ETV Bharat / state

ಖಾಸಗಿ ಬಸ್‌ಗಳಲ್ಲಿ ಧ್ವನಿ ಪ್ರಕಟಣೆ ಅಳವಡಿಸಲು ಹೈಕೋರ್ಟ್ ಸೂಚನೆ

author img

By ETV Bharat Karnataka Team

Published : Nov 9, 2023, 9:03 PM IST

High Court orders to install voice announcement in private buses
ಖಾಸಗಿ ಬಸ್‌ಗಳಲ್ಲಿ ಧ್ವನಿ ಪ್ರಕಟಣೆ ಅಳವಡಿಸಲು ಹೈಕೋರ್ಟ್ ಸೂಚನೆ

ವಿಶೇಷ ಚೇತನರಿಗೆ ನೆರವಾಗಲು ಬಸ್‌ಗಳಲ್ಲಿ ಆಡಿಯೋ ರೂಪದಲ್ಲಿ ಪ್ರಕಟಣಾ ವ್ಯವಸ್ಥೆ ಅಳವಡಿಸುವಂತೆ ಖಾಸಗಿ ಬಸ್ ಆಪರೇಟರ್‌ಗಳಿಗೆ ನಿರ್ದೇಶನ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

ಬೆಂಗಳೂರು: ದೃಷ್ಟಿ ವಿಶೇಷ ಚೇತನರೂ ಸೇರಿದಂತೆ ದಿವ್ಯಾಂಗರಿಗೆ ನೆರವಾಗಲು ಬಸ್‌ಗಳಲ್ಲಿ ಆಡಿಯೋ ರೂಪದಲ್ಲಿ ಪ್ರಕಟಣಾ ವ್ಯವಸ್ಥೆ ಅಳವಡಿಸುವಂತೆ ಖಾಸಗಿ ಬಸ್ ಆಪರೇಟರ್‌ಗಳಿಗೆ ನಿರ್ದೇಶನ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಬೆಂಗಳೂರಿನ ದೃಷ್ಟಿ ವಿಶೇಷ ಚೇತನ ಎನ್. ಶ್ರೇಯಸ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎನ್.ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ, ಅರ್ಜಿದಾರರು ಬಿಎಂಟಿಸಿ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಆಡಿಯೋ ವ್ಯವಸ್ಥೆ ಅಳವಡಿಸಲು ನಿರ್ದೇಶನ ನೀಡುವಂತೆ ಕೋರಿದ್ದಾರೆ. ಆದರೆ, ಕೆಲವು ಮಾರ್ಗಗಳಲ್ಲಿ ಖಾಸಗಿ ಬಸ್‌ಗಳೂ ಕೂಡ ಸಂಚಾರ ಕೈಗೊಳ್ಳುತ್ತಿರುವುದರಿಂದ, ಆ ಬಸ್​ಗಳಲ್ಲಿ ವಿಶೇಷ ಚೇತನರ ಪ್ರಯಾಣಕ್ಕೆ ಅಗತ್ಯ ನೆರವನ್ನು ಕಲ್ಪಿಸಿಕೊಡಬೇಕಿದೆ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರ ಈ ವಿಚಾರದಲ್ಲಿ ಸಾಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ. ಸರ್ಕಾರ ಖಾಸಗಿ ಬಸ್ ಆಪರೇಟರ್‌ಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿ ಸುತ್ತೋಲೆ ಹೊರಡಿಸಬೇಕು. ಆ ನಿರ್ದೇಶನ ಹಾಲಿ ಹಲವು ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬಸ್‌ಗಳಿಗೆ ಮಾತ್ರವಲ್ಲ, ಹೊಸದಾಗಿ ಪರ್ಮಿಟ್ ನೀಡುವ ಬಸ್​ಗಳಿಗೂ ಅನ್ವಯವಾಗುವಂತೆ ಇರಬೇಕು ಎಂದು ನ್ಯಾಯಾಲಯ ತಾಕೀತು ಮಾಡಿತು.

