ETV Bharat / state

ಜೆಡಿಎಸ್​ನಿಂದ ಸಿ ಕೆ ನಾಣು, ಸಿಎಂ ಇಬ್ರಾಹಿಂ ಉಚ್ಛಾಟನೆ; ಕಾರ್ಯಕಾರಣಿ ಸಭೆಯಲ್ಲಿ ನಿರ್ಣಯ

author img

By ETV Bharat Karnataka Team

Published : Dec 9, 2023, 3:07 PM IST

Updated : Dec 9, 2023, 4:37 PM IST

expulsion-of-ck-nanu-cm-ibrahim-from-jds-decision-in-executive-meeting
ಜೆಡಿಎಸ್​ನಿಂದ ಸಿ ಕೆ ನಾಣು, ಸಿಎಂ ಇಬ್ರಾಹಿಂ ಉಚ್ಛಾಟನೆ : ಕಾರ್ಯಕಾರಣಿ ಸಭೆಯಲ್ಲಿ ನಿರ್ಣಯ

ಜೆಡಿಎಸ್ ಪಕ್ಷದಿಂದ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಸಿ ಕೆ ನಾಣು ಹಾಗೂ ಸಿಎಂ ಇಬ್ರಾಹಿಂ ಅವರನ್ನು ಉಚ್ಛಾಟನೆ ಮಾಡಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಆದೇಶ ಹೊರಡಿಸಿದ್ದಾರೆ.

ಜೆಡಿಎಸ್​ನಿಂದ ಸಿ ಕೆ ನಾಣು, ಸಿಎಂ ಇಬ್ರಾಹಿಂ ಉಚ್ಛಾಟನೆ; ಕಾರ್ಯಕಾರಣಿ ಸಭೆಯಲ್ಲಿ ನಿರ್ಣಯ

ಬೆಂಗಳೂರು : ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ. ಇಬ್ರಾಹಿಂ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ. ನಾಣು ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡು ಇಬ್ರಾಹಿಂ ಅವರನ್ನು ಉಚ್ಚಾಟನೆಗೊಳಿಸಲಾಗಿದೆ. ಇಬ್ರಾಹಿಂ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಅವರನ್ನು ಅಮಾನತುಗೊಳಿಸಲಾಗಿತ್ತು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಜಿ ಪ್ರಧಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಈ ನಿರ್ಣಯ ಮಾಡಲಾಗಿದೆ. ಕಾರ್ಯಕಾರಣಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ.ದೇವೇಗೌಡರು, ರಾಷ್ಟ್ರೀಯ ಕಾರ್ಯಕಾರಿಣಿಗೆ ತೆಲಂಗಾಣ, ಆಂಧ್ರಪ್ರದೇಶ ನಾಯಕರು ಹೊರತುಪಡಿಸಿ ಹರಿಯಾಣ, ಪಂಜಾಬ್, ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ಉತ್ತರಾಖಂಡ್, ಮಹಾರಾಷ್ಟ್ರ, ತಮಿಳುನಾಡು, ಬಿಹಾರ ರಾಜ್ಯಗಳ ನಾಯಕರು ಬಂದಿದ್ದಾರೆ. ಈ ಸಭೆಯಲ್ಲಿ ಎರಡು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದರು.

JDS executive meeting at bengaluru
ಜೆಡಿಎಸ್​ ರಾಷ್ಟ್ರೀಯ ಕಾರ್ಯಕಾರಣಿ ಸಭೆ

ಪಕ್ಷ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ. ನಾಣು ಅವರು, ರಾಷ್ಟ್ರೀಯ ಅಧ್ಯಕ್ಷರು ಜೀವಂತ ಇದ್ದಾಗಲೇ ಪರ್ಯಾಯ ಸಭೆ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಹಾಗಾಗಿ ಸಿ.ಕೆ.ನಾಣು ಅವರನ್ನು ಉಚ್ಚಾಟನೆ ಮಾಡಲಾಗಿದೆ. ಅದೇ ರೀತಿ ಸಿ.ಎಂ. ಇಬ್ರಾಹಿಂ ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ನೀಡಿದ್ದಾರೆ. ಅವರನ್ನು ಕೆಲ ದಿನಗಳ ಹಿಂದೆ ಅಮಾನತು ಮಾಡಲಾಗಿತ್ತು. ಆದರೆ, ಈಗ ಸಿ.ಎಂ. ಇಬ್ರಾಹಿಂ ಅವರನ್ನೂ ಸಹ ಉಚ್ಚಾಟನೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಎಲ್ ಡಿಎಫ್ ಜೊತೆ ಕೇರಳ ಜೆಡಿಎಸ್ ಘಟಕ ಉಳಿಯುತ್ತದೆ. ಕೇರಳ ಘಟಕದ ಅಧ್ಯಕ್ಷರಿಗೆ ಲೆಟರ್ ಕೊಟ್ಟಿದ್ದೇನೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಇಂಡಿಯಾ ಸಭೆ ಕರೆದಾಗ ನಿತೀಶ್ ಕುಮಾರ್ ಕರೆ ಮಾಡಿದ್ದರು. ಅವರು ಕೆಲ ಷರತ್ತು ವಿಧಿಸಿದ್ದರು. ಮೈತ್ರಿಕೂಟದಿಂದ ನಮ್ಮನ್ನು ಹೊರಗಿಟ್ಟರು. ಹಾಗಾಗಿ, ಪಕ್ಷದ ಹಿತದೃಷ್ಟಿಯಿಂದ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಾಯಿತು ಎಂದು ತಿಳಿಸಿದರು.

