ETV Bharat / state

ರಾಜ್ಯವನ್ನು ನಂಬರ್ 1 ಎನ್ನುತ್ತಿರುವ ಮೋದಿ ದೇಶವನ್ನು ಪಾತಾಳಕ್ಕೆ ತಳ್ಳಿದ್ದಾರೆ: ಸಿದ್ದರಾಮಯ್ಯ

author img

By

Published : May 5, 2023, 8:54 AM IST

Opposition Leader Siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಮೋದಿಯವರು ಅದಾನಿ, ಅಂಬಾನಿ ಹಾಗು ಇನ್ನಿತರ ಕಾರ್ಪೊರೇಟ್ ಕಂಪನಿಗಳನ್ನು ಉದ್ಧಾರ ಮಾಡುತ್ತಿದ್ದಾರೆ. ದೇಶದ 140 ಕೋಟಿ ಜನರನ್ನು ದಿನೇ ದಿನೇ ಬಿಕ್ಕಟ್ಟಿಗೆ ನೂಕುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ಬೆಂಗಳೂರು: ನಂಬರ್ ಒನ್ ಕರ್ನಾಟಕದ ಬಗ್ಗೆ ಮಾತನಾಡುವ ಮೋದಿಯವರು ಭಾರತವನ್ನು ಪಾತಾಳದತ್ತ ಎಳೆದೊಯ್ಯುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಹಲವು ವಿಚಾರಗಳನ್ನು ಈ ಕೆಳಗಿನಂತೆ ಪ್ರಸ್ತಾಪಿಸಿದ್ದಾರೆ.

1. ಮೋದಿಯವರು ಈ ದೇಶದ ಪ್ರಧಾನಿ ಎಂಬುದನ್ನು ಮರೆತು ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿಯಂತೆ ಮಾತನಾಡುತ್ತಿದ್ದಾರೆ. ಪ್ರತಿ ಬಾರಿ ಚುನಾವಣೆ ಬಂದಾಗಲೂ ಹೇಳಿದ್ದನ್ನೇ ಹೇಳುತ್ತಿದ್ದಾರೆ. ಬಿಜೆಪಿಯವರ ದುರಂತ ಪರಿಸ್ಥಿತಿ ಹೇಗಿದೆಯೆಂದರೆ ಹೇಳಿಕೊಳ್ಳಲು ಒಂದೇ ಒಂದು ಕಾರ್ಯಕ್ರಮವಿಲ್ಲ. ಸಾಧನೆಯೂ ಇಲ್ಲ.

2. ಮೋದಿಯವರಾದಿಯಾಗಿ ಬಿಜೆಪಿ ನಾಯಕರು ಕರ್ನಾಟಕವನ್ನು ನಂಬರ್ ಒನ್ ಮಾಡುತ್ತೇವೆ ಎನ್ನುತ್ತಾರೆ. ಮೋದಿಯವರು ಹೋದ ಎಲ್ಲ ರಾಜ್ಯಗಳಲ್ಲೂ ಹೀಗೆ ಹೇಳುತ್ತಾರೆ. ಇಷ್ಟಕ್ಕೂ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿಯೇ ಕರ್ನಾಟಕವು ಅನೇಕ ವಿಚಾರಗಳಲ್ಲಿ ನಂಬರ್ ಒನ್ ಆಗಿತ್ತು. ಕೈಗಾರಿಕೆ, ಸೇವಾ ವಲಯಗಳಲ್ಲಿ ನಾವು ಮುಂದೆ ಇದ್ದೆವು. ಈ ಪ್ರತಿಷ್ಠೆಯನ್ನು ಹಾಳು ಮಾಡಿದ್ದೇ ಬಿಜೆಪಿ ಸರ್ಕಾರ.

3. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಇದೇ ಏಪ್ರಿಲ್ ತಿಂಗಳ ಜಿಎಸ್‍ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ 33.19 ಸಾವಿರ ಕೋಟಿ ಸಂಗ್ರಹಿಸಿದ್ದರೆ, ಕರ್ನಾಟಕ 14.59 ಸಾವಿರ ಕೋಟಿ ಸಂಗ್ರಹಿಸಿದೆ. ತಮಿಳುನಾಡು 11.55, ಗುಜರಾತ್ 11.72 ಸಾವಿರ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿವೆ. ನಮ್ಮ ರಾಜ್ಯದಿಂದ ಈ ವರ್ಷ 2.4-2.5 ಲಕ್ಷ ಕೋಟಿಗಳಷ್ಟು ಆದಾಯ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿದೆ. ಈ ಎರಡರಿಂದ ಮೋದಿ ಸರ್ಕಾರ ನಮ್ಮ ರಾಜ್ಯದಿಂದ 4.2 ಲಕ್ಷ ಕೋಟಿ ರೂಪಾಯಿಗಳವರೆಗೆ ತೆರಿಗೆ ಸಂಗ್ರಹಿಸುತ್ತದೆ.

