ETV Bharat / state

262 ಹೊಸ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Nov 30, 2023, 2:24 PM IST

Updated : Nov 30, 2023, 4:03 PM IST

Inauguration of New Ambulance
262 ನೂತನ ಅಂಬುಲೆನ್ಸ್ ಲೋಕಾರ್ಪಣೆ: ತುರ್ತು ಚಿಕಿತ್ಸೆ ಸಿಗದೇ ಯಾರೂ ಮೃತಪಡಬಾರದು: ಸಿಎಂ ಸಿದ್ದರಾಮಯ್ಯ

Inauguration of new Ambulance: ಬೆಂಗಳೂರಿನಲ್ಲಿಂದು ಸಿಎಂ ಸಿದ್ದರಾಮಯ್ಯ 262 ನೂತನ ಆಂಬ್ಯುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡಿದರು.

ಹೊಸ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ

ಬೆಂಗಳೂರು: 108 ಆರೋಗ್ಯ ಕವಚ ತುರ್ತು ಆಂಬ್ಯುಲೆನ್ಸ್ ಸೇವೆಯಡಿ ನೂತನ 262 ಆಂಬ್ಯುಲೆನ್ಸ್‌ಗಳನ್ನು ಸಿಎಂ ಸಿದ್ದರಾಮಯ್ಯ ಇಂದು ಲೋಕಾರ್ಪಣೆ ಮಾಡಿದ್ದಾರೆ. ವಿಧಾನಸೌದದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ಯಾರೂ ತುರ್ತು ಚಿಕಿತ್ಸೆ ಸಿಗದೇ ಮೃತಪಡಬಾರದು. ಅಪಘಾತದ ನಂತರ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಲಭಿಸಬೇಕು. ಹೆರಿಗೆ ಸಂದರ್ಭದಲ್ಲಿ ಚಿಕಿತ್ಸೆ ಸಿಗದೇ ತಾಯಿ, ಮಗು ಸಾಯಬಾರದು. ಹೃದಯಾಘಾತ ಆದಾಗ ಚಿಕಿತ್ಸೆ ಸಿಗದೇ ಸಾವನ್ನಪ್ಪುವ ಪ್ರಕರಣಗಳು ನಡೆಯಬಾರದು. ಅದಕ್ಕಾಗಿಯೇ 2008ರಲ್ಲಿ ತುರ್ತು ಆರೋಗ್ಯಸೇವೆ ತರಲಾಯಿತು. ರಾಜ್ಯದಲ್ಲಿ 236 ತಾಲ್ಲೂಕುಗಳಿವೆ. ತಾಲೂಕಿಗೆ ತಲಾ ನಾಲ್ಕರಂತೆ ಕನಿಷ್ಟ 840 ಆಂಬ್ಯುಲೆನ್ಸ್ ಇರಬೇಕು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕರೆ ಬಹಳ ಅನುಕೂಲ ಆಗುತ್ತದೆ'' ಎಂದರು.

''ಹೆಚ್ಚುವರಿ ಆಂಬ್ಯುಲೆನ್ಸ್ ಖರೀದಿಗೆ ಹಣಕಾಸು ಒದಗಿಸ್ತೇವೆ. ಎಲ್ಲ ಜಿಲ್ಲೆಗಳಲ್ಲಿ ಎಮ್‌ಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಇರಬೇಕಿತ್ತು. ವಿವಿಧ ಸ್ಕ್ಯಾನ್​ಗಳಿಗೆ ಬಡವರು ವೆಚ್ಚ ಭರಿಸಲು ಆಗಲ್ಲ. ಇಲ್ಲಿಯವರೆಗೆ 25 ಕೋಟಿ ಜನರಿಗೆ ಸಿಎಂ ನಿಧಿಯಡಿ ಪರಿಹಾರ ಕೊಡುವ ಕೆಲಸ ಆಗಿದೆ. ನಾನು ಸಿಎಂ ನಿಧಿಯಡಿ 1/4 ವೆಚ್ಚ ಭರಿಸ್ತೇನೆ. ಜನರಿಗೆ ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಕೊಡ್ತಾರೆ ಅನ್ನೋ ಭಾವನೆ ಇದೆ.‌ ಜಯದೇವ ಆಸ್ಪತ್ರೆಯಲ್ಲಿ ಉತ್ತಮ ವ್ಯವಸ್ಥೆ ಇದೆ ಅಂದ್ರೆ ಬೇರೆ ಕಡೆಯೂ ಕೊಡೋಕ್ಕಾಗುತ್ತೆ. ಈಗ ಸರ್ಕಾರಿ ವೈದ್ಯ ಹುದ್ದೆಗಳನ್ನು ಭರ್ತಿ ಮಾಡಲು ಸೂಚಿಸಿದ್ದೇನೆ. ಈಗ ಮೆಡಿಕಲ್ ಕಾಲೇಜುಗಳು ಜಾಸ್ತಿಯಾಗಿ ಡಾಕ್ಟರ್​ಗಳೂ ಜಾಸ್ತಿಯಾಗಿ ಬಿಟ್ಟಿದ್ದಾರೆ.‌ ವೈದ್ಯರ ಹುದ್ದೆ ಭರ್ತಿಗೆ ಉತ್ತರ ಕರ್ನಾಟಕಕ್ಕೂ ಹೆಚ್ಚು ಗಮನ ಕೊಡಲು ಹೇಳಿದ್ದೇನೆ'' ಎಂದು ಹೇಳಿದರು.

