ETV Bharat / state

ಜೆಡಿಎಸ್ ಮತ್ತು ಕಾಂಗ್ರೆಸ್ ನಮ್ಮ ಪ್ರತಿಸ್ಪರ್ಧಿಗಳು, ಅವರನ್ನು ಚುನಾವಣೆಯಲ್ಲಿ ಎದುರಿಸುತ್ತೇವೆ : ಸಚಿವ​ ಅಶ್ವತ್ಥನಾರಾಯಣ್​

author img

By

Published : Mar 28, 2023, 8:51 PM IST

Higher Education Minister Dr. CN Ashwath Narayan
ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್​ ಅಶ್ವತ್ಥ್​ ನಾರಾಯಣ್​

ಚುನಾವಣೆಯಲ್ಲಿ ಯಾರ ಜೊತೆಗೂ ನಾವು ಹೊಂದಾಣಿಕೆ ಮಾಡುವುದಿಲ್ಲ ಎಂದು ಅಶ್ವತ್ಥನಾರಾಯಣ್​ ಹೇಳಿದರು.

ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಮ್ಮ ಪ್ರತಿಸ್ಪರ್ಧಿಗಳು : ಡಾ. ಸಿ.ಎನ್​ ಅಶ್ವತ್ಥ್​ ನಾರಾಯಣ್​

ಬೆಂಗಳೂರು : ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಮ್ಮ ಪ್ರತಿಸ್ಪರ್ಧಿಗಳಾಗಿದ್ದು ಅವರನ್ನು ಗುರುತಿಸಿಕೊಂಡಿದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡು ಸರ್ಕಾರ ರಚಿಸುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್​ ಅಶ್ವತ್ಥನಾರಾಯಣ್​ ಸ್ಪಷ್ಟಪಡಿಸಿದರು. ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಪಿ. ಯೋಗೀಶ್ವರ್ ಅವರು 2018 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಹೊಂದಾಣಿಕೆ ಮಾಡಿತ್ತು ಎಂಬ ಆರೋಪಕ್ಕೆ ಪ್ರತಿಕ್ರಿಯಿಸುತ್ತ, ಜೆಡಿಎಸ್ ಹಾಗೂ ಕಾಂಗ್ರೆಸ್ ನಮ್ಮ ಪ್ರತಿಸ್ಪರ್ಧಿಗಳು. ಸ್ಪಷ್ಟವಾಗಿ ಅವರನ್ನು ಚುನಾವಣೆಯಲ್ಲಿ ಎದುರಿಸುತ್ತೇವೆ. ಯಾರ ಜೊತೆಗೂ ನಾವು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈಗಾಗಾಲೇ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು, ಜೆಡಿಎಸ್ ಹಾಗೂ ಕಾಂಗ್ರೆಸ್ ನಮ್ಮ ಪ್ರತಿಸ್ಪರ್ಧಿಗಳು ಅವರನ್ನು ಚುನಾವಣೆಯಲ್ಲಿ ಎದುರಿಸುತ್ತೇವೆ ಎಂದು ಈ ಬಗ್ಗೆ ಸ್ಪಷ್ಟವಾಗಿ ಹೇಳುತ್ತಿದ್ದಾರೆ‌. ಎರಡು ಚುನಾವಣೆಗಳಲ್ಲಿ ಸರ್ಕಾರ ರಚನೆ ಮಾಡಿದ ಸಂದರ್ಭದಲ್ಲಿ ಬಹುಮತ ‌ಇರಲಿಲ್ಲ. ಈ ಬಾರಿ ಸಂಪೂರ್ಣ ಬಹುಮತವನ್ನು ಪಡೆಯುತ್ತೇವೆ. ಎದುರಾಳಿಯನ್ನು ಸ್ಪಷ್ಟವಾಗಿ ಗುರುತಿಸಿದ್ದೇವೆ. ಚುನಾವಣೆ ಗೆದ್ದೇ ಗೆಲ್ಲುತ್ತೇವೆ ಎಂದರು.

ಲೋಕಾಯುಕ್ತ ನಿಷ್ಕ್ರಿಯ ಮಾಡಿದ್ದು ಕಾಂಗ್ರೆಸ್​- ಸಚಿವ ಅಶ್ವತ್ಥನಾರಾಯಣ್ : ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ ವಿಚಾರವಾಗಿ ಮಾತನಾಡಿದ ಅಶ್ವತ್ಥನಾರಾಯಣ್​, ಮಾಡಾಳ್​​ ಅವರ ಬಂಧನದಿಂದ ಬಿಜೆಪಿಗೆ ಮುಜುಗರವಾಗಿಲ್ಲ. ಭ್ರಷ್ಟಾಚಾರವನ್ನು ಸಹಿಸಿಕೊಂಡು ಲೋಕಾಯುಕ್ತ ನಿಷ್ಕ್ರಿಯ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದರೆ ಕಾಂಗ್ರೆಸ್ ಹೀಗಿರುವಾಗ ಭ್ರಷ್ಟಾಚಾರದ ವಿರುದ್ಧ ಮಾತನಾಡಲು ಕಾಂಗ್ರೆಸ್​ಗೆ ನೈತಿಕತೆ ಇಲ್ಲ ಎಂದು ಕಿಡಿ ಕಾರಿದರು.