ಐಟಿ ರಫ್ತಿನಲ್ಲಿ ರಾಜ್ಯದ ಪಾಲು ಶೇ 50ಕ್ಕೂ ಹೆಚ್ಚಿಗೆ ಇದೆ. ಆದರೆ ಮೋದಿ ಸರ್ಕಾರ ನಮಗೆ ನೀಡುವ ತೆರಿಗೆ ಪಾಲು 37 ಸಾವಿರ ಕೋಟಿ ಮಾತ್ರ. ತೆರಿಗೆ ಹಂಚಿಕೆಯ ದರದಲ್ಲಿ ಇಡೀ ದೇಶದಲ್ಲಿಯೆ ಅತ್ಯಂತ ಕಡಿಮೆ ಪಾಲು ಪಡೆಯುವ ರಾಜ್ಯ ಕರ್ನಾಟಕ. ನಮಗೆ ಶೇ.42 ರಷ್ಟು ಪಾಲು ಕೊಟ್ಟರೆ ವರ್ಷಕ್ಕೆ 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಪಾಲನ್ನು ನಮಗೆ ಕೊಡಬೇಕು. ಕೊಡಬೇಕಾದ್ದನ್ನು ಕೊಡದೆ ಕರ್ನಾಟಕವನ್ನು ದಮನಿಸುತ್ತಿರುವುದೆ ಬಿಜೆಪಿ ಸರ್ಕಾರ. ಈ ಕುರಿತು ಮೋದಿಯವರು ಉಸಿರು ಬಿಡುತ್ತಿಲ್ಲ.

4. ದೇಶದ ದೊಡ್ಡ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ ಅತ್ಯಂತ ಕಡಿಮೆ ಪ್ರಮಾಣದ ಅನುದಾನಗಳನ್ನು ರಸ್ತೆ, ರೈಲ್ವೆ ಯೋಜನೆಗಳಿಗೆ ಮೋದಿ ಸರ್ಕಾರ ನೀಡಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಳವಡಿಸಿರುವ ಟೋಲ್‍ಗಳಲ್ಲಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ. ನಮ್ಮ ರಸ್ತೆ ಟೋಲ್‍ಗಳ ಮೂಲಕವೆ ಮೋದಿ ಸರ್ಕಾರ ವರ್ಷಕ್ಕೆ 3500 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಜನರಿಂದ ಸುಲಿಗೆ ಮಾಡುತ್ತಿದೆ. ಇದರಲ್ಲಿ ಗುತ್ತಿಗೆದಾರನ ಪಾಲು ಸೇರಿರುವುದಿಲ್ಲ. ಇದಿಷ್ಟೆ ಅಲ್ಲದೆ ಮೋದಿ ಸರ್ಕಾರ ಪೆಟ್ರೋಲ್ ಡೀಸೆಲ್‍ಗಳ ಮೇಲೂ ರಸ್ತೆ ಅಭಿವೃದ್ಧಿ ಸೆಸ್ ವಿಧಿಸಿ ಸಾವಿರಾರು ಕೋಟಿ ಸಂಗ್ರಹಿಸುತ್ತಿದೆ.

