ETV Bharat / state

ಮಹಾಮಾರಿ ಲೆಕ್ಕಿಸದೇ ಹಗಲಿರಳು ಶ್ರಮಿಸಿದ 'ವೈದ್ಯ'ರಿಗೆ ಕೃತಜ್ಞತೆ ಸಲ್ಲಿಸುವ ಸಮಯವಿದು..

author img

By

Published : Jul 1, 2021, 7:37 AM IST

Bengaluru
ರಾಷ್ಟ್ರೀಯ ವೈದ್ಯರ ದಿನ

ಕಷ್ಟಕಾಲದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರ ಕಾರ್ಯವನ್ನ ಗೌರವಿಸುವ, ಕೃತಜ್ಞತೆ ಸಲ್ಲಿಸುವ ದೃಷ್ಟಿಯಿಂದ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಇನ್ನು ಪಶ್ಚಿಮ ಬಂಗಾಳದ ಸಿಎಂ ಆಗಿದ್ದ ಡಾ. ಬಿದಾನ್ ಚಂದ್ರರಾಯ್ ಅವರ ನೆನಪಿನಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ.

ಬೆಂಗಳೂರು: ಕಣ್ಣಿಗೆ ಕಾಣದ ರೋಗದ ವಿರುದ್ಧ ಜಾದುಗಾರನಂತೆ ಹೋರಾಡಿದ, ಮಹಾಮಾರಿಯನ್ನೂ ಲೆಕ್ಕಿಸದೇ ಹಗಲಿರಳು ಶ್ರಮಿಸಿದ 'ವೈದ್ಯೋ ನಾರಾಯಣೋ ಹರಿ'ಗೆ ಕೃತಜ್ಞತೆ ಸಲ್ಲಿಸುವ ಸಮಯವಿದು. ಕೊರೊನಾ ಸೋಂಕು ಕಾಣಿಸಿಕೊಂಡ ರೋಗಿಯ ಜೊತೆಗೆ ಯಾರು ಇದ್ದರೋ, ಬಿಟ್ಟರೋ. ಆದರೆ, ವೈದ್ಯರು ಮಾತ್ರ ಜೊತೆಯಾಗಿ ನಿಂತು ಆರೈಕೆ ಮಾಡಿದ್ದು ಮರೆಯುವಂತಿಲ್ಲ. ಅವರು ಕಣ್ಣಿಗೆ ಕಾಣುವ ದೇವರಂತೆ ವೈದ್ಯರು ಕಂಡಿದ್ದು ಸುಳ್ಳಲ್ಲ. ಅಕ್ಷರಶಃ ವೈದ್ಯೋ ನಾರಾಯಣ ಹರಿ ಎಂಬ ನುಡಿಗೆ ಪಾತ್ರರಾಗಿದ್ದರು.

ತಮ್ಮ ಕುಟುಂಬ ಸದಸ್ಯರಿಂದ ದೂರ ಉಳಿದು, ಆರೋಗ್ಯವನ್ನೂ ಲೆಕ್ಕಿಸದೇ, ಉಸಿರು ಗಟ್ಟಿಸುವ ಮಾಸ್ಕ್, ದೇಹಕ್ಕೆ ಕಿರಿಕಿರಿ ಎನ್ನಿಸುವ ಪಿಪಿಇ ಕಿಟ್​ ಧರಿಸುವ ವೈದ್ಯರ ಪಾಡು ಹೇಳತೀರದು. ಶೌಚಾಲಯಕ್ಕೆ ಹೋಗಲು ಆಗದೇ ದಿನವಿಡೀ ಕಾದಿದ್ದು ಇದೆ. ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದ ಸೋಂಕಿತರಿಗೆ ಆತ್ಮವಿಶ್ವಾಸದ ಮಾತುಗಳನ್ನ ಆಡಿ, ಅವರ ಮುಂದೆ ಹಾಡಿ-ಕುಣಿದು ಕುಪ್ಪಳಿಸಿ ಬೇಗ ಗುಣಮುಖರಾಗಲು ಸಹಕಾರಿಯಾಗಿದರು. ಅದೆಷ್ಟೋ ರೋಗಿಗಳು ವೈದ್ಯರ ಆರೈಕೆ, ಆತ್ಮವಿಶ್ವಾಸ ಮಾತುಗಳಿಂದಲ್ಲೇ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿದ್ದರು.