ಇದನ್ನೂ ಓದಿ: ಮಕ್ಕಳ ಪಾಲನೆಗೆ ನಿರ್ದೇಶನ ಕೋರಿ ಸ್ವಯಂಪ್ರೇರಿತ ಅರ್ಜಿ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್

ಅರ್ಜಿದಾರರು ಬಿಎಂಟಿಸಿ ಮತ್ತು ರಾಜ್ಯ ಸರ್ಕಾರ ವಿಶೇಷ ಚೇತನ ಸ್ನೇಹಿ ಪ್ರಯಾಣಿಕರಿಗೆ ಅನುಕೂಲವಾಗವಂತೆ ಮೊಬೈಲ್ ಆ್ಯಪ್​ ಸಿದ್ಧಪಡಿಸುವಂತೆ ಮನವಿ ಸಲ್ಲಿಸಬೇಕು. ಅದನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ. ಬಿಎಂಟಿಸಿ ಮತ್ತು ರಾಜ್ಯ ಸರ್ಕಾರ ಈ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಹೆಚ್ಚುವರಿ ಅಫಿಡವಿಟ್ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿರುವ ನ್ಯಾಯಾಲಯ ನಾಲ್ಕು ವಾರ ವಿಚಾರಣೆ ಮುಂದೂಡಿದೆ.

ಅರ್ಜಿದಾರರು, ಆರಂಭದಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮತ್ತು ಮೆಟ್ರೊ ರೈಲುಗಳಲ್ಲಿ ಆಡಿಯೋ ಪ್ರಕಟಣಾ ವ್ಯವಸ್ಥೆ ಇತ್ತು. ಇದರಿಂದ ದೃಷ್ಟಿ ವಿಶೇಷ ಚೇತನರಿಗೆ ಎಲ್ಲೆಲ್ಲಿ ಇಳಿಯಬೇಕು ಎಂಬುದಕ್ಕೆ ಅನುಕೂಲವಾಗುತ್ತದೆ. ಆದರೆ ಆ ವ್ಯವಸ್ಥೆಯನ್ನು ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಲಾಗಿದೆ. ಇದರಿಂದ ತೀವ್ರ ತೊಂದರೆ ಆಗುತ್ತದೆ ಎಂದು ಪೀಠಕ್ಕೆ ವಿವರಿಸಿದರು.

ಆದರೆ ಇಂತಹ ಆಡಿಯೋ ವ್ಯವಸ್ಥೆ ನೆರೆಯ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಾರಿಗೆ ಬಸ್‌ಗಳಲ್ಲಿ ಚಾಲ್ತಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಓಲಾ ಮತ್ತು ಉಬರ್ ಟ್ಯಾಕ್ಸಿಗಳಲ್ಲೂ ಸಹ ಗೂಗಲ್ ಮ್ಯಾಪ್ ಸಹಾಯದಿಂದ ನೆರವು ಲಭ್ಯವಾಗುತ್ತಿದೆ. ಆಡಿಯೋ ವ್ಯವಸ್ಥೆ ಇಲ್ಲದಿದ್ದರೆ ದಿವ್ಯಾಂಗರಿಗೆ ಸಾರ್ವಜನಿಕ ಹಾಗೂ ಖಾಸಗಿ ಬಸ್ ಹಾಗೂ ಇತರ ಸಂಚಾರ ವ್ಯವಸ್ಥೆಗಳಲ್ಲಿ ತೊಂದರೆ ಆಗಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಇದನ್ನೂ ಓದಿ: ಪೋಕರ್​, ರಮ್ಮಿ ಆನ್​ಲೈನ್​ ಗೇಮ್​ ಮೇಲೆ ತಮಿಳುನಾಡು ಸರ್ಕಾರ ವಿಧಿಸಿದ್ದ ನಿಷೇಧ ತೆರವುಗೊಳಿಸಿದ ಮದ್ರಾಸ್​ ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.