ಯಾವ ಕಾರಣಕ್ಕೂ ಭ್ರಷ್ಟಾಚಾರ ಮಾಡಿದವರನ್ನು ಕ್ಷಮಿಸಲು ಆಗುವುದಿಲ್ಲ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ನೀಡುವ ಕೆಲಸ ಆಗುತ್ತದೆ. 100%, 60%,40 % ಭ್ರಷ್ಟಾಚಾರ ಇರುವುದು ಕಾಂಗ್ರೆಸ್​ನಲ್ಲಿ ಮಾತ್ರ. ನಮ್ಮಲ್ಲಿ ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಕ್ಷಮಿಸಲ್ಲ. ನಮ್ಮ ಸರ್ಕಾರ ಈ ಬಗ್ಗೆ ನಿರ್ದಿಷ್ಟ ಕ್ರಮ ತೆಗೆದುಕೊಳ್ಳುತ್ತೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಆಗುತ್ತೆ ಎಂದು ಅಶ್ವತ್ಥನಾರಾಯಣ್​ ವಿವರಿಸಿದರು.

ಬಿಎಸ್​ವೈ ಮನೆಗೆ ಕಲ್ಲು‌ ತೂರಾಟ ಕಾಂಗ್ರೆಸ್​ ಕೆಲಸ-ಸಚಿವ ಅಶ್ವತ್ಥನಾರಾಯಣ್ : ರಾಜ್ಯ ರಾಜಕೀಯ ರಂಗವೂ ನಿನ್ನೆಯಿಂದ ಮತ್ತೊಂದು ಹೊಸ ಆಯಾಮ ಪಡೆದುಕೊಂಡಿರುವ ಬಿ ಎಸ್ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ವಿಚಾರ​ವಾಗಿ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಸರ್ಕಾರ ಹೊಸದಾಗಿ ಮೀಸಲಾತಿ ನೀತಿ ತಂದಿದೆ. ಅದು ಜನಪರವಾಗಿದ್ದು, ಎಲ್ಲ ಜಾತಿ ಜನಾಂಗಕ್ಕೆ‌ ನ್ಯಾಯ ಸಲ್ಲುವ ನಿಟ್ಟಿನಲ್ಲಿ ಕೆಲಸ ಆಗಿದೆ. ಎಸ್ ಸಿ, ಎಸ್ ಟಿ ಮೀಸಲಾತಿ ಹೆಚ್ಚಳ ಹಾಗೂ ಒಳ ಮೀಸಲಾತಿಗೆ ಬಹಳ ದಿನಗಳಿಂದ ಬೇಡಿಕೆ ಇತ್ತು. ಇದನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದರಿಂದ ಸಹಿಸದೆ ಕಲ್ಲು ತೂರಾಟ, ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.

ಜನರ ಆಶೀರ್ವಾದ ಬಿಜೆಪಿ ಮೇಲಿದೆ. ಕಲ್ಲು ತೂರಾಟ ಮಾಡಿರುವುದನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಯಾರೋ ಬೇಕಂತಲೇ ಮಾಡಿದ್ದು, ಇದು ಖಂಡನಾರ್ಹವಾಗಿದೆ. ಬಂಜಾರ, ಬೋವಿ ಸಮಾಜಕ್ಕೆ ಅವರ ಜನಸಂಖ್ಯೆಗಿಂತ ಹೆಚ್ಚು ಮೀಸಲಾತಿ ಸಿಕ್ಕಿದೆ.‌ ಆದರೆ ಅವರಿಗೆ ಮಾಹಿತಿ ಇಲ್ಲದೆ ಹೀಗಾಗಿದೆ. ಅವರ ಭಾವನೆ ‌ಗೌರವಿಸುವ ಕೆಲಸ ಸರ್ಕಾರದಿಂದ ಆಗಿದ್ದು, ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಆಗಬಾರದು ಎಂದು ತಿಳಿಸಿದರು.

ಇದನ್ನೂ ಓದಿ :ಬಿಎಸ್​ವೈ ಮನೆ ಮೇಲೆ ದಾಳಿ ಹಿಂದೆ ಬಿಜೆಪಿ ಕುತಂತ್ರ: ಡಿ.ಕೆ. ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.