ETV Bharat / state

ಸಚಿವರಿಗೆ ಹಣ ಸಂಗ್ರಹದ ಟಾರ್ಗೆಟ್ ನೀಡಲಾಗಿದೆ, ಹಣ ಕೊಟ್ಟವರು ಅಧಿಕಾರದಲ್ಲಿ ಇರ್ತಾರೆ: ಹೆಚ್​ಡಿಕೆ ಆರೋಪ

author img

By ETV Bharat Karnataka Team

Published : Nov 12, 2023, 12:52 PM IST

Updated : Nov 12, 2023, 6:55 PM IST

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ

ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗಿ ನಾನು ಪ್ರತಿಪಕ್ಷ ನಾಯಕ ಆಗುವುದು ವದಂತಿ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ

ಬೆಂಗಳೂರು: "ಕರ್ನಾಟಕದಲ್ಲಿ ಕಾಂಗ್ರೆಸ್ ತಂದಿರುವ ಪಂಚ ಗ್ಯಾರಂಟಿಗಳನ್ನು ತೆಲಂಗಾಣ ಸೇರಿದಂತೆ ಪಂಚರಾಜ್ಯಗಳ ಜನತೆ ನಂಬಬಾರದು. ಈ ಗ್ಯಾರಂಟಿಗಳಿಗೆ ಯಾವ ಕಾರಣಕ್ಕೂ ಮರುಳಾಗಬೇಡಿ, ಕಾಂಗ್ರೆಸ್ ಮೋಸ ಮಾಡುತ್ತಿದೆ" ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ತೆಲಂಗಾಣದಲ್ಲಿ ನಮ್ಮ ಟೆಂಪರರಿ ಚೀಫ್ ಮಿನಿಸ್ಟರ್, ಡೂಪ್ಲಿಕೇಟ್ ಚೀಫ್ ಮಿನಿಸ್ಟರ್​ಗಳು ಹಾಗೂ ಮಂತ್ರಿಗಳು ಗ್ಯಾರಂಟಿಗಳ ಬಗ್ಗೆ ಮಾತಾಡಿದ್ದಾರೆ. ಈ ಗ್ಯಾರಂಟಿಗಳ ಬೆನ್ನು ತಟ್ಟಿಕೊಳ್ಳೋಕೆ ಹೋಗಿ ಮುಖಭಂಗವನ್ನೂ ಅನುಭವಿಸಿದ್ದಾರೆ. ತೆಲಂಗಾಣಕ್ಕೆ ಹೋಗಿ ಡೂಪ್ಲಿಕೇಟ್ ಚೀಫ್ ಮಿನಿಸ್ಟರ್(ಸಿದ್ದರಾಮಯ್ಯ) ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 2 ಲಕ್ಷ ಉದ್ಯೋಗ ಭರ್ತಿ ಬಗ್ಗೆ ಮಾತಾಡಿದ್ದಾರೆ. ಇನ್ನುಳಿದಂತೆ ಹಲವು ಘೋಷಣೆ ಮಾಡಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಆ ಐದು ವರ್ಷಗಳಲ್ಲಿ 2.45 ಲಕ್ಷ ಉದ್ಯೋಗ ನೇಮಕಾತಿಯನ್ನೇ ಮಾಡಿಲ್ಲ. ನಮ್ಮ ರಾಜ್ಯದಲ್ಲಿ ಎರಡೂವರೆ ಲಕ್ಷ ಖಾಲಿ ಸರ್ಕಾರಿ ಹುದ್ದೆಗಳು ಇದ್ದರೂ ತೆಲಂಗಾಣಕ್ಕೆ ಹೋಗಿ ಭಾಷಣ ಮಾಡಿದ್ದಾರೆ. ಇಲ್ಲಿ ಖಾಲಿ ಇಟ್ಟುಕೊಂಡು, ಅಲ್ಲಿ ಹೋಗಿ ಖಾಲಿ ಹುದ್ದೆ ಭರ್ತಿ ಬಗ್ಗೆ ಭಾಷಣ ಮಾಡಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.

