ETV Bharat / state

ನಟ ಗಣೇಶ್‌ ಅವರಿಗೆ ಮನೆ ನಿರ್ಮಿಸಲು ಅವಕಾಶ ನೀಡಿದ ಹೈಕೋರ್ಟ್‌

author img

By ETV Bharat Karnataka Team

Published : Sep 1, 2023, 9:53 PM IST

ನಟ ಗಣೇಶ್
ನಟ ಗಣೇಶ್

ನಟ ಗಣೇಶ್​ ಕಿಶನ್ ಅವರ​ ಮನೆ ನಿರ್ಮಾಣಕ್ಕೆ ಹೈಕೋರ್ಟ್​ ಅವಕಾಶ ನೀಡಿದೆ.

ಬೆಂಗಳೂರು : ಬಂಡೀಪುರ ಸಮೀಪದ ಹಂಗಳ ಹೋಬಳಿಯ ಜಕ್ಕಳ್ಳಿಯಲ್ಲಿ ನಟ ಗಣೇಶ್​ ಕಿಶನ್​ ಅವರಿಗೆ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ಹೈಕೋರ್ಟ್, ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ತಿಳಿಸಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಜಕ್ಕಳ್ಳಿಯಲ್ಲಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅರಣ್ಯ ಇಲಾಖೆ ನೀಡಿದ್ದ ನೊಟೀಸ್ ಪ್ರಶ್ನಿಸಿ ಗಣೇಶ್​ ಕಿಶನ್​ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಜೀವನ ನಡೆಸುವುದಕ್ಕಾಗಿ ಶಾಶ್ವತ ಕಟ್ಟಡ ನಿರ್ಮಾಣ ಮಾಡಬಹುದು ಎಂದು ತಿಳಿಸಿದೆ. ಆದರೆ, ವಾಣಿಜ್ಯ ಬಳಕೆಗೆ ಅವಕಾಶವಿಲ್ಲ. ಅಲ್ಲದೆ, ಅರ್ಜಿದಾರರ ವಾಸದ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಮನೆ ನಿರ್ಮಾಣಕ್ಕೆ ಅನುಮತಿ ನೀಡಬೇಕು. ಒಂದು ವೇಳೆ ಅಂತಿಮ ಆದೇಶ ನಮ್ಮ ಕಕ್ಷಿದಾರರ ವಿರುದ್ಧ ಬಂದಲ್ಲಿ ನ್ಯಾಯಾಲಯದ ಆದೇಶದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದೆ.

ಈ ವೇಳೆ, ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ತಾತ್ಕಾಲಿಕ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಮಾತ್ರ ಅವಕಾಶವಿದೆ ಎಂದು ಆಕ್ಷೇಪಿಸಿದರು. ಇದಕ್ಕೆ ಪೀಠ, ಹಾಗಾದರೆ ಬೇರೆಯವರಿಗೆ ಕಟ್ಟಡ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಹೇಗೆ ಅನುಮತಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಹೊಸ ದಾಖಲೆಗಳನ್ನು ನೀಡಿದ್ದಾರೆ. ಮೇಲ್ನೋಟಕ್ಕೆ ಅವೆಲ್ಲವೂ ಹೊಸ ಅನುಮತಿಗಳೇ ಆಗಿವೆ. ಹೀಗಾಗಿ, ಅರ್ಜಿದಾರರಿಗೆ ಕಟ್ಟಡ ನಿರ್ಮಾಣ ಮಾಡಲು ಅನುಮತಿ ಇದೆ ಎಂದು ತಿಳಿಸಿತು.

ಅಲ್ಲದೆ, ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿಗಾ ಸಮಿತಿಗೆ ನೀಡಬೇಕಾದ ಮನವಿಯನ್ನು ಅಡ್ವೊಕೇಟ್ ಜನರಲ್ ಅವರ ಮೂಲಕ ಸಲ್ಲಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಿತು. ಅಲ್ಲದೇ, ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಚಿತ್ರನಟ ಗಣೇಶ್ ಜಮೀನು ಖರೀದಿಸಿದ್ದರು. ಈ ಜಮೀನಿನಲ್ಲಿ ತೋಟದ ಮನೆ ಕಟ್ಟುವುದಕ್ಕೆ ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಮನವಿ ಕುರಿತು ಪರಿಶೀಲನೆ ನಡೆಸಿದ್ದ ಅರಣ್ಯ ಇಲಾಖೆ ಮತ್ತು ಪ್ರಾದೇಶಿಕ ಆಯುಕ್ತರು ತಾತ್ಕಾಲಿಕವಾದ ವಾಸದ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ್ದರು. ಜೊತೆಗೆ, ಗಣೇಶ್​ ಕಿಶನ್​ ಅವರು ತಾತ್ಕಾಲಿಕ ವಾಸದ ಮನೆ ನಿರ್ಮಾಣ ಮಾಡಲಾಗುವುದು, ಯಾವುದೇ ರೀತಿಯ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಮುಂದಾಗುವುದಿಲ್ಲ. ಅಲ್ಲದೆ, ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುವುದಿಲ್ಲ ಹಾಗೂ ವನ್ಯ ಜೀವಿಗಳಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗುವಂತಹ ಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ ಎಂದು ಮುಚ್ಚಳಿಕೆಯನ್ನೂ ಬರೆದು ಕೊಟ್ಟಿದ್ದರು.

ಆದರೆ ನಂತರದಲ್ಲಿ ಗಣೇಶ್​ ಕಿಶನ್​ ಬೃಹತ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅರಣ್ಯ ಇಲಾಖೆ ಗಣೇಶ್​ಗೆ ನೊಟೀಸ್ ಜಾರಿ ಮಾಡಿತ್ತು. ಅಲ್ಲದೇ ಮುಂದಿನ ಆದೇಶದವರೆಗೂ ಕಾಮಗಾರಿ ನಡೆಸದಂತೆ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿದ ಗಣೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಆರೋಪ: ನಟ ಗಣೇಶ್​ ಉತ್ತರ ಪರಿಶೀಲಿಸುವವರೆಗೂ ಕ್ರಮಕ್ಕೆ ಮುಂದಾಗದಂತೆ ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.