JDS executive meeting at bengaluru
ಜೆಡಿಎಸ್​ ರಾಷ್ಟ್ರೀಯ ಕಾರ್ಯಕಾರಣಿ ಸಭೆ

ಸಿ.ಎಂ. ಇಬ್ರಾಹಿಂ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೌಡರು, ಸಿ.ಎಂ ಇಬ್ರಾಹಿಂ ಎಲ್ಲಿಂದ ಎಲ್ಲಿಗೆ ಬಂದ್ರು. ಹಾಸ್ಟೆಲ್ ನಲ್ಲಿ ನನ್ನ ರೂಮ್ ನಲ್ಲಿ ಇಟ್ಟುಕೊಂಡಿದ್ದೆ. ಎಷ್ಟು ಬದಲಾವಣೆ ಆಗಿದೆ. ಇನ್ನೂ ಜನ ನಂಬುತ್ತಾರಾ?. ಈ ಬಗ್ಗೆ ಚರ್ಚೆ ಬೇಡ ಎಂದರು.

ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಘೋಷಣೆಯಾದಾಗಿನಿಂದಲೂ ಸಿ.ಎಂ. ಇಬ್ರಾಹಿಂ ಅವರು ಪಕ್ಷದ ವಿರುದ್ಧ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಕೇರಳ ಸೇರಿದಂತೆ ವಿವಿಧ ಸಂಘಟನೆಗಳ ಜೊತೆ ಪಕ್ಷಕ್ಕೆ ವಿರುದ್ಧವಾಗಿ ಸಭೆ ಮಾಡಿದ್ದಾರೆ. ಅಲ್ಲದೇ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ್ದರೂ ನಮ್ಮದೇ ಒರಿಜಿನಲ್ ಜೆಡಿಎಸ್ ಅಂತ ಪದೇ ಪದೇ ಹೇಳಿಕೊಂಡು ಬಂದಿದ್ದಾರೆ. ಹಾಗಾಗಿ, ಇಂದು ಇಬ್ಬರು ನಾಯಕರ ಉಚ್ಚಾಟನೆ ನಿರ್ಣಯವನ್ನು ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಇನ್ನು, ಕೇರಳದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿ ಎನ್‍ಡಿಎ ಮೈತ್ರಿಯಿಂದ ಹೊರ ಬರಲು ದೇವೇಗೌಡರಿಗೆ ಸಿ.ಕೆ. ನಾಣು ಗಡುವು ನೀಡಿದ್ದರು. ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಸಿ.ಕೆ.ನಾಣು ಅವರು, ದೇವೇಗೌಡರಿಗೆ ಪತ್ರ ಬರೆದು, ಬಿಜೆಪಿಯೊಂದಿಗಿನ ಮೈತ್ರಿಯಿಂದ ಹಿಂದೆ ಸರಿಯಲು ಕೋರಿದ್ದರು. ಈ ಸಂಬಂಧ ರಾಷ್ಟ್ರೀಯ ಕಾರ್ಯಕಾರಿಣಿ ತೀರ್ಮಾನ ಕೈಗೊಂಡಿದ್ದು, ಡಿಸೆಂಬರ್ 9ರ ಒಳಗೆ ನೀವು ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಳ್ಳಬೇಕು. ಈ ಸಂಬಂಧ ಸ್ಪಷ್ಟನೆ ನೀಡದಿದ್ದರೆ, ನಾವುಗಳು ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ನಾಣು ಅವರನ್ನೂ ಸಹ ಉಚ್ಛಾಟಿಸಲು ಸಭೆ ನಿರ್ಣಯಿಸಿತು.

