆ. ಉಳಿದ ತಾಂಡಾ - ಗೊಲ್ಲರಹಟ್ಟಿಗಳು ಹಲವು ಯೋಜನೆಗಳಿಂದ ವಂಚಿತವಾಗುತ್ತಿವೆ. ಹೀಗಾಗಿ ಜನವರಿ ಒಳಗಡೆ 1800 ಕಡೆ ಕಂದಾಯ ಗ್ರಾಮವಾಗಿ ಘೋಷಿಸಿ ಹಕ್ಕು ಪತ್ರ ನೀಡಿ" ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ರಾಮನಗರ... ಬಿಡದಿಗೆ 'ನಮ್ಮ ಮೆಟ್ರೋ' : ಡಿಸಿಎಂ ಡಿಕೆ ಶಿವಕುಮಾರ್​ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.