ETV Bharat / state

ಸಿದ್ದರಾಮಯ್ಯ ವಿರುದ್ಧ ವಿವಾದಿತ ಹೇಳಿಕೆ: ಸಚಿವ ಅಶ್ವತ್ಥ್​ ನಾರಾಯಣ್​ ವಿರುದ್ಧ ದೂರು

author img

By

Published : Feb 16, 2023, 8:04 PM IST

ಅಶ್ವತ್ಥ್​ ನಾರಾಯಣ್ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು
ಅಶ್ವತ್ಥ್​ ನಾರಾಯಣ್ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು

ಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂಬ ಅಶ್ವತ್ಥ್​ ನಾರಾಯಣ್​ ಹೇಳಿಕೆ ಖಂಡಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಅವರು ಮಲ್ಲೇಶ್ವರಂ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಅಶ್ವತ್ಥ್​ ನಾರಾಯಣ್ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು

ಬೆಂಗಳೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್​ನಂತೆ ಹೊಡೆದು ಹಾಕಬೇಕು ಎಂಬ ಸಚಿವ ಅಶ್ವತ್ಥ್​ ನಾರಾಯಣ್ ಹೇಳಿಕೆ ವಿಚಾರದ ಹಿನ್ನೆಲೆಯಲ್ಲಿ ಸಚಿವ‌ ಅಶ್ವತ್ಥ್​ ನಾರಾಯಣ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಕಾಂಗ್ರೆಸ್ ನಿಯೋಗ ಆಗಮಿಸಿ ದೂರು ನೀಡಿದ್ದು, ಟಿಪ್ಪು ವಂಶಸ್ಥರನ್ನು ಕೊಲೆ ಮಾಡಬೇಕು ಅಂತ ಕಟೀಲ್ ಹೇಳಿಕೆ ನೀಡಿದ್ದಾರೆ. ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಅಂತಾ ಅಶ್ವತ್ಥ್​ ನಾರಾಯಣ್ ಹೇಳಿದ್ದಾರೆ. ಇವರಿಬ್ಬರು ಸಿದ್ದರಾಮಯ್ಯ ಹಾಗೂ ಟಿಪ್ಪು ವಂಶಸ್ಥರನ್ನು ಕೊಲೆ‌ಮಾಡುವ ಉದ್ದೇಶ ಹೊಂದಿದ್ದಾರೆ. ಹೀಗಾಗಿ ಅಶ್ವತ್ಥ್​ ನಾರಾಯಣ್ ಹಾಗೂ ನಳಿನ್​ ಕುಮಾರ್ ಕಟೀಲ್‌ ವಿರುದ್ದ ಕೊಲೆಯತ್ನ ಪ್ರಕರಣ ದಾಖಲಿಸಲು ಮನವಿ‌ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ದೂರು
ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ದೂರು

ಹುಬ್ಬಳ್ಳಿಯಲ್ಲೂ ದೂರು: ಅಶ್ವತ್ಥ್​ ನಾರಾಯಣ್​ ವಿರುದ್ದ ವಾಣಿಜ್ಯನಗರಿ ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣೆಯಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಗಿರೀಶ್ ಗದಿಗೆಪ್ಪಗೌಡರ ದೂರು ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಭದ್ರತೆ ಕೊಡಬೇಕೆಂದು ಮನವಿ ಮಾಡಿದ್ದು, ಪರೋಕ್ಷವಾಗಿ ಕೊಲ್ಲಬೇಕು ಎಂದಿರುವುದು ಅಕ್ಷಮ್ಯ ಅಪರಾಧ. ಸಿದ್ದರಾಮಯ್ಯರ ಜೀವಕ್ಕೆ ಹಾನಿಯಾಗುವ ಸಂಭವವಿದೆ. ಹೀಗಾಗಿ ಅಶ್ವತ್ಥ್​ ನಾರಾಯಣ್​ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ಸಚಿವರ ಬಂಧನಕ್ಕೆ ಆಗ್ರಹ: ಅಶ್ವತ್ಥ್​​ ನಾರಾಯಣ್ ಅವರು ಸಿದ್ದರಾಮಯ್ಯ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಸಚಿವರನ್ನು ಬಂಧಿಸಬೇಕು. ಇಂದು ಸಂಜೆಯೊಳಗೆ ಬಂಧಿಸದಿದ್ದರೆ ನಾಳೆ ಮಂಡ್ಯದಲ್ಲಿ ವಿವಿಧ ಸಂಘಟನೆಗಳ ಜೊತೆಗೂಡಿ ಪ್ರತಿಭಟನೆ ಮಾಡ್ತೇವೆ ಎಂದು ಮಂಡ್ಯ ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಹೇಳಿದ್ದಾರೆ.

ಮಾಜಿ ಸಚಿವ ನರೇಂದ್ರ ಸ್ವಾಮಿ

ಪಿ.ಎಂ.ನರೇಂದ್ರಸ್ವಾಮಿ ಎಚ್ಚರಿಕೆ: ಮಂಡ್ಯದಲ್ಲಿ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಭಾಷೆ ಬಳಕೆ ಮಾಡುವ ಮೊದಲು ವಿವೇಕ, ತಾಳ್ಮೆ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯರನ್ನು ಬೇಡ, ಕಾಂಗ್ರೆಸ್‌ನ ಕಟ್ಟ ಕಡೆಯ ಕಾರ್ಯಕರ್ತನನ್ನು ಮುಟ್ಟಿ ನೋಡಿ. ಕಾಂಗ್ರೆಸ್ಸಿಗರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಡಿಗಳಾಗಿ ಕುಳಿತಿಲ್ಲ. ಧರ್ಮ, ಜಾತಿಯ ಹೆಸರಲ್ಲಿ ದೇಶವನ್ನು ಒಡೆಯಲು ಕಾಂಗ್ರೆಸ್ ಬಿಡಲ್ಲ. ಮಂಡ್ಯದಲ್ಲಿ ಬಂದು ವೀರಾವೇಶದ ಭಾಷಣ ಮಾಡಿದ್ರೆ ಮಂಡ್ಯ ಸ್ಟೈಲ್ ಆಗುತ್ತೆ ಎಂದುಕೊಂಡಿದ್ದಾರೆ. ಇಲ್ಲಿನ ಮಣ್ಣಿನ ಗುಣ ಮೈಗೂಡಬೇಕು ಅಂದ್ರೆ ಇಲ್ಲಿ ಹುಟ್ಟಿದವರಿಗೆ ಮಾತ್ರ ಆ ತಾಕತ್ತು ಇರುತ್ತೆ. ಇನ್ನೊಮ್ಮೆ ಈ ದುಸ್ಸಾಹಸಕ್ಕೆ ಕೈಹಾಕಬೇಡಿ. ನೀವು ಸುಸಂಸ್ಕೃತರಾದರೆ ಹೇಳಿಕೆ ಹಿಂಪಡೆದು ರಾಜ್ಯದ ಜನರ ಕ್ಷಮೆ ಕೇಳಬೇಕು. ನಾವು ಸಂವಿಧಾನಾತ್ಮಕವಾಗಿ ನಿಮಗೆ ಉತ್ತರ ಕೊಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಮಹಾತ್ಮ ಗಾಂಧೀಜಿಯವರನ್ನೇ ಕೊಂದವರಿವರು, ಆರ್​ಎಸ್​ಎಸ್​ನವರು ಈ ರೀತಿ ಹೇಳಿಸಿದ್ದಾರೆ: ಸಿದ್ದರಾಮಯ್ಯ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.