ETV Bharat / state

ಸಿಎಂ ನಿವಾಸಕ್ಕೆ ಡಿಜಿ ಐಜಿಪಿ ಪ್ರವೀಣ್ ಸೂದ್ ಭೇಟಿ: ಸ್ಯಾಂಟ್ರೋ ರವಿ ಬಂಧನ ಕುರಿತು ವರದಿ ಸಲ್ಲಿಕೆ

author img

By

Published : Jan 13, 2023, 8:34 PM IST

Updated : Jan 13, 2023, 10:39 PM IST

dg-igp-praveen-sood-visits-cm-house
ಐಜಿಪಿ ಪ್ರವೀಣ್ ಸೂದ್

ಸ್ಯಾಂಟ್ರೋ ರವಿ ಬಂಧನ ಕುರಿತು ಮುಖ್ಯಮಂತ್ರಿಗಳ ನಿವಾಸಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಭೇಟಿ ನೀಡಿ ರವಿ ಬಂಧನ ವಿಚಾರವಾಗಿ ಸಮಗ್ರ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ತೀವ್ರ ತಲೆನೋವು ತರಿಸಿದ್ದ ವಂಚಕ ಸ್ಯಾಂಟ್ರೋ ರವಿ ಬಂಧಿಸುವಲ್ಲಿ ರಾಜ್ಯ ಪೊಲೀಸರು ಸಫಲರಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ.

ಶ್ರೀಶೈಲ ಪ್ರವಾಸದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಪಸ್​ ಆಗುತ್ತಿದ್ದಂತೆ ಆರ್.ಟಿ ನಗರದಲ್ಲಿರುವ ಮುಖ್ಯಮಂತ್ರಿಗಳ ಖಾಸಗಿ ನಿವಾಸಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಭೇಟಿ ನೀಡಿದರು. ಕಳೆದ 11 ದಿನಗಳಿಂದ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದ ಸ್ಯಾಂಟ್ರೋ ರವಿ ಬಂಧನ ವಿಚಾರ ಕುರಿತು ಸಮಗ್ರವಾದ ಮಾಹಿತಿ ನೀಡಿದರು.

ಮೈಸೂರಿನಲ್ಲಿ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಾಲ್ಕು ತಂಡಗಳನ್ನು ರಚಿಸಿ ಆರೋಪಿ ಪತ್ತೆಗೆ ಬಲೆ ಬೀಸಲಾಗಿತ್ತು. ಸ್ಯಾಂಟ್ರೋ ರವಿ ಪರವಾಗಿ, ಇಬ್ಬರು ಮಹಿಳೆಯರ ವಿರುದ್ಧ, ಸುಳ್ಳು ದೂರನ್ನು ದಾಖಲು ಮಾಡಿ ಜೈಲು ಸೇರುವಂತೆ ಮಾಡಲು ಸಹಕರಿಸಿದ, ಪೊಲೀಸ್ ಇನ್ಸ್​​ಪೆಕ್ಟರ್​​ ಪ್ರವೀಣ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು. ನಂತರ ಆರೋಪಿ ಗುಜರಾತ್​ನಲ್ಲಿ ತಲೆ ಮರೆಸಿಕೊಂಡಿರುವ ಮಾಹಿತಿ ಹಿನ್ನೆಲೆಯಲ್ಲಿ ನಮ್ಮ ತಂಡ ಗುಜರಾತ್​ಗೆ ಹೋಗಿ ವ್ಯವಸ್ಥಿತ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದೆ. ಸ್ಯಾಂಟ್ರೋ ರವಿ ಬಂಧಿಸುವಲ್ಲಿ ರಾಜ್ಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ನೀಡಿ ಕಾರ್ಯಾಚರಣೆ ವಿವರವನ್ನು ಒದಗಿಸಿದರು.