ಭಾರತವನ್ನು ನಂಬರ್ ಒನ್ ಮಾಡಿದರೇ?: ಮೋದಿಯವರು ಪ್ರಧಾನ ಮಂತ್ರಿಯಾಗಿ ಎರಡು ಅವಧಿ ಮುಕ್ತಾಯಗೊಳಿಸುತ್ತಿದ್ದಾರೆ. ಬಹುಮತದೊಂದಿಗೆ 9 ವರ್ಷ ಅಧಿಕಾರ ನಡೆಸಿದ್ದಾರೆ. ಅಮೆರಿಕಾದಲ್ಲಿ ಅಧ್ಯಕ್ಷರಿಗೆ ಅವಕಾಶವಿರುವುದು ಎರಡು ಅವಧಿ. ನಮ್ಮ ದೇಶವನ್ನು ಅಭಿವೃದ್ಧಿ ಮಾಡಲು, ಅನೇಕ ಕ್ಷೇತ್ರಗಳಲ್ಲಿ ನಂಬರ್1 ಮಾಡಲು ಅನೇಕ ಅವಕಾಶಗಳಿದ್ದವು. ಅವುಗಳನ್ನು ಮೋದಿಯವರು ಕೈಯಾರೆ ಹೊಸಕಿ ಹಾಕಿದರು. ಯಾಕೆಂದರೆ, ಅವರಿಗೆ ದೇಶದ ಬಡವರು, ಹಿಂದುಳಿದವರು, ಮಹಿಳೆಯವರು, ಅಭಿವೃದ್ಧಿಯಾಗುವುದು ಬೇಕಾಗಿಲ್ಲ. ಈ ವರ್ಗಗಳ ಜನರ ಕೈಯಲ್ಲಿ ಇರುವ ದುಡಿಮೆಯ ಹಣವನ್ನು ಲಪಟಾಯಿಸುವುದು ಹೇಗೆ ಎಂದು ಯೋಜನೆ ರೂಪಿಸುವುದಷ್ಟೆ ಬಿಜೆಪಿಯವರ ಕೆಲಸವಾಗಿದೆ. ಮೋದಿಯವರು ತಂದಿರುವ ಶೇ.98 ರಷ್ಟು ಯೋಜನೆಗಳು ಜನರಿಂದ ವಸೂಲಿ ಮಾಡುವ ಯೋಜನೆಗಳೆ ಹೊರತು ಜನರ ಕೈಯಲ್ಲಿ ಹಣ ಇರುವಂತೆ ನೋಡಿಕೊಳ್ಳುವ ಯೋಜನೆಗಳಲ್ಲ. ಈ ಕುರಿತು ಬೇಕಿದ್ದರೆ ಮೋದಿಯವರೆ ಬಹಿರಂಗ ಚರ್ಚೆಗೆ ಬರಲಿ ಎಂದಿದ್ದಾರೆ. ದೇಶದ ಯುವಕರು ತುಸುವೆ ಆಸಕ್ತಿ ವಹಿಸಿದರೆ ನಾನು ಹೇಳುತ್ತಿರುವ ಮಾಹಿತಿ ಸರಿ ಇದೆಯೇ ಎಂಬುದು ಅರ್ಥವಾಗುತ್ತದೆ. ಮೋದಿಯವರ ಈ 9 ವರ್ಷಗಳ ಆಡಳಿತದಲ್ಲಿ ದೇಶ ಎಷ್ಟು ಹಾಳಾಗಿದೆ ನೋಡಿ ಎಂದು ಹತ್ತು ಅಂಶಗಳ ಮೂಲಕ ವಿವರಿಸಿದ್ದಾರೆ.

1. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 2014 ರಲ್ಲಿ 55ನೆ ಸ್ಥಾನದಲ್ಲಿದ್ದ ದೇಶ 2022-23 ರಲ್ಲಿ 107 ನೇ ಸ್ಥಾನಕ್ಕೆ ಕುಸಿದಿದೆ.
2. ಲಿಂಗ ತಾರತಮ್ಯದಲ್ಲಿ 146 ದೇಶಗಳಲ್ಲಿ 114 ನೇ ಸ್ಥಾನದಲ್ಲಿದ್ದ ದೇಶ ಈಗ 135 ನೆ ಸ್ಥಾನಕ್ಕೆ ಕುಸಿದಿದೆ.
3. ಪತ್ರಿಕಾ ಸ್ವಾತಂತ್ರ್ಯದಲ್ಲಿ 2014 ರಲ್ಲಿ 140 ನೆ ಸ್ಥಾನದಲ್ಲಿದ್ದ ಭಾರತ 161 ನೇ ಸ್ಥಾನಕ್ಕೆ ಕುಸಿದಿದೆ.
4. ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ 2016 ದಲ್ಲಿ 66 ರಲ್ಲಿ 2022 ರಲ್ಲಿ 77 ಸ್ಥಾನಕ್ಕೆ ಕುಸಿದಿದೆ.
5. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 2014 ರಲ್ಲಿ 130 ನೇ ಸ್ಥಾನದಲ್ಲಿದ್ದ ಭಾರತ 2022 ರಲ್ಲಿ 132 ನೇ ಸ್ಥಾನಕ್ಕೆ ಕುಸಿದಿದೆ.
6. 2011-12 ಸ್ಥಿರ ಬೆಲೆಗಳಲ್ಲಿ ತಲಾದಾಯವು 2014-15 ರಲ್ಲಿ 72805 ರೂಪಾಯಿಗಳಿದ್ದರೆ 2022-23 ರಲ್ಲಿ 98 ಸಾವಿರ ರೂಪಾಯಿಗಳಾಗಿದೆ. 9 ವರ್ಷಗಳಲ್ಲಿ ಹೆಚ್ಚಾದ ತಲಾದಾಯ ಕೇವಲ 15 ಸಾವಿರ ರೂಪಾಯಿಗಳು ಮಾತ್ರ.
7. ಚೀನಾ ದೇಶದಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಸುಮಾರು 10 ಲಕ್ಷ ಕೋಟಿ ರೂಗಳಿದ್ದರೆ, ರಫ್ತು ಮಾಡುವ ಪ್ರಮಾಣ 3 ಲಕ್ಷ ಕೋಟಿ ರೂಪಾಯಿಗಳಷ್ಟೂ ಇಲ್ಲ. ಹಾಗಿದ್ದರೆ ಮೇಕ್ ಇನ್ ಇಂಡಿಯಾ ಘೋಷಣೆ ಎಲ್ಲಿ?
8. 2014 ರಲ್ಲಿ ಪ್ರತಿಯೊಬ್ಬರ ತಲೆಯ ಮೇಲೆ 57 ಸಾವಿರ ರೂಪಾಯಿ ಸಾಲವಿದ್ದರೆ, 2023 ರಲ್ಲಿ 1.90 ಲಕ್ಷ ರೂಪಾಯಿಗಳಷ್ಟಾಗಿದೆ.
9. ಅಡುಗೆ ಗ್ಯಾಸ್, ಡೀಸೆಲ್, ಪೆಟ್ರೋಲ್, ಅಡುಗೆ ಎಣ್ಣೆ, ಅಕ್ಕಿ, ಬೇಳೆ ಸೇರಿದಂತೆ ಎಲ್ಲ ಬೆಲೆಗಳು ದುಪ್ಪಟ್ಟಾಗಿವೆ. ಎಲ್ಲ ರೀತಿಯಲ್ಲೂ ಜನರನ್ನು ಕೊಳ್ಳೆ ಹೊಡೆಯಲಾಗುತ್ತಿದೆ.
10. ಸಣ್ಣ ಕೈಗಾರಿಕೆಗಳನ್ನು ಮುಚ್ಚುತ್ತಿರುವುದರಿಂದ ನಿರುದ್ಯೋಗ ತಾರಕಕ್ಕೇರುತ್ತಿದೆ. ಸೇವಾ ವಲಯದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ದಾಂಗುಡಿಯಿಡುತ್ತಿರುವದರಿಂದ ಕೋಟ್ಯಂತರ ಹುದ್ದೆಗಳು ಕಣ್ಮರೆಯಾಗುತ್ತವೆ. ಈಗಾಗಲೆ ಅನೇಕ ದೇಶಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸನ್ನು ಹೇಗೆ ನಿಭಾಯಿಸಬೇಕು ಎಂದು ಕಾನೂನು ಮಾಡಿವೆ. ನಮ್ಮಲ್ಲಿ ಮೋದಿ ಸರ್ಕಾರ ಕಣ್ಣು ಮುಚ್ಚಿ ಕೂತಿದೆ.
ಮೋದಿಯವರು ಅದಾನಿ, ಅಂಬಾನಿ ಮುಂತಾದ ಕೆಲವೇ ಕಾರ್ಪೊರೇಟ್ ಕಂಪೆನಿಗಳನ್ನು ಉದ್ಧಾರ ಮಾಡುತ್ತಿದ್ದಾರೆ, ದೇಶದ 140 ಕೋಟಿ ಜನರನ್ನು ದಿನೇ ದಿನೇ ಬಿಕ್ಕಟ್ಟಿಗೆ ನೂಕುತ್ತಿದ್ದಾರೆ.

