ETV Bharat / state

ಬಿ.ಎಲ್​.ಸಂತೋಷ್​ ಮೊದಲು ತಮ್ಮ ಪಕ್ಷದ ನಾಯಕರನ್ನು ಉಳಿಸಿಕೊಳ್ಳಲಿ: ಜಗದೀಶ್ ಶೆಟ್ಟರ್

author img

By ETV Bharat Karnataka Team

Published : Sep 1, 2023, 2:58 PM IST

ವಿಧಾನ ಪರಿಷತ್​ ಕಾಂಗ್ರೆಸ್‌ ಸದಸ್ಯ ಜಗದೀಶ್​ ಶೆಟ್ಟರ್ ಅವರು​ ಬಿ.ಎಲ್.ಸಂತೋಷ್​ ವಿರುದ್ಧ ವಾಗ್ದಾಳಿ ನಡೆಸಿದರು.

ಜಗದೀಶ್​ ಶೆಟ್ಟರ್
ಜಗದೀಶ್​ ಶೆಟ್ಟರ್

ವಿಧಾನ ಪರಿಷತ್ ಕಾಂಗ್ರೆಸ್‌​ ಸದಸ್ಯ ಜಗದೀಶ್​ ಶೆಟ್ಟರ್ ಹೇಳಿಕೆ

ಹುಬ್ಬಳ್ಳಿ: ಬಿ.ಎಲ್​.ಸಂತೋಷ್​ ಅವರು ಮೊದಲು ಬಿಜೆಪಿಯಲ್ಲಿರುವ ಶಾಸಕರು, ಮಾಜಿ ಶಾಸಕರನ್ನು‌ ಉಳಿಸಿಕೊಳ್ಳಲಿ‌. ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಉಳಸಿಕೊಂಡರೆ ಸಾಕಾಗಿದೆ ಎಂದು ವಿಧಾನ ಪರಿಷತ್​ ಸದಸ್ಯ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್ ನೀಡಿದರು.

ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್​ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಿ.ಎಲ್.ಸಂತೋಷ್​ ಹೇಳಿಕೆಗೆ ತಿರುಗೇಟು ನೀಡುತ್ತಾ, ಬೇರೆ ಪಕ್ಷದವರನ್ನು ಕರೆದುಕೊಂಡು ಬಂದು ಹೊಸ ಸರ್ಕಾರ ಮಾಡೋದನ್ನು ಬಿಟ್ಟುಬಿಡಲಿ. ಬಿಜೆಪಿ ಬರೀ ಆಪರೇಷನ್ ಮಾಡಿ ಸರ್ಕಾರ ರಚನೆ ಮಾಡೋದಾ? ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಸಲವೂ ಬಹುಮತ ಬರಲಿಲ್ಲ. ಕಾಂಗ್ರೆಸ್‌ಗೆ 136 ಸೀಟ್ ಬಂದಿದೆ.‌ ಬೆಳಗ್ಗೆಯಿಂದ ಸಾಯಂಕಾಲದವರೆಗೂ ಆಪರೇಷನ್ ‌ಮಾಡೋದೇ ಬಿಜೆಪಿ ಕೆಲಸ. ಹಿರಿಯರನ್ನು ಕಡೆಗಣಿಸಿ ಹೊಸಬರನ್ನು ಕರೆದುಕೊಂಡು ಬರೋದು ನಿಮ್ಮ ಕೆಲಸವಾಗಿದೆ. ದಿನದಿಂದ ದಿನಕ್ಕೆ ಪಕ್ಷ ಅಧೋಗತಿಗೆ ಹೋಗ್ತಿದೆ‌. ಬಿಜೆಪಿ ಮುಳುಗುತ್ತಿರುವ ಹಡಗು ಎಂದು ಟೀಕಿಸಿದರು.