''ಪಂಚ ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕತೆ ಹಾಳಾಗುತ್ತೆ ಎಂದು ಪ್ರಧಾನಿ ಮೋದಿ ಟೀಕೆ ಮಾಡುತ್ತಾರೆ. ಆದರೆ ಈಗ ಅವರೇ ಉಚಿತ ಯೋಜನೆಗಳನ್ನು ಕೊಡುತ್ತಿದ್ದಾರೆ. ರಾಜ್ಯದ ಆರ್ಥಿಕತೆ ಕುಸಿತವಾಗಿದ್ದರೆ, ನೂತನ ಆಂಬ್ಯುಲೆನ್ಸ್‌​ಗಳನ್ನು ಕೊಡಲು ಸಾಧ್ಯವಾಗುತ್ತಿತ್ತಾ'' ಎಂದು ಇದೇ ವೇಳೆ ಪ್ರಶ್ನಿಸಿದರು.

ಖಾಸಗಿ ಆಸ್ಪತ್ರೆಗಳ ಜೊತೆ ಒಳಒಪ್ಪಂದ: ''70ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳು ನಮ್ಮ ರಾಜ್ಯದಲ್ಲಿದ್ದು 10 ಸಾವಿರಕ್ಕೂ ಹೆಚ್ಚು ವೈದ್ಯರನ್ನು ತಯಾರು ಮಾಡುತ್ತಿದ್ದೇವೆ. ಇಡೀ ಪ್ರಪಂಚದ ವಿವಿಧ ಭಾಗಗಳಲ್ಲಿ ನಮ್ಮ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಇರುವ ನಮ್ಮ ವ್ಯವಸ್ಥೆಯನ್ನು ಪರಿಗಣಿಸಿ ಬೇರೆ ರಾಜ್ಯಗಳು ಅದನ್ನು ಅನುಕರಣೆ ಮಾಡುತ್ತಿವೆ. ಇದರ ಜತೆಗೆ ನಮ್ಮಲ್ಲಿ ಅತಿ ಹೆಚ್ಚು ಖಾಸಗಿ ಮೆಡಿಕಲ್ ಕಾಲೇಜುಗಳು ಇವೆ. ಮೆಡಿಕಲ್ ಕಾಲೇಜುಗಳ ಮಾದರಿಯಲ್ಲಿ ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜುಗಳು ನಮ್ಮ ರಾಜ್ಯದಲ್ಲೇ ಹೆಚ್ಚಾಗಿವೆ'' ಎಂದು ಸಿಎಂ ತಿಳಿಸಿದರು.

''108 ಆಂಬ್ಯುಲೆನ್ಸ್ ಸೇವೆಗೆ ಹೊಸ ದಿಕ್ಕು ತೋರಲು ಆಧುನಿಕ ತಂತ್ರಜ್ಞಾನ ಅಳವಡಿಸಲು 262 ನೂತನ ಆಂಬ್ಯುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಮಂತ್ರಿಗಳು ಹಾಗೂ ಕಾರ್ಯದರ್ಶಿಗಳಿಗೆ ಮನವಿ ಮಾಡುತ್ತೇನೆ. 108 ಅಂಬ್ಯುಲೆನ್ಸ್​ ಚಾಲಕರು ಖಾಸಗಿ ಆಸ್ಪತ್ರೆಗಳ ಜೊತೆ ಒಳಒಪ್ಪಂದ ಮಾಡಿಕೊಂಡು ನಮ್ಮ ಕನಕಪುರ, ಮಳವಳ್ಳಿ ಚಾಮರಾಜನಗರ ಭಾಗದಲ್ಲಿ ಯಾವುದೇ ಅಪಘಾತವಾದರೂ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಾರೆ".

"ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸಾ ವ್ಯವಸ್ಥೆ ಇದ್ದರೂ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ನಂತರ ಅವರ ಬಿಲ್​ಗಳು ದುಬಾರಿಯಾಗಿ ಶಾಸಕರ ಬಳಿ ಸಹಾಯ ಕೇಳಿಕೊಂಡು ಬರುತ್ತಾರೆ. ನಾವು ಶಾಸಕರು ಮುಖ್ಯಮಂತ್ರಿಗಳ ಬಳಿ ಪರಿಹಾರ ಕೇಳಬೇಕಾಗುತ್ತದೆ. ನಾವು ನಮ್ಮ ಜೇಬಿನಿಂದಲೂ ಹಣ ನೀಡಬೇಕಾಗುತ್ತದೆ. ಕೆಲವೊಮ್ಮೆ ಈ ರೀತಿ ತಿಂಗಳಿಗೆ 20 ಲಕ್ಷದವರೆಗೂ ನೀಡಬೇಕಾಗುತ್ತದೆ. ಹೀಗಾಗಿ ನೀವು ಯಾರಿಗೆ ಈ ಅಂಬ್ಯುಲೆನ್ಸ್​ ಚಾಲಕರು ಹಾಗೂ ಇದರ ಗುತ್ತಿಗೆ ನೀಡಿರುತ್ತೀರಿ ಅವರಿಗೆ ಸರಿಯಾದ ತರಬೇತಿ ನೀಡಿ ಅವರು ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳನ್ನು ಕರೆದೊಯ್ಯುವಂತೆ ಮಾಡಬೇಕು'' ಎಂದು ಸಲಹೆ ನೀಡಿದರು.