"ನಮ್ಮ ಡೂಪ್ಲಿಕೇಟ್ ಚೀಫ್ ಮಿನಿಸ್ಟರ್ (ಡಿ ಕೆ ಶಿವಕುಮಾರ್) ಅಲ್ಲಿ ಹೋಗಿ 5 ತಾಸು ತ್ರೀಫೇಸ್ ವಿದ್ಯುತ್ ಕೊಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಅಲ್ಲಿ 24 ಗಂಟೆ ಈಗಾಗಲೇ ಕರೆಂಟ್ ಕೊಡುತ್ತಿದ್ದಾರೆ. ಅಲ್ಲಿ ಹೋಗಿ ನಿರಂತರ ವಿದ್ಯುತ್ ಕೊಡುವ ಕಡೆ 5 ತಾಸು ವಿದ್ಯುತ್ ನ ಭರವಸೆ ನೀಡುವ ಭಾಷಣ ಮಾಡಿ ನಗೆಪಾಟಲಿಗೀಡಾಗಿದ್ದಾರೆ. 200 ಯೂನಿಟ್ ವಿದ್ಯುತ್ ಫ್ರೀ ಎಂದರು ಯಾರಿಗೆ ಎಷ್ಟು ಕೊಡುತ್ತಿದ್ದಾರೆ. ಮಹದೇವಪ್ಪ ನಿನಗೂ ಫ್ರೀ, ಕಾಕಾ ಪಾಟೀಲ ನಿನಗೂ 200 ಯೂನಿಟ್ ಕರೆಂಟ್ ಫ್ರೀ ಅಂದಿದ್ದರು. ಆದರೆ ಈಗ ಮಹದೇವಪ್ಪನಿಗೂ ಕತ್ತಲು, ಕಾಕಾಪಾಟೀಲಗೂ ಕತ್ತಲು, ಇಬ್ಬರೂ ನನಗೂ ಕತ್ತಲು, ನಿನಗೂ ಕತ್ತಲು ಎಂದು ಮಾತಾಡಿಕೊಳ್ಳುವ ಪರಿಸ್ಥಿತಿ ಬಂದಿದೆ" ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಸರ್ಕಾರದ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಸಾಲದ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆ ಇದೆ: "ಈಗ ಗ್ಯಾರಂಟಿಗಳಿಗೆ ಸಾಲ ಮಾಡೋಕೆ ಹೊರಟಿರುವ ಸಿದ್ದರಾಮಯ್ಯ ಅಲ್ಲಿ ತೆಲಂಗಾಣಕ್ಕೆ ಹೋಗಿ ಭಾಷಣ ಮಾಡಿ ನರೇಂದ್ರ ಮೋದಿಗೆ ಚಾಲೆಂಜ್ ಮಾಡ್ತಾರೆ. ನನ್ನ ಹೆಸರು ಕೇಳಿದ್ರೆ ನರೇಂದ್ರ ಮೋದಿಗೆ ಭಯ, ಮೋದಿ ದೇಶವನ್ನು ದಿವಾಳಿ ಎಬ್ಬಿಸಿದ್ರು ಅಂತಾ ಹೇಳಿದ್ದಾರೆ. ನಾನು ನಿಮಗೆ ಕೇಳ್ತೇನೆ 35 ಸಾವಿರ ಕೋಟಿ ಸಾಲವನ್ನು ಎಸ್ ಎಂ ಕೃಷ್ಣ ಮಾಡಿದ್ರು, 15,635 ಕೋಟಿ ಧರ್ಮಸಿಂಗ್ ಸಾಲ ಮಾಡಿದ್ದರು, 3,545 ಕೋಟಿ ರೂ. ನಾನು ಸಾಲ ಮಾಡಿದ್ದೆ, 25 ಸಾವಿರ ಕೋಟಿ ಯಡಿಯೂರಪ್ಪ, 9357 ಸದಾನಂದಗೌಡ, 13,464 ಜಗದೀಶ್ ಶೆಟ್ಟರ್ ಒಟ್ಟು 12 ವರ್ಷದಲ್ಲಿ 1 ಲಕ್ಚ ಕೋಟಿ ನಾವು ಮಾಡಿದ್ದೆವು. ಆದರೆ ನಿಮ್ಮ 5 ವರ್ಷದಲ್ಲಿ 2.45 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದೀರಿ. ನಿಮಗೆ ಯಾವ ನೈತಿಕತೆ ಇದೆ ಸಾಲದ ಬಗ್ಗೆ ಮಾತನಾಡುವುದಕ್ಕೆ" ಎಂದು ಹೆಚ್​ಡಿಕೆ ಪ್ರಶ್ನಿಸಿದ್ದಾರೆ.