ಕಾಂಗ್ರೆಸ್​ ಶಾಸಕರು ಅವರ ಸಂಪರ್ಕದಲ್ಲಿದ್ದರೆ ನಾಳೆಯಿಂದನೇ ಆಪರೇಷನ್ ಶುರು ಮಾಡಲಿ. ಕಾಂಗ್ರೆಸ್​ ಸರ್ಕಾರ ರಾಜ್ಯದಲ್ಲಿ ಗಟ್ಟಿಮುಟ್ಟಾಗಿದೆ. ಅಂಥದ್ರಲ್ಲಿ ಯಾರು ರಾಜೀನಾಮೆ ಕೊಟ್ಟು ಹೋಗ್ತಾರೆ?. ಬಿ.ಎಲ್.ಸಂತೋಷ್​ ಬಗ್ಗೆ ಬಿಜೆಪಿ ಯೋಚನೆ ಮಾಡಬೇಕು. ದೆಹಲಿಯಲ್ಲಿ ಕೂತ ನಾಯಕರು ಯೋಚನೆ‌ ಮಾಡಿದರೆ ಒಳ್ಳೆಯದು ಎಂದರು.

ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದಕ್ಕೆ ಕಾರಣ ಪಕ್ಷ ಕೆಲವೇ ಜನರ ಕೈಯಲ್ಲಿರುವುದು. ರಾಜ್ಯ ಬಿಜೆಪಿ ನಾಯಕರ ಪರಿಸ್ಥಿತಿ ಇಡೀ ಜಗತ್ತಿಗೆ ಗೊತ್ತಾಗಿದೆ. ಶಂಕರ ಪಾಟೀಲ್​ ಮುನೇನಕೊಪ್ಪ ಅವರೊಂದಿಗೆ ನಾನು ಮಾತನಾಡಿಲ್ಲ. ಹೈಕಮಾಂಡ್ ಕೂಡಾ ನನಗೆ ಏನೂ ಹೇಳಿಲ್ಲ ಎಂದು ತಿಳಿಸಿದರು.

ಕೆಲವರು ಕಾಂಗ್ರೆಸ್​ ಪಕ್ಷಕ್ಕೆ ಬರ್ತಿದ್ದಾರೆ- ಶೆಟ್ಟರ್​: ಗುರುವಾರ ಧಾರವಾಡದಲ್ಲಿ ಪಕ್ಷ ಸೇರ್ಪಡೆ ವಿಚಾರ ಕುರಿತು ಮಾತನಾಡಿದ ಜಗದೀಶ್​ ಶೆಟ್ಟರ್,​ ಕೆಲವರು ಕಾಂಗ್ರೆಸ್‌ ಪಕ್ಷಕ್ಕೆ ಬರುತ್ತಿದ್ದಾರೆ. ಇದು ಒಂದೇ ದಿನಕ್ಕೆ ಆಗುವುದಲ್ಲ. ಈ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು, ಪಕ್ಷಕ್ಕೆ ಕರೆದುಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದಿದ್ದರು.

ಮುಂದುವರೆದು ಮಾತನಾಡಿ, ನಾನು ಒಂದು ಜಿಲ್ಲೆ ಅಂತಾ ಹೇಳುವುದಿಲ್ಲ. ಇಡೀ ಕರ್ನಾಟಕದ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಬಹಳಷ್ಟು ಜನ ಸಂಪರ್ಕದಲ್ಲಿದ್ದಾರೆ. ಆದರೆ ಕರೆದುಕೊಳ್ಳುವ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಪಕ್ಷದ ನಿರ್ಧಾರಗಳ ಬಳಿಕ ಕೆಲವರು ಕಾಂಗ್ರೆಸ್ ಸೇರಿಕೊಳ್ಳುವರು ಎಂದು ತಿಳಿಸಿದ್ದರು.

ಇದನ್ನೂ ಓದಿ: Jagdish Shettar: ಕೆಲವರು ಕಾಂಗ್ರೆಸ್​ ಪಕ್ಷಕ್ಕೆ ಬರುವ ಪ್ರಕ್ರಿಯೆ ಚಾಲ್ತಿಯಲ್ಲಿದೆ: ಜಗದೀಶ್​ ಶೆಟ್ಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.