ಸ್ಯಾಂಟ್ರೋ ರವಿ ವಿಚಾರಣೆ: ವಂಚಕ ಎನ್ನಲಾದ, ಸ್ಯಾಂಟ್ರೋ ರವಿ ಬಂಧಿಸುವಲ್ಲಿ ರಾಜ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಆತನ ಬಂಧನದಿಂದ, ಎಲ್ಲ ಊಹಾ ಪೋಹಗಳಿಗೆ ತೆರೆ ಬಿದ್ದಂತಾಗಿದೆ. ಕಳೆದ ಹನ್ನೊಂದು ದಿನಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿ ಕೊಳ್ಳುತ್ತಿದ್ದ ಸ್ಯಾಂಟ್ರೋ ರವಿ ಬಂಧನವಾಗಿದ್ದು, ಆತನ ವಿರುದ್ಧ ಇರುವ ಆರೋಪಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ ತಪ್ಪಿತಸ್ಥನಾಗಿದ್ದರೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಸಂತ್ರಸ್ತ ವ್ಯಕ್ತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪತ್ರಿಕಾ ಹೇಳಿಕೆ ಮೂಲಕ ಮಾಹಿತಿ ನೀಡಿದ್ದಾರೆ.

ಗುಜರಾತ್​ನಲ್ಲಿ ಸ್ಯಾಂಟ್ರೋ ರವಿ ಬಂಧನ: ಮೈಸೂರು ಪೊಲೀಸರು ಗುಜರಾತ್​ನಲ್ಲಿ ಸ್ಯಾಂಟ್ರೋ ರವಿಯನ್ನು ಇಂದು ಬಂಧಿಸಿದ್ದಾರೆ. ಕೆಲಸ ಕೊಡಿಸುವ ಆಸೆ ತೋರಿಸಿ ಮಹಿಳೆಯನ್ನು ಬಲವಂತವಾಗಿ ವಿವಾಹವಾಗಿ ದೌರ್ಜನ್ಯ ಎಸಗಿದ್ದ ಆರೋಪದ ಮೇಲೆ ರವಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆಯೇ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಕೊನೆಗೂ ರವಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

11ದಿನಗಳ ಕಾಲ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್​ನಲ್ಲಿ ಬಂಧಿಸಿರುವುದಾಗಿ ಎಡಿಜಿಪಿ ಅಲೋಕ್​ ಕುಮಾರ್ ಇಂದು ಸಾಯಂಕಾಲ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ​ ಸ್ಪಷ್ಟಪಡಿಸಿದ್ದರು. ಗುಜರಾತ್​ ಪೊಲೀಸರ ಸಹಾಯ ಪಡೆದು ಸ್ಯಾಂಟ್ರೋ ರವಿ ಬಂಧಿಸಲಾಗಿದೆ. ರವಿ ಬಂಧನಕ್ಕಾಗಿ ಮೈಸೂರು ಕಮಿಷನರ್​ ರಮೇಶ್​ ಅವರ ನೇತೃತ್ವದಲ್ಲಿ ವಿವಿಧ ತಂಡಗಳನ್ನು ಮಾಡಿಕೊಂಡು ತನಿಖೆ ಆರಂಭಿಸಲಾಗಿತ್ತು ಎಂಬ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದರು.

ಇನ್ನು ವಿಶೇಷ ಪೊಲೀಸ್ ತಂಡಗಳು ಕಳೆದ ಮೂರು ದಿನಗಳಿಂದ ಸ್ಯಾಂಟ್ರೋ ರವಿ ಪತ್ತೆಗಾಗಿ ಹಲವು ಜಿಲ್ಲೆ ಮತ್ತು ಹೊರ ರಾಜ್ಯಗಳಿಗೂ ತೆರಳಿದ್ದವು. ಆದರೆ, ಸ್ಯಾಂಟ್ರೊ ರವಿ ತನ್ನ ಎಲ್ಲ ಮೊಬೈಲ್​ಗಳನ್ನ ಸ್ವಿಚ್ಡ್​ ಆಫ್ ಮಾಡಿಕೊಂಡಿದ್ದರಿಂದ ಆತನ ಹುಡುಕಾಟ ಕಷ್ಟವಾಗಿತ್ತು. ಅಲ್ಲದೇ ಕಳೆದ ವಾರ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಮೈಸೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮಿನಿಗೆ ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದ, ಅರ್ಜಿಯ ವಿಚಾರಣೆ ಜನವರಿ 17ಕ್ಕೆ ಮುಂದೂಡಲಾಗಿತ್ತು.

ಇದನ್ನೂ ಓದಿ: Santro Ravi arrest: ಗುಜರಾತ್​ನಲ್ಲಿ ಸ್ಯಾಂಟ್ರೋ ರವಿ ಬಂಧನ: ಎಡಿಜಿಪಿ ಅಲೋಕ್​ ಕುಮಾರ್​

Last Updated :Jan 13, 2023, 10:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.