ಇದಕ್ಕೂ ಮುನ್ನ ಮಾತನಾಡಿದ್ದ ಕುಮಾರಸ್ವಾಮಿ, ಕೆಲವು ನಾಯಕರು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಎರಡು ನಿರ್ಣಯಗಳ ಬಗ್ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡರು ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳುವ ಮೂಲಕ ಸಿ ಕೆ ನಾಣು ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸುಳಿವು ನೀಡಿದ್ದರು. ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಪ್ರಮುಖ ಎರಡು ನಿರ್ಣಯಗಳನ್ನು ಮಾಡಿದ್ದಾರೆ. ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯದ ಎಲ್ಲಾ ಘಟಕಗಳ ಅಧ್ಯಕ್ಷರು ಭಾಗಿಯಾಗಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಈ ಬಗ್ಗೆ ಮಾಹಿತಿ ನೀಡ್ತಾರೆ ಎಂದು ತಿಳಿಸಿದ್ದರು.

ಸಿಎಂ ಇಬ್ರಾಹಿಂ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಸಿ.ಎಂ. ಇಬ್ರಾಹಿಂ, ಮಹಿಮಾ ಪಾಟೀಲ್ ಹಾಗೂ ನಾಡಗೌಡರ ಜೊತೆ ಪ್ರವಾಸ ಮಾಡುವುದಾಗಿ ಹೇಳಿದ್ದಾರೆ. ಅವರು ಯಾವ ಪಕ್ಷದಲ್ಲಿ ಇದ್ದಾರೆ ಎಂದು ನಿಮಗೆ ತಿಳಿಯಲಿದೆ. ರಾಷ್ಟ್ರೀಯ ಉಪಾಧ್ಯಕ್ಷರ ವಿಷಯವೂ ಇಂದಿನ ಕಾರ್ಯಕಾರಣಿಯಲ್ಲಿ ಚರ್ಚೆ ಆಗಿದೆ ಎಂದು ಹೇಳಿದ್ದರು.

ಕಾರ್ಯಕಾರಣಿ ಸಭೆ : ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕಾರ್ಯಕಾರಿ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕರು ಹಾಗೂ ಮಾಜಿ ಶಾಸಕರು, ಕೇರಳ, ತಮಿಳುನಾಡು, ಪಂಜಾಬ್, ಯುಪಿ, ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳದ ಜೆಡಿಎಸ್ ರಾಜ್ಯಾಧ್ಯಕ್ಷರು, ಕಾರ್ಯಾಧ್ಯಕ್ಷರು ಭಾಗಿಯಾಗಿದ್ದರು.

ಸಭೆ ಕರೆದಿರುವ ನಾಣು: ಸಿ.ಕೆ. ನಾಣು ಅವರು ಡಿಸೆಂಬರ್ 11ರಂದು ರಾಷ್ಟ್ರೀಯ ಕಾರ್ಯಕಾರಣಿ ಸಭೆ ಕರೆದಿದ್ದಾರೆ. ಈ ಬಗ್ಗೆ ಜೆಡಿಎಸ್​ನಿಂದ ಅಮಾನತಾಗಿರುವ ಸಿ.ಎಂ. ಇಬ್ರಾಹಿಂ ಶುಕ್ರವಾರ ಮಾಹಿತಿ ನೀಡಿದ್ದರು. ರಾಷ್ಟ್ರೀಯ ಉಪಾಧ್ಯಕ್ಷರು ಬೆಂಗಳೂರಿನಲ್ಲಿ ಕರೆದಿದ್ದು, ಎಲ್ಲಾ ರಾಜ್ಯದ ಅಧ್ಯಕ್ಷರು, ಉಪಾಧ್ಯಕ್ಷರನ್ನು ಸಭೆಗೆ ಆಹ್ವಾನಿಸಲಾಗಿದೆ. ಗುಜರಾತ್, ರಾಜಸ್ಥಾನ, ತಮಿಳುನಾಡು, ತೆಲಂಗಾಣದ ಅಧ್ಯಕ್ಷರ ಸಭೆ ಕರೆಯಲಾಗಿದೆ. ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇರುವ ಎಲ್ಲರೂ ಬರಬಹುದು ಎಂದು ಹೇಳಿದ್ದರು. ಈ ನಡುವೆ ಇಂದು ದೇವೇಗೌಡ ನೇತೃತ್ವದಲ್ಲಿ ನಡೆದ​ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಸಿ.ಕೆ. ನಾಣು ಹಾಗೂ ಸಿ.ಎಂ ಇಬ್ರಾಹಿಂ ಅವರನ್ನು ಜೆಡಿಎಸ್​ನಿಂದ ಉಚ್ಛಾಟನೆ ಮಾಡಲಾಗಿದೆ.

ಇದನ್ನೂ ಓದಿ : ಕಾಡಾನೆ ದಾಳಿಯಿಂದಾಗಿರುವ ಬೆಳೆ ನಾಶ ಪ್ರಕರಣಗಳಿಗೆ ಪರಿಹಾರ ವಿತರಣೆ: ಅರಣ್ಯ ಸಚಿವ ಖಂಡ್ರೆ

Last Updated :Dec 9, 2023, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.