ರಾಜ್ಯದ ಮೇಲೆ ಕಣ್ಣೇಕೆ?: ಅಂಬಾನಿಯ ಕಣ್ಣು ನಮ್ಮ ನಂದಿನ ಹಾಲಿನ ಮೇಲೆ ಇದೆ. ಅದಾನಿಯ ಕಣ್ಣು ನಮ್ಮ ರೈತರ ಕೃಷಿ ಉತ್ಪನ್ನಗಳ ಮೇಲೆ, ನಮ್ಮ ವಿದ್ಯುತ್ತಿನ ಮೇಲೆ ಇದೆ. ಅವರಿಗೆ ಸಹಾಯ ಮಾಡಲು ಅತ್ತೂ ಕರೆದು ಪ್ರಚಾರ ಮಾಡಲಾಗುತ್ತಿದೆ. ಕರ್ನಾಟಕದ ಪವಿತ್ರ ಹನುಮನ ನೆಲ ಬಳ್ಳಾರಿಯ ಬೆಟ್ಟಗಳ ಒಡಲು ಬಗೆದು ಅದಿರು ವಿದೇಶಗಳಿಗೆ ಮಾರಿದ ದುಡ್ಡಲ್ಲಿ ಬಿಜೆಪಿಯು ದೇಶದಲ್ಲಿ ಪಾರ್ಟಿ ಕಟ್ಟಿತು. ಈಗ 40 ಪರ್ಸೆಂಟ್ ಕೊಳ್ಳೆ ಹೊಡೆದು ಕೊಬ್ಬಿ ಕೂತಿದೆ. ಕರ್ನಾಟಕವನ್ನು ಎಲ್ಲ ರೀತಿಯಲ್ಲೂ ಸುಲಿಗೆ ಮಾಡಿ ಎಟಿಎಂ ಮಾಡಿಕೊಂಡಿರುವುದು ಬಿಜೆಪಿ.

ಅಂತಿಮವಾಗಿ, ನಾನು ಮೋದಿಯವರಿಗೆ ಹೇಳುವುದಿಷ್ಟೆ ನೀವು ಮೊದಲು ಕುಸಿದು ಹೋಗಿರುವ ಭಾರತದ ಚೈತನ್ಯವನ್ನು ಮೇಲೆತ್ತಿ. ಕರ್ನಾಟಕಕ್ಕೆ ದ್ರೋಹ ಮಾಡದೆ ಕೊಡಬೇಕಾದ ಅನುದಾನಗಳನ್ನು ಕೊಡಿ. ನಮ್ಮ ರಾಜ್ಯವನ್ನು ಹೇಗೆ ಮುನ್ನಡೆಸಬೇಕು, ನಂಬರ್ 1 ಮಾಡಬೇಕೆಂದು ನಮಗೆ ಗೊತ್ತಿದೆ. ಯಾಕೆಂದರೆ ನಿಮ್ಮ ಗುಜರಾತ್ ಮಾಡೆಲ್ ಎಂಥದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಲು ನೀವು ಮುಖ್ಯಮಂತ್ರಿಯಿದ್ದಾಗಿನಿಂದ ಈ ವರೆಗೆ ನಿಮ್ಮ ರಾಜ್ಯದ ಮಕ್ಕಳ ಮತ್ತು ಮಹಿಳೆಯರ ಅಪೌಷ್ಟಿಕತೆಯ ಪ್ರಮಾಣವನ್ನು ನೋಡಿದರೆ ಸಾಕು ಅರ್ಥವಾಗುತ್ತದೆ.

ಯಾವುದೇ ನಾಡಿನ ಅಭಿವೃದ್ಧಿ ನಿರ್ಧಾರವಾಗುವುದು ಅಲ್ಲಿನ ಮಕ್ಕಳು ಮತ್ತು ಮಹಿಳೆಯರ ಆರೋಗ್ಯ ಹೇಗಿದೆ ಎಂಬುದರ ಮೇಲೆ ಎಂಬುದು ತಿಳಿದಿರಲಿ. ಮುಂದಿನ ಮೂರು ದಿನ ರಾಜ್ಯದಲ್ಲಿರುತ್ತೀರಿ. ದಯಮಾಡಿ ನಿಮ್ಮ ಅಳು ನಿಲ್ಲಿಸಿ ಕರ್ನಾಟಕಕ್ಕೆ ಏನು ಕೊಟ್ಟಿದ್ದೀರಿ ಎಂಬುದನ್ನು ಮಾತನಾಡಿ. ನಿಮ್ಮ ದ್ರೋಹದ ಟ್ರಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕದ ಜನರು ಅಳುವಂತಾಗಿದೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂಓದಿ: ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಭಜರಂಗಿ ಬಲ.. ಮಾಜಿ ಸಿಎಂ ಪರ ಶಿವಣ್ಣ​ ಭರ್ಜರಿ ಪ್ರಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.