ETV Bharat / state

ಕುಡಿಯುವ ನೀರು ಕಲುಷಿತಗೊಳ್ಳದಂತೆ ಎಚ್ಚರ ವಹಿಸಿ:ಡಾ ಕೆ.ವಿ.ರಾಜೇಂದ್ರ ಸಲಹೆ - video conference meeting

author img

By ETV Bharat Karnataka Team

Published : May 22, 2024, 6:44 PM IST

ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಡಿಸಿ ಡಾ ಕೆ.ವಿ. ರಾಜೇಂದ್ರ ಅವರು ಜಿಲ್ಲಾ ಹಾಗೂ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

mysore dc dr k v rajendra held a meeting with the authorities
ಡಿಸಿ ಡಾ ಕೆ.ವಿ.ರಾಜೇಂದ್ರ ಅವರು ವಿವಿಧ ಇಲಾಖೆ ಅಧಿಕಾರಗಳೊಂದಿಗೆ ಸಭೆ ನಡೆಸಿದರು. (ETV Bharat)

ಮೈಸೂರು: ನೀರಿನ ಮೂಲಗಳು ಕಲುಷಿತಗೊಳ್ಳದಂತೆ ಎಚ್ಚರ ವಹಿಸಬೇಕು. ಕುಡಿಯುವ ನೀರಿನ ಮೂಲಗಳಿಗೆ ಕಲುಷಿತ ನೀರು ಸೇರ್ಪಡೆ ಆಗುತ್ತಿರುವ ಬಗ್ಗೆ ದೂರು ಬಂದಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ ಕೆ.ವಿ. ರಾಜೇಂದ್ರ ಸೂಚಿಸಿದರು.

ತಾಲೂಕು ಅಧಿಕಾರಿಗಳ ಸಭೆ : ಜಿಲ್ಲಾ ಪಂಚಾಯಿತಿಯಲ್ಲಿ ಆಯಾ ತಾಲೂಕು ತಹಶೀಲ್ದಾರ್, ಪ.ಪಂ ಮುಖ್ಯಾಧಿಕಾರಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನಗರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳೊಂದಿಗೆ ಕುಡಿಯುವ ನೀರು ಪೂರೈಕೆ ಸಂಬಂಧ ಸಭೆ ನಡೆಸಿ ಅವರು ಮಾತನಾಡಿದರು.

ಸ್ವಚ್ಛತೆ ಬಗ್ಗೆ ಗಮನ ಕೊಡಿ: ತಾಲೂಕಿನ ತಹಶೀಲ್ದಾರ್, ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಗ್ರಾಮ ಸ್ವಚ್ಛತೆ ಕುರಿತು ಗ್ರಾಮದ ಕೆಲವು ವಾರ್ಡ್‌ಗಳಲ್ಲಿನ ಚರಂಡಿ ನಿರ್ವಹಣೆ ಹಾಗೂ ಸ್ವಚ್ಛತೆಯ ಬಗ್ಗೆ ಅಧಿಕಾರಿಗಳು ಅಗತ್ಯವಾಗಿ ಗಮನ ಹರಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ನೀರು ಗಂಟಿ, ಆಶಾ ಕಾರ್ಯಕರ್ತೆಯರು ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ ನೀರಿನ ಶೇಖರಣೆ ಹಾಗೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಆಸ್ಪತ್ರೆ: ಹವಾಮಾನ ಬದಲಾವಣೆ ಮತ್ತಿತರ ಕಾರಣಗಳಿಂದ ಕರಳು ಬೇನೆ (ಗ್ಯಾಸ್ಟ್ರೋ ಎಂಟರಿಟೈಸ್) ಸೇರಿದಂತೆ ಕರುಳು ಸಂಬಂಧಿ ರೋಗಕ್ಕೀಡಾಗುವವರಿಗಾಗಿ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 5 ಬೆಡ್ ಕಾಯ್ದಿರಿಸಬೇಕು. ಈ ಸಂಬಂಧ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ದಾಖಲಾದರೆ ಸಂಬಂಧಪಟ್ಟ ತಾಲೂಕು ಆಸ್ಪತ್ರೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಹೋಟೆಲ್ ಗಳಲ್ಲಿ, ರಸ್ತೆಯ ಬದಿಯ ಪಾನಿಪುರಿ ಇನ್ನಿತರ ಫಾಸ್ಟ್ ಫುಡ್ ಸೆಂಟರ್​ಗಳಲ್ಲಿ ಸ್ವಚ್ಛತೆ ಕಾಪಾಡುವುದರ ಬಗ್ಗೆ ತಿಳಿಸಬೇಕು. ಜೊತೆಗೆ ಶುದ್ಧ ಕುಡಿಯುವ ನೀರು ಹಾಗೂ ಬಿಸಿ ನೀರು ಒದಗಿಸಲು ಸಲಹೆ ನೀಡಬೇಕು ಎಂದು ಸೂಚಿಸಿದರು.