ರಾಷ್ಟ್ರೀಯ ವೈದ್ಯರ ದಿನಕ್ಕೆ ಶುಭಕೋರಿದ ಜನರು

ಇನ್ನು ರೋಗಿಗಳ ಸಂಬಂಧಿಕರು ಅತೀರೇಕ ತೋರಿಸಿ ಹಲ್ಲೆ ನಡೆಸಿದ ಬಳಿಕವೂ ತಮ್ಮ ಸೇವೆಗೆ ಮಾತ್ರ ಬ್ರೇಕ್ ಹಾಕಲಿಲ್ಲ. ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರ ಕಾರ್ಯವನ್ನ ಗೌರವಿಸುವ, ಕೃತಜ್ಞತೆ ಸಲ್ಲಿಸುವ ದೃಷ್ಟಿಯಿಂದ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಇನ್ನು ಪಶ್ಚಿಮ ಬಂಗಾಳದ ಸಿಎಂ ಆಗಿದ್ದ ಡಾ. ಬಿದಾನ್ ಚಂದ್ರರಾಯ್ ಅವರ ನೆನಪಿನಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಅವರ ಅಸಾಧಾರಣ ವೈದ್ಯಕೀಯ ಸೇವೆ ಗಮನಿಸಿ, ಭಾರತರತ್ನ ಪ್ರಶಸ್ತಿಗೂ ಭಾಜನರಾಗಿದ್ದರು. ಸಿಎಂ ಆಗಿದ್ದ ಸಮಯದಲ್ಲೂ ರೋಗಿಗಳ ಶುಶ್ರೂಷೆ ಮಾಡುತ್ತಿದ್ದರಂತೆ. ಇಂತಹ ಅಪ್ರತಿಮ ವೈದ್ಯನ ನೆನಪಿಗೆ 1991ರಿಂದ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಘೋಷಿಸಿ, ಅಂದಿನಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಮಹಾಮಾರಿ ಹತ್ತಿಕ್ಕುವಲ್ಲಿ ವೈದ್ಯರ ಪಾತ್ರ ಹೇಗಿತ್ತು: ಧಿಡೀರ್ ಆಗಿ ಬಂದ ಸೋಂಕಿಗೆ ಎದೆಯೊಡ್ಡಿ ನಿಂತಿದ್ದು ವೈದ್ಯಕೀಯ ಸಮೂಹ. ರೋಗಿಗಳ ರಕ್ಷಣೆ ನಮ್ಮ ಹೊಣೆ ಅಂತ ತಿಳಿದು ರೋಗದ ವಿರುದ್ಧ ಹೋರಾಡಿದರು. ಮಹಾಮಾರಿ ಕೊರೊನಾ ಸೋಂಕು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೊರೊನಾದಿಂದ ಗುಣಮುಖರಾದವರು ವೈದ್ಯರ ಬಗ್ಗೆ ಹೇಳುವುದೇನು:

ವೈದ್ಯರ ದಿನವನ್ನ ಕೇವಲ ಜುಲೈ 1ರಂದು ಆಚರಿಸಿದರೆ ಸಾಲದು. ಬದಲಿಗೆ ಪ್ರತಿ ದಿನವೂ ಆಚರಣೆ ಮಾಡಬೇಕು ಅಂತ ಬೆಂಗಳೂರು ನಿವಾಸಿ ಸಿದ್ದೇಶ್ವರ ಎಂ.ಬಿ ಅಭಿಪ್ರಾಯ ಪಟ್ಟರು. ವೈದ್ಯರು ಇಲ್ಲದಿದ್ದರೆ ಇಂದು ನಾವು ಬದುಕಲಿ ಸಾಧ್ಯವಿರಲಿಲ್ಲ. ಕೊರೊನಾ ಸೋಂಕು ಎಲ್ಲೆಡೆ ಆವರಿಸಿದಾಗ ನಮ್ಮಲ್ಲಿ ಧನಾತ್ಮಕ ಚಿಂತನೆ ಬರುವಂತೆ ಮಾಡಿ ಜೀವ ಉಳಿಸುವ ಕೆಲಸ ಮಾಡಿದ್ದು ವೈದ್ಯರು. ಗಡಿಯಲ್ಲಿ ಸೈನಿಕರು ಕಾಯುತ್ತಿದ್ದರೆ, ವೈದ್ಯರು ಸೈನಿಕರಂತೆ ನಿಂತು ಕೊರೊನಾ ವಿರುದ್ಧ ಹೋರಾಟ ನಡೆಸಿದರು ಎಂದು ಹೇಳಿದರು.

ಕೊರೊನಾ ಕಾಲಘಟ್ಟದಲ್ಲಿ ವೈದ್ಯರೆಲ್ಲ ನಾರಾಯಣನ ರೂಪದಲ್ಲಿ ಕಾಣುತ್ತಿದ್ದರು ಅಂತ ಬೆಂಗಳೂರು ನಿವಾಸಿ ಚಂದ್ರಶೇಖರ್ ತಿಳಿಸಿದರು. ಕೊರೊನಾ ಬಂದಾಗ, ತಮ್ಮ ಪ್ರಾಣವನ್ನು ಲೆಕ್ಕಿಸದೇ ಜನರ ಪ್ರಾಣ ಉಳಿಸಲು ಮುಂದಾಗಿದ್ದರು. ಇಂತಹ ವೈದ್ಯರಿಗೆ ಗೌರವ ಸೂಚಿಸುವ ದಿನವಾಗಿದ್ದು, ಅವರ ಸೇವೆಗೆ ಬೆಲೆ ಕಟ್ಟಲು ಆಗಲ್ಲ. ಅವ್ರ ಸೇವೆಗೆ ಪ್ರಣಾಮ ಸಲ್ಲಿಸಬೇಕು ಅಂದರು. ಒಟ್ಟಾರೆ, ಕಷ್ಟದ ನಡುವೆಯು ತನ್ನ ನಂಬಿ ಬಂದ ರೋಗಿಯ ಪ್ರಾಣ ಉಳಿಸಲು ಹರಸಾಹಸ ಪಟ್ಟ ಎಲ್ಲಾ ವೈದ್ಯರಿಗೆ ನಮ್ಮ ಸಲಾಂ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.