ETV Bharat / state

ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯಲ್ಲಿ ಬಹಳಷ್ಟು ವ್ಯತ್ಯಾಸವಾಗಿದೆ: ಎಂ.ಪಿ.ರೇಣುಕಾಚಾರ್ಯ

author img

By ETV Bharat Karnataka Team

Published : Sep 1, 2023, 5:02 PM IST

ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯ ಕುರಿತು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಂ.ಪಿ ರೇಣುಕಾಚಾರ್ಯ
ಎಂ.ಪಿ ರೇಣುಕಾಚಾರ್ಯ

ಎಂ.ಪಿ.ರೇಣುಕಾಚಾರ್ಯ ಹೇಳಿಕೆ

ಬೆಂಗಳೂರು : ಕರ್ನಾಟಕ ಬಿಜೆಪಿಯಲ್ಲಿ ವಿಧಾನಸಭಾ ಚುನಾವಣೆಯ ಬಳಿಕ ಬಹಳಷ್ಟು ವ್ಯತ್ಯಾಸವಾಗಿದೆ. ಭಿನ್ನಾಭಿಪ್ರಾಯವಿದೆ. ಎಲ್ಲರ ಜೊತೆಗೆ ಪ್ರತ್ಯೇಕವಾಗಿ ಮಾತನಾಡಬೇಕು. ಯಾರ ಯಾರ ಸಮಸ್ಯೆಯೇನು ಎಂದು ಕೇಳಬೇಕು ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಗುರುವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕುಮಾರಕೃಪಾ ಅತಿಥಿಗೃಹದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬಿಜೆಪಿ ಕಚೇರಿಯಲ್ಲಿ ಸಭೆ ನಡೆದಿತ್ತು. ಯಡಿಯೂರಪ್ಪನವರು ಇಲ್ಲದ ಸಂದರ್ಭದಲ್ಲಿ ಈ ಸಭೆಯ ಅವಶ್ಯಕತೆ ಇರಲಿಲ್ಲ. ಬಸವರಾಜ ಬೊಮ್ಮಾಯಿ ಸೇರಿ ಬಹಳಷ್ಟು ಜನ ಮುಖಂಡರು ಇರಲಿಲ್ಲ ಎಂದರು.

ನಾನು ಎರಡು ತಿಂಗಳ ಹಿಂದೆ ಇದ್ದ ಪರಿಸ್ಥಿತಿಯನ್ನು ನೇರವಾಗಿ ಹೇಳಿದ್ದೇನೆ. ವಾಸ್ತವ ಅಂಶವನ್ನು ಹೇಳಲು ನನಗೆ ಯಾರ ಭಯವೂ ಇಲ್ಲ. ನಿರ್ಭೀತಿಯಿಂದ ಮಾತನಾಡಿದ್ದೇನೆ. ಕೆಲವು ವ್ಯಕ್ತಿಗಳ ದೌರ್ಬಲ್ಯಗಳ ಬಗ್ಗೆ ಮಾತನಾಡಿದ್ದೇನೆ. ಯಡಿಯೂರಪ್ಪನವರನ್ನು ಕಡೆಗಣಿಸಿದ್ದು, ಬಿಜೆಪಿಗೆ ಶಾಪ ಎಂದಿದ್ದೇನೆ. ಯಡಿಯೂರಪ್ಪರ ಪರವಾಗಿ ಮಾತನಾಡಿದರೆ, ಅವರ ಮನೆಗೆ ಹೋದರೆ ಯಡಿಯೂರಪ್ಪನವರ ಗ್ಯಾಂಗ್ ಎನ್ನುತ್ತಾರೆ. ಆದರೆ ವಾಸ್ತವ ಯಾರಿಗೂ ಬೇಕಿಲ್ಲ ಎಂದು ಹೇಳಿದರು.

ನಿನ್ನೆ ಸಭೆ ಮಾಡಿದ್ದಾರಲ್ಲ, ಅವರೆಲ್ಲ 2007ರಲ್ಲಿ ಬಿಜೆಪಿಗೆ ಬಂದವರು. ಅದಾದ ನಂತರ ಗುಂಪು ಕಟ್ಟುತ್ತಾರೆ. 2011ರಲ್ಲಿ ಯಡಿಯೂರಪ್ಪರನ್ನು ಅಧಿಕಾರದಿಂದ ಇಳಿಸಿದರು. ಏನು ತಪ್ಪು ಮಾಡಿದ್ದರು ಅವರು? ಲೋಕಾಯುಕ್ತಕ್ಕೆ ಕೊಟ್ಟವರು ಯಾರು? ಸಿಬಿಐಗೆ ಕೊಟ್ಟವರು ಯಾರು? ಸಿಬಿಐನವರಿಗೆ ಕೊಡಿಸಿದ್ದು ನೀವೇ. ಯಡಿಯೂರಪ್ಪನವರು ತಪ್ಪು ಮಾಡಿರಲಿಲ್ಲ. ಅಪರಾಧ ಮಾಡಿರಲಿಲ್ಲ. ಆದರೆ ತನಿಖೆಗೆ ಕೊಡಿಸಿದ್ದು ನೀವೇ, ಯಡಿಯೂರಪ್ಪ ಅಪರಾಧಿಯಲ್ಲ, ನಿರಪರಾಧಿ ಎಂಬುದು ಜನರಿಗೆ ಗೊತ್ತಾಗಬೇಕು. ಅದಕ್ಕಾಗಿ ನಾನು ಸತ್ಯ ಹೇಳುತ್ತಿದ್ದೇನೆ ಎಂದರು.

ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ಮಾಡಿ ಬಿಜೆಪಿ ಬಿಡುವಂತೆ ಮಾಡಿದಿರಿ. ಅದಕ್ಕಾಗಿ ಅಂದು ಬಿಜೆಪಿ 40 ಸ್ಥಾನಕ್ಕೆ ಬಂದು ಹೀನಾಯವಾಗಿ ಸೋತಿತ್ತು. ಆದರೆ ಮೋದಿ ಪ್ರಧಾನಿ ಆಗಬೇಕು ಎನ್ನುವ ಕಾರಣಕ್ಕೆ ಯಡಿಯೂರಪ್ಪರನ್ನು ರಾಷ್ಟ್ರೀಯ ನಾಯಕರು ಮತ್ತೆ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರು. ಅದಾದ ನಂತರ ಬಿಎಸ್​ವೈ ನೇತೃತ್ವದಲ್ಲಿ ಲೋಕಸಭೆ ಚುನಾವಣೆಯಲ್ಲಿ 19 ಸ್ಥಾನ ಬಂತು. 2018ರ ವಿಧಾನಸಭಾ ಚುನಾವಣೆಯಲ್ಲಿ 105 ಸ್ಥಾನ ಬಂತು. 2019 ರ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಬಂದಿತ್ತು. ಇದರಲ್ಲಿ ಬಿಜೆಪಿಯ ಎಲ್ಲಾ ನಾಯಕರ ಕೊಡುಗೆ ಇದೆ. ಆದರೆ ಯಡಿಯೂರಪ್ಪನವರ ವರ್ಚಸ್ಸು ಮುಖ್ಯವಾಗಿತ್ತು.

ಬಿಜೆಪಿ ಬಿಡಲ್ಲ, ಲೋಕಸಭೆಗೆ ಟಿಕೆಟ್ ಕೇಳಿದ್ದೇನೆ: ನಾನು ಯಾವ ಕಾರಣಕ್ಕೂ ಬಿಜೆಪಿ ಬಿಡಲ್ಲ. ಕಾಂಗ್ರೆಸ್ ಸೇರಲ್ಲ. ಬಿಜೆಪಿ ಕಚೇರಿಯಿಂದ ರೇಣುಕಾಚಾರ್ಯ ಕಾಂಗ್ರೆಸ್ ಸೇರುತ್ತಾರೆ ಎಂದು ಮಾಧ್ಯಮಕ್ಕೆ ಹೇಳಿಸುತ್ತಾರೆ. ಬಿಜೆಪಿ ನನಗೆ ತಾಯಿ ಸಮಾನ. ಎಲ್ಲಾ ಸ್ಥಾನಮಾನ ಕೊಟ್ಟಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ ಸಚಿವರನ್ನು, ಚಲುವರಾಯಸ್ವಾಮಿಯನ್ನು ಭೇಟಿಯಾಗಿದ್ದೇನೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನರನ್ನು ಭೇಟಿ ಮಾಡಿದ್ದೇನೆ. ಈ ಭೇಟಿಯ ಉದ್ದೇಶವೇನು? ಅಭಿವೃದ್ದಿ ವಿಚಾರಕ್ಕೆ ಭೇಟಿ ಮಾಡಬಾರದಾ? ನಾನು ನಾನು ಬಿಜೆಪಿಯಿಂದ ಲೋಕಸಭಾ ಟಿಕೆಟ್ ಕೇಳಿದ್ದೇನೆ. ಪಕ್ಷ ಬಿಡುವ ಮಾತೆ ಇಲ್ಲ ಎಂದರು.

ಇದನ್ನೂ ಓದಿ : ಬಿ.ಎಲ್​.ಸಂತೋಷ್​ ಮೊದಲು ತಮ್ಮ ಪಕ್ಷದ ನಾಯಕರನ್ನು ಉಳಿಸಿಕೊಳ್ಳಲಿ: ಜಗದೀಶ್ ಶೆಟ್ಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.