ಪರಿಶೀಲಿಸಿ ಕುಡಿಯುವ ನೀರು ಪೂರೈಸಿ: ಗ್ರಾಮೀಣ ಜನವಸತಿ ಪ್ರದೇಶಗಳಿಗೆ ನೀರನ್ನು ಸರಬರಾಜು ಮಾಡುವ ಮುನ್ನ ನೀರಿನ ಮೂಲ, ನೀರಿನ ಸಂಗ್ರಹಣೆ ಹಾಗೂ ನೀರು ಪೂರೈಸುವ ಸ್ಥಳಕ್ಕೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ನಂತರ ಸರಬರಾಜು ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಎತ್ತರ ಇರುವ ಬೋರ್ವೆಲ್ ಗಳ ಸುತ್ತಲೂ ಪ್ಲಾಟ್ ಫಾರಂಗಳನ್ನು ನಿರ್ಮಿಸಿ ಚರಂಡಿ ನೀರು ಹೋಗದಂತೆ ತಡೆಯಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ಸಹಾಯವಾಣಿ 0821-252 6355 ಅಧವಾ ಸಂ. 0821-2423800, 1077ಕಂಟ್ರೋಲ್ ರೂಂ ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಜಿಪಂ ಸಿಇಒ ಕೆ.ಎಂ.ಗಾಯಿತ್ರಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಪೈಪುಗಳು ರಸ್ತೆ, ಚರಂಡಿಗಳ ಮೂಲಕ ಹಾದು ಹೋಗಿ ಒಡೆದಿದ್ದರೆ, ತಕ್ಷಣ ಸರಿಪಡಿಸಬೇಕು. ಇಲ್ಲದಿದ್ದರೆ ಒಡೆದ ಪೈಪ್‌ನಿಂದ ಕಲುಷಿತ ನೀರು ಪೂರೈಕೆ ಆಗುವ ಸಾಧ್ಯತೆ ಇರುತ್ತದೆ. ತಕ್ಷಣ ಈ ಬಗ್ಗೆ ಮುನ್ನಚ್ಚರಿಕೆ ವಹಿಸಿ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ ಕುಮಾರಸ್ವಾಮಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಕಾರ್ಯಪಾಲಕ ಅಭಿಯಂತರರು ಹಾಗೂ ಎಲ್ಲ ತಾಲೂಕಿನ ತಹಶೀಲ್ದಾರಗಳು, ತಾ.ಪಂ ಇಒಗಳು ಉಪಸ್ಥಿತರಿದ್ದರು.

ಇದನ್ನೂಓದಿ:ಸಿಎಂ ಸಿಟಿ ರೌಂಡ್ಸ್: ರಾಜಕಾಲುವೆ ಕಾಮಗಾರಿಗಳ ಪರಿಶೀಲನೆ ಬಳಿಕ ಅಧಿಕಾರಿಗಳಿಗೆ ಸಿಎಂ ನೀಡಿದ ಸೂಚನೆಗಳೇನು? - Siddaramaiah City Rounds

ETV Bharat Logo

Copyright © 2024 Ushodaya Enterprises Pvt. Ltd., All Rights Reserved.