"ಈ ರಾಜ್ಯದ ಸಿಎಂ ಹೈಕಮಾಂಡ್ ನೋಟಿಸ್ ಮೇಲೆ ನಡೆಯುತ್ತಿದ್ದಾರೆ. ಸಚಿವರಿಗೂ ಹಣ ಸಂಗ್ರಹದ ಟಾರ್ಗೆಟ್ ನೀಡಲಾಗಿದೆ. ಯಾರು ಹೆಚ್ಚು ಹಣ ಸಂಗ್ರಹ ಮಾಡಿ ಕೊಡುತ್ತಾರೋ ಅವರು ಸರ್ಕಾರದಲ್ಲಿ ಇರುತ್ತಾರೆ. ಸಿಎಂ ಕೂಡ ಇದೇ ನೋಟಿಸ್​ನಲ್ಲಿ ಅಧಿಕಾರದಲ್ಲಿದ್ದಾರೆ. ಯಾರು ಹೆಚ್ಚಿಗೆ ಹಣ ಕೊಡುತ್ತಾರೋ ಅವರು ಅಧಿಕಾರದಲ್ಲಿ ಮುಂದುವರೆಯುತ್ತಾರೆ. ಯಾರು ಕೊಡುವುದಿಲ್ಲವೋ ಅವರು ಮಂತ್ರಿಗಳಾಗಿರೊಲ್ಲ, ಯಾವುದೇ ಪವರ್ ಶೇರಿಂಗ್ ಇಲ್ಲ. ಈಗಾಗಲೇ ಹೈಕಮಾಂಡ್ ಇದನ್ನೇ ಹೇಳಿದೆ, ಈ ರೀತಿ ನೋಟಿಸ್ ನಲ್ಲಿರುವ ಸಿಎಂ ಮತ್ತೊಂದು ರಾಜ್ಯಕ್ಕೆ ಹೋಗಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ" ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಸಚಿವರೊಬ್ಬರು ಸಿಎಂ ಮನೆ ರಿನೋವೇಷನ್​ಗೆ ಫರ್ನಿಚರ್ ಕೊಟ್ಟಿದ್ದಾರಂತೆ -ಹೆಚ್​ಡಿಕೆ: "ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ ಕುಮಾರಸ್ವಾಮಿ, ಸಿಎಂ ಮನೆಯಲ್ಲಿ ಕಾನ್ಫರೆನ್ಸ್ ಹಾಲ್ ಮಾಡಿದ್ದಾರೆ. ಅದಕ್ಕೆ‌ ಎಷ್ಟೋ ಖರ್ಚು ಮಾಡಿದ್ದಾರೋ?, ನಿಮ್ಮನ್ನೆಲ್ಲ ಒಳಗೆ ಬಿಟ್ಟಿದ್ದಾರೊ ಇಲ್ಲ ಗೊತ್ತಿಲ್ಲ, ಮೂರು ಕೋಟಿನೋ ಎಷ್ಟೋ, ಅದು ಬೇರೆ ಅಂತೆ. ಸರ್ಕಾರದ ದುಡ್ಡಲ್ಲ, ಸಚಿವರೊಬ್ಬರು ಸಿಎಂ ಮನೆ ರಿನೋವೇಷನ್​ಗೆ ಸ್ಟಾಂಗ್ಲೆ ಅಂತ ಫರ್ನಿಚರ್ ಕೊಟ್ಟಿದ್ದಾರಂತೆ. ಈ ಬಗ್ಗೆ ಸತ್ಯ ಹರಿಶ್ಚಂದ್ರರೇ ಉತ್ತರ ಕೊಡಬೇಕು. ಇದರ ಮೌಲ್ಯ 1.9 ಕೋಟಿ ಅಂತೆ ಒಂದು ಸೋಫಾ ಸೆಟ್" ಎಂದು ಹೆಚ್​ಡಿಕೆ ಆರೋಪಿಸಿದ್ದಾರೆ.

"ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗಿ ನಾನು ಪ್ರತಿಪಕ್ಷ ನಾಯಕ ಆಗುವುದು ವದಂತಿ, ಬಿಜೆಪಿ ಜೊತೆ ಜೆಡಿಎಸ್ ವಿಲೀನ ಪ್ರಶ್ನೆ ಇಲ್ಲ, ನಮ್ಮ ಪಕ್ಷದ ಐಡೆಂಟಿಟಿ ಉಳಿಸಿಕೊಂಡಿದ್ದೇವೆ ಎನ್ ಡಿ.ಎ ನಲ್ಲಿ ಇದ್ದೇವೆ ಮುಂದುವರೆಯುತ್ತೇವೆ ಅಷ್ಟೆ" ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನ.15 ರಂದು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕಾರ: ಬಿ.ವೈ ವಿಜಯೇಂದ್ರ

Last Updated :Nov 12, 2023, 6:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.