ETV Bharat / state

ಚಾಮರಾಜನಗರ: ಸತತ ಮಳೆಯಿಂದ ಗರಿಗೆದರಿದ ಕೃಷಿ ಚಟುವಟಿಕೆ - Rain Intensify Agri Activities

author img

By ETV Bharat Karnataka Team

Published : May 17, 2024, 8:57 AM IST

Updated : May 17, 2024, 2:22 PM IST

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ.

agricultural activity  sowing work  Chamarajanagar
ಸತತ ಮಳೆ: ಚಾಮರಾಜನಗರದಲ್ಲಿ ಕೃಷಿ ಚಟುವಟಿಕೆಗೆ ಚುರುಕು (ETV Bharat)

ಬಿತ್ತನೆ ಕಾರ್ಯ ಶುರು ಮಾಡಿದ ರೈತರು (ETV Bharat)

ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದಲೂ ಉತ್ತಮ ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆ ಚುರುಕು ಪಡೆದುಕೊಂಡಿದೆ. ರೈತರು ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಹಂಗಳ, ಕಸಬಾ, ತೆರಕಣಾಂಬಿ ಹೋಬಳಿ, ಚಾಮರಾಜನಗರ ತಾಲೂಕು ಹಾಗೂ ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ. ಭೂಮಿ ಹದ ಮಾಡಿಕೊಳ್ಳುತ್ತಿರುವ ರೈತರು ಸೂರ್ಯಕಾಂತಿ, ಜೋಳ, ಅಲಸಂದೆ ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆಯಲ್ಲಿ ತೊಡಗಿದ್ದಾರೆ. ಶೇ.20ರಷ್ಟು ಬಿತ್ತನೆ ಕಾರ್ಯ ಈಗಾಗಲೇ ಮುಗಿದಿದೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ: ಕೃಷಿ ಇಲಾಖೆ ಅಧಿಕಾರಿಗಳು ಮಳೆಗೂ ಮುನ್ನವೇ ಬಿತ್ತನೆ ಬೀಜಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಇಲಾಖೆ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ಇದರಿಂದಾಗಿ ಈ ಬಾರಿ ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕೆ ಸಮಸ್ಯೆ ಇಲ್ಲ ಎಂದು ಹೇಳಲಾಗುತ್ತಿದೆ.

ಎತ್ತುಗಳಿಗೆ ಹೆಚ್ಚಿದ ಬೇಡಿಕೆ: ಗ್ರಾಮೀಣ ಭಾಗದ ಬಹುತೇಕ ರೈತರ ಬಳಿ ಎತ್ತುಗಳಿಲ್ಲ. ಹೀಗಾಗಿ ಜಾನುವಾರುಗಳನ್ನು ಹೊಂದಿರುವ ರೈತರಿಗೆ ಬೇಡಿಕೆ ಹೆಚ್ಚಿದೆ. ನೇಗಿಲಿನ ಮೂಲಕವೇ ಬಿತ್ತನೆ ಮಾಡಿಸಬೇಕೆಂಬುದು ರೈತರ ಆಶಯ. ಹೀಗಾಗಿ ಕೆಲವು ರೈತರು ಒಂದು ದಿನಕ್ಕೆ 2 ಸಾವಿರ ರೂ. ನೀಡಿ ಸೂರ್ಯಕಾಂತಿ, ಜೋಳ, ಅಲಸಂದೆ ಬಿತ್ತನೆ ಮಾಡಿಸುತ್ತಿದ್ದಾರೆ.

''ಬಿತ್ತನೆ ವೇಳೆ ಮಾತ್ರ ನಮಗೆ ಬೇಡಿಕೆ ಹೆಚ್ಚಿರುತ್ತದೆ. ಸಾಮಾನ್ಯ ದಿನಗಳಲ್ಲಿ ನಮ್ಮನ್ನು ಯಾರೂ ಕರೆಯುವುದಿಲ್ಲ'' ಎಂದು ಎತ್ತುಗಳ ಮಾಲೀಕ ಪ್ರಸಾದ್ ತಿಳಿಸಿದರು.

ಬಿತ್ತನೆಗೆ ಟ್ರ್ಯಾಕ್ಟರ್ ಮೊರೆ ಹೋದ ರೈತರು: ಬಹುತೇಕ ರೈತರು ಬರ ಹಾಗು ಸಾಕಣೆಗೆ ತೊಂದರೆಯಾದ ಕಾರಣ ದನ ಕರುಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ ಜಮೀನಿನಲ್ಲಿ ಉಳುವೆ ಹಾಗೂ ಬಿತ್ತನೆ ಕಾರ್ಯಕ್ಕೆ ಜಾನುವಾರು ಸಿಗದೇ ಟ್ರ್ಯಾಕ್ಟರ್ ಸಹಾಯದಿಂದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: 'ಕೇಂದ್ರದಿಂದ ಹಣ ಬಂದರೆ ಇನ್ನುಳಿದ ರೈತರಿಗೆ ಪರಿಹಾರ ಬಿಡುಗಡೆ': ಸತೀಶ್ ಜಾರಕಿಹೊಳಿ - Satish Jarkiholi

Last Updated :May 17, 2024, 2:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.