''ಬೌರಿಂಗ್ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜು, ವಿಕ್ಟೋರಿಯಾ ಆಸ್ಪತ್ರೆಗಳು ಉತ್ತಮ ಗುಣಮಟ್ಟದ ಚಿಕಿತ್ಸಾ ವ್ಯವಸ್ಥೆ ಹೊಂದಿದೆ. ನಾನು ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಚಾಲಕರಿಗೆ ಹೊಣೆಗಾರಿಕೆ ನೀಡಬೇಕು, ಅವರ ವಾಹನಕ್ಕೆ ಜಿಪಿಎಸ್ ಅಳವಡಿಸಬೇಕು. ಅಪಘಾತಗೊಂಡಾಗ ಗಾಯಾಳುಗಳು ಅವರ ಸಂಬಂಧಿಕರು ಗಾಬರಿಯಲ್ಲಿ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಈ ವಿಚಾರದಲ್ಲಿ ಅಧಿಕಾರಿಗಳು ಗಮನಹರಿಸಬೇಕು‌'' ಎಂದರು.

ಆಂಬ್ಯುಲೆನ್ಸ್​ ಸೇವೆಯಲ್ಲಿ ಕುಂದು ಕೊರತೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ''ಆಂಬ್ಯುಲೆನ್ಸ್ ಸೇವೆಯಲ್ಲಿ ಸಾಕಷ್ಟು ಕುಂದು ಕೊರತೆ ಇವೆ. ಗುಣಮಟ್ಟದ ವೃದ್ಧಿಯಲ್ಲಿ ಆರೋಗ್ಯ ಕವಚ ಸೇವೆ ಕುಂಠಿತವಾಗಿದೆ. ಈ ಸೇವೆಯಲ್ಲಿ ಸಾಕಷ್ಟು ಕುಂದುಕೊರತೆಗಳಿವೆ. ಲೋಪದೋಷಗಳನ್ನು ಸರಿಪಡಿಸಲು ಮುಂದಾಗಿದ್ದೇವೆ. ಹಳೆಯ ಅಂಬ್ಯುಲೆನ್ಸ್ ವಾಹನಗಳಿಗೆ ಮುಕ್ತಿ ಕೊಟ್ಟು, ಸದ್ಯ 262 ಹೊಸ ವಾಹನಗಳಿಗೆ ಚಾಲನೆ ನೀಡಿದ್ದೇವೆ'' ಎಂದು ತಿಳಿಸಿದರು.

''ಹೊಸ ತಂತ್ರಜ್ಞಾನ ಉಪಯೋಗ ಮಾಡಿಕೊಂಡು ರೋಗಿಯ ಪರಿಸ್ಥಿತಿ ಆದಷ್ಟು ಬೇಗ ಆಸ್ಪತ್ರೆಗೆ ಮುಟ್ಟಿಸುವ ಕೆಲಸ ಆಗಬೇಕು. ಈ ರೀತಿಯ ಬದಲಾವಣೆ ಆಸ್ಪತ್ರೆಯಲ್ಲಿ ಆಗಬೇಕು. ಹೈವೇಗಳಲ್ಲಿ ಆ್ಯಕ್ಸಿಡೆಂಟ್ ಆದಾಗ ತುರ್ತು ಚಿಕಿತ್ಸೆ ನೀಡುವ ಕೆಲಸ ಆಗಬೇಕು. ಈ ಯೋಜನೆ ಜಾರಿಗೆ ತರುವ ಕೆಲಸ ಮಾಡುತ್ತೇನೆ. ಆರೋಗ್ಯ ಸೇವೆ ಪ್ರತಿ ಜಿಲ್ಲೆಯಲ್ಲಿ ಸಿಗಲಿದೆ" ಎಂದರು.

ಇದನ್ನೂ ಓದಿ: ಬಿ ಆರ್ ಪಾಟೀಲ್ ಜೊತೆ ಮಾತನಾಡಿದ್ದೇನೆ, ಅವರು ಅಧಿವೇಶನಕ್ಕೆ ಬರಲಿದ್ದಾರೆ: ಸಿಎಂ ಸಿದ್ದರಾಮಯ್ಯ

Last Updated :Nov 30, 2023, 4:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.