ETV Bharat / state

Congress Guarantee Scheme: ಅನ್ನಭಾಗ್ಯ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ

author img

By

Published : Jun 14, 2023, 6:30 PM IST

ಕೇಂದ್ರ ಸರ್ಕಾರ ಅಕ್ಕಿ ಸಂಗ್ರಹ ಇದ್ದರೂ ಪೂರೈಕೆ ಮಾಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Etv Bharatcm-siddaramaiah-alleged-central-government-has-not-supplying-rice
ಅನ್ನಭಾಗ್ಯ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಜು.1 ರಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನ್ನಭಾಗ್ಯ ಆರಂಭವಾಗುವುದು ಅನುಮಾನ ಎಂಬ ಅಭಿಪ್ರಾಯವನ್ನು ಸಿಎಂ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಶಕ್ತಿ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 5 ಗ್ಯಾರಂಟಿಗಳ ಪೈಕಿ ಒಂದನ್ನು ನಾವು ಈಗಾಗಲೇ ಜಾರಿ ಮಾಡಿದ್ದೇವೆ. ನಮ್ಮ ಐದು ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆಯೂ ಸೇರಿದೆ. ಪ್ರತಿಯೊಬ್ಬರಿಗೆ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೇವೆ ಎಂದು ತಿಳಿಸಿದರು.

ಬಿಪಿಎಲ್, ಅಂತ್ಯೋದಯ ಕಾರ್ಡ್​ನವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ. ಜುಲೈ 1ರಿಂದ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ನಾವು ಘೋಷಣೆ ಮಾಡಿದ್ದೇವೆ. ಇದಕ್ಕಾಗಿ ಪ್ರತಿ ತಿಂಗಳು 2 ಲಕ್ಷದ 28 ಸಾವಿರ ಮೆಟ್ರಿಕ್​ ಟನ್ ಹೆಚ್ಚುವರಿ​ ಅಕ್ಕಿ ಅಗತ್ಯ ಬೀಳಲಿದೆ. ಅನ್ನಭಾಗ್ಯ ಯೋಜನೆಗಾಗಿ ತಿಂಗಳಿಗೆ 840 ಕೋಟಿ ರೂ. ವೆಚ್ಚ ಆಗುತ್ತದೆ. ಪ್ರತಿ ವರ್ಷಕ್ಕೆ 10,092 ಕೋಟಿ ರೂ. ಬೇಕಾಗುತ್ತದೆ ಎಂದು ಸಿಎಂ ಮಾಹಿತಿ ನೀಡಿದರು.

ಹೆಚ್ಚುವರಿ ಅಕ್ಕಿ ವಿತರಣೆ ಬಗ್ಗೆ ಭಾರತೀಯ ಆಹಾರ ನಿಗಮ(ಎಫ್​ಸಿಐ) ಡೆಪ್ಯುಟಿ ಮ್ಯಾನೇಜರ್​ ಜೊತೆ ಚರ್ಚೆ ಮಾಡಿದ್ದು, ಹೆಚ್ಚುವರಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಡೆಪ್ಯುಟಿ ಮ್ಯಾನೇಜರ್ ಜೂನ್ 12 ರಂದು ತಮಗೆ ಪತ್ರ ಬರೆದು ಹೆಚ್ಚುವರಿ ಅಕ್ಕಿ ಕೊಡುವುದಾಗಿ ತಿಳಿಸಿದ್ದರು. ಆದರೆ ಈಗ ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದು, ಅಕ್ಕಿ ಸಂಗ್ರಹ ಇದ್ದರೂ ಪೂರೈಕೆ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ದೂರಿದರು.

ವಿಪರ್ಯಾಸ ಅಂದರೆ ಉಚಿತ ಅಕ್ಕಿ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಹಿಂದೆ ಡೆಪ್ಯುಟಿ ಮ್ಯಾನೇಜರ್​ 7 ಲಕ್ಷ ಟನ್​ ಅಕ್ಕಿ ಸಂಗ್ರಹ ಇದೆ ಎಂದಿದ್ದರು. ಅಕ್ಕಿ ಸಂಗ್ರಹ ಇದ್ದರೂ ಕೇಂದ್ರ ಯಾಕೆ ಪೂರೈಕೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದೆ. ಅಕ್ಕಿ ಪೂರೈಸಲು ಛತ್ತೀಸ್​ಗಢ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಈಗಾಗಲೇ ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಮಾತನಾಡಿದ್ದಾರೆ ಎಂದು ತಿಳಿಸಿದರು.

ಪಂಜಾಬ್ ರಾಜ್ಯದಲ್ಲಿ ಅಕ್ಕಿ ಸಂಗ್ರಹವಿಲ್ಲದಿರುವುದರಿಂದ ಅಕ್ಕಿ ಪೂರೈಸಲು ಆಗುವುದಿಲ್ಲ ಎಂದಿದ್ದಾರೆ. ನಾಳೆ ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಅವರು ತೆಲಂಗಾಣ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದಾರೆ. ಅಂತೆಯೇ ಛತ್ತೀಸ್‌ಗಢ ರಾಜ್ಯದಿಂದಲೂ ಲಭ್ಯವಿರುವ ಅಕ್ಕಿಯ ಮಾಹಿತಿ ಇಂದು ಸಂಜೆಯೊಳಗೆ ಲಭಿಸಲಿದೆ. ಗುರುವಾರ ಸಂಜೆಯೊಳಗೆ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ನಮಗೇನು ಪುಕ್ಕಟೆಯಾಗಿ ಅಕ್ಕಿ ಕೊಡುವುದಿಲ್ಲ. ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ನಾವು ದುಡ್ಡು ಕೊಡುತ್ತೇವೆ. ಖಾಸಗಿಯವರಿಗೆ ಕೇಂದ್ರ ಸರ್ಕಾರ ಅಕ್ಕಿ ಪೂರೈಕೆ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರಕ್ಕೆ ಪೂರೈಸುತ್ತಿಲ್ಲ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ಈ ವಿಚಾರದಲ್ಲಿ ರಾಜಕೀಯ ಮಾಡಬಾರದಿತ್ತು. ಅಕ್ಕಿ ಇಟ್ಟುಕೊಂಡು ಕೊಡೋದಿಲ್ಲ ಅಂತಾ ಹೇಳ್ತಿರೋದು ಜನವಿರೋಧಿ ನೀತಿಯಾಗಿದೆ ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಕೈಗೊಂಡು ಕನ್ನಡಿಗರ ಪಾಲನ್ನು, ಬಡವರ ಪಾಲನ್ನು ಕಸಿದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಕನ್ನಡಿಗರ, ಬಡವರ ವಿರೋಧಿ ಎನ್ನುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು. ಈ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಬಿಬಿಎಂಪಿ ಸಭೆಯಲ್ಲಿ ಸುರ್ಜೇವಾಲ ಭಾಗಿ ವಿಚಾರ: ಯಾರು, ಯಾವ ದೂರು ಬೇಕಾದರೂ ಕೊಡಲಿ- ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.