ETV Bharat / state

ಎರಡು ಪಕ್ಷಗಳ ಕಾರ್ಯಕರ್ತರ ಮಾರಾಮಾರಿ ಪ್ರಕರಣ: 3 ಪ್ರತ್ಯೇಕ ಎಫ್ಐಆರ್ ದಾಖಲು

author img

By

Published : Mar 18, 2023, 10:27 AM IST

FIR
ಎಫ್ಐಆರ್

ಫ್ಲೆಕ್ಸ್‌ ಹಾಕುವ ವಿಚಾರವಾಗಿ ಕಾಂಗ್ರೆಸ್​, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ - ಮೂರು ಪ್ರತ್ಯೇಕ ಎಫ್ಐಆರ್ ದಾಖಲು.

ಬೆಂಗಳೂರು: ಫ್ಲೆಕ್ಸ್‌ ಹಾಕುವ ವಿಚಾರವಾಗಿ ನಡೆದ ಮಾರಾಮಾರಿ ಸಂಬಂಧ ಗೋವಿಂದರಾಜ ನಗರ ಠಾಣೆಯಲ್ಲಿ ಒಟ್ಟು ಮೂರು ಪ್ರತ್ಯೇಕ ಎಫ್ಐಆರ್​ಗಳು ದಾಖಲಾಗಿವೆ. ಘಟನೆಯ ಕುರಿತು ಪೊಲೀಸರೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ನೀಡಿರುವ ದೂರು- ಪ್ರತಿದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಲ್ಲೆ ಹಾಗೂ ಕೊಲೆ ಬೆದರಿಕೆ ಪ್ರಕರಣ: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪದ‌ ಮೇಲೆ 36 ಜನರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಲ್ಲದೇ ಕಾಂಗ್ರೆಸ್ ಕಾರ್ಯಕರ್ತೆ ನೀಡಿರುವ ದೂರಿನ ಅನ್ವಯ 10 ಜನರ ವಿರುದ್ಧ ಹಲ್ಲೆ ಹಾಗೂ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಪ್ರತಿಯಾಗಿ ಬಿಜೆಪಿ ಕಾರ್ಯಕರ್ತೆ ಸಹ ದೂರು ನೀಡಿದ್ದು, ಅದರನ್ವಯ 8 ಜನರ ವಿರುದ್ಧ ಹಲ್ಲೆ, ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ.

ಫ್ಲೆಕ್ಸ್ ಹಾಕುವ ವಿಚಾರಕ್ಕೆ ನಿನ್ನೆ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಬಿಜಿಎಸ್ ಮೈದಾನದಲ್ಲಿ ಮಾರಾಮಾರಿ ನಡೆದಿತ್ತು. ಭಾನುವಾರ ಬಿಜಿಎಸ್ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕ್ರಮಕ್ಕಾಗಿ ಫ್ಲೆಕ್ಸ್​ ಹಾಕಲು ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನ ತಡೆದಿದ್ದ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದ ಹಿಂದಿನ ದಿನ ಫ್ಲೆಕ್ಸ್​ ಹಾಕಿಕೊಳ್ಳಿ ಎಂದಾಗ ಎರಡೂ ಗುಂಪುಗಳ ನಡುವೆ ತಳ್ಳಾಟ, ನೂಕಾಟ ನಡೆದಿತ್ತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ: ವಿಜಯನಗರದ ಎಂಸಿ ಲೇಔಟ್‌ನ ಬಿಜಿಎಸ್ ಆಟದ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಿನ್ನೆ(ಶುಕ್ರವಾರ) ಮಾರಾಮಾರಿ ನಡೆದಿತ್ತು. ಮೈದಾನದಲ್ಲಿ ಮಾರ್ಚ್​​ 19 ರಂದು ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಕಾಂಗ್ರೆಸ್ ಕಾರ್ಯಕ್ರಮಕ್ಕಾಗಿ ಅನುಮತಿ ಪಡೆದು ಉಗಾದಿ ಉತ್ಸವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಎರಡೂ ಕಡೆಯವರ ನಡುವೆ ಗಲಾಟೆ ನಡೆದು ಹೊಡೆದಾಡಿಕೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಗಲಾಟೆ ವೇಳೆ ಕೆಲ ಪೊಲೀಸರಿಗೂ ಗಾಯಗಳಾಗಿದೆ. ಗಾಯಗೊಂಡವರನ್ನು ವಿಜಯನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಘಟನೆ ಕುರಿತಂತೆ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಧ್ಯಮದವರೊಂದಿಗೆ ಮಾತನಾಡಿ, ''ವಿಜಯನಗರದ ಎಂ.ಸಿ. ಲೇಔಟ್‌ನ ಬಿಜಿಎಸ್ ಆಟದ ಮೈದಾನದಲ್ಲಿ ಮಾರ್ಚ್​​ 19 ರಂದು ಸ್ತ್ರೀ ಶಕ್ತಿ ಮಹಿಳಾ ಸಮಾವೇಶಕ್ಕೆ ಉಮಾಶಂಕರ್ ಎಂಬುವರು ಬಿಬಿಎಂಪಿ ಕಡೆಯಿಂದ ಅನುಮತಿ ಪಡೆದಿದ್ದರು. ಈ ಸಮಾವೇಶದ ಸಂಬಂಧ ಒಂದು ಗುಂಪಿನ ಕಾರ್ಯಕರ್ತರು ಬ್ಯಾನರ್ ಕಟ್ಟುತ್ತಿದ್ದಾಗ ಮತ್ತೊಂದು ಗುಂಪಿನ ಕಾರ್ಯಕರ್ತರು ಬಂದು ಗಲಾಟೆ ಮಾಡಿದ್ದರು. ಆ ವೇಳೆ, ಸ್ಥಳದಲ್ಲಿ ಕೆಲ ಮಹಿಳೆಯರೂ ಸಹ ಇದ್ದರು'' ಎಂದು ತಿಳಿಸಿದ್ದರು.

ಇದನ್ನೂ ಓದಿ: ಕಾರ್ಯಕ್ರಮ ಆಯೋಜನೆ ವಿಚಾರಕ್ಕೆ ಗಲಾಟೆ: ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.